ಬದುಕು ಭಾರವಲ್ಲ 5
ಸಹಾಯ
ಈ ಜೀವನವೇ ಒಂದು ರೀತಿಯಲ್ಲಿ ಸಹಾಯದ ಮೇಲೆ ನಿಂತಿದೆ .
ಪ್ರತಿ ಜೀವಿಯು ತನ್ನ ಉಳುವಿಗಾಗಿ
ಇನ್ನೊಂದು ಜೀವಿಯ ಸಹಾಯ ಪಡೆಯಲೇ ಬೇಕಾಗುತ್ತದೆ.
ಮತ್ತು ಸಹಾಯ ಮಾಡಲೇ ಬೇಕಾಗುತ್ತದೆ.
ತನ್ನಷ್ಟಕ್ಕೆ ತಾನೇ ಸಹಾಯ ವಿಲ್ಲದೇ ಬದುಕಲು ಜೀವ ಭಾರ ವಾಗುತ್ತದೆ .
ತಾನೂ ಸಹಾಯಯಾಚಿಸುತ್ತ ಸಹಾಯ ಮಾಡುತ್ತ ಬದುಕು ಸವೆಸುತ್ತ ಬಾಳನ್ನು ಸುಂದರಗೊಳಿಸಿಕೊಳ್ಳುತ್ತ ಸಾಗಿದರೆ ಬದುಕು ಭಾರವಲ್ಲ ಅಲ್ಲವೇ ಅಲ್ಲ.
ಸಹಾಯ ಮಾಡುವ ಮನುಷ್ಯ ರು ನಮ್ಮ ಎದುರಿಗೆ ದೇವರಂತೆ ಕಾಣುವರು ಅಯ್ಯೋ ದೇವರೇ ಬಂದಂತೆ ಬಂದಿರಿ ನೋಡ್ರಿ ನೀವು ಬರದಿದ್ದರೆ ತುಂಬಾ ತೊಂದರೆ ಯಾಗುತ್ತಿತ್ತು ನೋಡ್ರಿ ಎಂದು ಅಂದಿದ್ದು ಪ್ರತಿಯೊಬ್ಬರಿಗೂ ಅನುಭವ ಆಗಿರಲಿಕ್ಕೆ ಬೇಕು .
ಸಹಾಯ ಮಾಡುವವರು ನಾವು ಕೇಳದಿದ್ದರು ಹೇಳದಿದ್ದರೂ ಸಹಾಯ ಮಾಡಲು ಮುಂದೆ ಬರುವರು .
ಮಾಡಿದ ಸಹಾಯ ಹಾಗೂ ಸಹಾಯ ಮಾಡಿದ ವ್ಯಕ್ತಿಗಳನ್ನು ನಾವು ಯಾವಾಗಲೂ ನೆನಪಿಟ್ಟುಕೊಂಡಿರಬೇಕು.
ಮಾಡಿದ ಸಹಾಯಕ್ಕೆ ಕೃತಜ್ಞತೆಯನ್ನು ಖಂಡಿತ ಸಲ್ಲಿಸಬೇಕು .
ಸಹಾಯದಲ್ಲಿ ಬೇಕಾದಷ್ಟಿವೆ
ಅತ್ಯಂತ ಚಿಕ್ಕ ದಾದರೂ ಅದರ ಬೆಲೆ ತುಂಬ ಮಹತ್ತರವಾದದು ಅನಿಸುತ್ತದೆ .ಒಂದು ಕ್ಷಣ ನೀವೆಲ್ಲರೂ ಯೋಚಿಸಿ ನೋಡಿ ..
ಯಾರು ಯಾರು ನಮಗೆ ಎಂತ ಎಂತಹ ಸಂದರ್ಭದಲ್ಲಿ ಸಹಾಯ ಮಾಡಿರುವರು ಎಂದು ಒಂದು ಸಲ ನಮ್ಮ ನಮ್ಮ ಮನವನ್ನು ಪುನರಾವಲೋಕನ ಮಾಡಿದಾಗ ಗೊತ್ತಾಗುತ್ತದೆ.
