ಲೋಕದ ಡೊಂಕ ನೀವೇಕೆ ತಿದ್ದುವಿರಿ
ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ
– ಬಸವಣ್ಣನವರು
ಬಸವಣ್ಣನವರ ಸ್ವ ಮತ್ತು ಸಾಮಾಜೋ ಚಿಕಿತ್ಸಕ ಸಂದೇಶ ಸಾರುವ ವಚನ. ಯಾವಾಗಲೂ ಇನ್ನೊಬ್ಬರು ಕಡೆಗೆ ದೃಷ್ಟಿ ಹರಿಸುವುದು, ಮಾನವ ಸಹಜ ಎನ್ನಬಹುದಾದ ಕುಹಕ ಗುಣ.
ಈ ಸಹಜ ಗುಣವನ್ನು ಗೆಲ್ಲುವುದು ಮುಖ್ಯ.ಇದು ಕೂಡ ಒಂದು ಸದ್ಗುಣವೇ.
ಶರಣನಾದವನು ಈ ಒಂದೊಂದೇ ಸಹಜ ಗುಣಗಳನ್ನು ಗೆಲ್ಲುತ್ತಾ ಶರಣಪಥದ ಕಡೆಗೆ ಸಾಗಬೇಕು.
ಲೋಕದ ತಪ್ಪುಗಳನ್ನು ಎಣಿಸುತ್ತಾ
ಸಮಯ ವ್ಯರ್ಥಮಾಡಿಕೊಳ್ಳದೆ.
ತನ್ನನ್ನು ತಾನು ಅರಿಯಬೇಕು
ಲೋಕದ ಡೊಂಕ ನೀವೇಕೆ ತಿದ್ದುವಿರಿ
ಮನುಷ್ಯ ಸಹಜ ಗುಣ ಬೇರೆಯರ ವೈಯಕ್ತಿಕ ವಿಷಯಗಳ ಬಗೆಗೆ ಕೆಟ್ಟ ಕುತೂಹಲ ತಳಿಯುವುದು. ಮತ್ತು ಅವರ ತಪ್ಪಗಳನ್ನು ಭೂತಗನ್ನಡಿ ಹಾಕಿ ಹುಡುಕುವುದು. ಉಚಿತ ಸಲಹೆಗಳು ಕೊಡುವುದು.ಅದಕ್ಕೆ ಬಸವಣ್ಣನವರು ಲೋಕದ ಡೊಂಕನ್ನು ಸರಿ ಮಾಡುವ ಸಾಹಸಕ್ಕೆ ಹೋಗಬೇಡಿರಿ. ಅದು ನಿಮಗೆ ಸಲ್ಲದ ಜವಾಬ್ದಾರಿ ಎಂದು ಹೇಳುತ್ತಾರೆ .
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ಲೋಕದ ಡೊಂಕನ್ನು ತಿದ್ದುವ ಬದಲು
ನಿಮ್ಮ ದೇಹದ ಚಟುವಟಿಕೆಯನ್ನು ತಿದ್ದಿ ಸರಿಪಡಿಸಿಕೊಳ್ಳಿ.
ತನುವಿನ ಎಲ್ಲಾ ಚಟುವಟಿಕೆಗಳು ಮನೋ ಆಕಾಂಕ್ಷೆಯೆ ಮೂಲ ಪ್ರೇರಣೆ. ನಮ್ಮ ತನುವು ಆವೇಶಕ್ಕೆ ಒಳಗಾಗಿದೆ, ಸಾವಧಾನವಾಗಿ ವರ್ತಿಸುವಂತೆ
ನೋಡಿಕೊಳ್ಳಬೇಕು.
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ಬೇರೆಯವರ ತಪ್ಪುಗಳನ್ನು ಹುಡುಕಿ ಹೇಳುವ ನಮ್ಮ ಮನದಲ್ಲೇ ಅಸಮಾಧಾನ, ಅಸಹನೆ, ಸಿಟ್ಟು ದ್ವೇಷ, ಹೊಟ್ಟೆಕಿಚ್ಚು ಮುಂತಾದ ನಕಾರಾತ್ಮಕ ಸಂವೇಗಗಳಿವೆ. ಅವುಗಳನ್ನು ಸಮಾಧಾನವಾಗಿ ಸಂಬಾಳಿಸಿಕೊಳ್ಳುವುದು ಮುಖ್ಯವಾದುದು.ಅರಿಷಡ್ವರ್ಗಗಳು
ಹತೋಟಿಯಲ್ಲಿಟ್ಟುಕೊಳ್ಳುವುದು
ಮನಸು ನಿರಾಳವಾಗಿರುವಂತೆ ನೋಡಿಕೊಳ್ಳಬೇಕು. ಪ್ರೇಮ,ದಯೆ, ಕರುಣೆ, ಅನುಕಂಪದ ಸಹಾನುಭೂತಿ ಮುಂತಾದ ಸಕಾರಾತ್ಮಕ ಗುಣಗಳನ್ನು ಬೆಳೆಸಿಕೊಳ್ಳಲು ಹೇಳಿದ್ದಾರೆ. ನಿಮ್ಮ ಮನಸ್ಸಿನ ವ್ಯಾಪಾರಿಗಳನ್ನು ನಾವು ಅರಿತಿರಬೇಕು. ಅರಿತರೆ ಶರಣ ಮರೆದಡೆ ಮಾನವ ಎನ್ನುವ ತತ್ವದಂತೆ ಅರಿವನ್ನು ಜಾಗೃತಗೊಳಿಸಿಕೊಂಡು ಶರಣನಾಗಬೇಕು.
ನೆರೆಮನೆಯ ದಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ
ಬೇರೆಯವರ ಮನೆಯಲ್ಲಿ ಸಂಭವಿಸಿದ ದುಃಖ ಪಡುವ ಸಂಗತಿಗಳಿಗೆ ಸ್ವಾಂತನ ಸಹಾನುಭೂತಿ ತೋರಿಸಿ ಧೈರ್ಯ ತುಂಬಬೇಕು.ನಿಮ್ಮ ದುಃಖದಲ್ಲಿ ನಾವು ನಿಮ್ಮ ಜೊತೆಗೆ ಇದ್ದೇವೆ ಎನ್ನವು ಭರವಸೆಯನ್ನು ನೀಡಬೇಕು.
ಆದರೆ ಅದರ ಬದಲಾಗಿ ಅವರ ಜೊತೆಗೂಡಿ ನಾವು ಅಳುತ್ತಾ ಹೀಗಾಗಬಾರದಿತ್ತು ಆಗಿಹೋಯಿತು ಅಳುತ್ತಾ ಅವರನ್ನುದೃತಿಗೆಡಿಸಿ ದುಃಖ ಹೆಚ್ಚು ಮಾಡುವವರನ್ನು ಕೂಡಲ ಸಂಗಮ ದೇವ ಮೆಚ್ಚುವುದಿಲ್ಲ. ಶರಣ ಪಥದಲ್ಲಿ ನಡೆಯುವ ಜೀವನದ ವಾಸ್ಥವ ಸತ್ಯವನ್ನು ಅರಿತ ಸ್ಥಿತಪ್ರಜ್ಞನಾಗಿರಬೇಕು ಎಂದು ಹೇಳುತ್ತಾರೆ.
–ಡಾ. ನಿರ್ಮಲ ಬಟ್ಟಲ