ಕಸ್ತೂರಿ ಕನ್ನಡದ ಕಲರವ….

ಕಸ್ತೂರಿ ಕನ್ನಡದ ಕಲರವ….

ಬಹುಭಾಷೆಗಳಿದ್ದರೂ ಕನ್ನಡ ಕಸ್ತೂರಿ ಈ ನೆಲದ ಹೆಗ್ಗುರುತು
ವಿಜ್ಞಾನ ತಂತ್ರಜ್ಞಾನಗಳ ತವರು ಬೆಂಗಳೂರು ಶ್ರೀಗಂಧ ಬೀರುತಿಹುದು
ಜಗದ್ವಿಖ್ಯಾತ ಮೈಸೂರು ದಸರೆ
ತಾಯಿ ಮುಡಿಗೆ ಹಸಿರು ತುರಾಯಿ
ಗುಡ್ಡ ಬೆಟ್ಟ ಕಾಡು ದಟ್ಟ ಕಡಲಿನಾಟ ಸತತ ಜಲಧಾರೆ

ತಾಯ ಮೂಗುತಿಯಲ್ಲಿ ಹೊಳೆಯುತಿಹುದು ಬೆಳಗಾವಿಯ ಸೌಂದರ್ಯ
ಕಾವೇರಿ ಕೃಷ್ಣೆ ಗೋದಾವರಿಯರ ಬಳೆಗಳ ನಾದ ಖಿನ ಖಿನ
ಮಲೆನಾಡ ಮೊಲ್ಲೆ ಮುಡಿಗೆ, ಮಿನಿ ಹಿಮಾಚಲ ಚಿಕ್ಕಮಗಳೂರು ನೆರಳು
ನೀನನಗಿದ್ದರೆ ನಾ ನಿನಗೆ, ನೆನಪಿರಲಿ ಕನ್ನಡದ
ಕಂದಾ

ತೋರಲಿಲ್ಲವೆ ರಾಜರ್ಷಿ ಎನಿಸಿದೆ ನಾಲ್ವಡಿ ಕೃಷ್ಣರಾಜರು ರಾಮರಾಜ್ಯವಾ
ನೆನೆ ಮನವೆ ಕನ್ನಡನಾಡಿನ ವಿಕಾಸಪುರುಷ ಸರ್. ಎಂ. ವಿಶ್ವೇಶ್ವರಯ್ಯರನ್ನ
ಮರೆಯದಿರು ಕೊಡಗಿನ ಕಲಿ, ನಾಡಿನ ಹುಲಿ ಫೀಲ್ಡ್ ಮಾರ್ಷಲ್ ಕಾರಿಯಪ್ಪನಾ
ನಾಟ್ಯ ರಾಣಿ ಶಾಂತಲೆ, ಕೆಚ್ಚಿನ ಚೆನ್ನಮ್ಮ, ವೀರವನಿತೆ ಓಬವ್ವರ ನಾಡಿದು

ಮರೆಯಲಾದೀತೆ ಜಗದ ಕವಿ, ಲಯದ ಕವಿ ಬೇಂದ್ರೆಯವರನ್ನ
ಜ್ಞಾನದ ಬೆರಗು,ಸಾಧನೆಯ ಬೆಡಗು ಶಿವರಾಮ ಕಾರಂತರನ್ನ
ಸಾಂಸ್ಕೃತಿಕ ಮಹತ್ವದ, ಶತಮಾನದ ಪ್ರತಿಭೆ ಕುವೆಂಪುರನ್ನ
ಹೀಗೆ ಸಾಲು ಸಾಲಾಗಿ ಸಂದವು ಎಂಟು ಜ್ಞಾನಪೀಠಗಳು ತಾಯಿಯ ಮುಡಿಗೆ

ಕನ್ನಡವೇ ಸತ್ಯ, ಕನ್ನಡವೇ ನಿತ್ಯವೆಂದು ಅಕ್ಷರಶಃ ಬದುಕಿದ ಡಾ. ರಾಜ್
ನಾದ ದೇವತೆಯ ಅನನ್ಯ ಉಪಾಸಕ ಭೀಮಸೇನ ಜೋಶಿ ಸ್ವರಕಾಕಾ
ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಪ್ರಥಮ ಮಹಿಳಾ ಅಧ್ಯಕ್ಷೆ ಜಯದೇವಿ ತಾಯಿ
ಇವರೆಲ್ಲರೂ ಬದುಕಿನಲ್ಲಿ ಕನ್ನಡದ ಕಂಪು ಇಂಪು ರಸರುಚಿ ಇದೆ

ನಾಡಿನುದ್ದಕ್ಕೂ ಬೆಳೆದು ನಿಂತ ಅಧ್ಯಾತ್ಮ ರಾಯಭಾರಿ ಶ್ರೀ ಸಿದ್ದೇಶ್ವರಜಿ
ಅಂತರಾಷ್ಟ್ರೀಯ‌ ಖ್ಯಾತಿಯ ಕ್ರೀಡಾ ರಾಯಭಾರಿ ಅನಿಲ್ ಕುಂಬ್ಳೆ
ಇಳಿವಯಸ್ಸಿನಲ್ಲಿ ವಿರೋಧಿಗಳಿಗೆ ಗುಟುರು ಹಾಕಿದ ಪಾಟೀಲ ಪುಟ್ಟಪ್ಪ
ಶ್ರೀ ಸಾಮಾನ್ಯನ ಕಣ್ಮಣಿ, ಡಾ. ಶಿವಕುಮಾರ್ ಸ್ವಾಮಿಗಳು

ನಾವಿನ್ಯತೆಗೆ ಪರ್ಯಾಯ ನಾರಾಯಣ ಮೂರ್ತಿ, ಬಂಡಾಯಕ್ಕೆ ಬರಗೂರು
ಸಜ್ಜನಿಕೆಯ ಜಿ.ವೆಂಕಟಸುಬ್ಬಯ್ಯ, ಜಾನಪದ   ಭೀಷ್ಮ ಮತ್ತೀಗಟ್ಟಿ ಕೃಷ್ಣ ಮೂರ್ತಿ
ಇವರೆಲ್ಲ ನಿದ್ರಿಸದೆ ಸತತ ತಪಗೈದರು, ಕನ್ನಡದ ಉಸಿರಾದರು..
ಕನ್ನಡವನ್ನೇ ಉಸಿರಾಡಿದರು,
ಅದಕ್ಕೆ ಕನ್ನಡದ ನೆಲ-ಜಲ ಭಾಷೆ ಸೊಂಪು….

ಅವರು ಪಥದಲ್ಲಿ ಸಾಗೋಣ ಕನ್ನಡ ಕಸ್ತೂರಿ ಉಳಿಸಿ ಬೆಳೆಸೋಣ.

ಜಯಶ್ರೀ ಭ ಭಂಡಾರಿ.
ಬಾದಾಮಿ.

Don`t copy text!