ಮಹಾದಾನಿ ಕನ್ನಡಾಭಿಮಾನ ಶ್ರೀ ಶಿವಪ್ಪಣ್ಣಾ ಲಂಬೆ
ಉತ್ತರ ಕರ್ಣಾಟಕ ಭಾಗದಲ್ಲಿ ಬೆಳಗಾವಿ ಗಡಿಭಾಗವೆಂದೆ ಗುರುತಿಸಿ ಕೊಳ್ಳುತ್ತದೆ .ಬಹುಭಾಷಿಗರ ಜಿಲ್ಲೆ ಬೆಳಗಾವಿ ಕನ್ನಡಿಗರ ಅಭಿಮಾನದ ಕೇಂದ್ರವಾಗಿದೆ. ಐತಿಹಾಸಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಇಲ್ಲಿ ಕನ್ನಡಿಗರು ತಮ್ಮದೆ ಆದಂತಹ ಛಾಪು ಮೂಡಿಸಿ ತಾಯಿ ನೆಲದ ಕೀರ್ತಿಯನ್ನು ಬಾನೆತ್ತರಕ್ಕೆ ಏರಿಸಿದ ಧೀಮಂತರು ಇಲ್ಲಿನ ಕನ್ನಡಿಗರು.
ನಾಡನುಡಿಗಾಗಿ ಗಡಿಗಾಗಿ ತಮ್ಮ ತನು ಮನ ಧನ ಅಷ್ಟೇಏಕೆ ಪ್ರಾಣವನ್ನು ಪಣಕ್ಕಿಡಲು ಸದಾ ಸಿದ್ಧರಾಗಿರುತ್ತಾರೆ. ಅಂತಹ ಮಹಾನ್ ದಾನಿಗಳ ಪರಿಚಯ ಇವತ್ತು ನಾನಿಲ್ಲಿ ಮಾಡಿಕೊಡುತ್ತಿರುವೆ. ಅದು ಕನ್ನಡ ಭಾಷೆಯನ್ನು ಎತ್ತಿಹಿಡಿಯುವಲ್ಲಿ ಗ್ರಾಮೀಣ ಭಾಗದ ಕನ್ನಡ ಶಾಲೆಗಳು ಸದಾ ಕ್ರೀಯಾಶೀಲವಾಗಿರುವಲ್ಲಿ ಶ್ರೀ ಶಿವಪ್ಪಣ್ಣಾ ಲಂಬೆ ಅವರ ಕಾರ್ಯ ಬಲು ದೊಡ್ಡದು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಿ ಒಂದು ಪುಟ್ಟ ಗ್ರಾಮ. ಇಲ್ಲಿನ ಭಾಷೆ ಗ್ರಾಮೀಣ ಕನ್ನಡ ಸ್ವಲ್ಪ ಮಟ್ಟದ ಮರಾಠಿ ಕೂಡಾ. ಆದರೆ ಇಲ್ಲಿ ಎಂದೂ ಕೂಡಾ ಭಾಷಾ ದ್ವೇಷ ಮೂಡಿಲ್ಲಾ ಎಲ್ಲರು ಪರಸ್ಪರ ಸಹಕಾರ ಸಹಬಾಳ್ವೆ ನಡೆಸುತ್ತಿದ್ದುದು ಹಿಂದಿನಿಂದಲೂ ಇಂದಿನವರೆಗೂ ನಡೆದುಬಂದಿದೆ.
ಈ ಗ್ರಾಮವು ಒಂದು ಪುರಾತನ ಗ್ರಾಮವಾಗಿದೆ.ಇಲ್ಲಿಂದ ಉತ್ತರಕ್ಕೆ ಒಂದು ಮೈಲಿನ ಮೇಲಿರುವ ಪ್ರದೇಶದಲ್ಲಿ ಪ್ರಾಚ್ಯ ವಸ್ತು ಇಲಾಖೆಯವರಿಗೆ ನೂತನ ಶಿಲಾಯುಗದ ಅವಶೇಷಗಳು ದೊರಕಿವೆ.ಇತಿಹಾಸಕ್ಕೆ ಸಾಕ್ಷಿಯಾದ ಗ್ರಾಮದ ಬಸದಿಯಲ್ಲಿ ಒಂಬತ್ತನೇ ಶತಮಾನದಲ್ಲಿಯ ಒಂದು ಶಿಲಾಲೇಖ ಉಂಟು.
