ಶರಣರ ಘನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾದೆನು

ವಿಶ್ವ ಕಾರ್ಮಿಕರ ದಲಿತರ ದಮನಿತರ ದ್ವನಿ ಬಸವಣ್ಣ ಕಾಯಕ ದಿನದ ಹಾರ್ದಿಕ ಶುಭಾಷಯಗಳು
__________________________
ಶರಣರ ಘನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾದೆನು

ಎನ್ನ ತನುವೆ ಚನ್ನಬಸವಣ್ಣನಯ್ಯಾ,
ಎನ್ನ ಮನವೆ ಮಡಿವಾಳನಯ್ಯಾ,
ಎನ್ನ ಪ್ರಾಣವೆ ಸಂಗನಬಸವಣ್ಣನಯ್ಯಾ
ಗುಹೇಶ್ವರಾ – ನಿಮ್ಮ ಶರಣರ ಘನವನು
ಎನ್ನ ಸರ್ವಾಂಗದಲ್ಲಿ ಕಂಡು
ಪರಮ ಸುಖಿಯಾಗಿದೆ೯ನು.

                        -ಅಲ್ಲಮ ಪ್ರಭುದೇವರ ವಚನ
ಸವಸಂ : 2, ವಚನ-983 ಪುಟ-295.

ಅಲ್ಲಮರು ಕಲ್ಯಾಣಕ್ಕೆ ಸ್ವಲ್ಪ ತಡವಾಗಿ ಬಂದ ದಾಖಲೆ ಉಲ್ಲೇಖಗಳನ್ನು ಕಾಣುತ್ತೇವೆ . ಅಲ್ಲಮರು ಬಸವಾದಿ ಶರಣರ ಸಮೂಹದಲ್ಲಿ ಸರಳವಾಗಿ ಸೇರಿದವರಲ್ಲ . ಅನೇಕ ಪ್ರಸಂಗಗಳಲ್ಲಿ ಸತ್ಯದ ಒರೆಗಲ್ಲಿಗೆ ಹಚ್ಚಿ ಚಿಂತನ ಮಂಥನ ಮಾಡಿ ಬಸವಣ್ಣನವರ ಆಶಯಗಳಿಗೆ ಮೆರಗು ತಂದು ಕೊಟ್ಟ ಹೆಗ್ಗಳಿಕೆ ಅಲ್ಲಮರಿಗೆ ಸಲ್ಲಬೇಕು .

ಎನ್ನ ತನುವೆ ಚನ್ನಬಸವಣ್ಣನಯ್ಯಾ,

ಕಲ್ಯಾಣಕ್ಕೆ ಆಗಮಿಸಿದ ಅಲ್ಲಮ ಪ್ರಭುಗಳು ಅಲ್ಲಿನ ವೈಚಾರಿಕ ಚಿಂತನೆ ವಾದ ಮಂಡನೆ ಮುಂತಾದ ಅನೇಕ ಪ್ರಸಂಗಗಳಲ್ಲಿ ಅವರಿಗೆ ಸೈದ್ಧಾಂತಿಕವಾಗಿ ಹೆಚ್ಚು ಅತಿ ಆಪ್ತರೆನಿಸಿದವರು ಚೆನ್ನಬಸವಣ್ಣ
ಕಾರಣ ಷಟಸ್ಥಲಗಳನ್ನು ಅತ್ಯಂತ ಲೀಲಾಜಾಲವಾಗಿ ಹೇಳುವ ವಿವರಿಸುವ ಚನ್ನಬಸವಣ್ಣ ತಮ್ಮ ಆಧ್ಯಾತ್ಮಿಕ ತನುವಿಂಗೆ ಪ್ರೇರಣೆ ಸ್ಫೂರ್ತಿ ಎಂದೆನ್ನುತ್ತಾ ತಮ್ಮ ತನುವೆ ಚೆನ್ನ ಬಸವಣ್ಣನವರು ಎಂದಿದ್ದಾರೆ . ಶರಣರು ತಮ್ಮ ವಚನಗಳನ್ನು ಪಾರಮಾರ್ಥಿಕ ಅರ್ಥದಲ್ಲಿ ಹೇಳಿದ್ದಾರೆ ಆದರೆ ಅವುಗಳ ಉಲ್ಲೇಖ ದೇಶೀಯ ಪ್ರಾಪಂಚಿಕ ಜೀವನಕ್ಕೆ ಸಂಬಂಧಿಸಿದ ನಿರೂಪಣೆಯಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ . ಚೆನ್ನ ಬಸವಣ್ಣ ಅಲ್ಲಮರ ತನುವಿಂಗೆ ಮೂಲ ಪ್ರೇರಣೆ ಸ್ಪೂರ್ತಿಯಾದ ವ್ಯಕ್ತಿ ಎನ್ನುವದರ ಜೊತೆಗೆ ಚೆನ್ನಬಸವಣ್ಣನವರ ಮೌಲ್ಯಗಳನ್ನು ಗುಣಗಳನ್ನು ಜಂಗಮ ರಾಜನೇ ಎಂಬುದನ್ನು ಇಲ್ಲಿ ನೋಡಬೇಕು .