ಅತ್ಯಂತ ಕಠಿಣ ಸಂದರ್ಭಗಳಲ್ಲಿ ಅಂದರೆ ಬದುಕು ನಡೆಸಲು ತುಂಬ ಕಠಿಣ ಜೀವನವೇ ಭಾರ .ಬದುಕೆ ಭಾರವಾದ ಸಂದರ್ಭಗಳಲ್ಲಿ ನಮಗೆ ಸಹಾಯ ಮಾಡಿ ಬದುಕಿನ ಭಾರ ವನ್ನು ಇಳಿಸುವ ಜನರು ಅಪರೂಪ .ಹಣದ ರೂಪದಲ್ಲಿ ಆಗಿರಬಹುದು .ವಸ್ತುವಿನ ರೂಪದಲ್ಲಿಯಾದರೂ ಆಗಿರಬಹುದು .ವ್ಯಕ್ತಿಯ ರೂಪದಲ್ಲಿಯಾದರೂ .ಮಾತಿನ ರೂಪದಲ್ಲಿಯಾದರೂ ಆಗಿರಬಹುದು .
ಸಂತೆಗೆ ಹೋದಾಗ ಯವ್ವಾ ಈ ಗಂಟ ತೆಲಿ ಮ್ಯಾಲ ಹೊರಿಸವ್ವ ಎಂದು ವಯಸ್ಸಾದ ಒಬ್ಬಳು ಅಜ್ಜಿ ಸುಮಾರು 18 -19 ವರ್ಷದ ಒಬ್ಬ ಹೆಣ್ಣು ಮಗಳಿಗೆ ಹೇಳಿದಳು ಅವಳು ಕೇಳಿಯೂ ಕೇಳದ ಹಾಗೆ ಹೋದಳು ನಾನು ಕಾಲೇಜಿನಿಂದ ಮನೆಗೆ ಊಟಕ್ಕೆ ಹೋಗುತ್ತಿದ್ದೆ ಸಂತೆ ನಮ್ಮ ಕಾಲೇಜಿನ ಮುಂದಿನ ರಸ್ತೆಯ ಮೇಲೆಯೇ ಸಂತೆ ನನ್ನ ಜೊತೆಗೆ ಇನ್ನೊಬ್ಬರು ಇದ್ದರು .ಅವರಿಗೆ ಅದೇ ಧ್ವನಿಯಲ್ಲಿ ಕೇಳಿದಳು ಯವ್ವಾ ಈ ಗಂಟ ಸ್ವಲ್ಪ ಹೊರಿಸು ಅಂತಾ ಪಾಪ ವಯಸ್ಸಾದ ಅಜ್ಜಿ ಗಂಟು ಎತ್ತಲಾಗುತ್ತಿಲ್ಲ ಅವಳಿಗೆ ನನಗೆ ಹೇಳದಿದ್ದರೂ ಆ ಅಜ್ಜಿಯ ಗಂಟು ಹೊರಿಸಿ ಬಂದೆ .ಅವಾಗ ಅಜ್ಜಿ ಒಂದು ಮಾತು ಹೇಳಿದಳು ಈಗಿನ ಮಂದಿಗ ಸಹಾಯ ಅಂದ್ರ ಗೊತ್ತಿಲ್ಲ ನೋಡ ತಂಗಿ ನೀ ನೌಕರಿ ಮಾಡುವ ವಳು ನಿನ್ನ ನಾ ಕರಿಲಿಲ್ಲ ಆದ್ರ ದೇವರ ಬಂದಂಗ ಬಂದ ಹಸಿದವರ ಹೊಟ್ಟಿ ತುಂಬಿಸಿದಿ ತಂಗಿ ನೀ ಬಸವಣ್ಣನ ಭಕ್ತಳಾಗಿರಬೇಕ ನಮ್ಮಪ್ಪ ಬಸವಣ್ಣ ನಿನ್ನ ಚೆಂದಾಕ ಇಟ್ಟರಲಿ ನನ್ನವ್ವ ಎಂದಳು.
ಕಣ್ಣಲ್ಲಿ ಕಂಬನಿಯ ಎರಡು ಹನಿ ಆ ಅಜ್ಜಿಯ ಗಂಟ ಮೇಲೆ ಬಿದ್ದಾಗ ಅಂದಳು ಅಜ್ಜಿ ನಿನ್ನ ಎರಡು ಕಣ್ಣಿನ ಹನಿ ನನ್ನ ಗಂಟಿನ ಭಾರ ಇಳಿತು ನೋಡ ತಂಗಿ ನನ್ನ ಗಂಟ ನನಗ ಭಾರ ಇತ್ತ ಇನ್ನ ಮನಿಗ ಹೋಗುಮಟ ನಾನು ಯಾರ ಸಹಾಯ ಕೇಳುದಿಲ್ಲ ಅಂದಿತು ಆ ಅಜ್ಜಿ.
