ಮಾನವೀಯತೆ ಮೆರೆದ ಚಂದ್ರಪ್ರಭ ಗೌಡ ಎಂಬ ಮಹಿಳೆ

ಮಾನವೀಯತೆ ಮೆರೆದ ಚಂದ್ರಪ್ರಭ ಗೌಡ ಎಂಬ ಮಹಿಳೆ

 

ಚಂದ್ರಪ್ರಭ ಗೌಡ ಎಂಬ ಮಹಿಳೆಯನ್ನು ಸೋಶಿಯಲ್ ಮೀಡಿಯಾ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದೆ. ದ ಕ ಜಿಲ್ಲೆಯ ಪುತ್ತೂರಿನ ಪರ್ಪುಂಜ ಎಂಬಲ್ಲಿ ನಡೆದ ರಿಕ್ಷಾ ಮತ್ತು ಕಾರು ನಡುವಿನ ಅಪಘಾತದಲ್ಲಿ ಗಾಯಗೊಂಡ ನಾಲ್ಕು ತಿಂಗಳ ರಿನ್ ಶಾ ಫಾತಿಮಾ ಎಂಬ ಮಗುವನ್ನು ಎದೆಗೆ ಅಪ್ಪಿಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ದೌಡಾಯಿಸಿ, ಮಗುವಿನ ತಲೆಯ ಸ್ಕ್ಯಾನಿಂಗ್ ಮಾಡಿಸಿ, ಈ ನಡುವೆ ಮಗುವಿಗೆ ಹಾಲು ಮತ್ತು ಫೀಡಿಂಗ್ ಬಾಟಲನ್ನು ತರಿಸಿ ಹಾಲುಣಿಸಿ, ಆ ಮಗುವನ್ನು ಉಳಿಸುವುದಕ್ಕಾಗಿ ಗಂಟೆಗಟ್ಟಲೆ ಸಮಯ ಕೊಟ್ಟು, ಕೊನೆಗೆ ಆ ಮಗು ಅಪಾಯದಿಂದ ಪಾರಾಗಿದೆ ಎಂಬ ಸ್ಕ್ಯಾನಿಂಗ್ ರಿಪೋರ್ಟನ್ನು ನೋಡಿಕೊಂಡು ಸಂತೋಷದ ನಿಟ್ಟುಸಿರಿಟ್ಟು, ಆ ಮಗುವನ್ನು ಹೆತ್ತವರ ಕೈಗೆ ದಾಟಿಸಿ ಮೌನವಾಗಿ ಮನೆಗೆ ನಡೆದ ಈ ತಾಯಿ ನಿಜಕ್ಕೂ ಮಹಾತಾಯಿ.

ಅಷ್ಟಕ್ಕೂ, ಆ ಮಗುವಿಗೂ ಈ ತಾಯಿಗೂ ಯಾವ ಸಂಬಂಧವೂ ಇಲ್ಲ. ರಿನ್ಶಾ ಫಾತಿಮಾ ಎಂಬ ನಾಲ್ಕು ತಿಂಗಳ ಮಗುವಿನ ಧರ್ಮ ಇವರದ್ದಲ್ಲ. ರಕ್ತ ಸಂಬಂಧವೂ ಇಲ್ಲ. ಒಂದು ವೇಳೆ ಇವರು ಆಸ್ಪತ್ರೆಗೆ ಹೋಗದೆ ಇದ್ದರೂ ಆ ಮಗುವನ್ನು ಕೈಯಲ್ಲಿ ಪಡೆದುಕೊಳ್ಳದೆ ಹೋಗಿದ್ದರೂ ಮಗುವನ್ನೆತ್ತಿಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡದೇ ಇರುತ್ತಿದ್ದರೂ ಯಾರೂ ಇವರನ್ನು ಪ್ರಶ್ನಿಸುತ್ತಿರಲಿಲ್ಲ. ತಪ್ಪಿತಸ್ತೆ ಎಂದು ಹೇಳುತ್ತಿರಲಿಲ್ಲ. ಕಟಕಟೆಯಲ್ಲಿ ನಿಲ್ಲಿಸುತ್ತಿರಲಿಲ್ಲ. ಆದರೆ ಇಷ್ಟೆಲ್ಲ ಅವಕಾಶ ಇದ್ದೂ ಓರ್ವ ತಾಯಿ ತನಗೆ ಪರಿಚಯವೇ ಇಲ್ಲದ ಮತ್ತು ಗೊತ್ತೇ ಇಲ್ಲದ ಕಂದಮ್ಮನನ್ನು ಉಳಿಸುವುದಕ್ಕಾಗಿ ಗಂಟೆಗಟ್ಟಲೆ ಸಮಯವನ್ನು ವ್ಯಯಿಸುತ್ತಾರೆಂದರೆ ಮಾನವೀಯ ಹೃದಯದಿಂದ ಮಾತ್ರ ಅದು ಸಾಧ್ಯ