ಅನೇಕ ವೀರಗಲ್ಲುಗಳು ಹಾಗೂ ಮಾಸ್ತಿ ಕಲ್ಲುಗಳು ಕೂಡಾ ಇಲ್ಲಿ ದೊರೆತಿವೆ.ಇಂತಹ ಈ ಪುರಾತನ ಗ್ರಾಮದಲ್ಲಿ ದಶಕಗಳ ಹಿಂದೆ ೩೭೦೦ ಜನವಸತಿ ಇತ್ತು ಎಂದು ತಿಳಿದು ಬರುತ್ತದೆ. ಆಗ ಶಿಕ್ಷಣವನ್ನು ಗ್ರಾಮದ ಮಠಗಳಲ್ಲಿ ಅಲ್ಲಿನ ಅಯ್ಯನವರ ಮುಖಾಂತರ ಹೇಳಿಕೊಡಲಾಗುತ್ತಿತ್ತು.
ಈಗಿನಂತೆ ಶಿಕ್ಷಣವು ಸಾರ್ವತ್ರಿಕವಾಗಿರಲಿಲ್ಲಾ. ಪ್ರಾಚೀನ ಗುರುಕುಲ ಪರಂಪರೆ ಅನುಸಾರವಾಗಿ ಮೇಧಾವಿಗಳಿಗೆ ಹಾಗು ಅನುಕೂಲಸ್ಥರಿಗೆ ಮಾತ್ರ ಬೋಧನೆ ದೊರಕುತ್ತಿತ್ತು.ಕ್ರಿ ಶ ೧೮೫೦ ರಲ್ಲಿ ಆಗ ನಮ್ಮನ್ನು ಆಳುತ್ತಿದ್ದ ಕಂಪನಿ ಸರ್ಕಾರದಿಂದ ಬೋರ್ಡ್ ಆಫ್ ಎಜ್ಯುಕೇಶನ್ ಮುಖಾಂತರ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾದವು. ೨೦೦೦ ಕ್ಕೂ ಮೇಲ್ಪಟ್ಟ ಜನವಸತಿ
ಇದ್ದ ಊರುಗಳಲ್ಲಿ ಶಾಲೆಗಳನ್ನು ಪ್ರಾರಂಭಿಸುವುದು ಅಂದಿನ ಸರ್ಕಾರದ ಯೋಜನೆಯಾಗಿತ್ತು.
ಅದಕ್ಕೆ ಅನುಗುಣವಾಗಿ ದಿ.೩/೧/೧೮೬೬ ರಂದು ಯಕ್ಸಂಬಾ ಗ್ರಾಮದಲ್ಲಿ ಸರಕಾರಿ ಕನ್ನಡ ಗಂಡುಮಕ್ಕಳ ಶಾಲೆ ಯು ಪ್ರಾರಂಭವಾಯಿತು.
ಅಂದು ಪ್ರಾರಂಭಗೊಂಡ ಶಾಲೆಗೆ ಕೇವಲ ಒಬ್ಬರೆ ಒಬ್ಬ ಶಿಕ್ಷಕರಿದ್ದರು. ನೂರು ವರ್ಷಗಳ ಹಿಂದೆ ೫೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಆ ಶಾಲೆಯಲ್ಲಿ ಇಂದು ನೂರಾರು ವಿದ್ಯಾರ್ಥಿಗಳು ಶಿಕ್ಷಣಪಡೆಯುತ್ತಿದ್ದಾರೆ.
