ನಿದಿರೆ ಇರದ ಇರುಳು – ಗಜಲ್ ಗಳು

ನಾ ಓದಿದ ಪುಸ್ತಕ- ಪುಸ್ತಕ ಪರಿಚಯ

ಕೃತಿ : – ನಿದಿರೆ ಇರದ ಇರುಳು
– ಗಜಲ್ ಗಳು
ಕೃತಿಕಾರರು : – ಮಂಡಲಗಿರಿ ಪ್ರಸನ್ನ

ನಿದಿರೆ ಇರದೆ ಇರುಳನ್ನು ನಾವು ಕಳೆಯುತ್ತೇವೆ ಎಂದರೆ ಮನದಲ್ಲಿ ಚಿಂತೆ ಇದೆ ಎಂದರ್ಥ. ಎಷ್ಟೋ ಜನ ಚಿಂತಿಸುತ್ತಲೇ ಇರುಳನ್ನು ಹಗಲಾಗಿಸಿಕೊಂಡು ಕಣ್ಣು ಉಬ್ಬಿಸಿಕೊಳ್ಳುತ್ತಾರೆ. ಮನೋವ್ಯಾಧಿಗೆ ತುತ್ತಾಗುತ್ತಾರೆ. ಈ ಇರುಳ ಚಿಂತೆಯನ್ನು ಯಾರು ಚಿಂತನವಾಗಿ ಬದಲಾಯಿಸಿಕೊಳ್ಳುತ್ತಾರೋ ಅವರು ನಿದಿರೆ ಇರದ ಇರುಳುಗಳನ್ನು ಸಾರ್ಥಕವಾಗಿ ಕಳೆಯುತ್ತಾರೆ. ಅವರ ಕತ್ತಲ ಚಿಂತನೆಗಳು ಎಷ್ಟೋ ಜನರಿಗೆ ಬೆಳಕಾಗಿಬಿಡುತ್ತವೆ. ಆದರೆ ಈ ಅಕ್ಷರ ಪ್ರೇಮಿಗಳ ಚಿಂತನೆ ಜನರ ಬದುಕಿಗೆ ಕೇವಲ ಬೆಳಕಲ್ಲ; ದಾರಿಯೂ ಆಗುತ್ತದೆ. ಅಂತಹ ಬೆಳಕಿನೊಂದಿಗೆ ದಾರಿಯನ್ನು ತೋರುವ ಗಜಲ್ ಸಂಕಲನ ಒಂದಿದೆ. ಅದನ್ನು ಹೇಳುವ ಮುಂಚೆ ಅದರ ರಚನಾಕಾರರ ಬಗ್ಗೆ ಒಂದೆರಡು ಮಾತು ಹೇಳಲೇಬೇಕು.
ಒಬ್ಬರಿಗೆ ಸಾಹಿತ್ಯ ರಚನೆಯ ಹವ್ಯಾಸ ಇರುತ್ತದೆ. ಅಪ್ಪಟ ಕನ್ನಡ ಪ್ರೇಮಿ, ಕಥೆ, ಕವಿತೆ ಬರಿಯುತ್ತಿರುತ್ತಾರೆ. ಆದರೆ ಬದುಕು ನಡೀಬೇಕಲ್ವಾ!? ಅದಕ್ಕೆ ನೌಕರಿಗಾಗಿ ಅದರಲ್ಲಿ ತಲ್ಲೀನರಾಗಿ ಬರವಣಿಗೆಯನ್ನು ಮೊಟಕುಗೊಳಿಸುತ್ತಾರೆ ಅಥವಾ ಕಡಿಮೆ ಮಾಡುತ್ತಾರೆ. ಇಂತಹವರ ಸಂಖ್ಯೆಗೇನು ಕೊರತೆಯಿಲ್ಲ. ಆದರೆ ಸಾಹಿತ್ಯ ರಚನೆಗಾಗಿ ತಮ್ಮ ವೃತ್ತಿಯನ್ನೇ ಬದಿಗೊತ್ತಿ ಅದರಿಂದ ಮುಕ್ತಿ ಪಡೆದು ಸಾಹಿತ್ಯವನ್ನೇ ಬದುಕಾಗಿಸಿಕೊಂಡವರ ಬಗೆಗೆ ಕೇಳಿದ್ದೀರಾ? ಬಹುಶಃ ಇಲ್ಲ ಅನ್ಸುತ್ತೆ. ಅಂತಹ ಒಬ್ಬ ಹಿರಿಯ ಲೇಖಕರು, ಸಹೃದಯಿ ಬರಹಗಾರರು ನಮ್ಮ ಉತ್ತರ ಕರ್ನಾಟಕದಲ್ಲಿದ್ದಾರೆ. ವೃತ್ತಿಯಿಂದ ಮಂಡಲಗಿರಿ ಪ್ರಸನ್ನ ಅವರು ಅಭಿಯಂತರರು, ಇವರು ಸುಮಾರು 14 ಕೃತಿಗಳ ಅಧಿಪತಿಯಾಗಿದ್ದಾರೆ.
ಪ್ರಸನ್ನ ವದನ, ಹಸನ್ಮುಖಿ, ಮಕ್ಕಳ ಮನಸಿನ ಕವಿ, ಉದಾತ್ತ ಚಿಂತಕರು, ವಿಮರ್ಶಕರೂ ಆಗಿದ್ದಾರೆ.
ಇವರ ಹನ್ನೆರಡನೇ ಕೃತಿ ಈ ನಿದಿರೆ ಇರದ ಇರಳು. 61 ಗಜಲ್ಗಳ ಈ ಕೃತಿ, ಬದುಕಿನ ಅನೇಕ ಮಜಲ್ಗಳ ಕನ್ನಡಿ. ಪ್ರೇಮವಿದೆ, ಮೋಹವಿದೆ, ಸರಸವಿದೆ, ವಿರಸವಿದೆ, ವಿರಹದ ನೋವಿನ ಜೊತೆ, ತುಸು ಕ್ರೋಧವೂ ಇದೆ. ಈ ಎಲ್ಲಾ ಲಕ್ಷಣಗಳುಳ್ಳ ಗಜಲ್ಗಳನ್ನು ಓದುತ್ತಾ ಸಾಗಿದರೆ ಕೆಲವಷ್ಟು ಸಾಲುಗಳು ಮುಂದಿನ ಗಜಲ್ ಓದುವಾಗಲೂ ಮತ್ತೆ ಮತ್ತೆ ಕಾಡುತ್ತವೆ, ಪುಟ ಹಿಂದೆ ತಿರುಗಿಸಿಕೊಂಡು ಓದಿಸಿಕೊಳ್ಳುತ್ತವೆ. ಈ ಗಜಲ್ಗಳಲ್ಲಿ ಮಜುಬೂತಾದ ಪ್ರಾಸಗಳಿವೆ, ಕವನ ವಾಚನಕ್ಕಿಂತಲೂ ಸಲೀಸು ಗಜಲ್ ವಾಚನ ಅನ್ನಿಸುವಷ್ಟು ರಿದಮ್ ಗಜಲ್ ಸಾಲುಗಳಲ್ಲಿವೆ.
ಎಲ್ಲವೂ ಭಾವಪೂರ್ಣ, ಅರ್ಥಪೂರ್ಣ, ಸಂಪದ್ಭರಿತವಾಗಿವೆ. ಅಂತಹ ಗಜಲ್ ಸಾಲುಗಳ ಒಂದು ಕಿರುನೋಟ ನಿಮ್ಮ ಮುಂದಿಡಲು ಪ್ರಯತ್ನಿಸುತ್ತೇನೆ.

