ಬದುಕು ಭಾರವಲ್ಲ 16
ಮರೆತು ಸಾಗುತ್ತಿರಬೇಕು ಮಗುವಿನಂತೆ
ಇತಿಹಾಸದ ಪುಟ ಪುಟ ಗಳನ್ನು ಒಮ್ಮೆ ತಿರುವಿ ಹಾಕಿ ನೋಡಿದಾಗ ಎಲ್ಲಾ ದೊಡ್ಡ ವ್ಯಕ್ತಿಗಳಲ್ಲಿ ಮಗುವಿನ ಮನಸ್ಸು ಇರುವುದು ಕಂಡು ಬರುತ್ತದೆ .
ಮಗುವಿಗೆ ಇನ್ನೊಬ್ಬರ ಬಗ್ಗೆ ದ್ವೇಷ ಆಗಲೀ ,ಹಗೆತನವಾಗಲೀ ಮತ್ಸರ ವಾಗಲೀ ಸೇಡಾಗಲೀ, ಇನ್ನೊಬ್ಬರ ಮೇಲೆ ಸಿಟ್ಟಾಗಲೀ ಇರಲಾರದು.
ಮುಗ್ಧ ನಿರ್ಮಲ ಪರಿಶುದ್ಧ ಭಾವ ಆ ಮಗುವಿಗೆ ಇರುತ್ತದೆ. ಹಾಗಂತಲೇ ಅವರು ಮಹಾತ್ಮರಾದರು .ದೇವರಾದರು. ಸಂತರಾದರು ಜಗವ ಬೆಳಗಿದ ಗುರುಗಳಾಗಿ ಹೋದರು.
ನಾವೂ ಕೂಡ ಮಗುವಿನಂಥಾ ಮನಸ್ಸು ಹೊಂದಿ ದೇವರಾಗೋಣ ದೇವರಂಥಾಗೋಣ .
ಸಮಾಜದ ವಿವಿಧ ಜನರ ಮದ್ಯ ನಾವೂ ದೇವರಂಥಾಗೋಣ.
ಸಮಾಜದ ವಿವಿಧ ಜನರ ಮದ್ಯ ವಿವಿಧ ಸ್ವಭಾವದವರ ಮಧ್ಯ ನಾವು ಹೊಂದಿಕೊಂಡು ಹೋಗಬೇಕು. ಅವರು ಕೊಟ್ಟ ಹಿಂಸೆಗಳನ್ನು, ನೋವುಗಳನ್ನು, ಅವಮಾನಗಳನ್ನು ಕುಹಕನಗೆಯನ್ನು ವ್ಯಂಗ್ಯ ನುಡಿಗಳನ್ನು ಇವೆಲ್ಲವುಗಳನ್ನೆಲ್ಲ ನಾವು ಮರೆತು ಸಾಗುತ್ತಿರಬೇಕು.
ಅಂದಾಗ ಮಾತ್ರ ನಮ್ಮ ಬದುಕು ಭಾರವಾಗುವುದಿಲ್ಲ ಮನಸ್ಸಿನ ಲ್ಲಿ ಯಾವುದನ್ನೂ ಇಟ್ಟುಕೊಳ್ಳದೇ ಎಲ್ಲರೊಂದಿಗೆ ಮಾತನಾಡುತ್ತ ನಗು ನಗುತ್ತ ಹೋದರೆ ಮನಸ್ಸು ಹಗುರವಾಗುತ್ತದೆ ಬದುಕಿನ ಭಾರ ಇಳಿದುಹೋಗುತ್ತದೆ . ಮೊಗದಲ್ಲಿ ಒಂದು ತರ ಹೊಸ ಚೈತನ್ಯ ಮೂಡಿಬರುತ್ತದೆ.
ಬೇರೆಯವರು ನಮಗೆ ಎಷ್ಟೇ ಹಿಂಸೆ ಕೊಟ್ಟರೂ ಧರ್ಮ ದ ನಡೆ ತಪ್ಪಬಾರದು ಧರ್ಮ ದ ನಡೆ ನಮ್ಮ ಲ್ಲಿ ಇರುವುದರಿಂದ ಆ ಧರ್ಮವೇ ನಮ್ಮನ್ನು ಕಾಪಾಡುವುದು. ಎಂಬುವ ಆಶಾಭಾವನೆಯಿಂದ ಮುಂದಿನ ಹೆಜ್ಜೆಯನ್ನು ಇಡಬೇಕು.
ಮನುಷ್ಯರ ಮನಸ್ಸೇ ಹಾಗೆ . ಬಿದ್ದಾಗ ನಗುವ ಎದ್ದಾಗ ಜಗ್ಗುವ ಇವತ್ತಿನ ಕಾಲದ ಜನರ ಸ್ವಭಾವ.
