ಎನ್ನ ನಡೆಯೊಂದು ಪರಿ ಎನ್ನ ನುಡಿಯೊಂದು ಪರಿ

ಅಂತರಂಗದ ಅರಿವು-  ಅಂಕಣ:೮

ಎನ್ನ ನಡೆಯೊಂದು ಪರಿ
ಎನ್ನ ನುಡಿಯೊಂದು ಪರಿ
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ
ನುಡಿಗೆ ತಕ್ಕ ನಡೆಯ ಕಂಡಡೆ ಕೂಡಲಸಂಗಮದೇವನೊಳಗಿಪ್ಪನಯ್ಯಾ
                                            – ಬಸವಣ್ಣನವರು

ಇದು ಆತ್ಮಾವಲೋಕನವನ್ನು ಮಾಡಿಕೊಳ್ಳುವ ವಚನ.
ಹೀಗೆ ಅಂತರಾವಲೋಕನವನ್ನು ಮಾಡಿಕೊಂಡು ಸತ್ಯವನ್ನು ಜಗತ್ತಿಗೆ ಹೇಳುವುದು ಬಸವಣ್ಣನವರಿಂದ ಮಾತ್ರ ಸಾಧ್ಯ. ಜಗತ್ತಿನ ಯಾವ ಮನುಷ್ಯನೂ ಕೂಡ ಈ ಮಾತಿಗೆ ಹೊರತಾಗಿಲ್ಲ ಆದರೆ ನಾವ್ಯಾರು ನನ್ನ ನಡೆ ಒಂದು ಪರಿ, ನುಡಿ ಒಂದು ಪರಿ ಎಂದು ಜಗತ್ತಿಗೆ ಹೇಳೋದೇ ಇಲ್ಲ.
ಎನ್ನ ನಡೆಯೊಂದು ಪರಿ
ನಾನು ನಡೆದುಕೊಳ್ಳುವುದೇ ಒಂದು ರೀತಿ ಆ ನಡುವಳಿಕೆಗೂ ನನ್ನ ಅಂತರಂಗದ ಅರಿವಿಗೂ ಯಾವುದೇ ಸಂಬಂಧವಿಲ್ಲ.ಬಾಹ್ಯ ನಡುವಳಿಕೆಗಳು ಅಥವಾ ವರ್ತನೆಗಳು ಜಗತ್ತಿನ ಸಮಯ ಸಂದರ್ಭ ಅನುಸಾರವಾಗಿ, ತೋರ್ಪಡುತ್ತವೆ ಮತ್ತು ನಿಯಂತ್ರಿಸಲ್ಪಡುತ್ತವೆ.
ಎನ್ನ ನುಡಿಯೊಂದು ಪರಿ
ನನ್ನ ನಡೆಗೂ ನುಡಿಗೂ ಯಾವುದೇ ರೀತಿಯ ಸಂಬಂಧವಿಲ್ಲದಂತೆ ನಾನು ವರ್ತಿಸುತ್ತೇನೆ ನುಡಿದಂತೆ ನಡೆಯುವುದೇ ಶರಣ ಧರ್ಮ ಆದರೆ ನಡೆ-ನುಡಿ ಭಿನ್ನವಾದಾಗ ಅಂತರಂಗ ಶುದ್ಧವಿಲ್ಲವೆನ್ನುವುದು ತಿಳಿದು ಬರುತ್ತದೆ.
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ
ಸಂದರ್ಭಕ್ಕೆ ಅನುಗುಣವಾಗಿ ಮುಖವಾಡಗಳನ್ನು ಧರಿಸಿ ಬದುಕುತ್ತಿದ್ದೇವೆ.
ಮನಸ್ಸಿನಲ್ಲಿ ದ್ವೇಷ ಅಸೂಯೆ ಕಪಟತನ ತುಂಬಿಕೊಂಡರು
ನಯವಾಗಿ ಮಾತನಾಡುವುದು ಅಥವಾ ನಯವಾಗಿ ವರ್ತಿಸುವುದು
ಜಗತ್ತಿನ ತೋರಪಡಿಕೆಗಾಗಿ ನಿತ್ಯವು
ನಡೆದಿರುತ್ತದೆ. ವರ್ತನೆಗೆ ವಿರುದ್ಧವಾದ ಭಾವನೆ.ಭಾವನೆಗೆ ವಿರುದ್ಧವಾದ ವರ್ತನೆಯನ್ನು ತೋರ್ಪಡಿಸಿದರೆ.ಅವನಲ್ಲಿ ಮಾನಸಿಕ ಅಸ್ಥಿರತೆ ಉಂಟಾಗುತ್ತದೆ.
ನಡೆನುಡಿಗಳು ಬೇರೆಯಾದವನ ಅಂತರಂಗ ಶುದ್ಧವಿರಲು ಸಾಧ್ಯವಿಲ್ಲ ಅದು ದ್ವಂದ್ವದ ಗೂಡು ಅಥವಾ ರಣರಂಗವಾಗಿರುತ್ತದೆ. ಅಲ್ಲಿ ಪರಿಶುದ್ಧತೆಯನ್ನು ದೃಢತೆಯನ್ನ ಕಾಣಲು ಸಾಧ್ಯವಿಲ್ಲ ಅದಕ್ಕೆ ಬಸವಣ್ಣನವರು ನನ್ನೊಳಗೆ ಏನು ಶುದ್ಧವಿಲ್ಲ ನೋಡಯ್ಯ ಎಂದಿದ್ದಾರೆ.
ಮಾನಸಿಕ ಅಸ್ವಸ್ಥತೆ ಲಕ್ಷಣವೂ ಆಗಿದೆ.ಇದು ಇಂದಿನ ನಮ್ಮೆಲ್ಲರ ಪರಿಸ್ಥಿತಿಯೂ ಹೌದು.