 

ಮೊದಲ ಗಜಲ್ ಮುದ್ರಿಸುವ ಮುನ್ನ ಶ್ರೀಯುತ ಲೇಖಕರು ಅವರ ತಂದೆಯವರು ಬರೆದ “ಪಿರುತಿಯ ಮುಗಿಲಾಗ” ಗಜಲ್ ಆನ್ನು ನೆನಪಿಸಿಕೊಳ್ಳುತ್ತಾರೆ.

ಪಿರುತಿಯ ಮುಗಿಲಾಗ ಮರಿಯಾಗಿ ಕುತೀನಿ
ನಿನ ಬೆಂಕಿ ತಾಕಿದ್ರ ಮಳಿಯಾಗಿ ಸುರಿತೀನಿ”

– ಆಹಾ! ಎಂಥ ಅದ್ಭುತ ಸಾಲುಗಳು ನೋಡಿ. ಪ್ರೀತಿ, ಪ್ರೀತಿಸುವವರಿದ್ದರೆ ಬದುಕೆಲ್ಲಾ ಜೇನ ಮಳೆ ಧಾರಾಕಾರವಾಗಿ ಸುರಿಯುತ್ತದೆ. ಒಬ್ಬರಿಗೊಬ್ಬರು ಪ್ರೇಮದ ಬೆಂಕಿ ತಾಕಿಸಿಕೊಂಡು ತಂಪಾಗಿ, ಬದುಕನ್ನು ಇಂಪಾಗಿ ಅನುಭವಿಸಬೇಕು ಎನ್ನುತ್ತ,

ತ್ರಾಸೆಲ್ಲ ಬಟಗೊಂಡು ಮಾರುದ್ದ ಸಾಗೀನಿ
ತ್ರಾಸ್ನಾಗ ನಾನೀಗ ನಕ್ಕಂತ ನಡದೀನಿ”

– ಜೊತೆಗಾತಿ ಇದ್ದರೆ ತ್ರಾಸನ್ನೆಲ್ಲ ನಕ್ಕೊಂತ ಮರಿಬಹುದು ಎಂದು ಪ್ರೀತಿಯ ಮಹತ್ವವನ್ನು, ಅವಶ್ಯಕತೆಯನ್ನು 1973 ರಲ್ಲೆ ಕೃತಿಕಾರರ ತಂದೆಯವರು ಹೇಳಿದ್ದಾರೆ. ಮುಂದೆ ಕೃತಿಕಾರರ ಗಜಲ್ಗಳನ್ನು ಓದುತ್ತಾ ಸಾಗಿದರೆ ಈ ಅಕ್ಷರದೊಳಗಿನ ಭಾವದ ಸಂಸ್ಕಾರ ರಕ್ತದಲ್ಲೇ ಬಂದದ್ದು ಎಂಬುದನ್ನು ಕಾಣುತ್ತೇವೆ. ಅಂತಹ ಕೆಲವು ವಿಭಿನ್ನ ವಿಷಯದ ಸಾಲುಗಳನ್ನು ತಮ್ಮ ಮುಂದೆ ಅಭಿವ್ಯಕ್ತಿಪಡಿಸಲು ಖುಷಿಪಡುತ್ತೇನೆ.

