ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದಡೆ…

ಅಂತರಂಗದ ಅರಿವು ೧೩

ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದಡೆ…

ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದಡೆಂತಯ್ಯಾ ? ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜಿದಡೆಂತಯ್ಯಾ ? ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯಾ ? ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು
                                                -ಅಕ್ಕ ಮಹಾದೇವಿ
ಜೀವನದಲ್ಲಿ ವಾಸ್ತವವನ್ನು ಒಪ್ಪಿಕೊಂಡು, ಬರುವ ಸವಾಲುಗಳುನ್ನು ಎದುರಿಸುತ್ತಾ, ಅಂದು ಕೊಡ ಗುರಿಯನ್ನು ಸಾಧಿಸಬೇಕು. ಗುರಿ ಸಾಧನೆಗೆ ಅಡ್ಡಿಯಾಗುವ ಕಾರಣಗಳನ್ನು ನೆಪಗಳನ್ನು ಹೇಳಬಾರದು.
ಟೀಕೆ,ಅಪವಾದಗಳಿಗೆ ಪ್ರತಿಕ್ರಿಯಿಸಿ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳಬಾರದು ಎನ್ನುವ ಸಂದೇಶವನ್ನು ಅಕ್ಕ ಮಹಾದೇವಿ ಈ ವಚನದಲ್ಲಿ ಸುಂದರವಾಗಿ ನಿರೂಪಿಸಿದ್ದಾಳೆ.

ಬೆಟ್ಟದ ಮೇಲೊಂದು
ಮನೆಯ ಮಾಡಿ*
ಮೃಗಗಳಿಗಂಜಿದಡೆಂತಯ್ಯಾ ?
ನಾವು ವಾಸಕ್ಕೆ ಆಯ್ಕೆ ಮಾಡಿಕೊಂಡ ಸ್ಥಳ ಬೆಟ್ಟವಾದರೆ ಅಲ್ಲಿ ಹುಲಿ ,ಚಿರತೆ,ಕರಡಿ,
ತೋಳ, ನರಿ, ಮುಂತಾದ ಮೃಗಗಳಿರುವುದು ಸಹಜ. ಅದನ್ನ ನಾವು ಅರಿತು ಒಪ್ಪಿಕೊಳ್ಳಬೇಕಾದ ಸತ್ಯ. ಅದು ಬಿಟ್ಟು ಅಯ್ಯೋ ಮೃಗಗಳು ಇವೆ ಎಂದು ದೂರಿದರೆ ಹೇಗೆ. ಸಮಾಜದಲ್ಲಿಯೂ ಕೂಡಾ ವಿಭಿನ್ನ ಮನಸ್ಥಿತಿಯ ಜನರಿರುತ್ತಾರೆ.
ಅದನ್ನು ನಾವು ತಿಳಿದಿರಬೇಕು. ಸಮಾಜವೆ ಕೆಟ್ಟದ್ದು ಎಂದು ದೋಷಾರೋಪಣೆ ಮಾಡುವುದು ಸರಿಯಲ್ಲ.

ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜಿದಡೆಂತಯ್ಯಾ ?
ಸಮುದ್ರದ ದಡವೆಂದರೆ ಸದಾ ಭೋರ್ಗರೆವ ಅಲೆಗಳ ಶಬ್ದ. ನಿರಂತರವಾಗಿ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಲೆ ಇರುತ್ತೇವೆ.
ಅಲೆಗಳ ಅಪ್ಪಳಿಸುವಿಕೆ ಭಯವನ್ನುಂಟು ಮಾಡುತ್ತದೆ.
ಅಲ್ಲಿ ಶಾಂತತೆಯನ್ನು ಕಾಣಲು ಸಾಧ್ಯವಿಲ್ಲ ಸಮುದ್ರದ ದಡದಲ್ಲಿಯೇ ಮನೆಯ ಮಾಡಿದ ಮೇಲೆ ಅವುಗಳಿಗೆ ಭಯ ಪಟ್ಟರೆ ಹೇಗೆ ಆ ನೆರೆತೆರಗಳ ಭಯವನ್ನು ಮೀರಿ ನಾವು ಅಲ್ಲಿ ವಾಸಿಸುವ ಮನಸ್ಥಿತಿಯನ್ನು ರೂಪಿಸಿಕೊಳ್ಳಬೇಕು.ಜೀವನದಲ್ಲಿಯೂ ಕಷ್ಟದ ಅಲೆಗಳು ಬಂದು ಅಪ್ಪಳಿಸುತ್ತಲೆ ಇರುತ್ತೇವೆ. ಜೀವನದಲ್ಲಿ ಬರಿ ಸಂತಸವನ್ನು ಕಾಣಲು ಸಾಧ್ಯವಿಲ್ಲ.ಬರುವ ಕಷ್ಟಗಳಿಗೆ ಹೆದರದೆ ಜೀವನ ಮುನ್ನಡೆಸಬೇಕು.