ನುಡಿಗೆ ತಕ್ಕ ನಡೆಯ ಕಂಡಡೆ ಕೂಡಲಸಂಗಮದೇವನೊಳಗಿಪ್ಪನಯ್ಯಾ
ದೇವರನ್ನ ಮೆಚ್ಚಿಸಲು ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡಬೇಕಿಲ್ಲ ಗುಡಿ ಗುಂಡಾರಗಳಿಗೆ ಹೋಗಿ ಪೂಜೆ ಸಲ್ಲಿಸಬೇಕಿಲ್ಲ
ಹರಕೆ ಹೊತ್ತು ದೇಹ ದಂಡಿಸಬೇಕಿಲ್ಲ.
ನುಡಿಗೆ ತಕ್ಕದಾದ ನಡೆಯನ್ನ ರೂಪಿಸಿಕೊಂಡು ಬಿಟ್ಟರೆ, ನುಡಿದಂತೆ ನಡೆದುಬಿಟ್ಟರೆ ಕೂಡಲಸಂಗಮದೇವ ನಮ್ಮೊಳಗೆ ಇರುವ ಎನ್ನುವ ಸತ್ಯ ನಮಗೆ ಅರಿವಾಗುತ್ತದೆ ಅವನನ್ನು ಹೊರಗೆ ಹುಡುಕಬೇಕಾಗಿಲ್ಲ.
ಈ ವಚನದ ಮೂಲಕ ಶರಣನಾದವನು ನಡೆನುಡಿಗಳಲ್ಲಿ ಶುದ್ಧವಾಗಿದ್ದರೆ ದೇವರಿಗೆ ಹತ್ತಿರವಾಗುತ್ತಾನೆ ಎನ್ನುವ ಸುಲಭ ತತ್ವವನ್ನು ಸಾಮಾನ್ಯರಿಗೆ ತಿಳಿಯುವಂತೆ ಹೇಳಿದ್ದಾರೆ.

-ಡಾ. ನಿರ್ಮಲ ಬಟ್ಟಲ

Don`t copy text!