ಆರಂಭಕ್ಕೆ ಸುಮಾರು ೨೦ ವರ್ಷಗಳ ಕಾಲ ಗ್ರಾಮದ ಹನುಮಂತ ದೇವರ ಗುಡಿಯ ಪ್ರಾಂಗಣದಲ್ಲಿ ತರಗತಿಗಳನ್ನು ನಡೆಸುತ್ತಿದ್ದರು. ನಂತರದಲ್ಲಿ ಅಲ್ಲಿನ ಚಾವಡಿ ಮುಂದೆ ಇದ್ದ ಕೊಂಡವಾಡೆ ಜಾಗದಲ್ಲಿ ೧೮೮೬ ರಲ್ಲಿ ಶಾಲಾ ಕಟ್ಟಡ ಕಟ್ಟಲಾಯಿತು. ಇಲ್ಲಿ ತರಗತಿಗಳು ಪ್ರಾರಂಭವಾಗುತ್ತಿದ್ದಂತೆ ಮಕ್ಕಳ ಸಂಖ್ಯೆ ಹೆಚ್ಚಾದಂತೆ ಕೊಠಡಿಗಳ ಕೊರತೆಯಿಂದ ಧರ್ಮ ಶಾಲೆ,ಗುಡಿ,ಬಾಡಿಗೆ ಕಟ್ಟಡಗಳಲ್ಲಿ ಪಾಠಮಾಡುವ ಪರಿಸ್ಥಿತಿ ಉಂಟಾದಾಗ ಶಾಲಾ ಕಟ್ಟಡದ ಜಾಗದಲ್ಲಿಯೆ ೧೯೫೫ ರಲ್ಲಿ ಗ್ರಾಮದಲ್ಲಿದೆ ದಾನಶೂರರೆಂದು ಪ್ರಸಿಧ್ಧಿ ಪಡೆದಿದ್ದ ಶ್ರೀ ಶಿವಪ್ನಣ್ಣಾ ಲಂಬೆ ಇವರೊಬ್ಬರೆ ೪೧೦೧ ರೂಪಾಯಿಗಳ ದೊಡ್ಡ ಮೊತ್ತದ ದಾನವನ್ನು ಕಟ್ಟಡ ನಿರ್ಮಾಣಕ್ಕಾಗಿ ನೀಡಿ ಐದು ಹೊಸ ಕೋಣೆಗಳನ್ನು ಕಟ್ಟಿಸಿದ ಗೌರವ ಇವರಿಗೆ ಸಲ್ಲುತ್ತದೆ. (ಪ್ರಸ್ತುತ ಮೊತ್ತ ಅರ್ಧಕೋಟಿ) ಕನ್ನಡಭಾಷೆಯ ಅಭಿಮಾನದಿಂದ ಶಾಲಾ ಕಟ್ಟಡ ನಿರ್ಮಾಣಕ್ಕೆ ತಮ್ಮ ತನುಮನ ದಿನದಿಂದ ಸೇವೆಗೈದ ಶ್ರೀ ಶಿವಪ್ಪಣ್ಣಾ ಲಂಬೆ ಅವರು ನಮ್ಮ ಅಜ್ಜ ನವರು(ನಮ್ಮ ತಾಯಿಯ ಶ್ರೀಮತಿ ಕಮಲಾ ಅಲ್ಲಪ್ಪಾ ಹೊಸೂರು ಸಾ.ಜಮಖಂಡಿ ಇವರ ತಂದೆ ನಮ್ಮ ತಾಯಿ ಅಜ್ಜನವರ ಕಿರಿಯ ಮಗಳು) ಎಂದು ಹೇಳಲು ಬಲು ಹೆಮ್ಮೆ ಎನ್ನಿಸುತ್ತಿದೆ. ಬರಿ ಶಿಕ್ಷಣಕ್ಷೇತ್ರಕ್ಕೆ ಮಾತ್ರ ತಮ್ಮ ಸೇವೆಸಲ್ಲಿಸದೆ ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿಯು ಸೇವೆ ಮಾಡಿದ ಹಿರಿಮೆ ಇವರದ್ದಾಗಿದೆ.