* “ಮಾಡಿದಂಥ ಹೆಮ್ಮೆ ಕೆಲಸ ನಮ್ಮೆದೆಗೆ ಉಳಿಯಲಿ
ನೋಡಿಕೊಳ್ಳಲು ಮತ್ತೇತಕೆ ಬೇಕು ಬೇರೆ ಕನ್ನಡಿ”,

ನಾವು ಮಾಡುವ ಪ್ರತೀ ಕಾರ್ಯವನ್ನು ನಾವೇ ಪರಾಮರ್ಶಿಸಿಕೊಳ್ಳಬೇಕು, ಒಳ್ಳೆ ಕಾರ್ಯವಾಗಿದ್ದರೆ ಅದು ನಮ್ಮೆದೆಯೊಳಗೇ ಉಳಿದು ಬಿಡಬೇಕು ಪ್ರಚಾರ ಮಾಡಿ ಪರರ ಮಾತಿನ ಕನ್ನಡಿಯಲ್ಲಿ ಮತ್ತೆ ಮತ್ತೆ ನೆನಪಿಸಿಕೊಳ್ಳಬಾರದೆಂಬ ಉದ್ದೇಶದ ಸಾಲುಗಳು ತುಂಬಾ ಇಷ್ಟವಾಗುತ್ತವೆ ಮತ್ತು ಪ್ರಚಾರ ಪುರುಷರಿಗೆ ಪಾಠವಾಗುತ್ತವೆ. ಮುಂದುವರೆದು ನಮ್ಮ ನಡೆ ನಮಗೆ ಸ್ವಂತ ಜಗದ ನುಡಿಗಳ ಬಗೆಗೆ ಚಿಂತಿಸದೆ ಸಾಗಿ ನಮ್ಮ ಪ್ರತಿ ಮಾತಲ್ಲೂ ಒಂದು ನೀತಿ ಇರಲಿ, ಒಂದಷ್ಟು ನೆನಪಿನಲ್ಲುಳಿಯುವಂತ ನುಡಿಮುತ್ತುಗಳಿರಲಿ ಎಂದು ಹೇಳುವ ಕವಿ ಓದುಗನನ್ನು ಪರಿವರ್ತಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ಜಾರೆ.

* ಪ್ರತಿ ನೋಟದಲ್ಲೂ, ಶ್ರವಣದಲ್ಲೂ ಗತಕಾಲದ ನಲ್ಲೆಯ ಸಿಹಿ ಅಪ್ಪುಗೆಯ ಸೊಬಗನ್ನು ಮನ ನೆನೆದು ಹೇಗೆ ತೊಳಲಾಡುತ್ತದೆ, ಚಡಪಡಿಸುತ್ತದೆ ಎಂಬುದನ್ನು ಕವಿಗಳು ತಾವೇ ಸ್ವತಃ ಅನುಭವಿಸಿರುವರೇನೋ! ಎಂಬಂತೆ ಮತ್ತು ಓದುಗರೂ ತಮ್ಮ ಪ್ರೇಮದ ಇತಿಹಾಸ ಕವಿಗೆ ಗೋಚರಿಸಿತ್ಹೇಗೋ ಎಂಬ ಸಂಶಯ ಮೂಡುವಂತೆ ಗಜಲ್ ನಲ್ಲಿ ಯಥಾವತ್ತಾಗಿ ಚಿತ್ರಿಸಿದ್ದಾರೆ.

ಭೋರ್ಗರೆವ ಕಡಲುಕ್ಕಿ ಕಿನಾರೆಗೆ ಮುತ್ತಿಡುತ್ತಿದೆ ‘ಗಿರಿ’ ಸುಳಿಯಪ್ಪುಗೆ ನೆನಪಿಸಿಕೊಂಡಾಗೊಮ್ಮೆ ನಿನ್ನ ನೆನಪು”,

ಹೂವು, ಮರ, ಪಿಸು ಮಾತು, ಕಡಲ ನಿತ್ಯ ನಟನೆಗಳಲ್ಲೂ ನಮ್ಮ ಪ್ರೇಮ ನೆಪಾಗುತ್ತದೆ ಗೆಳತಿ ಎಂಬ ಭಾವದ ಗಜಲ್ ಎದೆಗಿಳಿಯುತ್ತದೆ.

* ಏನೇ ಹೇಳಿ ಅನೇಕರಿಗೆ ಬದುಕು ತುಂಬಾ ಭಾರವಾಗಿರುತ್ತದೆ, ಆರ್ಥಿಕ ದುರ್ಬಲತೆಯಿಂದಲ್ಲ, ಹೊಟ್ಟೆ ಹಸಿವು ಇಂಗಿಸಿಕೊಳ್ಳಲಾಗದ ಸಂಕಟಕ್ಕಲ್ಲ, ಎಲ್ಲರನ್ನೂ ಕಳೆದುಕಂಡ ದುಃಖದಿಂದಲ್ಲ. ಎಲ್ಲ ಇದ್ದೂ, ನೆಮ್ಮದಿ ಇಲ್ಲದೆ ಬದುಕು ಭಾರವಾಗಿರುತ್ತದೆ. ಇದು ಕೃತಿಕಾರರ ದೃಷ್ಟಿಗೆ ಬಿದ್ದದ್ದೇ ತಡ ಯಾತನೆಯ ಮಜಲುಗಳು ಹೇಗೆಲ್ಲ ನಮ್ಮ ಹೃದಯದೊಳಗೆ ಮುಳ್ಳಿನಂತೆ ಸುತ್ತಿಕೊಂಡು ನರ್ತಿಸುತ್ತವೆ ಎಂಬುದನ್ನು ಅದ್ಭುತವಾಗಿ ಅಚ್ಚಾಗಿಸಿದ್ದಾರೆ.