ಎನ್ನ ಮನವೆ ಮಡಿವಾಳನಯ್ಯಾ,

ಮನಸ್ಸು ಅತ್ಯಂತ ವಿಚಲಿತಗೊಳ್ಳುವ ಮಲೀನಗೊಳ್ಳುವ ವಿಷಯಾದಿ ವಿಚಾರಗಳಿಗೆ ಬಲಿಯಾಗುವ ಆಕರ್ಷಿತಗೊಳ್ಳುವ ಮನುಷ್ಯನ ದುರ್ಬಲ ಮತ್ತು ಅತ್ಯಂತ ಅಗತ್ಯವಾದ ಅಂಗವು.
ಇದಕ್ಕೆ ಅಲ್ಲಮರು *ಉದಕ ಬಾಯಾರಿ ಬಳಲಿತ್ತು ನೋಡ ಎಂದಿದ್ದಾರೆ*.ಮನಸೇ ಮಾತನಾಡು ಮನಸಿನ ಮೌನವೇ ಒಂದು ಸಂಘರ್ಷ *ಮನಸಿನ ಮನ ತಿಳಿಯುವ ಮನ ಮತ್ತೆ ಬೇರಲ್ಲವೋ ಮನಸೇ ಎಂದೆನ್ನುವ ಶಿಶುನಾಳರು . ಮನಸಿನ ಮನವೇ ಮಾಡಿ ಉಳಿದದ್ದು ಕಾಲ್ಮಡಿ ( ಮೂತ್ರ )ಎಂದು ನವಲಗುಂದ ಶ್ರೀ ನಾಗಲಿಂಗರು ಹೇಳಿದ್ದಾರೆ*.ಮನಸ್ಸನ್ನು ನಿಗ್ರಹಿಸುವ ಸರಿ ತಪ್ಪುಗಳ ವಿವೇಚನೆ ಮಾಡಿ ಸತ್ಯದ ಪಥಕ್ಕೆ ಹೋಗುವ ಸತ್ಸಂಗ ಸನ್ಮಾರ್ಗ ಶರಣರ ಆಶಯವಾಗಿತ್ತು.ಈ ಕಾರಣದಿಂದ ಅಲ್ಲಮರು ತಮ್ಮನ್ನು ಸಾಮಾನ್ಯರ ಪ್ರತಿನಿಧಿಯಾಗಿ ಕಂಡು ಸಾಮಾನ್ಯರ ಮನಸಿನ ಹೊಯ್ದಾಟ ಕಳವಳ ಆಶೆ ಆಮಿಷಕ್ಕೆ ಒಳಗಾಗುವ ಸಂದರ್ಭದಲ್ಲಿ ತಮ್ಮ ಮನಸ್ಸನ್ನು ತಿಳಿಗೊಳಿಸಿ ಶರಣರ ವಿಚಾರ ಚಿಂತನಕ್ಕೆ ಹಚ್ಚುವವರು ಮಡಿವಾಳ ದೇವರು . ಮಾಚಿದೇವನು ಮಡಿವಾಳ ಕಾಯಕ ಮಾಡುವ ಬಟ್ಟೆಗಳನ್ನು ಮಾಡಿ ಮಾಡುವ ಕಾರ್ಯದ ಜೊತೆ ಜೊತೆಗೆ ಭಕ್ತರ ಮನಸ್ಸನ್ನು ಸಹ ತಿಳಿಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದರು. ಮಡಿವಾಳ ಮಾಚಿದೇವರ ಮನಸ್ಸು ಸದಾ ಲಿಂಗ ತತ್ವದಲ್ಲಿ ಲೀಯವಾದ ಕಾರಣ ಅಲಮಾರು ಮಡಿವಾಳ ಮಾಚಿದೇವರೇ ತಮ್ಮ ಮನಸ್ಸು ಎಂದಿದ್ದಾರೆ .

