ಜ್ಞಾನದ ಮಾರ್ಗ ಅರಸಿ ಹೋಗಿ, ಗೆದ್ದ ಬುದ್ಧ

ಬುದ್ಧ ಪೌರ್ಣಿಮೆ ನಿಮಿತ್ತ ವಿಶೇಷ ಲೇಖನ

ಜ್ಞಾನದ ಮಾರ್ಗ ಅರಸಿ ಹೋಗಿ, ಗೆದ್ದ ಬುದ್ಧ

“ಮಧ್ಯ ರಾತ್ರಿ ಎದ್ದು ಹೋದವರೆಲ್ಲ ಬುದ್ಧರಲ್ಲ”. ಬುದ್ಧ ಅಂದರೇನೆ ಜಾಗೃತಿ, ಅರಿವು. ಬುದ್ಧ ಈ ಒಂದು ಜ್ಞಾನವನ್ನು ಹುಡುಕಿಕೊಂಡು ಹೋಗಿ ಕಠಿಣ ಪರಿಶ್ರಮ ಪಟ್ಟ ಫಲವೇ ಜ್ಞಾನೋದಯವಾಯಿತು. ಸಿದ್ದಾರ್ಥ ಬುದ್ಧನಾದ. ‘ಏಷ್ಯಾದ ಬೆಳಕು ‘ಎಂದೂ ಕರೆಯಿಸಿಕೊಂಡ. ಬುದ್ಧ ಹುಟ್ಟಿದ್ದು, ಜ್ಞಾನವನ್ನು ಪಡೆದಿದ್ದು ಕೊನೆಗೆ ಮರಣಿಸಿದ್ದು ಎಲ್ಲವೂ ಕೂಡ ವೈಶಾಖ ಮಾಸ ಹುಣ್ಣಿಮೆಯಂದು ಎಂಬುದು ವಿಶೇಷ.

ಭರತಖಂಡದಲ್ಲಿ ಕಾರ್ಮೋಡ ಕವಿದಾಗಲೆಲ್ಲ ಪುಣ್ಯಪುರುಷ ಜನಮವಾಗಿ ಅರಿವಿನ ಮಾರ್ಗ ತೋರಿಸಿ ಮುನ್ನಡೆಸಿದ್ದು ಇತಿಹಾಸ ಹಾಗೂ ವಾಸ್ತವ. ಭಾರತದಲ್ಲಿ ಧರ್ಮಗಳ ಹುಟ್ಟು ಸುಮ್ಮಸುಮ್ಮನೆ ಆಗಿಲ್ಲವೆನ್ನುವುದು ನಮಗೆ ಅವಲೋಕನದಿಂದ ತಿಳಿದು ಬರುತ್ತದೆ. ಪ್ರಪಂಚದಲ್ಲಿರುವ ಧರ್ಮಗಳಲ್ಲಿ ಐದನೇ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಧರ್ಮ ಬೌದ್ಧ ಧರ್ಮ. ಸುಮಾರು ಕ್ರಿ.ಶ.ಪೂರ್ವ ೬ ಅಥವಾ ೫ ನೇ ಶತಮಾನದಲ್ಲಿ ಉತ್ತರ ಭಾರತದಲ್ಲಿ ನೆಲಸಿದ್ದ ಗೌತಮನ ಬೋಧನೆಗಳ ಮೇಲೆ ಆಧಾರಿತವಾಗಿ ಬೆಳೆದು ಬಂದ ಧರ್ಮವಿದು.

ಅಂಧಃಕಾರ ಕವಿದ ಸಮಯದಲ್ಲಿ ವೈದಿಕ ಧರ್ಮದ ಬಹುದೇವತಾರಾಧನೆಯನ್ನು ಖಂಡಿಸಿದವರು ಬುದ್ಧ ಮತ್ತು ಮಹಾವೀರರು. ಇವರು ತಮ್ಮ ತಮ್ಮ ತತ್ವಗಳನ್ನು ಬೋಧಿಸಲು ಜನಸಾಮಾನ್ಯರ ಪ್ರಾಕೃತ ಮತ್ತು ಪಾಲಿ ಭಾಷೆಗಳನ್ನು ಬಳಸಿಕೊಂಡರು.