ನಯನಗಳೀಗ ಸೋತಿವೆ ದಣಿವು ಮರೆತು ನಿದಿರೆಗೆ ಜಾರಬೇಕೆಂದಿದ್ದೆ
ಹಾಸಿಗೆಯಲೂ ಮುಳ್ಳು ಕಾಣುತ್ತಿದ್ದೇನೆ ಈ ಯಾತನೆಗೆ ಕೊನೆಯೆಂದು”,

ಎಂದು ಕೇಳುವಿಕೆಯಲ್ಲಿಯೇ ಬಾಳ ಪಯಣದ ಪ್ರಯಾಸತನ ತೋರುತ್ತಾರೆ. ನಿದಿರೆಯಲ್ಲೇ ದಣಿವು ತಣಿದು ನೆಮ್ಮದಿ ಸಿಗದೆ ಹೋದಮೇಲೆ, ಮತ್ತೆಲ್ಲಿಯೂ ಸಿಗದೆಂಬ ಷರತ್ತಿಲ್ಲದ, ಪ್ರತಿ ಮಾತಿಗೆ ಅವಕಾಶವೇ ಇಲ್ಲದ ಸಾಲುಗಳು ಸತ್ಯವೆನಿಸಿ ಓದುಗನ ಮನಕ್ಕೆ ಹೊಕ್ಕಿಬಿಡುತ್ತವೆ. “ನಿದಿರೆ ಇರದ ಇರುಳು” ಹೀಗೆ ಎಂಬ ಸ್ಪಷ್ಟ ಚಿತ್ರಣ ನಮಗೆ ಸಿಗುತ್ತದೆ.

* ಒಮ್ಮೊಮ್ಮೆ ಅಲ್ಲ ಹಲವೊಮ್ಮೆ ಅನಿಸುತ್ತದೆ. ಕ್ರೂರ ಜಗತ್ತಿನೊಳಗೆ ಮೌನದ ಮಾತುಗಳನ್ನು ತಿಳಿಸುವುದು ಹೇಗೆ? ಒಡಲ ಸಂಕಟವನ್ನು ಎದುರಿಗಿದ್ದವರಿಗೆ ಅರ್ಥೈಸುವುದು ಹೇಗೆ? ಸ್ಥಿಮಿತ ಕಳೆದುಕೊಂಡ ಬದುಕನ್ನು ತಹಬಂದಿಗೆ ತರುವುದು ಹೇಗೆ? ಇದಕ್ಕಾವ ಮುಲಾಮು ಇದೆ “ಗಿರಿ” ಎಂದು ಗಜಲ್ ಕಾರರು ತೂರಿಬಿಟ್ಟ ಪ್ರಶ್ನೆಯ ಸಾಲುಗಳಿಗೆ ಓದುಗನ ಬಳಿಯೂ ಉತ್ತರ ಇಲ್ಲವೆನಿಸುತ್ತದೆ.

ಚಿಂತೆ ಇಲ್ಲದೆ ಚಿರ ನಿದ್ರೆಗೆ ಜಾರುವುದು ಹೇಗೆ?”
ಎಂಬ ಕವಿಯ ಮಾತುಗಳು “ನಿದಿರೆ ಇರದ ಇರುಳ“ನ್ನು ಶಪಿಸುವಂತಿವೆ.
ನಯನ ಕೊಳವಾಗಿದೆ” ಎಂಬಲ್ಲಿ ಬದುಕು ಎಷ್ಟರಮಟ್ಟಿಗೆ ಘಾಸಿಗೊಳಗಾಗುತ್ತದೆ ಎಂಬ ಚಿಂತನೆ ಆಳವಾಗಿ ಕವಿಗಳಲ್ಲಿ ಇರುವುದು ಸ್ಪಷ್ಟವಾಗಿ ಓದುಗನ ಚಿಂತನೆಗೆ ನಿಲುಕುತ್ತದೆ.

* ಈ ವ್ಯಾಮೋಹ ಎಂಬುದು ಮನುಷ್ಯನ ಋಣಾತ್ಮಕ ಸ್ವಭಾವ. ನಿರ್ಲಿಪ್ತತೆಯೇ ಒಂದೊಮ್ಮೆ ಒಳ್ಳೆಯದೇನೋ ಎಂದೆನಿಸಿ ಬಿಡುತ್ತದೆ. ಮೋಹಕ್ಕೊಳಗಾಗಿ

ಬಿಳಿಯದೆಲ್ಲ ಹಾಲಂದುಕೊಂಡೆ, ನೊರೆ ಹಾಲಿಗೆ ಹುಳಿ ಹಿಂಡಿದ”

ನಿನಗೆ ಎಂದು ತಪ್ಪಿಗೆ ಪ್ರಾಯಶ್ಚಿತ್ತ ಪಡುವ ಸಾಲು, ಅದನ್ನು ಮೀರಿ ಪಾಠ ಕಲಿಸಿದ ನಿನಗೆ ‘ಕೃತಜ್ಞತೆಗಳು’ ಎಂದು, ಕವಿಗಳು ವ್ಯಾಮೋಹಕ್ಕೆ ಬಲಿಯಾದ ಕಥೆಗಳನ್ನು ನೆನೆದು ನಾವು ಇದರಿಂದ ಮುಕ್ತಿಪಡೆಯಲೇಬೇಕು ಎಂಬ ಧನಾತ್ಮಕ ಸಂದೇಶ ನೀಡಿದ್ದು ಕವಿ ಸಮಾಜಮುಖಿಯಾಗಿರಬೇಕೆಂಬುದಕೆ ಸಾಕ್ಷಿಯಾಗಿದೆ.

