ಅಖಿಲ ಜ್ಞಾನಿ ಸಕಲೇಶ ಮಾದರಸ

(ವಾರದ ವಿಶೇಷ ಅಂಕಣ ಮಾಲಿಕೆ)

ಅಖಿಲ ಜ್ಞಾನಿ ಸಕಲೇಶ ಮಾದರಸ

ಸಕಲೇಶ ಮಾದರಸನು ರಾಜರ್ಷಿ. ಅರಸುತನವನ್ನು ಅನುಭವಿಸಿದರೂ ನೀರಿನೊಳಗಣ ಕಮಲ ಪತ್ರದಂತೆ ಇದ್ದವನು. ಇವರ ಮನೆತನವೇ ಹಾಗೆ..ಎಲ್ಲರೂ ಜ್ಞಾನಿಗಳು, ಎಲ್ಲರೂ ಲಿಂಗಾಭಿಮಾನಿಗಳು. ಈತನ ತಂದೆ ಮಲ್ಲರಸ ಮರಾಠವಾಡದ ಈಗಿನ ನಾಂದೇಡ ಸಮೀಪದ ಕಲ್ಲಗುರ್ಕಿಯಲ್ಲಿ ರಾಜ್ಯಭಾರಮಾಡಿ ವೈರಾಗ್ಯ ಮೂಡಲು ಪಟ್ಟ ತ್ಯಜಿಸಿ ಶ್ರೀಶೈಲ ಪರ್ವತದ ಕಡೆ ತೆರಳಿದನು. ಜ್ಞಾನಿಯಾದ ಮಗ ಮಾದರಸನು ಕೂಡ ತನ್ನ ಮಗ ಮಾಯಿದೇವನಿಗೆ ರಾಜ್ಯಭಾರ ವಹಿಸಿ ದೇಶಾ0ತರ ಹೊರಟನು. ತಂದೆ ಮಲ್ಲರಸನ ಸೇವೆಯಲ್ಲಿದ್ದು ಜನ್ಮ ಸಾರ್ಥಕ ಪಡಿಸಿಕೊಳ್ಳುವುದೇ ದೇಶಾ0ತರದ ಮುಖ್ಯಗುರಿ.

ಮಾಯಿದೇವನ ಮಗ ಕೆರೆಯ ಪದ್ಮರಸ , ಪದ್ಮರಸನ ಮಗ ಕುಮಾರ ಪದ್ಮರಸ, ಕುಮಾರ ಪದ್ಮರಸನ ಮಗ ಪದ್ಮಣಾ0ಕ. ಈ ಪದ್ಮಣಾ0ಕ ಕವಿಯೇ ತನ್ನ ಮುತ್ತಾತ ಕೆರೆಯ ಪದ್ಮರಸನ ಚರಿತ್ರೆ ಬರೆದು ತನ್ನ ವಂಶಜರೆಲ್ಲರ ಚರಿತ್ರೆ ನಿರೂಪಿಸಿದ್ದಾನೆ. ಇವರೆಲ್ಲರೂ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದವರು. ಮಾದರಸನ ಆರಾಧ್ಯ ದೇವರು ಸಕಲೇಶ್ವರ ವಚನಾ0ಕಿತವೂ ” *ಸಕಲೇಶ್ವರ* ” ಒಟ್ಟು ಇಲ್ಲಿಯವರೆಗೆ ಮಾದರಸನ 134 ವಚನಗಳು ಲಭ್ಯವಾಗಿವೆ. ಸಕಲೇಶ ಮಾದರಸನ ವಚನಗಳ ವೈಶಿಷ್ಟ್ಯವೆಂದರೆ ಅವು ಆತ್ಮಚರಿತ್ರೆ ನಿರೂಪಣಾತ್ಮಕವಾಗಿವೆ
ಆತನ ಚರಿತ್ರೆಗೆ ಆತನ ವಚನಗಳೇ ಸಾಕ್ಷಿಯಾಗಿ ನಿಲ್ಲುತ್ತವೆ.