ಬುದ್ಧನ ಬಾಲ್ಯದ ಕುರಿತು ನೋಡಲಾಗಿ ಕಪಿಲವಸ್ತು ರಾಜ್ಯದ ಶುದ್ಧೋದನ ಹಾಗೂ ಮಾಯಾದೇವಿ ದಂಪತಿಗಳ ಉದರದಲ್ಲಿ ಲುಂಬಿನಿ ವನದಲ್ಲಿ ವೈಶಾಖ ಶುದ್ಧ ಪೌರ್ಣಿಮೆಯಂದು ಜನಿಸಿದನು. ಇವನ ಹೆತ್ತವರು ಶಾಕ್ಯ ಪಂಗಡಕ್ಕೆ ಸೇರಿದವರು. ಮಗುವಿಗೆ ಸಿದ್ಧಾರ್ಥ ಎಂದು ಕರೆದರು. ಮಗು ಹುಟ್ಟಿದ ಏಳು ದಿನಗಳಲ್ಲಿಯೇ ತಾಯಿ ಮಾಯಾದೇವಿ ಅಸುನೀಗಿದಳು. ಎರಡನೇ ತಾಯಿ ಪ್ರಜಾಪತಿ ಗೌತಮಿದೇವಿ ಈತನನ್ನು ಸಲಹುತ್ತಾಳೆ.

ಈತನ ಜನನ‌ಕಾಲ ಕ್ರಿ.ಪೂ ೫೪೪, ೫೫೦,೫೬೦ ಹೀಗೆ ಭಿನ್ನಾಭಿಪ್ರಾಯಗಳಿವೆ. ಹಲವು ಸಂಶೋಧಕರು ಕ್ರಿ.ಪೂ ೬೨೩ ನೇ ವೈಶಾಖ ಮಾಸ ಹುಣ್ಣಿಮೆಯಂದು ಜನಿಸಿದರೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಿದೆ‌. ಮೂಲಹೆಸರು ಸಿದ್ದಾರ್ಥ, ಪ್ರಜಾಪತಿದೇವಿ ಸಲುಹಿದ್ದರಿಂದ ಪ್ರಜಾಪತಿ ಗೌತಮನೆಂದು ಹಾಗೂ ಮುಂದೆ ಜ್ಞಾನ ಸಂಪಾದನೆಯಾದಾಗ ಬುದ್ಧ ಎಂದು ಹೆಸರಾಯಿತು. ಬೌದ್ಧ ಧರ್ಮದಲ್ಲಿ ಕೋಪ, ಲೋಭ, ಮೌಢ್ಯವನ್ನು ಸಂಪೂರ್ಣ ಜಯಿಸಿದವನಿಗೆ ಬುದ್ಧ ಎನ್ನುವರು.

ಸಿದ್ಧಾರ್ಥ ಜನಿಸಿದಾಗಲೇ ಮಹಾಪುರುಷನಲ್ಲಿರಬೇಕಾದ ಎಲ್ಲ ಲಕ್ಷಣಗಳನ್ನು ಹೊಂದಿದ್ದನು ಎಂದು ಅವನಲ್ಲಿಯ ನೀಳಬಾಹು, ವಿಶಾಲವಾದ ಎದೆ, ಊರ್ಧಮುಖ, ರೋಮಧಾರೆ, ಕಮಲ ಹೂವಿನಂತಿರು ನಗು ಮುಖ, ಉದ್ದನೆಯ ಬೆರಳುಗಳು ನೀಳ ಕೈಗಳು , ನವಿರಾದ ಪಾದಗಳು, ಮೃದುವಾದ ಹಸ್ತಗಳು, ಶಾಂತಚಿತ್ತ ಮುಖ ಹೀಗೆ ೩೨ ಚಿಹ್ನೆಗಳನ್ನು ಗುರುತಿಸಿದ ಜ್ಯೋತಿಷಿಯೊಬ್ಬ “ ಈ ಮಗು ಮುಂದೆ ರಾಜ್ಯಾಭಿಷ್ಯಕ್ತನಾದರೆ ಚಕ್ರಾಧೀಶ್ವರನೂ,ರಾಜ ತೊರೆದರೆ ಮಹಾಯೋಗಿಯಾಗುತ್ತಾನೆ “ ಎಂದು ನುಡಿದಿದ್ದರಂತೆ.

ಈ ಕಾರಣದಿಂದಾಗಿ ತಂದೆ ಶುದ್ಧೂಧಮ ಮಗ ರಾಜನೇ ಆಗಬೇಕೆಂದು ಯಾವ ಕಷ್ಟ, ನೋವುಗಳು ಸುಳಿಯದಂತೆ ಅರಮನೆಯಲ್ಲಿಟ್ಟುಕೊಂಡೆ ಬೆಳೆಸಲಾರಂಭಿಸಿದ.