ಎಲ್ಲರೂ ಎಲ್ಲರ ಹಾಗೆ ಒಂದೇ ಸ್ವಭಾವದವರು ಇರಲಾರರು. ವ್ಯಕ್ತಿಯ ವ್ಯಕ್ತಿತ್ವ ಆತನ ನಡೆ ನುಡಿ ಆಚಾರ ವಿಚಾರಗಳು ಹುಟ್ಟಿನಿಂದ ಬಂದವುಗಾದರೂ ಮನೆಯ ವಾತಾವರಣ ಪರಿಸರ ಕಲಿಯುವ ಶಾಲೆ ಕಾಲೇಜುಗಳು ಆಯಾ ವ್ಯಕ್ತಿಯ ವ್ಯಕ್ತಿತ್ವ ಬೆಳೆಯಲು ಕಾರಣವಾಗುತ್ತದೆ.
ವ್ಯಕ್ತಿಯು ಬೆಳೆಸಿಕೊಂಡ ಸ್ನೇಹ ಸಂಬಂಧವೂ ಕಾರಣವಾಗುತ್ತದೆ.
ಮನೆಯ ಒಳಗೆ ಮತ್ತು ಮನೆಯ ಹೊರಗೆ ವ್ಯಕ್ತಿಯ ಮನಕ್ಕೆ ಅನೇಕ ನೋವಿನ, ಅಪಮಾನದ ಅವಮಾನದ ಘಟನೆಗಳು ಜರುಗಿರುತ್ತವೆ.
ಅವಮಾನಿಸಿದವರನ್ನು ನೋವಿಸಿದವರನ್ನು ನೆನಪಿಸಿಕೊಂಡು ಅವರ ಮೇಲೆ ಹಗೆತನ ಸಾಧಿಸುವುದಾಗಲೀ ,ಸೇಡು ತೀರಿಸಿಕೊಳ್ಳುವುದಾಗಲೀ ಮಾಡಬಾರದು .
ಮಕ್ಕಳು ಆಟವಾಡುತ್ತಿದ್ದಾಗ ಒಂದಕ್ಕೊಂದು ಜಗಳ ಮಾಡುತ್ತವೆ ಇವನಿಗೆ ಆವ ಹೊಡೆಯುವನು ಅವನಿಗೆ ಇವನು ಹೊಡೆಯುವನು ಕೆಲವೇ ನಿಮಿಷದ ನಂತರ ಮತ್ತೆ ಆ ಮಕ್ಕಳು ನಗು ನಗುತ್ತ ಕೈ ಹಿಡಿದು ನಡೆಯುತ್ತವೆ .ಹಿಂದಿನ ಘಟನೆಗಳನ್ನು ಮರೆತು ಮತ್ತೆ ಆಟವಾಡತ್ತವೆ.
ನಾವೂ ಕೂಡ ಮಕ್ಕಳ ಹಾಗೆ ವೈರ ಭಾವವನ್ನು ತೊರೆದು ಮಕ್ಕಳ ಮನದ ಹಾಗೆ ಒಬ್ಬರಿಗೊಬ್ಬರು ಕೂಡಿ ಹಿಂದೆ ಆಗಿ ಹೋದ ಘಟನೆಗಳನ್ನು ಮರೆತು ನಡೆದರೆ ಈ ಸಮಾಜದಲ್ಲಿರುವ ಯಾರೊಬ್ಬರಿಗೂ ಬದುಕು ಭಾರವಾಗಲಾರದು .ಬದುಕು
ಎಷ್ಟು ಚೆನ್ನಾಗಿ ಇರುವುದು ಅಲ್ಲವೇ ?
ಒಂದೆರೆಡು ದಿನದ ಹಿಂದೆ
ನಾನು ಕಾಲೇಜಿನಿಂದ ಬರುವಾಗ ಒಂದು ಪೋನ್ ಬಂತು ತಕ್ಷಣ ನನ್ನ ಬೈಕ್ ನ್ನು ನಿಲ್ಲಿಸಿ ಮಾತನಾಡುತ್ತಿರುವಾಗ
.ಆ ಕಡೆಯಿಂದ ಒಂದು ನಮ್ಮ ಕಾಲೇಜಿನ ಪ್ರಾಥಮಿಕ ಶಾಲೆಯ ಮಗು ಓಡಿ ಬಂದು ಗುಡ್ ಇವನಿಂಗ್ ಮೆಡಂ ಅಂದಿತು.
ಗುಡ್ ಇವನಿಂಗ್ ಪುಟ್ಟಾ ಎಂದು ಹೇಳಿ ಮತ್ತೆ ಪೋನಿನಲ್ಲಿ ಮಾತನ್ನು ಮುಂದುವರೆಸಿದೆ
ಆ ಹುಡುಗಿಯ ತಾಯಿ ಆ ಮಗುವಿಗೆ ಬೆನ್ನಿಗೆ ಒಂದು ಗುದ್ದು ಗುದ್ದಿ ಏ ನಿನಗ ನಾ ಅವರ ಮನಿಗ ಹೋಗಬ್ಯಾಡ ಅಂದಿನ್ನಿಲ್ಲೋ! ಮತ್ತ ಮತ್ತ ಅವರ ಮನಿಗ ಹೋಗತಿ ಎಂದಳು.
