ಅಂತರಂಗದ ಅರಿವು-೬
ಆತ್ಮನರಿದೇಹವೆಂದು ಅಹಂಕರಿಸಿಪ್ಪ ಜಗದಾಟದ ತ್ರಿವಿಧ
ಆತ್ಮನರಿದೇಹವೆಂದು ಅಹಂಕರಿಸಿಪ್ಪ ಜಗದಾಟದ ತ್ರಿವಿಧ
ಕಾಟದ ನೀತಿವಂತರು ಕೇಳಿರೋ,
ಆತ್ಮನಿರುವು ಶ್ವೇತವೋ, ಹರಿತವೋ, ಕಪೋತವೋ,?
ಕೃಷ್ಣ ಗೌರವ ಗಾತ್ರಕ್ಕೆ ಮೊದಲಾದ ಬಣ್ಣದ ವರ್ಣವೋ?
ಇವೇಕೋ ಬಾಯಲ್ಲಿ ಆಡುವ ಮಾತಲ್ಲದೇ ಭಾವಜ್ಞರನಾರನೂ ಕಾಣೆ.
ಆತ್ಮನ ಕಂಡವನಿರುವು ಮುಕುರದೊಳಗಣ ಪ್ರತಿಬಿಂಬದಂತೆ.
ಶ್ರುತಿಯೊಳಗಡಗಿದ ಗತ್ತಿನನಾದದಂತೆ, ಸುಖದೊಳಗಡಗಿದ ಪ್ರತಿರೂಪದಂತೆ,
ಇದರ ಹಸುಕದ ಕುರುಹನರಿದವ ನೀನೋ, ಅವ ತಾನೋ?
ಇದನೇನೆಂದು ಅರಿಯೇ, ಭಾವ ಭ್ರಮಗೆ ದೂರ
ಜ್ಞಾನ ನಿರ್ಲೇಪ ತಾನು ನಿ:ಕಳಂಕ ಮಲ್ಲಿಕಾರ್ಜುನ.
– ಮೊಳಿಗೆ ಮಾರಯ್ಯ
ಎಲ್ಲವನ್ನು ಬಲ್ಲೆವು ಎನ್ನುವ ಪಂಡಿತರು ಆತ್ಮವನ್ನು ಅರಿತಿದ್ದೇವೆ ಎಂದು ಸಾಮಾನ್ಯರನ್ನು ನಂಬಿಸಲು ಪ್ರಯತ್ನಿಸುತ್ತಾರೆ. ತಾವು ಆತ್ಮವನ್ನು ಅರಿತ ಜ್ಞಾನಿಗಳೆಂದು ಜಂಭಪಡುತ್ತಾರೆ. ಅಂಥವರಿಗೆ ಮೋಳಿಗೆ ಮಾರಯ್ಯ ಸವಾಲು ಹಾಕುತ್ತಾನೆ. ನೀವು ಅರಿತ ಆತ್ಮಕ್ಕೆ ಯಾವ ಬಣ್ಣವಿದೆ. ಅದು ಬಿಳಿಯ ಬಣ್ಣದ್ದಾಗಿದೆಯೋ, ಹಸಿರು ಬಣ್ಣದ್ದಾಗಿದೆಯೋ, ಬೂದು ಬಣ್ಣದ್ದಾಗಿದೆಯೋ ಅಥವಾ ಅದು ನೀಲವರ್ಣದ್ದಾಗಿದೆಯೋ, ಯಾವ ಗಾತ್ರದಲ್ಲಿದೆ? ಅದು ಗಾತ್ರಕ್ಕೆ ತಕ್ಕ ಬಣ್ಣವನ್ನೇನಾದರು ಹೊಂದಿದೆಯೇ? ಎಂದು ಪ್ರಶ್ನಿಸುತ್ತಾನೆ.
ಇವೆಲ್ಲವು ಕಲ್ಪಿಸಿಕೊಂಡು ಹೇಳುವ ಮಾತುಗಳೇ ಹೊರತು ಸತ್ಯವಾದ ಮಾತುಗಳಲ್ಲ. ಭಾವಜ್ಞರನಾರನೂ ಕಾಣೆ. ಆತ್ಮದ ಅಸ್ತಿತ್ವವನ್ನು ವಿವೇಕದಿಂದ ತಿಳಿದುಕೊಂಡವರನ್ನು ನಾನು ಕಂಡಿಲ್ಲ. ಯಾರು ಆತ್ಮವನ್ನು ಕಂಡಿರುತ್ತಾನೋ ಅವನು ಕನ್ನಡಿಯೊಳಗೆ ಕಂಡ ಪ್ರತಿಬಿಂಬದಂತೆ ಗೋಚರವಾಗಿರುತ್ತದೆ. ಶ್ರತಿಯೊಳಗೆ ಅಡಗಿರುವ ನಾದದಂತೆ ಅದು ಸಂಗೀತಗಾರನಿಗೆ ಗೋಚರವಾಗುವಂತೆ ಬೇರ್ಪಡಿಸಿ ತೋರಿಸಲಾಗದಂತೆ ಅನುಭವಕ್ಕೆ ಮಾತ್ರ ಸಿಕ್ಕುವಂತದ್ದು. ಸುಖದೊಳಗೆ ಅಡಗಿದ ಪ್ರತಿರೂಪದಂತೆ. ನಮ್ಮ ಮನಸಿಗೆ ಹಿತ ಅಥವಾ ಸುಖವನ್ನುಂಟು ಮಾಡಿದ ಗಳಿಗೆಯನ್ನು ಕ್ಷಣವನ್ನು ವರ್ಣನೆ ಮಾಡಬಹುದು. ಆದರೆ ಆ ಸುಖವನ್ನು ಮತ್ತೆ ಅನುಭವಿಸಲಾಗದು. ಹಾಗಾಗಿ ಆತ್ಮದ ಕುರುಹನ್ನು/ಗುರುತನ್ನು ಅರಿಯಲು ಸಾಧ್ಯವಿಲ್ಲ.
ಅದು ನಿನಗೆ ತಿಳಿದಿದೆಯೋ ಅಥವಾ ನನಗೆ ತಿಳಿದಿದೆಯೋ, ಭಾವಬ್ರಮೆಯಿಂದ ದೂವಾಗಿ ಜ್ಞಾನನಿರ್ಲೇಪ ನಿ:ಕಳಂಕ ಮಲ್ಲಿಕಾರ್ಜುನ ದೇವನು ಮಾತ್ರ ಆತ್ಮದ ಕುರುಹನ್ನು ಅರಿಯಲು ಸಾಧ್ಯ. ಅದು ಜ್ಞಾನವನ್ನು ಬಲ್ಲೆನೆಂಬ ಗರ್ವಿಗಳಿಂದ ತಿಳಿಯಲು ಸಾಧ್ಯವಿಲ್ಲ.
–ಡಾ.ನಿರ್ಮಲ ಬಟ್ಟಲ