ಅಕ್ಷಯತೃತೀಯ..
ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಉಗಾದಿ, ದಸರಾ, ದೀಪಾವಳಿ ಪಾಡ್ಯ, ಅಕ್ಷಯತೃತೀಯ ಪ್ರಮುಖವಾದವುಗಳು. ಈ ಮೂರೂ ಹಬ್ಬಗಳು ಮೂರುವರೆ ಶುಭದಿನಗಳೆಂದು ನಾವು ಪರಿಗಣಿಸುತ್ತೇವೆ. ಈ ಮೇಲಿನ ಮೂರೂ ಹಬ್ಬಗಳಲ್ಲಿ ಯಾವುದೇ ಕಾರ್ಯ ಪ್ರಾರಂಭ ಮಾಡುವದಾದರೆ ಮುಹೂರ್ತ ನೋಡುವ ಕಾರಣ ಉದ್ಭವಿಸುವದಿಲ್ಲ. ಅಂತಹ ಪವಿತ್ರವಾದವುಗಳು ಇವು. ಆಯಾ ದಿನಗಳಲ್ಲಿ ಪ್ರತಿ ನಿಮಿಷವೂ ಶುಭವೆಂದು ತಿಳಿಯಲಾಗುತ್ತದೆ. ಮೇಲಿನ ಹಬ್ಬಗಳಲ್ಲಿ ಅಕ್ಷಯತೃತೀಯವು ಈಗ ಬಲು ಪ್ರಮುಖವೆಂದು ತಿಳಿಯುತ್ತಾರೆ. ಚಿನ್ನ, ಬೆಳ್ಳಿ, ವಜ್ರಗಳ ಖರೀದಿಗೆ ಇದು ತುಂಬ ಪ್ರಶಸ್ತ ದಿನವೆಂದು ಪರಿಗಣಿಸುತ್ತಾರೆ.
ಈ ವರ್ಷ ಅಕ್ಷಯತೃತೀಯವು ವೈಶಾಖಮಾಸದ ಶುದ್ಧತೃತೀಯ ರವಿವಾರ ಏಪ್ರಿಲ್ 23 ತಾರೀಖಿನಂದು ಬಂದಿದೆ. ಇದಕ್ಕೆ ತ್ರೇತಾಯುಗಾದಿ ಎಂದೂ ಕರೆಯುತ್ತಾರೆ. “ಅಕ್ಷಯ” ಅಂದರೆ ನಾಶವಿಲ್ಲದ್ದು ಎಂದು ಅರ್ಥ. ಸುಖ, ಸಂತೋಷ, ಸಂಪತ್ತು ಸಮೃದ್ಧಿ ಆರೋಗ್ಯ ನೀಡುವದರ ದ್ಯೋತಕ ಈ ಅಕ್ಷಯತೃತೀಯ. ಈ ದಿನ ಹೆಚ್ಚಿನ ಯಶ ಸಿಗುವದು ಎನ್ನುವದು ರೂಢಿಯಲ್ಲಿದೆ. ಗೃಹಪ್ರವೇಶ, ಮದುವೆ ಇನ್ನಿತರ ಪ್ರಮುಖ ಕಾರ್ಯಗಳನ್ನು ಕೈಕೊಳ್ಳಲು ಪ್ರಶಸ್ತವಾದ ದಿನ. ಉದ್ಯಮಗಳಲ್ಲಿ ಈ ದಿನ ಹಣ ತೊಡಗಿಸಿದರೆ ಪೂರ್ಣ ಅಭಿವೃದ್ಧಿ ಹೊಂದುವರು ಎಂದು ಜನರು ಈ ಪ್ರಶಸ್ತ ದಿನದಲ್ಲೇ ಪ್ರಾರಂಭ ಮಾಡುತ್ತಾರೆ.
ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ, ದೇವರ ದರ್ಶನ, ಪೂಜೆ ಹೋಮ ಹವನಗಳಲ್ಲಿ ಧಾರ್ಮಿಕರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುತ್ತಾರೆ. ಎಲ್ಲ ದೇವರ ಪೂಜೆ ಪುನಸ್ಕಾರಗಳ ಜತೆಗೆ ಶ್ರೀ ಮಹಾಲಕ್ಷ್ಮಿಯನ್ನು ವಿಶೇಷವಾಗಿ ಅಲಂಕರಿಸಿ ಪ್ರಾರ್ಥನೆ ಕೈಗೊಳ್ಳುತ್ತಾರೆ. ಲಕ್ಷ್ಮೀ ದೇವಿಯನ್ನು ಆರಾಧಿಸದ ಜನರೇ ಇಲ್ಲ ಎಂದರೆ ತಪ್ಪಾಗಲಾರದು. ಕುಬೇರನೂ ಸಹ ಅಕ್ಷಯತೃತೀಯದಂದು ಲಕ್ಷ್ಮಿಯನ್ನು ಪೂಜಿಸಿ ಕೃತಾರ್ಥನಾಗುತ್ತಾನೆ. ಈತ ಐಶ್ವರ್ಯದ ಒಡೆಯನಿದ್ದರೂ ಮಹಾಲಕ್ಷ್ಮಿಯ ಕೃಪಾಕಟಾಕ್ಷವನ್ನು ಬೇಡಿ ಪೂಜಿಸುತ್ತಾನೆ.
ಸುದಾಮನು ಶ್ರೀಕೃಷ್ಣನ ದರ್ಶನಕ್ಕೆ ಹೋದದ್ದುಈ ದಿನವೆ. ಶ್ರೀಕೃಷ್ಣನ ಕೃಪೆಯಿಂದ ಅತುಲ ಸಂಪತ್ತನ್ನು ಪಡೆಯುತ್ತಾನೆ. ಪಾಂಡವರು ಸೂರ್ಯನಾರಾಯಣನಿಂದ “ಅಕ್ಷಯಪಾತ್ರೆ” ಪಡೆದದ್ದು ಈ ತೃತೀಯ ದಿನದಂದೇ. ಮಹರ್ಷಿ ವ್ಯಾಸರು ಮಹಾಭಾರತ ಬರೆಯಲು ಪ್ರಾರಂಭಿಸಿದ್ದು ಇದೇ ದಿನ. ಸೂರ್ಯ ಮತ್ತು ಚಂದ್ರರು ಅಂದು ಪ್ರಶಸ್ತವಾಗಿದ್ದು ಎಲ್ಲ ದೇವರಕೃಪೆಯು ಅಂದು ಮಾನವನಿಗೆ ಬೇಡದಲೇ ಸಿಗುತ್ತದೆ.
ಅಂದು ಮನೆಯನ್ನು ತಳಿರು ತೋರಣಗಳಿಂದ ರಂಗೋಲಿಯಿಂದ ಶೃಂಗರಿಸಿ ಯಥಾನುಕೂಲ ಧ್ಯಾನ ಪೂಜೆಯಲ್ಲಿ ತೊಡಗಿ ಉತ್ತಮಫಲಕ್ಕೂ ಪ್ರಾರ್ಥಿಸಿದರೇ ಆ ದೇವರು ಯೋಗ್ಯಫಲವನ್ನು ಕೊಟ್ಟೇ ಕೊಡುವನೆಂದು ನಂಬಿಕೆಯು ಅನಾದಿಕಾಲದಿಂದಲೂ ಬಂದಿದೆ. ಅಂದು ವಿವಿಧ ರೀತಿಯಲ್ಲಿ ಎಲ್ಲ ದೇವರನ್ನು ಪೂಜಿಸಿ ಕೃತ ಕೃತ್ಯರಾಗಿ ಜೀವನ ಸಾಗಿಸೋಣ
–ಕೃಷ್ಣ ಬೀಡಕರ
ನಿವೃತ್ತ ವ್ಯವಸ್ಥಾಪಕರು
ಮಹಾಲಕ್ಷ್ಮಿ ಬ್ಯಾಂಕ
ಕೆಎಚ್ ಬಿ ಕಾಲನಿ
ವಿಜಯಪುರ. -3
ದೂರವಾಣಿ 9972087473