ಅಕ್ಕನೆಡೆಗೆ-ವಚನ – 29 ವಾರದ ವಿಶೇಷ ಲೇಖನ
ಅನುಭಾವದೊಂದಿಗೆ ಸಾಮಾಜಿಕ ಚಿಂತನೆ
ಒಲುಮೆ ಒಚ್ಚತವಾದವರು ಕುಲಛಲವನರಸುವರೇ?
ಮರುಳಗೊಂಡವರು ಲಜ್ಜೆ ನಾಚಿಕೆಯ ಬಲ್ಲರೇ?
ಚೆನ್ನಮಲ್ಲಿಕಾರ್ಜುನ ದೇವಗೊಲಿದವರು
ಲೋಕಾಭಿಮಾನವ ಬಲ್ಲರೇ?
ಅಕ್ಕಮಹಾದೇವಿಯ ಈ ವಚನವು ಸಮಾಜದಲ್ಲಿರುವ ಜಾತಿ ವ್ಯವಸ್ಥೆಗೆ ಸಂಬಂಧ ಪಟ್ಟಂತೆ ಚರ್ಚಿಸುತ್ತದೆ. ವಚನದ ಆರಂಭ ಸಾಮಾಜಿಕ ಚಿಂತನೆಯಿಂದಾಗಿ, ಆಧ್ಯಾತ್ಮದ ನೆಲೆಯಲ್ಲಿ ಅಂತ್ಯಗೊಳ್ಳುತ್ತದೆ.
ಒಲುಮೆ ಒಚ್ಚತವಾದವರು ಕುಲಛಲವನರಸುವರೇ?
ಒಲುಮೆ ಎಂದರೆ ಒಲವು, ಪ್ರೀತಿ, ಪ್ರೇಮ, ಅನುರಾಗ ಇತ್ಯಾದಿ.
ಒಚ್ಚತ ಎಂದರೆ ಮೀಸಲು, ಮುಡಿಪು, ನಿಶ್ಚಿತ, ಹಿತವಾದುದು, ಸಾಮರಸ್ಯ, ಐಕ್ಯ, ಮನಸ್ಸಿಗೆ ಒಪ್ಪಿಗೆಯಾದುದು ಎಂಬ ಅರ್ಥ ಕೊಡುತ್ತದೆ.
ಕುಲ ಅಂದರೆ ವಂಶ, ಸಮೂಹ, ಗುಂಪು, ಮನೆತನ, ಜಾತಿ. ಛಲ ಎಂದರೆ ಮೋಸ, ವಂಚನೆ, ವ್ಯಾಜ, ಕಾಡುವುದು, ಪೀಡಿಸುವುದು, ಹಟ.
ಅರಸು ಎಂದರೆ ಹುಡುಕು, ಅನ್ವೇಷಣೆ, ಶೋಧ, ಕಂಡು ಹಿಡಿಯುವುದು ಎಂದರ್ಥ.
ಮನುಷ್ಯ ಮನುಷ್ಯನ ನಡುವೆ ಪ್ರೀತಿ ಪ್ರೇಮದ ಬಾಂಧವ್ಯ ಬೆಸುಗೆಯಾಗಿರಬೇಕೆ ಹೊರತು, ಯಾವ ಕುಲವೆನ್ನುವ ಮಾತು ಮಹತ್ವದ್ದಲ್ಲ ಎಂದು ಹೇಳಿಕೊಟ್ಟವರು ಬಸವಾದಿ ಶರಣರು. ಅವರು ಹುಟ್ಟಿನಿಂದ ಜಾತಿಯಲ್ಲ, ವೃತ್ತಿಯಿಂದ ಜಾತಿ ಎಂದು ತಿಳಿಸಿ, ಚಲಾವಣೆಗೆ ತಂದು, ತೋರಿಸಿ ಕೊಟ್ಟರು. ಅಂದು ‘ಶರಣ’ ಎನಿಸಿಕೊಂಡ ಪ್ರತಿಯೊಬ್ಬರಲ್ಲಿಯೂ ಇದು ಅಚಲವಾಗಿತ್ತು. ಹಾಗೇ ಹನ್ನೆರಡನೇ ಶತಮಾನದಲ್ಲಿ ಅವರೆಲ್ಲರೂ ಒಂದಾಗಿ ಬಾಳಿ, ಬದುಕಿ, ಸಾಬೀತು ಪಡಿಸಿದರು. ಅದಕ್ಕೆ ಅಕ್ಕ ಹೇಳುವುದು, ‘ಒಲವು ಪ್ರಾಮಾಣಿಕವಾಗಿ ಇದ್ದಲ್ಲಿ ಜಾತಿ, ಕುಲ ಯಾವುದೂ ಅಡ್ಡ ಬರುವುದಿಲ್ಲ’ ಎಂದು.