ವೈರಾಗ್ಯ ಪರನಾಗಿ ಅರಸೊತ್ತಿಗೆಯನ್ನು ಬಿಟ್ಟು ಹೊರಟ ಮಾದರಸ ಶ್ರೀಶೈಲ ಮಾರ್ಗದಲ್ಲಿನ ಅಂಬೆ ಎಂಬಲ್ಲಿಗೆ ಬರುತ್ತಾನೆ. ಅದೇ ಇಂದಿನ ಅಂಬಾಜೋಗೈ ಆಗಿರಬಹುದು. ಅಂಬೆಯ ಜನ ತಮ್ಮ ಭಕ್ತಿ ವಿಶೇಷತೆಯಿಂದ ಮಾದರಸನನ್ನು ತಮ್ಮಲ್ಲಿಯೇ ನಿಲ್ಲಿಸಿಕೊಳ್ಳುತ್ತಾರೆ. ” ದೇಶ ದೇಶಾ0ತರವ  ತಿರುಗಿ , ತೊಳಲಿ* , *ಬಳಲಿ , ಕೆಲವರ  ಹಳಿದು ಕೆಲವರ ಹೊಗಳಿ ವೃಥಾ ಹೋಯಿತ್ತೆನ್ನ ಸಂಸಾರ  ಎಂಬ ವಚನದಿಂದ ಆಸೆಯಳಿಯದೆ ದೇಶ ತಿರುಗಿದರೂ ಉಪಯೋಗವಿಲ್ಲ ಎಂಬ ಮಾತನ್ನು
ಸ್ಪಷ್ಟಪಡಿಸುತ್ತಿದ್ದಾನೆ.

ಅಂಬೆಯಲ್ಲಿ ನೆಲೆನಿಂತಾಗ ಸಕಲೇಶ ಮಾದರಸ ತನ್ನ ವೈಣಿಕ ಕಲೆಯಿಂದ ಮತ್ತು ಇಂಪಾದ ವಚನಗಾಯನದಿಂದ ಜನರ ಮನ ಸೂರೆಗೊಳ್ಳುತ್ತಾನೆ. ಆತನೊಬ್ಬ ಬಹುದೊಡ್ಡ ಸಂಗೀತಗಾರನಾಗಿದ್ದನೆಂಬುದಕ್ಕೆ ಆತನ ಒಂದೆರಡು ವಚನಗಳೇ ನಿದರ್ಶನವಾಗಿವೆ. ” ಸಕಳೇಶ್ವರ ದೇವಾ ಶರಣೆ0ದು , ವೀಣಾವಾದ್ಯವ 
ಬಾರಿಸುತ ಆಡಿ ಹಾಡುವ ಸುಖವೆನಗೆಂದಪ್ಪುದೋ ?
ವೀಣೆಯ ಬಾರಿಸಿ
ಸಕಳೇಶ್ವರ0ಗೊಂದು ಗೀತವ ಹಾಡೆನೆ? “

ಯಾವುದೋ ಒಂದು ಸಂದರ್ಭದಲ್ಲಿ ಪಶ್ಚಾತಾಪ ಪಟ್ಟು ಅಂಬೆಯಿಂದ ನಿರ್ಗಮಿಸಿ ತನ್ನ ಪೂರ್ವಯೋಜನೆ ಪ್ರಕಾರ ಶ್ರೀಶೈಲಕ್ಕೆ ತೆರಳುತ್ತಾನೆ. ” ಸರ್ವಸಂಗ ಪರಿತ್ಯಾಗವ ಮಾಡಿ ಲಿಂಗಗೂಡಾಗಿ ತನುಪರಿಣಾಮವನೈದಿ , ಪೆರತನರಿಯದೆ ಹೋದೆ ! *ಎಂಬ ವಚನ ಈ ಸಂದರ್ಭದಲ್ಲಿ ಮೂಡಿರಬಹುದು.

ಅಲ್ಲಿ ತಂದೆಯೂ ಗುರುಸ್ವರೂಪನೂ ಆದ ಮಲ್ಲರಸನನ್ನು ಹುಡುಕಲು ತುಂಬಾ ದಿನಗಳು ಹಿಡಿಯುತ್ತವೆ.
ಊರೊಳಗಿರ್ದರೆ ನರರ ಹಂಗು ಕಾಡೊಳಗಿರ್ದರೆ ತರುಗಳ ಹಂಗು “ ಎಂದೆನಿಸುತ್ತದೆ. ಆದರೂ ಉಪಾಯವಿಲ್ಲ , ಆರುವನೊಲ್ಲೆನೆಂದು ಅರಣ್ಯಕ್ಕೆ ಬಂದಾಗಿದೆ. ಕೊನೆಗೆ ತಂದೆ ಮಲ್ಲರಸರು ಶ್ರೀಶೈಲದಲ್ಲಿ ದರ್ಶನ ಕೊಟ್ಟಾಗ ಸನ್ಯಾಸ ಸ್ವೀಕರಿಸುವ ಮನೋವಾಂಛೆಯನ್ನು ಮುಂದಿಡುತ್ತಾನೆ.