ಎನ್ನ ಪ್ರಾಣವೆ ಸಂಗನಬಸವಣ್ಣನಯ್ಯಾ
ಅಂಗ ಲಿಂಗಕ್ಕೆ ಜಂಗಮ ಚೇತನವಾದ ಸಂಗನ ಬಸವಣ್ಣ ತಮ್ಮ ಪ್ರಾಣವಾದರು ಎಂದು ಹೇಳುವದರ ಮೂಲಕ ಅಲ್ಲಮರು ಬಸವಣ್ಣನವರ ವ್ಯಕ್ತಿತ್ವ ಸಂದೇಶವನ್ನು ಜೀವಕರಗತ ಮಾಡಿಕೊಂಡರು .
ಕಲ್ಯಾಣದ ಕ್ರಾಂತಿ ಜಗತ್ತಿನ ಎಲ್ಲ ಕ್ರಾಂತಿಗೂ ಮೀರಿದ ಸಾರ್ವಕಾಲಿಕ ಸಮಾನತೆ ಬಯಸುವ ಶ್ರೇಷ್ಠ ಸಮಾಜ ನಿರ್ಮಾಣದ ಗುರಿಯಾಗಿತ್ತು . ವರ್ಗ ವರ್ಣ ಆಶ್ರಮ ರಹಿತ ಲಿಂಗ ಭೇದ ರಹಿತ ಸುಂದರ ಸಮಾಜವನ್ನು ಶರಣರು ಕಟ್ಟಿದರು. ಇಂತಹ ಸಮಾಜ ಪರಿವರ್ತನೆಯ ಹರಿಕಾರ ಬಸವಣ್ಣನವರು . ವಚನ ಚಳುವಳಿ ಮಹಿಳಾ ಸ್ವತಂತ್ರ ಆರ್ಥಿಕ ಕ್ರಾಂತಿ ಕಾಯಕ ದಾಸೋಹ ಜಾತೀಯತೆಯ ನಿರ್ಮೂಲನೆ ,ಅಂಧ ಶೃದ್ಧೆ ನಿವಾರಣೆ ಹೀಗೆ ಪ್ರಭುದ್ವ ಪರಿಪೂರ್ಣ ಸಮಾಜವನ್ನು ಶರಣರು ಕಟ್ಟಿದರು.ಇಂತಹ ಶರಣರ ದಿಟ್ಟ ನೇತಾರನಾದ ಬಸವಣ್ಣನವರು ತಮಗೆ ಪ್ರಾಣವಾದರು ಎಂದು ಹೇಳುವಲ್ಲಿ ಬಸವಣ್ಣನವರ ಘನ ವ್ಯಕ್ತಿತ್ವವನ್ನು ಅಲ್ಲಮರು ಎಷ್ಟೊಂದು ಅನುಸರಿಸಿದ್ದರೆಂದರೆ , ತಮಗೂ ಗುಹೇಶ್ವರನಿಗೂ ಮತ್ತು ಜಗಕೆಲ್ಲ ಬಸವಣ್ಣನವರೇ ದೇವರು ಎಂದೆನ್ನುವ ಮೂಲಕ ಬಸವಣ್ಣನವರ ಸಾಮಾಜಿಕ ಸಮಾನತೆಯ ಮಾನವತೆಯ ಮಹಾಶಿಲ್ಪಿ ಎಂದಿದ್ದಾರೆ .

ಗುಹೇಶ್ವರಾ – ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲ್ಲಿ ಕಂಡು ಪರಮಸುಖಿಯಾಗಿದೆ೯ನು.
ದೇವರೆಂದು ನಂಬುವ ಒಂದು ಸುಂದರ ಪ್ರಜ್ಞೆ ವ್ಯಕ್ತಿಯ ಅಂಗದಲ್ಲಿ ಕಾಯದಲ್ಲಿ ಜಂಗಮ ಚೈತನ್ಯವನ್ನು ತೋರಿ ಭಕ್ತನೇ ದೇವರಾಗುವ ಪರಿಯನ್ನು ಕಲಿಸಿಕೊಟ್ಟ ಬಸವಣ್ಣ ಮತ್ತು ಅವರಿಗೆ ಬೆಂಬಲವಾಗಿ ನಿಂತ ಕಕ್ಕಯ್ಯ ದಾಸಿಮಯ್ಯ ಮಾದಾರ ಚೆನ್ನಯ್ಯ ಚೆನ್ನಬಸವಣ್ಣ ಅಕ್ಕ ಮಹಾದೇವಿ ಮಡಿವಾಳ ಮಾಚಿದೇವರು ಹೀಗೆ ಸಾವಿರಾರು ಶರಣರು ಮಾನವ ಮತ್ತು ಲೋಕ ಕಲ್ಯಾಣದ ರೂವಾರಿಗಳು .

ಇಂತಹ ಘನ ವ್ಯಕ್ತಿತ್ವಗಳ ಆದರ್ಶಗಳನ್ನು ಅನುಸರಿಸಿದ ಕಾರಣ ತಮ್ಮ ಸರ್ವತಂಗದಲ್ಲಿ ಲಿಂಗ ಚೈತನ್ಯವನ್ನು ಕಂಡು ತಾವು ಪರಮ ಸುಖಿಯಾದೆನು ಎಂದು ದೇವರಲ್ಲಿ ಹೇಳಿಕೊಂಡಿದ್ದಾರೆ. ಶರಣರ ನೆನೆದರ ಸರಗಿಯ ಇಟ್ಟಾಂಗ ಮೊಗ್ಗು ಮಲ್ಲಿಗೆ ಮೂಡಿದಂಗ ಎಂದು ಹೇಳುವ ಜನಪದಿಗರ ಮಾತು ಇಲ್ಲಿ ಸತ್ಯವೆನಿಸುತ್ತದೆ .

ಡಾ ಶಶಿಕಾಂತ ಪಟ್ಟಣ ರಾಮದುರ್ಗ*

Don`t copy text!