ಸಂತೆಯೊಳಗೊಂದು
ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯಾ ?
ಸಂತೆ ಎಂದರೆ ನೂರಾರು ಜನ ಸೇರಿರುವ ಪ್ರದೇಶ. ಅಲ್ಲಿ ಮೌನವನ್ನ, ಶಾಂತತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಸಂತೆಯಲ್ಲಿದ್ದುಕೊಂಡು ಗಲಾಟೆಯಾಗುತ್ತದೆ, ಶಬ್ದವಾಗುತ್ತದೆ, ಕಿರಿಕಿರಿಯಾಗುತ್ತದೆ ಎಂದು ದೂರಿದರೆ, ಶಬ್ದಕ್ಕೆ ನಾಚಿದರೆ ಹೇಗೆ ಆ ಶಬ್ದವನ್ನು ಮೀರಿ ನಮ್ಮೊಳಗೊಂದು ಏಕಾಂತವನ್ನು ನಿರ್ಮಿಸಿಕೊಳ್ಳುವ ಸಾಮರ್ಥ್ಯ ನಮಗಿರಬೇಕು. ನಿಮ್ಮ ಸುತ್ತಮುತ್ತಲಿನ ಹಲವಾರು ಪ್ರಾಪಂಚಿಕ ಜಂಜಾಟಗಳ ನಡುವೆಯೂ ಮೌನವನ್ನು ಹುಡುಕಬೇಕು. ಮೌನಕ್ಕೆ ಶರಣಾಗಬೇಕು.

ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು
ಇಲ್ಲಿ ಅಕ್ಕ ಮಹಾದೇವಿ ತನ್ನ ಆರಾಧ್ಯ ದೈವ ಚೆನ್ನಮಲ್ಲಿಕಾರ್ಜುನಿಗೆ ಸಮಾಧಾನ ಪಡಿಸುತ್ತಾಳೆ. ನಾನು ಈ ಲೋಕದಲ್ಲಿ ಹುಟ್ಟಿಬಂದಿರುವೆ ಇಲ್ಲಿನ ಆಗುಹೋಗುಗಳಿಗೆ ನಾನು ಸಮಾಧಾನಿಯಾಗಿರುತ್ತೇನೆ ಎಂದು ಹೇಳುತ್ತಾಳೆ.
ಈ ಮಾತು ಎಲ್ಲರಿಗೂ ಅನ್ವಯಿಸುತ್ತದೆ.
ಲೋಕದಲ್ಲಿ ಹುಟ್ಟಿದ ಬಳಿಕ ನಾವು ಮಾಡುವ ಕಾರ್ಯಗಳಿಗೆ ಸ್ತುತಿಸುವವರು ನಿಂದಿಸುವವರು ಇದ್ದೇ ಇರುತ್ತಾರೆ.
ನಮ್ಮ ಕಾರ್ಯವನ್ನು ಮೆಚ್ಚಿ ಹೊಗಳಿದರೆ ನಮ್ಮ ಸಾಧನೆ ಪೂರ್ಣವಾಯಿತು ಎಂದು ಭಾವಿಸಿ ಮೈಮರೆಯಬಾರದು.
ಹಾಗೆಯೇ ಅವರ ನಿಂದೆಗಳಿಗೆ ಹೆದರಿ ಆತ್ಮಸ್ಥೈರ್ಯವನ್ನು ಕಳೆದುಕೊಂಡು, ನಾವು ಹಾಕಿಕೊಂಡ ಗುರಿ ಉದ್ದೇಶಗಳನ್ನು ಬಿಡಬಾರದು. ಹೊಗಳಿದಾಗ ಹಿಗ್ಗದೆ ತೆಗಳಿದಾಗ ಕುಗ್ಗದೆ ಸಮಾಧಾನವಾಗಿರಬೇಕು. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಬೇಕು. ನಮಗೆ ನಮ್ಮ ಕಾರ್ಯವನ್ನು ಸಾಧಿಸುವುದು ಮುಖ್ಯವಾಗಿದ್ದಾಗ ಸಮಾಜಕ್ಕೆ ಹೆದರಿ, ಸಮಾಜ ನಿಂದಿಸುವುದು, ಸಮಾಜ ಹೊಗಳುವುದು ಎಂದು ಹೇಳಿ ನಮ್ಮ ಕಾರ್ಯವನ್ನು ಕೈ ಬಿಡಬಾರದು. ನಾವು ಮಾಡುವ ಕಾರ್ಯ ಸರಿ ಇದೆ ಎಂದು ನಮಗೆ ಗೊತ್ತಿದ್ದರೆ ಸಾಕು. ಆ ಅಡೆತಡೆಗಳನ್ನು ಮೀರಿ ನಾವು ನಮ್ಮ ಗುರಿಯನ್ನು ಸಾಧಿಸುವ ಛಲವನ್ನ ಹೊಂದಿರಬೇಕು.
ನಿಂದಿಸಿದಾಗ ಕೋಪವನ್ನು ಮಾಡಿಕೊಳ್ಳಬಾರದು. ಕೋಪದಿಂದ ಮನಸ್ಸು ತನ್ನ ವೀವೆಕತವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಹೊಗಳಿಕೆ ತೆಗಳಿಕೆ ಎರಡನ್ನು ಸಮಾನವಾಗಿಸಿ ಸ್ವೀಕರಿಸುವ ಮನಸ್ಥಿತಿಯು ಬಹಳ ಮುಖ್ಯ. ಹಾಗಾದರೆ ಮಾತ್ರ ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯ

ಡಾ. ನಿರ್ಮಲ ಬಟ್ಟಲ

Don`t copy text!