ಮಲ್ಲರಸನು ತನ್ನ ಮಗನ ಅಪಕ್ವ ಮನಸ್ಥಿತಿಯನ್ನೂ , ವಯಸ್ಸಿನ ಚಾ0ಚಲ್ಯವನ್ನೂ ಗಮನಿಸಿ ಕೆಲ ದಿವಸಗಳು ಕಳೆಯಲಿ ಎಂದರೂ ಮಾದರಸ ಕೇಳುವುದಿಲ್ಲ. ಆಗಲಿ ಎಂದು ಮಲ್ಲರಸ ಅನುಷ್ಠಾನ ಮಾಡಲು ಒಂದು ದೊಡ್ಡ ಮರದ ನೆರಳನ್ನು ತೋರಿಸಿ ದೂರ ಹೊರಟು ಹೋಗುತ್ತಾನೆ. ದೃಢ ಮನಸ್ಸಿನಿಂದ ತಪಸ್ಸು ಮಾಡುವಾಗ ಎರಡೇ ದಿನಕ್ಕೆ ತಂದೆ ಮಲ್ಲರಸನೇ ಗೊಲ್ಲರ ವೇಷ ಧರಿಸಿ ಮಗನ ಚಿತ್ತ, ಸ್ಥೈರ್ಯ, ಸಮತಾ ಗುಣ ಪರೀಕ್ಷಿಸಲು ಬರುವನು. ಆಗ ಮಾದರಸ ತನಗೆ ತಪಸ್ಸಿಗೆ ಭಂಗ ತಂದವರಾರು ಎಂದು ತಂದೆ ಎಂದು ಗೊತ್ತಾಗದೆ, ಹೊಡೆದುಬಿಡುತ್ತಾನೆ. ಆ ಸಂದರ್ಭದಲ್ಲಿ ಮೂಡಿದ ವಚನಗಳೆಂದರೆ :
ಅಡವಿಗೆ ಹೋಗಿ ಏವೆನು ? ಮನದ ರಜ, ತಮ ಬಿಡದು , ಆಡ ಕಾವವ ದೂರಿ ಗಿಡ ಕಡಿವವನ ಬಡಿದೆ . ಆಶ್ರಮವ ಕೆಡಿಸಿತ್ತಲ್ಲಾ ! ಸಕಲೇಶ್ವರಾ ನಿನ್ನ ಮಾಯೆ ಎತ್ತ ಹೋದಡೂ ಬೆನ್ನ ಬಿಡದು “

” ಸಮತೆಯಿಲ್ಲದ ಮಾಟವೆಂಬುದು ಬಿತ್ತಿದಕೆಯ್ಯ ಕಸವು ಕೊಂಡಂತೆ “

” ಸಮತೆಯಿಲ್ಲದ ಶೀಲವೆಂಬುದು ಒಟ್ಟಿದರಳಿಯ ಉರಿ ಕೊಂಡಂತೆ”
ಪಶ್ಚತ್ತಾಪದಿಂದ ಬೇಯುವ ಮಗನಿಗೆ ಮಲ್ಲರಸ ಸಮಾಧಾನ ಮಾಡಿ ಕಲ್ಯಾಣದಲ್ಲಿ ಈಗ ಕರ್ಮ ಭ್ರಮೆ ಭಂಗಿಸುವ ಕಾರ್ಯ ವ್ಯಾಪಕವಾಗಿ ನಡೆದಿದೆಯೆಂದೂ ಅಲ್ಲಿ ಕೆಲ ಕಾಲ ಕಳೆದು ಮರಳಿ ಶ್ರೀಶೈಲಕ್ಕೆ ಬರಬೇಕೆಂದೂ ಆದೇಶಿಸಿ ಕಳಿಸುತ್ತಾನೆ.