* ಬಾಹ್ಯ ಸೌಂದರ್ಯಕೆ ಮರುಳಾಗುವುದು ಸರ್ವೇ ಸಾಮಾನ್ಯ, ಆಂತರಿಕ ಸೌಂದರ್ಯ ನೋಡಬೇಕಿತ್ತು! ಎಂಬ ಅರಿವಾಗುವುದು ಬದುಕು ಬರುಡಾದಾಗ ಮಾತ್ರ. ಬಾಹ್ಯದಲಿ ಮುಳ್ಳಿನ (ಕುರೂಪ)ರಾಶಿಯಿದ್ದರೂ ಒಳಗೆ ಸಿಹಿ(ಮನ) ಇರುತ್ತದೆ. ಕೇವಲ

ಸುಂದರವಾದ ಮೊಗವಷ್ಟೆ ಎಲ್ಲವನು ಗೆಲ್ಲದು”

ಎನ್ನುವ ಕವಿಗಳು ಕಾಲ ಬದಲಾಗಿದೆ, ನೋಡುವ ನೋಟವೂ ಬದಲಾಗಿದೆ, ಸುಲಭಕ್ಕೆ ಬಲಿಯಾಗುವ ಮನಗಳು ಈಗಿಲ್ಲ,

ಅಂತರಂಗದ ಅಪಾರ ಚೆಲುವಿಗೆ ಮಾತು ಬೇಕಿಲ್ಲ”,

ನಡೆಯ ನೋಟದಲ್ಲಿ ಅರಿವು ಮೂಡುತ್ತದೆ. ಇನ್ನೇನು ಹಗೆತನ ಬತ್ತಿಸಿ, ವೇದನೆಗಳನ್ನು ಮೂಲೆಗೆ ಒತ್ತಿ ಪ್ರೀತಿಸೆಲೆಗೆ “ಗಿರಿ” ಹೃದಯಗಳನ್ನು ಬೆಸೆಯುತ್ತಾನೆ ಎಂಬುದಾಗಿ; ಅಂತ್ಯಕ್ಕೆ ಗೆಲುವು ಆಂತರಿಕ ಸೌಂದರ್ಯದ್ದು, ನಾವು ನೋಡಬೇಕಾದುದು ಅದನ್ನೇ, ಅರಸ ಬೇಕಾದುದು, ಆರಿಸಿಕೊಳ್ಳಬೇಕಾದುದೂ ಅದನ್ನೇ ಎಂದು ಪರಿಣಾಮಾತ್ಮಕವಾಗಿ, ಭಾವಪೂರ್ಣವಾಗಿ ಗಜಲ್ ನಲ್ಲಿ ಬರೆದಿದ್ದಾರೆ.

* ಈ ಪ್ರೇಮ, ಪ್ರೇಮಿಯ ಸಾಂಗತ್ಯವೆಂದರೇ ಹಾಗೆ, ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು ಎನ್ನುವಂತೆ, ಮನದರಸಿ ಜೊತೆ ಇದ್ದಾಗ, ಕೋಗಿಲೆಯ ಗಾನಕೂಡ ಅ-ಸಹ್ಯ ಆಗಿಬಿಡುತ್ತದೆ. ಅದಕ್ಕೆ ಗಜಲ್ ಕಾರರು, ಕೋಗಿಲೆಗೆ ಕಾಡಬೇಡ, ಬರಬೇಡ, ಹತ್ತಿರ ಸುಳಿಯಬೇಡ ಎಂದ್ಹೇಳುತ್ತಲೇ,

“ಗಿರಿ ಅಪ್ಪುಗೆಯಲಿ ಜಗವ ಮರೆತು ಕಾಲ ಕಳೆವಳು
ಕಾಕದೃಷ್ಟಿ ಬೀರುತ ಪ್ರತಿಕ್ಷಣ ನೋಡಬೇಡ”

ಎಂದು ಕೋಗಿಲೆ ನೋಟವೂ ಕಾಕದೃಷ್ಟಿಯಾಗುತ್ತದೆ; ನನ್ನವಳ ಸುಖಕ್ಕೆ ಅಡ್ಡಿಯಾಗುವುದಾದರೆ! ಎಂದು ಎಷ್ಟು ಲಾಲಿತ್ಯವಾಗಿ ಹೋಲಿಕೆಯೊಂದಿಗೆ ಬರೆದಿದ್ದಾರೆ.