ಸಿದ್ದಾರ್ಥ ಸನ್ಯಾಸಿಯಾಗಲು ಹಲವು ಕಾರಣಗಳಿವೆ ಎಂಬ ಅಭಿಪ್ರಾಯವಿದೆ. ಮೊದಲಿನಿಂದಲೂ ಪ್ರತಿಯೊಂದನ್ನು ಮಾನವೀಯತೆಯ ನೆಲೆಯಲ್ಲಿ ಸಿದ್ದಾರ್ಥ ಕಾಣುತ್ತಿದ್ದ ಹಾಗೂ ಆ ಬಗ್ಗೆ ಚಿಂತಿಸುತ್ತಿದ್ದ ಒಂದು ಘಟನೆ: ಕಪಿಲವಸ್ತುವಿನಲ್ಲಿ ಕೃಷಿ ಸಮಾರಂಭದಲ್ಲಿ ತಂದೆಯ ಅಣತಿಯಂತೆ ಸಿದ್ದಾರ್ಥ ನೇಗಿಲಿಗೆ ಶ್ವೇತವರ್ಣದ ಎತ್ತುಗಳನ್ನು ಕಟ್ಟಿ ನೆಲವನ್ನು ಅಗಿದಾಗ, ನೆಲದಿಂದ ಸಾವಿರಾರು ಕ್ರೀಮಿಕೀಟಗಳು ಹೊರ ಬಂದವು. ಆ ಸಮಯದಲ್ಲಿ ಆಕಾಶದಲ್ಲಿ ಹಾರಾಡುತ್ತಿದ್ದ ಪಕ್ಷಿಗಳು ಬಂದು ಅವುಗಳನ್ನು ಕೊಕ್ಕಿನಿಂದ ಕುಕ್ಕಿ ಕುಕ್ಕಿ ತಿನ್ನುವುದನ್ನು ನೋಡಿ ನೊಂದುಕೊಂಡನು ಆದರೆ ಅದನ್ನು ಯಾರಿಗೂ ಹೇಳಲಿಲ್ಲ.
ಇನ್ನೊಂದು ದಿನ ಸಿದ್ದಾರ್ಥನ ಸಹೋದರ ದೇವದತ್ತನು ಉದ್ಯಾನವನದಲ್ಲಿ ಹಂಸಪಕ್ಷಿಗೆ ಬಾಣಬಿಟ್ಟು ಅದು ಕೆಳಗೆ ಬಿದ್ದು ವಿಲವಿಲನೆ ಒದ್ದಾಡುವಾಗ ಸಿದ್ದಾರ್ಥ ನೊಂದು ಉಪಚರಿಸಿ ಬದುಕಿಸಿದ. ಈ ಎರಡು ಘಟನೆಗಳು ಆಗಾಗ ಸಿದ್ದಾರ್ಥನ ಮನಕಲುಕಿತಿತ್ತು.

ಜ್ಯೋತಿಷಿಯ ನುಡಿಗಳಿಂದ ಚಿಂತಿತನಾಗಿದ್ದ ತಂದೆ ಶುದ್ದೋದನ ಮಗ ವೈರಾಗ್ಯ ತಾಳಬಾರದೆಂದು ಯೌವ್ವನಕ್ಕೆ ಕಾಲಿಡುತ್ತಲೆ ವಿವಾಹ ಮಾಡಿದರೆ ಸಂಸಾರ ಸುಖದಲ್ಲಿ ಮುಳಗಿಬಿಡುತ್ತಾನೆ. ಮುಂದೆ ಸಮಸ್ಯೆ ಉದ್ಭವಿಸಲಿಕ್ಕಿಲ್ಲ ಎಂದು ಸ್ವಯಂವರ ಎರ್ಪಡಿಸಿ, ತನ್ನ ದಂಡಪಾಣಿಯನಾದ ಮಹಾಮಾನನ ಕುವರಿ ಯಶೋಧರೆಯೊಂದಿಗೆ ಲಗ್ನಮಾಡುತ್ತಾನೆ. ಅವರ ಮಗ ರಾಹುಲ.