ಮರುಳಗೊಂಡವರು ಲಜ್ಜೆ ನಾಚಿಕೆಯ ಬಲ್ಲರೇ?
ಮರುಳ ಅಂದರೆ ಬುದ್ಧಿ ಸಮ ಇಲ್ಲದಿರುವುದು. ಹೀಗಿದ್ದವರನ್ನು ಹುಚ್ಚು ಹಿಡಿದವರು ಎನ್ನುತ್ತೇವೆ. ಹಾಗೆ ಹುಚ್ಚು ಹಿಡಿದವರಿಗೆ ಲಜ್ಜೆಯಾಗಲಿ, ನಾಚಿಕೆಯಾಗಲಿ ಇರುವುದಿಲ್ಲ ಎಂದರ್ಥ. ಇಲ್ಲಿ ಆ ಜಾತಿ, ಈ ಕುಲ ಎಂದು ಹೇಳುತ್ತ, ಅಂತರ ಕಲ್ಪಿಸುವ ಜನರೇ ಮರುಳಗೊಂಡವರು. ಮೂಲ ಸಂಪ್ರದಾಯವಾದಿಗಳ ಆಚಾರ, ವಿಚಾರವನ್ನು, ಬೆಣ್ಣೆಯೊಳಗಿನ ಕೂದಲು ತೆಗೆದಂತೆ ಶಿಥಿಲವಾಗಿ ಅಕ್ಕ ವಿರೋಧಿಸುತ್ತಾಳೆ. ಮಾನವನಾಗಿ ಹುಟ್ಟಿದ ಮೇಲೆ ಅವನ ಮೂಲ ಅಸ್ತಿತ್ವ ತಿಳಿದಿರಬೇಕು ಎನ್ನುವ ಆಶಯ ಇದರಲ್ಲಡಗಿದೆ.
ಚೆನ್ನಮಲ್ಲಿಕಾರ್ಜುನ ದೇವಗೊಲಿದವರು
ಲೋಕಾಭಿಮಾನವ ಬಲ್ಲರೇ?
ಮನುಷ್ಯನಿಗೆ ಮೊದಲು ಮನೆಯಿಂದಲೇ ದೇಹಾಭಿಮಾನ ಹುಟ್ಟುತ್ತದೆ. ನಂತರ ಸಾಮಾಜಿಕವಾಗಿ ಲೋಕಾಭಿಮಾನ ಹುಟ್ಟಿಕೊಳ್ಳುತ್ತದೆ. ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ, ಅಕ್ಕ, ತಮ್ಮ, ತಂಗಿ, ಗಂಡ, ಹೆಂಡತಿ ಇತ್ಯಾದಿ ಸಂಬಂಧಗಳ ಹೆಸರಿನಿಂದ ದೇಹಾಭಿಮಾನ ಬೆಳೆದರೆ, ಮನೆಯಿಂದ ಹೊರಗೆ ಸಮಾಜದೊಳಗೆ ಕಾಲಿರಿಸಿದಾಗ, ನಾವು ಮಾಡುವ ವ್ಯಾಪಾರ, ಉದ್ಯೋಗದ ಹೆಸರಿನಲ್ಲಿ ಅಭಿಮಾನ ಪಡುತ್ತೇವೆ. ಕೊನೆಗೆ ಅದು ದುರಹಂಕಾರ, ದುರಭಿಮಾಕ್ಕೆ ಎಡೆಮಾಡಿಕೊಡುತ್ತದೆ.