* ಹೌದು. ಎಷ್ಟೋ ಬಾರಿ, ಎಷ್ಟೋ ಜನರ ಮುಖದಲ್ಲಿ ಯಾವುದೇ ನೋವು ಗೋಚರಿಸುವುದಿಲ್ಲ, ದೇಹದ ಬಳಲಿಕೆ ಗೊತ್ತಾಗುವುದೇ ಇಲ್ಲ. ಅಂದಮಾತ್ರಕ್ಕೆ ಅವರು ಸುಖ ಪುರಷರು ಎಂದುಕೊಳ್ಳುವಂತೆಯೂ ಇಲ್ಲ, ಹಾಗಂತ ಕವಿಗಳು

ಕಣ್ಣಂಚಲಿ ನೀರಿಲ್ಲ ಮುಖವದು ಬಾಡಿಲ್ಲ
ಮುಸುಕು ಹೊದ್ದ ಎದೆಯ ನೋವುಗಳಿವೆ

ಎನ್ನುತ್ತಾರೆ. ಏನು ಮಾಡಲಿ “ಗಿರಿ” ನೋವುಗಳ ಮೇಲೆ ಮುಸುಕಿದೆ, ಎದೆ ಕನಸುಗಳ ತೋರಿಸಲಿಕ್ಕೆ “ಬೆದರಿ ಅವಿತಿರುವ ಸಾವಿನ ಮುಖಗಳು” ಸ್ಪಂದಿಸುತ್ತಿಲ್ಲ ಎಂದು ಎದೆಯ ಬೇಗುದಿಯನ್ನು ಹೊರಹಾಕಿದ್ದಾರೆ. ಓದುಗನ ಅಥವಾ ಮನುಷ್ಯನ ಈ ನುಂಗಲಾರದ ಬಿಸಿ ತುಪ್ಪದ ಪರಿಸ್ಥಿತಿಯನ್ನು ಅರಿತ ಕೃತಿಕಾರರು ಯಥಾವತ್ತಾಗಿ ಪದಗಳಲ್ಲಿ ಇಳಿಸಿದ್ದಾರೆ.

* ನಿದಿರೆ ಇರದ ಇರುಳಿನ ಬಗೆಗೆ ಖಂಡಿತವಾಗಿ ರೆಪ್ಪೆಗಳನ್ನೇ ಗಮನಿಸಬೇಕು. ಅವಳಿಲ್ಲದೆ ಬದುಕಿದ ಯಾತನೆಯ ಪರಿಯನ್ನು ಹೃದಯವನ್ನು ಕೇಳಿಯೇ ಅರಿಯಬೇಕು. ನಿದಿರೆಗೂ ಅವಳ ಮೋಹದ ಮದಿರೆಗೂ ಏನು ವ್ಯತ್ಯಾಸವಿಲ್ಲ, ಅವಳ

ನೆನಪುಗಳ ಸಂತೆಯಲ್ಲಿ ವಸಂತಗಳೇ ಹರಾಜಾದವು”

ಎನ್ನುವ ಕವಿ ಮಾತು ಕಹಿ ಸತ್ಯ. ಎಷ್ಟು ವಸಂತಗಳು ಉರುಳಿದರೂ ನಲ್ಲೆಯ ನೆನಪುಗಳು ಮುಗಿಯದ ಸಂತೆಯಂತೆ ಕಾಡುತ್ತಲೇ ಇರುತ್ತವೆ. ಒಡಲಿಗೆ ವ್ಯಥೆ ನೀಡುತ್ತಲೇ ಇರುತ್ತವೆ, ಮತ್ತೆ ಮತ್ತೆ ಗಾಯಕೆ ನೆನಪುಗಳು ಉಪ್ಪಾಗಿ ತಾಗಿ ಉರಿಯನ್ನು ಅಧಿಕಗೊಳಿಸುತ್ತಲೇ ಇರುತ್ತವೆ. ಆದರೂ “ಗಿರಿ”ಗೆ ಮಾತ್ರ ಫಿನಿಕ್ಸ್ ಹಕ್ಕಿಯ ಹಂಬಲ, ಎಲ್ಲೋ ಪ್ರೀತಿಗೆ ಮರುಜೀವ ಬರುವುದೆಂಬ ನಿರೀಕ್ಷೆ. ಇಂತಹ ನಿರೀಕ್ಷೆಗಳೇ ಬದುಕನ್ನು ಗೆಲುವಿನತ್ತ ಸಾಗಿಸುತ್ತವೆ ಎಂಬ ಆಂತರ್ಯದ ನೋಟ ಅರಿತ ಕೃತಿಕಾರರು ಬದುಕು ದುಸ್ತರ ಎನ್ನುವ ಓದುಗನಿಗೆ ಬದುಕವ, ಚಿಗುರುವ ಮತ್ತೆ ಅರಳುವ ಮಾರ್ಗ ತಮ್ಮ ಸಾಲುಗಳ ಮೂಲಕ ತೋರಿಸುತ್ತಾರೆ. ಸಾಹಿತಿಗಳಾಗಿ ಓದುಗನನ್ನು ಬದಲಿಸಿ ಗೆಲ್ಲುತ್ತಾರೆ.

* “ಕಣ್ಣಿಲ್ಲದವರಲಿ ಹುಣ್ಣಿಮೆ ಚಂದ್ರನ ತೋರೆಂದು ಕೇಳಿದ್ದು
ಹಸಿವಿಲ್ಲದವರಲ್ಲಿ ಸವಿಯೂಟ ಅಂತಃಕರಣ ಬೇಡಿದ್ದು
ಗುಲಾಬಿ ಜೊತೆ ಮುಳ್ಳುಗಳ ಇರುವಿಕೆ ಮರೆತದ್ದು”

ಇವುಗಳೆಲ್ಲ ಸ್ವಯಂಕೃತ ಅಪರಾಧಗಳು, ನನ್ನದೇ ತಪ್ಪು, ನನ್ನದೇ ತಪ್ಪು ಎನ್ನುವ ಕವಿಗಳು ಪರೋಕ್ಷವಾಗಿ ನಾವು ಯಾರ ಬಳಿ ಏನನ್ನು ನಿರೀಕ್ಷಿಸಬೇಕು, ಏನನ್ನು ಕೇಳಬೇಕು, ಏನನ್ನು ಬಯಸಬೇಕು ಎಂದು ಅರ್ಥಪೂರ್ಣವಾಗಿ ವಿಡಂಬನಾತ್ಮಕವಾಗಿ, ವ್ಯಂಗ್ಯಮಾಡುತ್ತಲೇ ಅಕ್ಷರಗಳ ಮೂಲಕ ಅಂತಹ ಕು-ಮನಸ್ಥಿತಿಯವರಿಗೆ ಇರಿಯುತ್ತಲೇ ಸಾಗುತ್ತಾರೆ. ಸ್ವಾರ್ಥಿಗಳ ಬಣ್ಣ ಬಯಲು ಮಾಡುತ್ತಲೇ, ಅಂತಹವರಿಂದ ಯಾವ ಪ್ರೇಮಾಪೇಕ್ಷೆಗಳನ್ನು ಬಯಸದಿರಿ, ವಂಚನೆಗೆ ತಿಳಿಯದೆ ಒಳಗಾಗದಿರಿ ಎಂದು ಎಚ್ಚರಿಸುತ್ತಾರೆ.

* ಹುಟ್ಟುತ್ತಲೇ ಮನಸು ನಿಷ್ಕಲ್ಮಶವಾಗಿರುತ್ತದೆ, ವಾತಾವರಣದಲ್ಲಿನ ಕ್ರೌರ್ಯತೆ ಹೃದಯದಲ್ಲಿ ವಿಷಬೀಜ ಬಿತ್ತುತ್ತದೆ, ಕಂಡುಂಡ ಕಹಿ ಅನುಭವಗಳು ಅದನ್ನು ಪೋಷಿಸುತ್ತ ಅಸೂಯೆಯೆಂಬ ಮರವಾಗಿ ಹೃದಯ ಅನ್ಯಾಯಕ್ಕೆ ಒಗ್ಗಿಕೊಳ್ಳುತ್ತದೆ. ಇದನ್ನೇ ಗಜಲ್ ಕಾರರು, ಪ್ರೀತಿಯನು ಬತ್ತಿಸದಿರು, ಕಿಡಿಯನೆಂದು ಹೊತ್ತಿಸದಿರು, ರಾಕ್ಷಸ ಪ್ರವೃತ್ತಿಯ ಶಿಖರವನು ಹತ್ತಿಸದಿರು, ಸೊಕ್ಕನೆಂದು ಸೋಕಿಸದಿರು, ಗಿರಿಯ

ಮನಸು ಮುಂಗಾರು ಸುರಿದ ಹದವಾದ ನೆಲ ದ್ವೇಷಾಸೂಯೆ ಬೀಜಗಳನೆಂದೂ ಬಿತ್ತಿಸದಿರು ದೇವರೆ”,

ಎಂದು ದೇವರಲ್ಲಿ ಪ್ರಾರ್ಥಿಸುವ ಮೂಲಕ ಸ್ನೇಹ, ಪ್ರೀತಿ, ಕಾರುಣ್ಯದ ಹೊರತಾಗಿ ಯಾವುದೂ ಮನಸನ್ನು ಖುಷಿಗೊಳಿಸುವುದಿಲ್ಲ ಎಂದು ಓದುಗರಿಗೆ ತಿಳಿಸುತ್ತಾರೆ.

* ಒಂದೆಡೆ ನಿದಿರೆ ಇರದ ಇರುಳಿನ ಬಗೆಗೆ ಬೇಸರ, ನೋವು ವ್ಯಕ್ತ ಪಡಿಸುವ ಕವಿ, ಮತ್ತೊಂದೆಡೆ ಒಲವಿನ ಗೆಳತಿ ನೀನು ಬಳಿ ಇದ್ದಾಗ,

ನಿದಿರೆ ಮರೆತ ಖುಷಿಯ ಹಗಲುರಾತ್ರಿಗಳ ಲೆಕ್ಕವಿಡಲಾಗದು
‘ಗಿರಿ’ ಕಣ್ಣುಗಳಲಿ ನಾಕ ತೇಲುತ್ತಿತ್ತು”,

ಎಂದು ನಿದಿರೆ ಇರದ ಇರುಳಿನ ಎರಡು ಮುಖಗಳನ್ನು ತೋರಿಸಿ ಓದುಗನೆದೆಗೆ ಪ್ರೇಮದ ನಿಶೆ ಏರಿಸುತ್ತಾರೆ. ನಿದಿರೆ ಇಲ್ಲದಿದ್ದರೂ ಕಣ್ಣುಗಳಲ್ಲಿ ಬವಣೆ ಇಲ್ಲ ನಾಕವೇ ತುಂಬಿದೆ ಎಂದು ವರ್ಣರಂಜಿತಾವಾಗಿ ಹೇಳುತ್ತಾರೆ.
— ಹಾಗಾಗಿ ಕವಿಯ ಕಲ್ಪನೆಯನ್ನು ಓದುಗ ಸುಲಭಕ್ಕೆ ಕಲ್ಪಿಸಿಕೊಳ್ಳಲು, ಕವಿಯ ಭಾವ ಅಳೆಯಲು ಸಾಧ್ಯವಾಗುವುದಿಲ್ಲ ಎಂಬುದು ಸಾಬೀತಾಗುತ್ತದೆ.
ಮುಂದುವರೆದು ಮತ್ತೊಂದು ಗಜಲ್ ನಲ್ಲಿ
* ನಿನ್ನ ಸಾಮಿಪ್ಯವಿದ್ದರೆ ಸಾಕು ಹೆದರಿಕೆಗೂ ಸೆಡ್ಡು ಹೊಡೆಯುತ್ತೇನೆ ಎನ್ನುತ್ತಾರೆ. ದಾಂಪತ್ಯದಲ್ಲಿ ಒಬ್ಬರಿಗೊಬ್ಬರ ಸಾಂಗತ್ಯ, ಸಾತಿ ಬಹು ಮುಖ್ಯ ಎಂಬುದನ್ನು ಸಾರುತ್ತಾರೆ.