ಸನ್ಯಾಸಿಯಾಗಲು ಒಂದು ಕಾರಣ: ಒಂದು ದಿನ ಯಾರಿಗೂ ಹೇಳದೆ ಸಿದ್ದಾರ್ಥ ತನ್ನ ಸಾರಥಿ ಚೆನ್ನನೊಂದಿಗೆ ನಗರ ಸಂಚರಾಕ್ಕೆ ಹೊರಡುತ್ತಾನೆ. ಆ ಸಮಯದಲ್ಲಿ ಓರ್ವ ರೋಗಿಯನ್ನು, ಓರ್ವ ವಯೋವೃದ್ಧನನ್ನು, ಒಂದು ಶವವನ್ನು ಕಾಣುತ್ತಾನೆ. ರೋಗಿಯ ಯಾತನೆ, ವೃದ್ಧನ ದುಃಖ, ಸತ್ತವನ ಸಂಬಂಧಿಕರ ಆಕ್ರಂದನ ಅವನ ಮೇಲೆ ಗಾಢವಾದ ಪರಿಣಾಮವನ್ನುಂಟು ಮಾಡುತ್ತಾನೆ. ಅದೇ ಸಮಯದಲ್ಲಿ ಸನ್ಯಾಸಿಯೊಬ್ಬನನ್ನು ನೋಡಿದಾಗ ಆತ ನೆಮ್ಮದಿ ಸಂತಸದಿಂದಿರುವುದಾಗಿ ಕಂಡುಬರುತ್ತಾನೆ. ಅವನನ್ನು ಈ ಕುರಿತು ಕೇಳಿದಾಗ ” ಹುಟ್ಟು – ಸಾವುವುಳ್ಳ ಪ್ರಪಂಚದಲ್ಲಿರುವ ಮಾನವನು ತಿಳಿದು ತಿಳಿದು ಕ್ಷಣಿಕ ಸುಖಕ್ಕಾಗಿ ಆಸೆಪಟ್ಟು ಸಾಗರದಷ್ಟು ದುಃಖ ಪಡುವುದನ್ನು ನೋಡಿ ಖೇದಗೊಂಡು ಕಾಡುಮೇಡು ಅಲೆಯುತ್ತ ನೆಮ್ಮದಿಯಾಗಿದ್ದೆನೆ. ನನಗೆ ಕಷ್ಟ ಬರುವ ಭಯ ಇಲ್ಲ, ಸುಖವೇ ಬೇಕೆಂಬ ಆಸೆಯೂ ಇಲ್ಲ. ಭೂಮಿಯೇ ನನ್ನ ಮನೆ, ಆಕಾಶವೇ ನನಗೆ ಹೊದಿಕೆ. ಅನ್ಯರ ಹಂಗಿಲ್ಲದ ಈ ಅರಣ್ಯ ನನ್ನ ವಿಹಾರ ತಾಣ” ಎಂದ. ಇದನ್ನು ಕೇಳಿದ ಮನಸ್ಸು ಶಾಂತವಾಗಿ ತಾನೂ ಸನ್ಯಾಸಿಯಾಗಬೇಕೆಂದು ಮನದಲ್ಲಿ ನಿರ್ಧರಿಸುತ್ತಾನೆ. ಸಿದ್ದಾರ್ಥನಲ್ಲಿ ದುಃಖಕ್ಕೆ ಕಾರಣ ಹುಡುಕಬೇಕೆಂಬ ತೀವ್ರ ಹಂಬಲದಿಂದ ತನ್ನ ಸಂಕಲ್ಪ ಸಿದ್ದಿಗೆ ಬಂಧನದ ಪರಿತ್ಯಾಗ ಮಾಡಿ ಏಕಾಂಗಿಯಾಗಿ ಕಾಡಿನತ್ತ ಸತ್ಯ ಅರಸಿ ಮಧ್ಯರಾತ್ರಿಯಲ್ಲಿ ಹೊರಟುಬಿಟ್ಟ.

ಈ ಪೂರ್ವದಲ್ಲಿ ತಂದೆಯಲ್ಲಿ ಅನುಮತಿ ಕೇಳಿದಾಗ ತಂದೆ ಒಪ್ಪುವುದಿಲ್ಲ. ಆಗ ತನ್ನ ಬೇಡಿಕೆ ಈಡೇರಿಸುವಂತೆ ಕೇಳಿ, ರೋಗ ರುಜಿನಗಳು ತನ್ನನ್ನು ಸ್ಪರ್ಶಿಸಬಾರದು, ವೃದ್ಧಾಪ್ಯ ಸುಳಿಯಬಾರದು ಹಾಗೂ ಎಂದೂ ದುಃಖ ಪಡಬಾರದು , ಮರಣ ಬಾರದೆ ಅಮರಜೀವಿಯಾಗಬೇಕೆಂದು ಹೇಳಿದಾಗ , ತಂದೆ ಶುದ್ದೋದನ ಮೂಕನಾಗುತ್ತಾನೆ. ಕೊನೆಗೆ ಸಿದ್ದಾರ್ಥ ಯಾರಿಗೂ ಹೇಳದೆ ರಾಜ್ಯ, ರಾಜವೈಭೋಗ, ಹೆಂಡತಿ, ಮಗ, ಹೆತ್ತವರನ್ನು ಎಲ್ಲವನ್ನೂ ತ್ಯಜಿಸಿ ಮಧ್ಯರಾತ್ರಿ ಹೊರಟುಬಿಡುತ್ತಾನೆ. ಈ ಘಟನೆಯನ್ನು ” ಮಹಾಪರಿತ್ಯಾಗ ” ಎಂದು ಕರೆಯುವರು.

ಸಿದ್ದಾರ್ಥ ಸನ್ಯಾಸಿಯಾಗಲು ಈ ಮೇಲಿನ ಕಾರಣವೇ ಸತ್ಯ ಎಂದು ಎಲ್ಲರೂ ತಿಳಿದಿದ್ದು ಆದರೆ ಡಾ. ಬಿ.ಆರ್ ಅಂಬೇಡ್ಕರ ಅವರು ತಮ್ಮ ” ದಿ ಬುದ್ಧ ಆ್ಯಂಡ ಹಿಸ್ ಧಮ್ಮ” ಕೃತಿಯಲ್ಲಿ ಬುದ್ಧ ಸನ್ಯಾಸಿಯಾದ ಬಗೆಯನ್ನು ಹೀಗೆ ಹೇಳುತ್ತಾರೆ. ” ಶಾಕ್ಯರಲ್ಲಿ ಸಂಘವೊಂದಿತ್ತು. ೨೦ ವರುಷ ತುಂಬಿದ ಯುವಕರೆಲ್ಲ ಆ ಸಂಘದ ಸದಸ್ಯರಾಗಬೇಕಿತ್ತು. ಅದರಂತೆ ಸಿದ್ದಾರ್ಥನು ಸದಸ್ಯನಾದ. ಸ್ವಲ್ಪ ದಿನಗಳ ನಂತರ ಶಾಕ್ಯರ ನೆರೆ ರಾಜ್ಯ ಕೊಲಿ ಯ ನಡುವೆ ಹರಿಯುತ್ತಿದ್ದ ” ರೋಹಿಣಿ ನದಿ” ಯ ನೀರಿನ ಬಳಕೆ, ಹಂಚಿಕೆ ಕುರಿತು ಎರಡೂ ರಾಜ್ಯಗಳ ನಡುವೆ ಘರ್ಷಣೆಯಾಗುತ್ತದೆ. ಎರಡು ರಾಜ್ಯಗಳ ಜನರು ರೋಹಿಣಿನದಿ ನೀರನ್ನು ತಮ್ಮತಮ್ಮಲ್ಲೆ ಉಳಿಸಿಕೊಳ್ಳಲು ಯುದ್ಧ ಮಾಡಲು ಮುಂದಾಗುತ್ತಾರೆ. ಈ ವಿಷಯ ಶಾಕ್ಯ ಸಂಘದ ಮುಂದೆ ಬರುತ್ತದೆ.

ಶಾಕ್ಯ ಸೇನಾಧಿಪತಿ ಇದನ್ನು ಬಗೆಹರಿಸಲು ಮುಂದಾಗಿ ಯುದ್ಧ ಮಾಡಲು ನಿರ್ಧರಿಸುತ್ತಾನೆ. ಇದನ್ನು ಸಿದ್ದಾರ್ಥ ಒಪ್ಪುವುದಿಲ್ಲ. ಅದಕ್ಕೆ ಸೇನಾಧಿಪತಿ ಮೂರು ಕಟ್ಟಳೆಗಳನ್ನು ಹೇಳುತ್ತಾನೆ. ೧) ಸೈನ್ಯ ಸೇರಿ ಎಲ್ಲರಂತೆ ಯುದ್ದ ಮಾಡುವುದು ೨) ಗಡಿಪಾರು ಅಥವಾ ಬಹಿಷ್ಕಾರ ೩) ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ . ಇವುಗಳಲ್ಲಿ ಒಂದು ಶಿಕ್ಷೆಯನ್ನು ಆಯ್ದುಕೊಳ್ಳಲು ಹೇಳಿದಾಗ, ಸಿದ್ದಾರ್ಥ ” ಗಡಿಪಾರು” ಶಿಕ್ಷೆ ಒಪ್ಪಿಕೊಳ್ಳುತ್ತಾನೆ. ಆ ನಂತರ ಸಿದ್ದಾರ್ಥ ಸನ್ಯಾಸಿಯಾದನು. ಎಂದು ಹೇಳುತ್ತ, ಇತಿಹಾಸಕಾರರು ಮೂಲಕಥೆಯನ್ನು ಬಿಟ್ಟು, ಕಟ್ಟು ಕಥೆಯನ್ನು ಹೆಣೆದು ಇಡೀ ಚರಿತ್ರೆಯನ್ನೆ ತಿರುಚುವ ಪ್ರಯತ್ನ ಮಾಡಿದ್ದಾರೆ ಎನ್ನುತ್ತಾರೆ. ಅಲ್ಲದೆ “ನಾನೊಬ್ಬ ಚರಿತ್ರಾಕಾರನಾಗಿ ಆಳ ಅಧ್ಯಯನ , ಸಂಶೋಧನೆಯಿಂದ ಈ ವಿಷಯವನ್ನು ಹೇಳುತ್ತಿದ್ದೆನೆ ” ಎಂದಿದ್ದಾರೆ.

ಸನ್ಯಾಸಿಯಾಗುವ ನಿರ್ಧಾರದಿಂದ ಹೊರಟ ಬುದ್ಧ ಅರಣ್ಯದ ಭಾರ್ಗವ ಆಶ್ರಮಕ್ಕೆ ಬಂದು ಅಲ್ಲಿನ ಶಿಷ್ಯರಿಂದ ತಪೋನಿಯಮಗಳನ್ನು ತಿಳಿಯಲು ಪಯತ್ನಿಸುತ್ತಾನೆ. ನಂತರ ಮಗಧ ದೇಶದೆಡೆಗೆ ಪ್ರಯಾಣಬೆಳೆಸುತ್ತಾನೆ. ಬುದ್ಧ ರಾಜ್ಯ ತೊರೆದಾಗ ಆತನಿಗೆ ೨೯ ವಯಸ್ಸು. ” ಉರುವೇಲ” ಆತನ ತಪಸ್ಸಿಗೆ ಉತ್ತಮ ಸ್ಥಳವಾಯಿತು. ನಿರಾಹಾರನಾಗಿ ತಪವನಾಚರಿಸತೊಡಗಿದ. ಇದರಿಂದ ದೇಹ ಕೃಶ, ಚೈತನ್ಯ ಉಡುಗಿ ಪ್ರಜ್ಞೆ ತಪ್ಪಿತು. ಕಾಯಕೃಶ, ನಿರಾಹಾರ ನಿಯಮಗಳು ಸಾಧನೆಗೆ ಸಹಾಯವಲ್ಲವೆಂದರಿತು, ಸುಜಾತೆ ಕೊಟ್ಟ ಪಾಯಸ ಸೇವಿಸಿ ” ಅಶ್ವಥ್ ಮರ” ದ ಕೆಳಗೆ ಪೂರ್ವಾಭಿಮುಖವಾಗಿ , ಪದ್ಮಾಸನ ಹಾಕಿ ಧ್ಯಾನಾಸಕ್ತನಾದನು. ಏಳುವಾರ ಕಾಲ ಹೀಗೆ ಕುಳಿತ. ಕೊನೆಗೆ ವೈಶಾಖ ಹುಣ್ಣಿಮೆಯ ದಿನ ಸಂಕಲ್ಪಸಿದ್ಧಿಯಾಯಿತು. ಜ್ಞಾನೋದಯವಾಯಿತು. ಆ ಮರಕ್ಕೆ ಬೋಧಿವೃಕ್ಷ ಎಂದು ಕರೆಯಲಾಗುತ್ತದೆ.

ಬೌದ್ಧ ಧರ್ಮ ಹಾಗೂ ಬೋಧನೆಗಳು
ಬೌದ್ಧ ಧರ್ಮವು ಪುರಾತನ ಭಾರತೀಯ ಧರ್ಮಗಳಲ್ಲಿ ಒಂದಾಗಿದೆ. ಗೌತಮ ಬುದ್ಧನ ಬೋಧನೆಗಳನ್ನು ಆದರಿಸಿದ ಧರ್ಮ. ಸರಳ ಹಾಗೂ ಸುಲಭವಾಗಿ ಆಚರಿಸಿಕೊಂಡು ಹೋಗುವ ಧರ್ಮ ಇದಾಗಿದ್ದರಿಂದ ಬಹು ಬೇಗ ಭಾರತ ಮತ್ತು ಚೀನಾ, ಟಿಬೇಟ್, ಮಾಯನಮಾರ ಇನ್ನಿತರ ಹೊರದೇಶಗಳಲ್ಲಿಯೂ ಪಸರಿಸಿತು. ಬುದ್ಧ ಬದುಕಿನಲ್ಲಿ ದುಃಖವನ್ನುಂಡು ಬೇಸತ್ತಿದ್ದ ಅಮಾಯಕರನ್ನು ನಿರ್ಗತಿಕರನ್ನು ಅಪ್ಪಿಕೊಂಡು ತನ್ನ ಧರ್ಮದ ಬಾಗಿಲನ್ನು ಎಲ್ಲರಿಗೂ ತೆರೆದಿಟ್ಟ. ಸನ್ಯಾಸಿಯಾಗಿ ಮೊದಲು ಸಾರಾನಾಥದಲ್ಲಿ ತತ್ವ ಬೋಧನೆ ಮಾಡಿದರು. ಪ್ರಾರಂಭದಲ್ಲಿ ಕೇವಲ ಐದು ಜನ ಅನುಯಾಯಿಗಳಿದ್ದರು. ಸುಮಾರು ೪೫ ವರ್ಷಗಳ ಕಾಲ ಬೋಧಿಸಿದನು. ಬುದ್ಧನನ್ನು ‘ ತತಾಗತ’ ಎಂದು ಕರೆದರು. ತತಾಗತ ಎಂದರೆ ಸತ್ಯ ತಿಳಿದವನು ಎಂದರ್ಥ. ‘ ಏಷ್ಯಾದ ಬೆಳಕು’ ಎಂದು ಕರೆದರು.

ಬೋಧನೆಗಳು: ೧) ಸತ್ಯ ೨)ಅಹಿಂಸೆ ೩)ಆಸ್ತೆಯ ೪)ಬ್ರಹ್ಮಚರ್ಯೆ
ಆರ್ಯ ಸತ್ಯಗಳು: ( ಆರ್ಯ ಎಂದರೆ ಶ್ರೇಷ್ಠ) ೧) ಪ್ರಾಪಂಚಿಕ ಜೀವನವು ದುಃಖಮಯವಾಗಿರುತ್ತದೆ. ೨) ಆಸೆಯೇ ದುಃಖಕ್ಕೆ ಮೂಲ ಕಾರಣ ೩)ಆಸೆಯನ್ನು ನಿಗ್ರಹಿಸುವುದರಿಂದ ಪುನರ ಜನ್ಮವನ್ನು ಕೊಣೆಗಾಣಿಸಬಹುದು ೪) ಆಸೆಯನ್ನು ಕೊನೆಗಾನಿಸಲು ಅಷ್ಟಾಂಗ ಮಾರ್ಗವನ್ನು ಅನುಸರಿಸಬೇಕು.
ಅಷ್ಟಾಂಗ ಮಾರ್ಗಗಳು: ೧) ಒಳ್ಳೆಯ ನಂಬಿಕೆ೨) ಒಳ್ಳೆಯ ಆಲೋಚನೆ ೩)ಒಳ್ಳೆಯ ನಡತೆ ೪) ಒಳ್ಳೆಯ ಮಾತು ೫) ಒಳ್ಳೆಯ ಧ್ಯಾನ ೬) ಒಳ್ಳೆಯ ಪ್ರಯತ್ನ ೭) ಒಳ್ಳೆಯ ವಿಚಾರ ೮) ಒಳ್ಳೆಯ ಜೀವನೋಪಾಯ.
ಬುದ್ಧನ ಪಂಚಶೀಲ ತತ್ವಗಳು
೧) ಯಾವುದೇ ಜೀವಿಗಳಿಗೆ ಹಿಂಸೆ ಮಾಡದಿರುವುದು ೨) ನಮ್ಮದಲ್ಲದ ವಸ್ತುಗಳನ್ನು ಕದಿಯದಿರುವುದು ೩) ಶೀಲಹರಣ ಮಾಡದಿರುವುದು ೪) ಸುಳ್ಳನ್ನು ಆಡದಿರುವುದು ಹಾಗೂ ೫) ಮಾದಕ ಪಾನೀಯ ವಸ್ತುಗಳನ್ನು ಸೇವಿಸದಿರುವುದು.

ಸರಳ ಬೋಧನೆಗಳು, ಜನಸಾಮಾನ್ಯರ ದೇಶಿಯ ಭಾಷೆ, ಸಾಮಾಜಿಕ, ಲಿಂಗಸಮಾನತೆ ತತ್ವಗಳು, ಪ್ರೀತಿ,ಕರುಣೆ, ಸಹಾನುಭೂತಿಯಿಂದ ಕೂಡಿದ ಆಕರ್ಷಕ ವ್ಯಕ್ತಿತ್ವ ಬೌದ್ಧ ಸನ್ಯಾಸಿ, ಸನ್ಯಾಸಿನಿಯರು, ಬೌದ್ಧ ಸಂಘಗಳ ಪಾತ್ರ, ಅಶೋಕ, ಕಾನಿಷ್ಕರಂತವರ ರಾಜಾಶ್ರಯ ಮೊದಲಾದವುಗಳು ಧರ್ಮ ತುಂಬ ಪ್ರಸಾರಗೊಂಡಿತು.