ಈ ಜಗತ್ತು ಒಂದು ರಂಗಭೂಮಿ, ಮನುಷ್ಯರೆಲ್ಲಾ ಪಾತ್ರಧಾರಿಗಳು ಎಂದು ಶೇಕ್ಸ್‌ಪಿಯರ್ ಹೇಳಿದ ಮಾತನ್ನು ಪ್ರತಿ ಕ್ಷಣವೂ ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗೆಯೇ ನಮ್ಮ ಪಾತ್ರ ಮುಗಿದ ಕೂಡಲೆ, ಈ ಜಗತ್ತಿನಿಂದ ಹೊರಡುತ್ತಿರುವುದು ಅಷ್ಟೆ, ಎನ್ನುವ ಪ್ರಜ್ಞೆಯೂ ಇರಬೇಕು. ಆದರೆ ನಾವು ಜಾತಿ ಬೇಧ, ಲಿಂಗ ಬೇಧ, ಬಡವ ಬಲ್ಲಿದನೆಂಬ ತಾರತಮ್ಯದಲ್ಲಿ ಇಡೀ ಜೀವನವನ್ನೇ ಕಳೆದು ಬಿಡುತ್ತೇವೆ. ಶರಣರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದರೆ ಯಾವ ಸಮಸ್ಯೆಯೂ ಆಗುವುದಿಲ್ಲ. ‘ಶರಣ ಸತಿ ಲಿಂಗ ಪತಿ’ ಎನ್ನುವ ವಿನೀತಭಾವವನ್ನು ರೂಢಿಸಿಕೊಂಡಾಗ ಮನಸು ನಿರಾಳವಾಗಿ ನಿರ್ಮಲವಾಗುತ್ತದೆ. ಅದನ್ನು ಮರೆತು ಇಲ್ಲದ ದುರಭಿಮಾನದಿಂದ ಬೀಗುತ್ತೇವೆ. ಇಂತಹ ಸ್ವಭಾವವನ್ನು ಅಕ್ಕ ಬಹಳ ಸೂಕ್ಷ್ಮವಾಗಿ ಖಂಡಿಸುತ್ತಾಳೆ.
ಚೆನ್ನಮಲ್ಲಿಕಾರ್ಜುನ, ಲಿಂಗ, ದೇವರು, ಅಂತರಾತ್ಮ, ಅರಿವು, ಆತ್ಮಸಾಕ್ಷಿ ಇತ್ಯಾದಿ ಪದಗಳನ್ನು ಮೂಲಭೂತವಾಗಿ ಅರ್ಥೈಸಿಕೊಂಡು, ಅದರ ಮೂಲಕ ಅಲೌಕಿಕ ಶಕ್ತಿಯನ್ನು ತಿಳಿಯುವ ಪ್ರಯತ್ನ ಮಾಡಬಹುದು. ಲೌಕಿಕ ಜಗತ್ತಿನಲ್ಲಿ ಭೌತಿಕವಾಗಿ ಕಣ್ಣಿಗೆ ಕಾಣುವ ದೇಹ, ಅದರ ಹೆಸರು, ಉದ್ಯೋಗ, ಎಲ್ಲವನ್ನೂ ಬದಿಗಿಟ್ಟು, ಕೇವಲ ಆತ್ಮದ ಮೂಲಕ ದೇಹದೆಡೆಗೆ ದೃಷ್ಟಿ ಬೀರಿದಾಗ, ಅದಕ್ಕೆ ಯಾವುದೇ ಅಭಿಮಾನ ಕಾಡುವುದಿಲ್ಲ. ‘ನಾನು’ ಎನ್ನುವುದರ ಹುಡುಕಾಟ ಶುರುವಾಗಿ, ಒಂದು ಹಂತ ತಲುಪಿ, ಅಲ್ಲಿ ನಿರ್ಲಿಪ್ತತೆ ಆವರಿಸುತ್ತದೆ. ಆ ನಿರ್ಲಿಪ್ತ ಸ್ಥಿತಿ ತಲುಪಿದಾಗ ಮನಸು ಹೂವಾಗಿ ಹಗುರಾಗಿ ಅರಳಿರುತ್ತದೆ.
ಅಕ್ಕ ಹೇಳುವುದು ಇದೇ ‘ಲೋಕಾಭಿಮಾನ’ ಕುರಿತು. ಮನುಷ್ಯ ದೇಹಕ್ಕೂ ಮೀರಿ ಆಲೋಚನೆ ಮಾಡಬೇಕು. ನಾವು ನಮ್ಮೊಳಗೆ ಕಣ್ಣಿಗೆ ಕಾಣದಂತೆ ಅಡಗಿರುವ ಶಕ್ತಿಗೆ, ‘ಭಕ್ತಿ’ ಮತ್ತು ‘ಪ್ರೀತಿ’ಯ ಭಾವನೆಗಳಿಂದ ಸಂಸ್ಕರಿಸಿ ಬೆಳೆಸಿಕೊಳ್ಳುವ ಬಗೆ ಕಂಡುಕೊಳ್ಳಬೇಕು. ‘ನಾನು’ ಎನ್ನುವ ಅಹಂಭಾವ ತೊಡೆದಾಗ ