ಬಸವನರಿವು ನಿರಾಧಾರವಾಯಿತ್ತು.
ಬಸವನರಿವು ನಿರಾಧಾರವಾಯಿತ್ತು.
ಬಸವನ ಮಾಟ ನಿರ್ಮಾಟವಾಯಿತ್ತು .
ಬಸವನ ಭಕ್ತಿ ಬಯಲನೆ ಕೂಡಿ ನಿರ್ವಲಯವಾಯಿತ್ತು.
ಬಸವಾ ಬಸವಾ ಬಸವಾ ಎಂಬ ಶಬ್ದವಡಗಿ
ನಿಶಬ್ದವಾಯಿತ್ತಯ್ಯಾ ಸಂಗಯ್ಯಾ.
-ನೀಲಮ್ಮನ ವಚನ
ವಚನ ಸಂಖ್ಯೆ -1005 ವಚನ ಸಂಪುಟ 5 -ಪುಟ 303
ಕಲ್ಯಾಣ ಕ್ರಾಂತಿಯ ಮುನ್ನವೇ ಬಸವಣ್ಣನವರು ಗಡಿಪಾರು ಶಿಕ್ಷೆಗೆ ಗುರಿಯಾಗಿ ಕಲ್ಯಾಣ ತೊರೆದು ಕೂಡಲ ಸಂಗಮದ ಕಡೆಗೆ ಹೋಗುತ್ತಾರೆ.
ಹನ್ನೆರಡು ವರ್ಷ ಕಲ್ಯಾಣದ ಅನುಭವ ಮಂಟಪದಲ್ಲಿ ಶರಣ ತತ್ವ ಚಿಂತಿಸಿ ಚರ್ಚಿಸಿ ಭಾರತ ದೇಶದಲ್ಲಿ ಒಂದು ಹೊಸ ಧರ್ಮ ಸ್ಥಾಪಿಸಿ ದಲಿತರಿಗೆ ಅಸ್ಪ್ರಶ್ಯರಿಗೆ ,
ಮಹಿಳೆಯರಿಗೆ ,ಅವಕಾಶ ವಂಚಿತರಿಗೆ ಧಾರ್ಮಿಕ ಆಧ್ಯಾತ್ಮಿಕ ಹಕ್ಕನ್ನು ನೀಡಿ ಮಾನವನನ್ನೇ ದೇವನನ್ನಾಗಿ ಮಾಡುವ ಸಹಜ ಸರಳ ವ್ಯವಸ್ಥೆಯನ್ನು ಕಂಡು ಕೊಟ್ಟ ಬಸವಣ್ಣನವರ ಕೊಡುಗೆ ಅನುಪಮ.
ಇವರ ನಿರ್ಗಮನದಿಂದ ಕಲ್ಯಾಣದಲ್ಲಿ ಅನಾಥ ಪ್ರಜ್ಞೆ ಕಾಡುತ್ತದೆ . ಇದನ್ನೇ ಬಸವಣ್ಣನವರ ಧರ್ಮ ಪತ್ನಿ ನೀಲಮ್ಮಳು ಮೇಲಿನಂತೆ ತನ್ನ ಅಳಲನ್ನು ತೋಡಿಕೊಳ್ಳುತ್ತಾಳೆ .
ಬಸವನರಿವು ನಿರಾಧಾರವಾಯಿತ್ತು.
ಬಸವಣ್ಣನವರು ನೀಡಿದ ಸಮಗ್ರ ಅರಿವು ಜಾಗೃತಿ, ಸಂದೇಶಗಳು ,ತತ್ವ ಸಿದ್ಧಾಂತಗಳು ನಿರಾಧಾರವಾದವು .
ಅವುಗಳಿಗೆ ದಿಕ್ಕಿಲ್ಲ .ಅವುಗಳನ್ನು ಪಾಲಿಸುವ ಶರಣರಿಗೆ ಅಧೈರ್ಯ ಮೂಡಿದೆ . ಕಲ್ಯಾಣದ ಸಮರ್ಥ ನಾಯಕತ್ವ ನೇತೃತ್ವದ ಕೊರತೆ ಎದ್ದು ಕಾಣುತ್ತದೆ ಎಂದು ದುಃಖಿಸುತ್ತಾಳೆ.ಬದುಕಿಗೆ ಆದರ್ಶ ಅನುಕರಣೀಯವಾಗಬೇಕಿದ್ದ ನುಡಿಗಳು ಅಮರವಾಣಿಗಳಿಗೆ ವಾರಸುದಾರರಿಲ್ಲದೆ ಅನಾಥವಾದವು ಎಂದು ತನ್ನ ಸಂಕಟ ವ್ಯಕ್ತ ಪಡಿಸುತ್ತಾಳೆ ನೀಲಮ್ಮ ತಾಯಿ .
ಬಸವನ ಮಾಟ ನಿರ್ಮಾಟವಾಯಿತ್ತು –
ಕಲ್ಯಾಣವು ಒಂದು ಸುಂದರ ಮೌಲ್ಯಗಳ ಮೊತ್ತ . ಕಲ್ಯಾಣವು ಒಂದು ತತ್ವ ಸಿದ್ಧತಗಳ ದರ್ಶನದ ಕೇಂದ್ರ.