ಸಕಲೇಶ ಮಾದರಸನು ಬಹುಶ : ಕಲ್ಯಾಣದ ಕೊನೆಯ ದಿನಗಳಲ್ಲಿ ಬಂದಂತೆ ತೋರುತ್ತದೆ. ಆತನ ವಚನಗಳಲ್ಲಿ ಬಸವಣ್ಣ , ಚೆನ್ನಬಸವಣ್ಣ, ಅಲ್ಲಮಪ್ರಭು, ಜೇಡರ ದಾಸಿಮಯ್ಯ ಮೊದಲಾದವರ ಹೆಸರುಗಳು ಉಲ್ಲೇಖಿಸಲ್ಪಟ್ಟಿವೆ. ಸಕಲೇಶ ಮಾದರಸನು ತಾನು ಬರೆದ ವಚನಗಳಲ್ಲಿ ಅನೇಕ ಹೊಸ ವಿಚಾರಗಳನ್ನು ಮೂಡಿಸಿರುವನು. ಬಾಹ್ಯಾಚರಣೆಗಿಂತ ಅಂತರ್ಶುದ್ಧಿ ಮಹತ್ವವಾದುದೆ0ಬುದು ಮಾದರಸರ ಇಂಗಿತ.

ಬಸವಣ್ಣನವರನ್ನು ಬಲವಾಗಿ ನಂಬಿದ ಸಕಲೇಶ ಮಾದರಸರು ಆತನ ಜತೆಯೇ ಕೂಡಲಸಂಗಮಕ್ಕೆ ನಿರ್ಗಮಿಸಿದರೆಂದೂ ಅಲ್ಲಿಂದ ತಂದೆಯ ಅಂತಿಮ ಇಚ್ಛೆಯಂತೆ ಶ್ರೀಶೈಲಕ್ಕೆ ತೆರಳಿ ಅಲ್ಲಿ ಬಯಲಾದರೆ0ದೂ ಹೇಳಲಾಗಿದೆ.

ವಚನ ವಿಶ್ಲೇಷಣೆ

ಅದು ಬೇಕು, ಇದು ಬೇಕು, ಎಂಬ ಎದೆಗುದಿಹತನ ಬೇಡ.
ಹದುಳಿಗನಾಗಿದ್ದರೆ ಸಾಕು, ಪಡಿಪದಾರ್ಥ ತನ್ನಿದ್ದೆಡೆಗೆ ಬಹುದು
ನಿಧಿ -ನಿಕ್ಷೇಪ ತನ್ನಿದ್ದೆಡೆಗೆ ಬಹುದು, ಸಕಲೇಶ್ವರ ದೇವನು
ಹೃದಯಶುದ್ಧನಾಗಿ ಶರಣೆ0ದರೆ ನಿಜ ಪದವಿಯನೀವನು

ಬೇಕು ಎಂಬುದು ಕಾಯಗುಣ, ಬೇಡವೆಂಬುದು ವೈರಾಗ್ಯ. ಎಲ್ಲಿ ಬೇಕು ಇದೆಯೋ ಅಲ್ಲಿ ವೈರಾಗ್ಯವಿಲ್ಲ. ಎಲ್ಲಿ ಬೇಡ ಎಂಬುದಿದೆಯೋ, ಅಲ್ಲಿ ಸಂಸಾರದ ಜಂಜಡವಿಲ್ಲ. ಹೆಣ್ಣು ಬೇಡ ಎಂಬುದಷ್ಟೇ ವಿರಕ್ತಿಯಲ್ಲ, ಆತ ಕೀರ್ತಿ ಬೇಡ ಎಂದೂ ಹೇಳುತ್ತಿರಬೇಕು. ಲಾಭ ಬೇಡ ಎಂದೂ ಸಾಧಿಸಬೇಕು. ಮತ್ತೊಬ್ಬರ ಆರಾಧನೆ -ಸ್ತುತಿಗಳಿಗೂ ಮುಖ ತಿರುವಬೇಕು. ಅದು ನಿಜವಾದ ವಿರಕ್ತಿತನ. ಏನೇ ಆಗಲಿ ಸಹಜವಾಗಿ ಬಂದುದು , ಪ್ರಸಾದವಾಗಿ ಬಂದುದು ಬೇಕು, ದುರಾಸೆ , ದುರಾಲೋಚನೆಗಳಿಂದ ಪಡೆಯಬೇಕಾದುದು ಬೇಡ ಎಂಬುದೇ ಶರಣತ್ವದ ಲಕ್ಷಣ. ಬೇಡ ಎಂಬ ಗುಣದಲ್ಲಿಯೇ ವಿಶ್ವ
ವನ್ನು ಪಡೆಯುವ ಶಕ್ತಿ ಇದೆ.