ನಾನು ಫೋನ್ ಕಟ್ಟ ಮಾಡಿದೆ ಬರ್ರೀ ಮೆಡಂ ಇಲ್ಲೇ ನಿಮ್ಮ ಗಾಡಿ ಹಚ್ಚಿ ಚಾ ಕುಡುದ್ ಹೋಗುವಂತಿರ್ರೀ ಬರ್ರೀ ಒಳಗ ಅಂದ್ರು .ಇಲ್ಲ ರಿ ಮತ್ತೊಂದು ಸಲ ಬರುವೆ .ಮಕ್ಕಳು ಆಟ ಆಡಲಿ ಅವರಿಗೇಕೆ ಬಂಧನ ಅಲ್ಲಿ ಹೋಗಬೇಡ ಇಲ್ಲಿ ಹೋಗಬೇಡ ಅಂತಾ ಮುಗ್ಧ ಮಕ್ಕಳ ಮನದಲ್ಲಿ ಯಾಕೆ ಅವಳಿಗೆ ಗುದ್ದಿದ್ರೀ ಎಂದಾಗ ಅವರ ಜೊತೆಗೆ ನಾವು ಮಾತನಾಡುವುದಿಲ್ಲ ನಮ್ಮ ಮಕ್ಕಳು ಅವರಲ್ಲಿ ಹೋಗಿ ಯಾಕ ಆಟ ಆಡಬೇಕು ? ಎಂದಾಗ ದೊಡ್ಡವರೇ ಮೊದಲು ತಪ್ಪು ಮಾಡುತ್ತೇವೆ ಮಕ್ಕಳು ಅಲ್ಲ. ಬೆಳೆಯುವ ಮಕ್ಕಳಿಗೆ ನಾವೇ ವೈರ ಗುಣ ಬೆಳೆಸಿದ ಹಾಗೆ ಅಲ್ಲವೇ ?
ಬದುಕು ಭಾರವಾಗಿಲ್ಲ. ನಮ್ಮ ಮನಸ್ಸು ಭಾರವಾಗಿರುತ್ತದೆ .
ನೋಯಿಸಿದವರನ್ನು ಕ್ಷಮಿಸಿ ನಾವು ಮುಂದೆ ಸಾಗಬೇಕು.
ಇದೇ ಅಲ್ಲವೇ ಮಹಾತ್ಮರು ಮಾಡಿದ್ದು ನೋವಿಸಿದವರಿಗೆ ಬದುಕುವ ಮಾರ್ಗ ತೋರಿ ಹೋಗಿರುವರು.
ಅವಮಾನದ ಬೇಗೆಯಲ್ಲಿ ಬೆಂದು ಬಳಲಿ ಸಂವಿಧಾನವನ್ನು ರಚಿಸಿದರು .
ಬ್ರಿಟಿಷರ ಕುತಂತ್ರದಿಂದ ನಲುಗಿದ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಮಹಾತ್ಮ ಗಾಂಧಿ
ಮುಳ್ಳಿನ ಕಿರೀಟ ಹಾಕಿ ಸಿಲುಬೆಗೇರಿಸಿದವರನ್ನೇ ಕ್ಷಮಿಸು ತಂದೆ ಇವರ ಮಾಡುವ ತಪ್ಪು ಇವರಿಗೆ ಗೊತ್ತಿಲ್ಲ ಅಂತಾ ನಗುತ್ತ ಸಿಲುಬೆಗೇರಿದ ಏಸು
ಶರಣರ ಎಳೆಹೂಟೆ ಶರಣರ ಕಗ್ಗೊಲೆ ವಚನ ಗಳನ್ನು ಸುಟ್ಟು ಕ್ರಾಂತಿ ಕಿಡಿ ಎಬ್ಬಿಸಿ ದ ಮನವನ್ನೇ ಮನ್ನಿಸಿ ನಡೆಯಲಿಲ್ಲವೇ ಬಸವಣ್ಣ
ದೊಡ್ಡ ದೊಡ್ಡ ಮಹಾನ್ ವ್ಯಕ್ತಿಗಳೇ ಮನ್ನಿಸಿ ಆದರ್ಶಗಳನ್ನು ಬಿಟ್ಟು ಕೊಟ್ಟು ಹೋದ ಅವರ ಗುಣ
ಗಳನ್ನು ನಾವು ಸ್ವಲ್ಪವಾದರೂ ಅಳವಡಿಸಿಕೊಂಡು .ನೋವಿಸಿದವರ ನೋವುಗಳನ್ನು ಮರೆತು ಮುಂದೆ ಸಾಗಿದರೆ ಬದುಕು ಹಗುರವಾಗುವುದು ಅಲ್ಲವೇ ?
-ಡಾ ಸಾವಿತ್ರಿ ಮ ಕಮಲಾಪೂರ*
ಪ್ರಾಚಾರ್ಯರು
ಕರ್ನಾಟಕ ಪಬ್ಲಿಕ್ ಸ್ಕೂಲ್
ನಗು ಅಳು ಮರೆ… ನಿದ್ದಗೊಮ್ಮೆ ನಿತ್ಯ ಮರಣ