ಬೌದ್ಧ ಸಮ್ಮೇಳನಗಳು: ಧರ್ಮ ಸಂಘಟನೆ ಬಲಗೊಂಡು ಹಲವೆಡೆ ಸಮ್ಮೇಳನಗಳು ನಡೆದವು ೧) ಒಂದನೇ ಬೌದ್ಧ ಸಮ್ಮೇಳನವು ಸಾ.ಶ.ಪೂ ೪೮೩ ರಲ್ಲಿ ರಾಜಗ್ರಹದಲ್ಲಿ ನಡೆಯಿತು. ಇಲ್ಲಿ ಬುದ್ಧನ ಹೇಳಿಕೆಗಳನ್ನು ಸಂಗ್ರಹಿಸಲಾಯಿತು. ೨)ಎರಡನೇ ಸಮ್ಮೇಳನ ವೈಶಾಲಿಯಲ್ಲಿ ಸಾ.ಶ.ಪೂ.೩೮೩ ರಲ್ಲಿ ನಡೆಯಿತು. ಇಲ್ಲಿ ಬೌದ್ಧ ಸನ್ಯಾಸಿಗಳ ನಡುವಿನ ಭಿನ್ನಾಭಿಪ್ರಾಯ ತೊಡೆದು ಹಾಕಲು ಪ್ರಯತ್ನಿಸಿತು
೩) ಮೂರನೇ ಸಮ್ಮೇಳನ ಪಾಟಲೀಪುತ್ರ ಸಾ.ಶ.ಪೂ.೨೫೦ ರಲ್ಲಿ ೪) ಸಾ.ಶ.೧೦೨ ರಲ್ಲಿ ಕುಂಡಲಿವನ ( ಕಾಶ್ಮೀರ) ದಲ್ಲಿ ನಡೆಯಿತು. ಇಲ್ಲಿ ಬೌದ್ದ ಸನ್ಯಾಸಿಗಳ ನಡುವಿನ ಭಿನ್ನಾಭಿಪ್ರಾಯ ತೊಡೆದು ಹಾಕಲು ಪ್ರಯತ್ನಿಸಿತು. ಆಗ ಬೌದ್ಧ ಧರ್ಮದಲ್ಲಿ ಹೀನಾಯಾನ ಮತ್ತು ಮಹಾಯಾನ ಎಂಬ ಎರಡು ಪಂಗಡಗಳಾದವು.

ಬೌದ್ಧ ಧರ್ಮದ ತ್ರಿಪಿಟಕಗಳು ಮೂರು ೧) ವಿನಯ ಪಿಟಕ ೨) ಸುತ್ತ ಪಿಟಕ ೩)ಅಭಿದಮ್ಮ ಪಿಟಕ

ಬುದ್ಧ ಪೂರ್ಣಿಮೆ ಅಥವಾ ಬುದ್ಧ ಜಯಂತಿ ಇದು ಬೌದ್ದರಿಗೆ ಅತ್ಯಂತ ಪವಿತ್ರ ಸಂದರ್ಭವಾಗಿದೆ . ಅಂದು ಬುದ್ಧನ ಜನನ, ಜ್ಞಾನೋದಯ ಮತ್ತು ಮರಣದ ದಿನವೂ ಆಗಿರುವುದು.

ಹೀಗೆ ಬೌದ್ಧ ಧರ್ಮದ ವಿಶೇಷತೆಗಳು. ಬದುಕಿನ ಸತ್ಯದ ಸಾಕ್ಷಾತ್ಕಾರ ಪಡೆದು, ಸಾವಿಲ್ಲದ ಮನೆಯ ಸಾಸಿವೆ ತಾರೆಂದು ಭವದ ಬಂಧಗಳನ್ನು ಬಿಡಿಸಿದ, ಅಹಿಂಸೆಯ ಮಾರ್ಗವಿಡಿದು ದಯೆ, ಕರುಣೆಯ ಬೀಜ ಬಿತ್ತಿ, ತಾನು ಕಂಡ ಬದುಕಿನ ಸತ್ಯ ದರ್ಶನದಿಂದ ಜನಮಾನಸಕ್ಕೆ ಬುದ್ಧನಾದ. ಬುದ್ಧನೆಂಬ ಬೆಳಕು ಸದಾ ಬೆಳಗುತಿರಲಿ ಎಂದು ಆಶಿಸಿ ಎಲ್ಲರಿಗೂ ಬುದ್ಧ ಪೌರ್ಣಿಮೆಯ ಶುಭಾಶಯಗಳು

ರೋಹಿಣಿ ಯಾದವಾಡ*
ಅಥಣಿ.

Don`t copy text!