ನೋಡಿ ನಮ್ಮ ಬದುಕೇ ಒಂದು ಹೊರಲಾರದ ಗಂಟು ಇದ್ದಂಗ .ಆ ಗಂಟಿನ ಭಾರ ಇಳಿಸುವರು ಹೊರಿಸುವರು ನಾವೇ ನಮ್ಮ ನಮ್ಮ ಜೀವನದ ಗಂಟನ್ನು ಹೊತ್ತುಕೊಂಡು ಹೋಗಲು ಆಗಲಾರದು. ಅಲ್ಪ ಸಹಾಯವೆಂದು ಮಾಡಿದವನಿಗೆ ಅನಿಸಿದರೆ ಸಹಾಯ ಪಡೆದವರಿಗೆ ಅದು ದೊಡ್ಡದೇ
ಜೀವನದಲ್ಲಿ ಒಬ್ಬರಿಗೆ ಒಬ್ಬರು ನಿರ್ಮಲ ಮನದಿಂದ ಸಹಾಯ ಮಾಡುತ್ತ ಹೋದರೆ ಈ ಬದುಕು ಭಾರವಾಗಲಾರದು ಅಲ್ಲವೇ ?
ನಾವು ಮನೆ ಬಂಗಾರ ಹಣ ವಸ್ತ್ರ ಕೊಡುವುದು ಸಹಾಯವಲ್ಲ ಅದು ನಮ್ಮ ದೊಡ್ಡಸ್ತಿಕೆ. ಯಾರಿಗೆ ಸಹಾಯ ಮಾಡುವ ಗುಣವಿದೆಯೋ ಎಷ್ಟೊಂದು ಅನಾಥಾಶ್ರಮಗಳು ಇವೆ ಹೋಗಿ ಸಹಾಯ ಮಾಡಿ ಬನ್ನಿ .
ಸಹಾಯ ಮಾಡಿದರೂ ಮಾಡದ ಹಾಗೆ ಇರಬೇಕು.
ಯಾರಿಗೂ ನಾನು ಅವರಿಗೆ ಹಾಗೆ ಸಹಾಯ ಮಾಡಿದೆ ಹೀಗೆ ಸಹಾಯ ಮಾಡಿದೆ ಎಂದು ಅವರ .ಹಿಂದೆ ಆಡಿಕೊಳ್ಳಬೇಡಿ
ಸಹಾಯ ಬೇಡದಿದ್ದರೂ ಅರಿತುಕೊಂಡು ಸಹಾಯ ಮಾಡಿ
ನಿಮ್ಮಿಂದ ಅವರಿಗೆ ಸಹಾಯ ಕೇಳಲು ಮನ ಒಪ್ಪದಿದ್ದರೂ ಬೇರೆಯವರಿಂದ ಸಹಾಯ ಮಾಡಿ
ಅತೀ ಅವಶ್ಯ ವಿದ್ದಾಗ ಹಿಂದೆ ಮುಂದೆ ನೋಡದೇ ಸಹಾಯ ಮಾಡಿ
ಸಹಾಯ ಮಾಡುವ ನೆಪದಲ್ಲಿ ಮೋಸ ಮಾಡಬೇಡಿ
ಸಹಾಯ ಕ್ಕೆ ಪ್ರತಿ ಸಹಾಯ ಅಪೇಕ್ಷಿಸಬೇಡಿ
ಸಹಾಯ ಮಾಡುವರೆಂದು ಪದೇ ಪದೇ ಹೋಗಿ ಸಹಾಯ ಕೇಳಬಾರದು .
ಸಹಾಯದಿಂದ ತಪ್ಪಿಸಲು ಕುಂಟು ನೆಪ ಹೇಳಬಾರದು.
ಸಹಾಯ ಮಾಡಿದವರಿಗೆ ಕೃತಜ್ಞತೆಯನ್ನು ಖಂಡಿತ ಸಲ್ಲಿಸಬೇಕಲ್ಲವೇ ನೀವೆನನ್ನುವಿರಿ ….
ಮುಂದುವರೆಯುವುದು
–ಡಾ ಸಾವಿತ್ರಿ ಮ ಕಮಲಾಪೂರ