ಹಳ್ಳಿಯಲ್ಲಿ ಬರಗಾಲ ಬಂದಾಗ ಗ್ರಾಮದ ಎಲ್ಲಾ ಜನರಿಗೂ ಪ್ರತಿದಿನ ಅಂಬಲಿ ಅನ್ನ ದಾಸೋಹಮಾಡಿದ ಶರಣರಿವರು.ಗ್ರಾಮದ ಹಿಂದುಳಿದ ಕೆಳವರ್ಗದ ಜನರ ಶ್ರೇಯೊಭಿವೃಧ್ಧಿಗೆ ಸದಾ ಮಿಡಿಯುತ್ತಿದ್ದ ಇವರ ಮನ ಪ್ರತಿವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಈ ವರ್ಗದ ಜನರ ಮಕ್ಕಳಿಗೆ ಹೊಸ ಬಟ್ಟೆ ಸಿಹಿ ಹಂಚಿ ಸ್ವಾತಂತ್ರ್ಯೊತ್ಸವನ್ನು ಸಂಭ್ರಮಿಸುತ್ತಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕದಿನದಂದು ಶಾಲೆಯ ಮುಂದೆ ತ್ರಿವರ್ಣ ಧ್ವಜಮೇಲೆರಿಸಿ ಅದರ ಮೇಲೆ ತುಂಬಿದ ಚೀಲದಲ್ಲಿದ್ದ ಬೆಳ್ಳಿಯ ನಾಣ್ಯಗಳನ್ನು ಸುರುವಿ ಅವುಗಳನ್ನೆಲ್ಲಾ ಬಡವಿದ್ಯಾರ್ಥಿಗಳಿಗೆ ಹಂಚಿದ ಇತಿಹಾಸಕ್ಕೆ ಸಾಕ್ಷಿಯಾದ ನಮ್ಮ ತಾಯಿಯವರು ಅಂದಿನ ದಿನಗಳನ್ನು ನಮ್ಮಕಣ್ಣೆದಿರು ಕಟ್ಟುವಂತೆ ಹೇಳಿದಾಗ ಅಂಥವರ ರಕ್ತನಮ್ಮಲ್ಲಿಯು ಹರಿಯುತ್ತಿರುವ ಅಭಿಮಾನ ನಮ್ಮದಾಗಿದೆ.
ಅಂದಿನ ದಿನಗಳಲ್ಲಿ ಈ ಕಾರ್ಯಗಳೆನ್ನೆಲ್ಲಾ ದಾಖಲಿಸುವ ಹಾಗೂ ಪ್ರಚಾರ ಗೊಳಿಸುವ ತೋರಿಕೆ ಮನಸ್ಥಿತಿ ಇರಲಿಲ್ಲಾ. ಎಲ್ಲವು ಸಹಜವೆಂಬಂತೆ ತಮ್ಮ ಕರ್ತವ್ಯ ಎಂಬಂತೆ ಮಾಡಿ ಮುಗಿಸಿ ಅದರಿಂದ ಯಾವುದೆ ಫಲಾಪೇಕ್ಷೆ ಬಯಸದೆ
ನಿರ್ಲಿಪ್ತವಾಗಿರುತ್ತಿದ್ದ ಅಂದಿನ ನಿಜದಾನಿಗಳು ಇಂದಿನವರಿಗೂ ಒಂದಿಷ್ಟು ಮಾದರಿ ಆಗಲಿ ಎನ್ನುವ ಉದ್ದೇಶ ಈ ಲೇಖನದ್ದು. ಪ್ರಸ್ತುತ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕಾರಣ ಗ್ರಾಮೀಣ ವಿಭಾಗದ ಕನ್ನಡ ಶಾಲೆಗಳು ಕಣ್ಮರೆಆಗುತ್ತಿರುವ ಇಂದಿನ ದಿನಗಳಲ್ಲಿ ಇವತ್ತಿಗೂ ಕೂಡಾ ಯಕ್ಸಂಬಾ ಗ್ರಾಮದಲ್ಲಿ ಕನ್ನಡ ವಿದ್ಯಾ ಮಂದಿರವು ನೂರಾರೂ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಕ್ರೀಯಾಶೀಲವಾಗಿರುವ ಹಿಂದಿನ ಶಕ್ತಿ ಶ್ರೀ ಶಿವಪ್ಪಣ್ಢಾ ಲಂಬೆಯಂತಹ ಮಹಾದಾನಿಗಳು ನೀಡಿದ ನಿಸ್ವಾರ್ಥ ದಾನವಾಗಿದೆ ಎಂದರೆ ತಪ್ಪಿಲ್ಲಾ.
ಅಂದಿನ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಾವಿಂದು ಸಾಗಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ.ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲಾ ಸದಾ ಸಿದ್ಧರಾಗಿರೋಣ ಎನ್ನುವುದೆ ನಮ್ಮಧ್ಯೇಯವಾಗಿರಲಿ.
ಜೈ ಕನ್ನಡಾಂಬೆ ಜೈ ಕರ್ನಾಟಕ ಮಾತೆ
ಕನ್ನಡವೆ ಸತ್ಯ ಎಂದಿಗೂ ಕನ್ನಡವೆ ನಿತ್ಯ
ಲೇಖಕಿ: ಶ್ರೀಮತಿ ಆಶಾ ಎಸ್ ಯಮಕನಮರಡಿ ಬೆಳಗಾವಿ