ಸಾಮಾನ್ಯವಾಗಿ ನಾವೆಲ್ಲರೂ ಸಮಾಜಸೇವಕರೇ. ಆದರೆ ನಮ್ಮಲ್ಲಿ ಕೆಲವು ಮಿತಿಗಳಿರುತ್ತವೆ. ಅಪಘಾತದ ಸ್ಥಳದಲ್ಲಿ ನಾವಿದ್ದರೆ ಗಾಯಗೊಂಡವರಿಗೆ ನೀರು ಕೊಟ್ಟು ಬದಿಯಲ್ಲಿ ಕೂರಿಸುತ್ತೇವೆ. ಆಂಬುಲೆನ್ಸ್ ಗೆ ಕರೆ ಮಾಡುತ್ತೇವೆ. ನಾಲ್ಕು ಸಾಂತ್ವನದ ಮಾತುಗಳನ್ನು ಆಡುತ್ತೇವೆ. ಅದು ಬಿಟ್ಟರೆ ಆಂಬುಲೆನ್ಸ್ ನಲ್ಲಿ ಕುಳಿತು ಗಾಯಗೊಂಡವರ ಜೊತೆ ಹೋಗುವುದು, ಆಸ್ಪತ್ರೆಗೆ ದಾಖಲಿಸುವುದು, ಆ ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯ ಇಲ್ಲದಿದ್ದರೆ ಆ ಗಾಯಾಳುವನ್ನು ಇನ್ನೊಂದು ಆಸ್ಪತ್ರೆಗೆ ಸಾಗಿಸುವುದು, ಬಟ್ಟೆಯಲ್ಲ್ಲಿ ರಕ್ತವನ್ನು ಮೆತ್ತಿಸಿಕೊಳ್ಳುವುದು.. ಇತ್ಯಾದಿಗಳಿಗೆಲ್ಲ ಎಲ್ಲರೂ ರೆಡಿ ಇರೋದಿಲ್ಲ. ಯಾಕೆಂದರೆ ಅದರಲ್ಲಿ ಸವಾಲು ಇದೆ ಮತ್ತು ಸಮಯವನ್ನೂ ಕೊಡಬೇಕಾಗುತ್ತದೆ. ಆದ್ದರಿಂದಲೇ ಚಂದ್ರಪ್ರಭಾ ಮೇಡಂ ಅವರು ಮುಖ್ಯವಾಗುತ್ತಾರೆ.
ಸೆಲ್ಯೂಟ್ ಮೇಡಂ

-ಏ ಕೆ ಕುಕ್ಕಿಲ

One thought on “ಮಾನವೀಯತೆ ಮೆರೆದ ಚಂದ್ರಪ್ರಭ ಗೌಡ ಎಂಬ ಮಹಿಳೆ

  1. ಧರ್ಮ ಧರ್ಮ ಎಂಬ ಬಡೆದಾಡುವರು ಈ ತಾಯಿ ಮಾನವೀಯತೆಯನ್ನು ಒಂದು ಸಲ ತಿಳಿದು ಯೋಚನೆ ಮಾಡಿ ಇನ್ನೊಬ್ಬರು ಕಷ್ಟದಲ್ಲಿದ್ದಾಗ ಸಹಾಯ ಮಾಡುವುದೇ ಧರ್ಮ. ಮೇಡಂ ದೇವರು ತಮಗೆ ಒಳ್ಳೆಯದನ್ನು ಮಾಡಲಿ

Comments are closed.

Don`t copy text!