* ಕೊನೆಯಲ್ಲಿ ಗಜಲ್ನ ಹುಟ್ಟಿಗೆ ಕಾರಣವಾದ ಬದುಕಿನ ಸಂದರ್ಭಗಳನ್ನು ವಿವರಿಸುತ್ತ ಗಜಲ್ ಕಾವ್ಯ ಬರೆಯುವುದಲ್ಲ ಹುಟ್ಟುವುದು, ಅನುಭವದ ಕೂಸುಗಳು ನಮ್ಮ ಬರಹಗಳು ಎಂದು ಶ್ರೀಯುತ ಮಂಡಲಗಿರಿ ಪ್ರಸನ್ನ ಅವರು ಯುವ ಕವಿಗಳಿಗೆ ಮಾರ್ಗದರ್ಶನ ನೀಡುತ್ತಾರೆ.

ಉಳಿದಂತೆ,
ಬೇಗುದಿಯ ತಲವಾರುಗಳ ಇರಿತ,
ಹನಿಸುರಿಸುವ ಸೋನೆಗೂ ಹಪಾಹಪಿ ಬೇಗುದಿ,
ಒಲವಿನೆಳೆ ಭಾವ ಸುಟ್ಟು ಕರಕಲಾಯಿತು,
ಕಲ್ಪನೆಯ ಚಿತ್ರದಲೂ ಅಂಕುಡೊಂಕು ರೇಖೆಗಳಿವೆ,
ಹದಗೊಂಡ ನೆಲದೊಳಗೆ ಬೀಜ ಕೊಳೆಯಿತು …… ಇನ್ನು ಅನೇಕಾನೇಕ ಸಾಲುಗಳು ಓದುಗನನ್ನು ವಿಚಾರ ಕ್ರಾಂತಿಗೆ ನೂಕುತ್ತವೆ. ಸೂಕ್ಷ್ಮವಾಗಿ ಬರೆದ ಸಾಲುಗಳು ತೀಕ್ಷ್ಣವಾಗಿ ಬುದ್ಧಿಮತ್ತೆಗೆ ದೃಷ್ಟಿ ಬೀರುತ್ತವೆ.

ಒಟ್ಟಾರೆಯಾಗಿ ಈ ‘ನಿದಿರೆ ಇರದ ಇರುಳು’ ಕೃತಿ ಇಂದಿನ ಯುವಕರಾದಿಯಾಗಿ ಎಲ್ಲ ವಯೋಮಾನದ ಸಾಹಿತ್ಯಾಸಕ್ತರನ್ನು ರಂಜಿಸುತ್ತದೆ. ಬದುಕನ್ನು ಅರ್ಥೈಸಿಕೊಡುತ್ತದೆ.
ಯಾತನೆ ಇರುವವರಿಗೆ ಜೀವಕಳೆ ತುಂಬುತ್ತದೆ,
ಭಗ್ನ ಪ್ರೇಮಿಗಳಿಗೆ ಒಲವ ನಿರೀಕ್ಷೆ ಹುಟ್ಟಿಸುತ್ತದೆ
ಬದುಕು ಬವಣೆ ಎನ್ನುವವರಿಗೆ ಜೀವನೋತ್ಸಾಹ ತುಂಬುತ್ತದೆ…..
ಹೀಗೆ ಹೇಳುತ್ತಾ ಸಾಗಿದರೆ ಕೊನೆಯಿಲ್ಲದಷ್ಟು ಧನಾತ್ಮಕ ಬಿಂಬಗಳು ಈ ಕೃತಿಯಲ್ಲಿ ಸಿಗುತ್ತವೆ‌. ಕೆಲವೊಂದನ್ನಷ್ಟೇ ಆಯ್ದು ನಾನು ನನ್ನ ಮತಿಗೆ ನಿಲುಕಿದಷ್ಟು ಮಾತಾಗಿದ್ದೇನೆ, ಇನ್ನು ಓದುಗರು ಈ ಕೃತಿಯನ್ನು ಖರೀದಿಸಿ ಓದಿ ತಮ್ಮ ಯೋಚನಾ ಲಹರಿಯನ್ನು ಹಂಚಿಕೊಳ್ಳಿ ಎಂದು ಪ್ರಾರ್ಥಿಸುತ್ತೇನೆ.

“ಧನ್ಯವಾದಗಳೊಂದಿಗೆ”

—– ವರದೇಂದ್ರ ಕೆ ಮಸ್ಕಿ
9945253030
—– ಮಂಡಲಗಿರಿ ಪ್ರಸನ್ನ
9449140580

Don`t copy text!