ಕ್ರಾಂತಿಯ ಸೂರ್ಯ

ಕ್ರಾಂತಿಯ ಸೂರ್ಯ

ಶತ ಶತಮಾನಗಳ ತಿರೆಯ ಕತ್ತಲ ಹಾದಿಗೆ
ಬೆಳಕದೊಂದಿಯ ಹಿಡಿದು ಎದೆಯ ಬೆಳಕಾದೆ
ಅಜ್ಞಾನದ ಅಂಧಕಾರವ ಅಳಿಸುತ
ಸುಜ್ಞಾನ ಜ್ಯೋತಿ ಬೆಳಗುತ ಜಗದ ಪ್ರಭೆಯಾದೆ…

ಜಿಡ್ಡು ಗಟ್ಟಿದ ಸಂಪ್ರದಾಯ ಜಾತಿ ಪಾತಿಯ
ಸಂಕೋಲೆಗಳ ಹರಿದೊಗೆದ ಮನು ಕುಲದ ದೀಪ…
ಮೌಢ್ಯಗಳ ಜಾಲದಿಂದ ಬಿಡಿಸಿ ಬೇಧ ಭಾವ ತೊರೆದ
ಕಾರ್ತೀಕ ಕತ್ತಲೆಯಲಿ ಹೊಳೆದ ಆಕಾಶ ದೀಪ…

ಕಾಯಕವೇ ಕೈಲಾಸವೆಂದ ಶತಮಾನದ ನಿಜ ಶರಣ
ಲಿಂಗ ಜಂಗಮ ಪ್ರಸಾದ ದಾಸೋಹಿ ಬೆಳಕ ಕಿರಣ
ಅಸಮಾನತೆ ಅಳಿಸುತ ಅಕ್ಷರ ಕ್ರಾಂತಿಯ ಸ್ಫುರಣ
ಮನುಕುಲ ಹೆಬ್ಬಾಗಿಲಿಗೆ ಕಟ್ಟಿದೆ ಭಾವೈಕ್ಯದ ತೋರಣ..

ದಯೆಧರ್ಮ ನಡೆನುಡಿ ಒಂದಾದ ಮಹಾಮನೆ ಬೆಳಕು
ಯುಗ ಜಗದ ಕಣ್ಣಾಗಿ ಭ್ರಾಂತಿ ಬಿಡಿಸಿದ ಕ್ರಾಂತಿ ಸೂರ್ಯ
ಸಮಚಿತ್ತ ಸಮಭಾವ ಚಿತ್ಕಳೆ ಚಿತ್ಪ್ರಭೆ ಜ್ಞಾನ ಸ್ವರೂಪ
ಆಚಾರವಿಚಾರ ನಡೆನುಡಿ ಒಂದಾದ ದೇವ ಸಂಜಾತ..

ಜಾತಿ ಮತ ಕುಲ ಒಂದೆಂದ ಜೀವನ ಮೌಲ್ಯಧಾರಕ
ಅನುಭಾವ ಮಂಟಪ ವಚನ ಕ್ರಾಂತಿಯ ಹರಿಕಾರ
ಬಡವ ಬಲ್ಲಿದ ಬೇಧವನಳಿಸಿದ ಸ್ತ್ರೀ ಕುಲೋದ್ಧಾರಕ
ಮಬ್ಬ ಮುಸುಕಿದ ಮನುಮನದಿ ಬೀರಿದೆ ಬಸವ ಬೆಳಕ

ಕವಿದ ಕತ್ತಲು ಸೀಳುತ ಬಂದ ಕಲ್ಯಾಣದ ಹಣತೆ
ಅಂತರಂಗದ ಅರಿವು ನೀಡಿದ ಅಂತಃಕರಣದ ಪ್ರಣತೆ
ತೋರುತ ಬೆಳಕ ನಡೆದ ಹಾದಿಯದು ಸಮತೆ ಮಮತೆ
ಅಂದಿಗೂ ಇಂದಿಗೂ ಮುಂದಿಗೂ ಎಂದೆಂದಿಗೂ…ಅಮರ

_ ಇಂದಿರಾ ಮೋಟೆಬೆನ್ನೂರ. ಬೆಳಗಾವಿ.

Don`t copy text!