ಸಕಲೇಶ ಮಾದರಸರು ಅದು ಬೇಕು, ಇದು ಬೇಕು ಎಂಬ ಎದೆಗುದಿಹತನ ಬೇಡ ಎಂಬ ವಾಕ್ಯದ ಮೂಲಕ ಈ ಎದೆಗುದಿಹತನವೇ ಸಂಸಾರದ ಜಂಜಾಟಕ್ಕೆ ತಳಹದಿ ಎಂಬ ಮಾತನ್ನು ಸ್ಪಷ್ಟ ಪಡಿಸುತ್ತಿದ್ದಾರೆ. ಆದಷ್ಟು ‘ಬೇಕು ‘ ಎಂಬ ಸಂಸಾರದಿಂದ ದೂರವಿರುವದೇ ಲೇಸು.

ಮಹಾನುಭಾವ ಬಸವಣ್ಣನವರು ಸಂಸಾರದಲ್ಲಿ ಇದ್ದರೂ ಇರದಂತೆ ಹೇಗಿರಬೇಕೆಂಬ ಬಗ್ಗೆ ಹಲವಾರು ಮಾತುಗಳನ್ನು ಹೇಳಿರುವರು. ಬಾರದು ಬಪ್ಪದು , ಬಪ್ಪುದು ತಪ್ಪದು ಎಂಬುದು ಅವುಗಳಲ್ಲೊಂದು. ಅಂದ ಬಳಿಕ ವ್ಯರ್ಥ ಎದೆಗುದಿಹತನವೇಕೆ ? ಅಲ್ಲದೆ ಯಾವಾಗಲೂ ನಾವು ಒಳ್ಳೆಯದನ್ನೇ ಬಯಸಿದರೆ ಆ ಬಯಕೆ ಈಡೇರಲೂಬಹುದು, ಈಡೇರದಿರಲೂಬಹುದು. ಈಡೇರಿದಾಗ ಹಿಗ್ಗುವುದು, ಈಡೇರದಿದ್ದಾಗ ಕುಗ್ಗುವುದು ಮಾಡಬೇಕೇಕೆ ? ಮತ್ತೊಂದು ಮಾತನ್ನೂ ಅಣ್ಣ ಬಸವಣ್ಣನವರು ತಿಳಿ ಹೇಳಿರುವರು. ಅದು ಯಾವುದೆಂದರೆ ” ಲೇಸ ಕಂಡು ಮನ ಬಯಸಿ ಬಯಸಿ , ಆಶೆ ಮಾಡಿದರಿಲ್ಲ ಕಂಡಯ್ಯಾ. ತಾಳೆ ಮರಕೆ ಕೈಯ ನೀಡಿ ಮೇಲೆ ನೋಡಿ ಗೋಣು ನೊಂದುದಯ್ಯ
ಕೂಡಲ ಸಂಗಮದೇವ ಕೇಳಯ್ಯ ನೀನೀವ ಕಾಲಕ್ಕಲ್ಲದೆ ಇಲ್ಲ ಕೇಳಯ್ಯ “

ಒಟ್ಟಾರೆ ನಾವು ಕಲಿಯಬೇಕಾದುದೆಂದರೆ ಇದ್ದುದರಲ್ಲಿ ಸಂತೃಪ್ತಿಯಿಂದ ಬಾಳುವುದು . ನಿರ್ಮಲ ಭಕ್ತಿಯಿಂದ ಪರಮಾತ್ಮನ ಅನುಗ್ರಹವನ್ನು ಯೋಚಿಸುವುದು. ಇದರಲ್ಲಿಯೇ ಸುಖವಿದೆ ; ಇದರಲ್ಲಿಯೇ ಸಮಾಧಾನವಿದೆ. ಸುಖ – ಸಮಾಧಾನಗಳು ಕೋಟ್ಯಾನುಗಟ್ಟಲೆ ರೂಪಾಯಿಗಳಿಂದ ಲಭಿಸುವುದಿಲ್ಲ. ನಮ್ಮ ಮನೋಸ್ವಾಸ್ಥ್ಯದಿ0ದ ತಾನೇ ತಾನಾಗಿ ಲಭಿಸುತ್ತವೆ.

ಸುಧಾ ಪಾಟೀಲ್
ಬೆಳಗಾವಿ

 

 

Don`t copy text!