ಮರ್ತ್ಯದೊಳು ಒಂದು ಮಾಟ (MODEL ) ಕಲ್ಯಾಣವು ಸ್ವರ್ಗದ ರೂಪಕವಾಯಿತು. ಅಂತ ರೂಪಕವು ತನ್ನ ಸ್ವರೂಪ ಕಳೆದುಕೊಂಡು ನಿರ್ಮಾಟವಾಯಿತು ಎಂದು ನೊಂದುಕೊಳ್ಳುತ್ತಾಳೆ ನೀಲಮ್ಮ.
ಬಸವನ ಭಕ್ತಿ ಬಯಲನೆ ಕೂಡಿ ನಿರ್ವಲಯವಾಯಿತ್ತು.
ಬಸವಣ್ಣನವರು ಕಂಡು ಕೊಂಡ ಭಕ್ತ ಸ್ಥಲವು ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಶ್ರೇಣೀಕೃತವನ್ನು ಅಳಸಿದ ವ್ಯಕ್ತಿಯ ವಿಕಸನ ಸಾಧನ . ಈ ಭಕ್ತಿ ಮಾರ್ಗವು ಬಯಲು ಎಂಬ ಸಿದ್ಧಾಂತದಲ್ಲಿ ಕೂಡಿಕೊಂಡು ಶರಣರಿಗೆ ಉದಾತ್ತೀಕರಣ ಆತ್ಮ ಶೋಧನೆ ದರ್ಶನ ನೀಡಿದ ಅನುಭಾವದ ಸಂಗಮವು . ಅದು ಮುಂದೆ ಆಸರೆಯಿಲ್ಲದೆ ನಿರ್ವಲಯವಾಗಿತ್ತು . ಶರಣ ತತ್ವಗಳಿಗೆ ಆವರಣಗಳಿಲ್ಲದ ಹಾಗೆ ಆದವು. ಬಯಲು ನಿರವಲಯವಾಯಿತ್ತು ಎಂದು ನೀಲಮ್ಮ ಕನವರಿಸುತ್ತಾಳೆ.
ಬಸವಾ ಬಸವಾ ಬಸವಾ ಎಂಬ ಶಬ್ದವಡಗಿ ನಿಶಬ್ದವಾಯಿತ್ತಯ್ಯಾ ಸಂಗಯ್ಯಾ
ಹನ್ನೆರಡನೆಯ ಶತಮಾನವು ಶರಣರ ಬಾಯಲ್ಲಿ ಬಸವಾ ಬಸವಾ ಬಸವಾ ಎಂಬ ಮಂತ್ರ ಶಕ್ತಿಯ ಉದ್ಧರಣೆ , ಬಸವಾ ಎಂಬ ಅಕ್ಷರಗಳು ಬಸವಾ ಎಂಬ ಶಬ್ದಗಳು ಸನಾತನಿಗಳ ಕುತಂತ್ರದಿಂದ ಶಬ್ದವ ಅಡಗಿ ನಿಶಬ್ದವಾಯಿತ್ತು . ಕಲ್ಯಾಣದಲ್ಲಿ ವಚನ ಚಿಂತನೆ ಅನುಭಾವ ಸತ್ಸಂಗಗಳು ಇಲ್ಲದಂತಾಗಿ ಸ್ಮಶಾನ ಮೌನ ನೀರವತೆ ಕಾಡಿತ್ತು ಶರಣರಿಗೆ. ಕಲ್ಯಾಣವು ಬಸವಮಯವಾಗಿತ್ತು ಆದರೆ ಬಸವಣ್ಣನಿರದ ಕಲ್ಯಾಣವು ಕಟುಕರ ಕೇರಿ ಕದನದ ಯುದ್ಧಭೂಮಿಯಾಗಿ ಅನುಕಂಪ ಪ್ರೀತಿ ವಿಶ್ವಾಸ ಮಾನವೀಯತೆಗಳು ಮಾಯವಾದವು ಎಂದು ಬಿಕ್ಕುತ್ತಾಳೆ ನೀಲಮ್ಮ.
ಬಸವಣ್ಣನಿರದ ಕಲ್ಯಾಣದ ಸ್ಥಿತಿ ಕಂಡು ಎಲ್ಲಾ ಶರಣರು ಕಣ್ಣೀರಿಟ್ಟಿದ್ದರು. ಆದರೂ ಧೃತಿಗೆಡದೆ ವಚನಗಳ ರಕ್ಷಣೆಗೆ ತಮ್ಮನ್ನೇ ಬಳಿ ನೀಡಿದ ಶ್ರೇಷ್ಠ ಪುಣ್ಯ ಜೀವಿಗಳು ಕಲ್ಯಾಣ ಶರಣರು.
–ಡಾ.ಶಶಿಕಾಂತ.ಪಟ್ಟಣ.ರಾಮದುರ್ಗ ಪೂನಾ
Excellent article Sir
Meening full Article Sir.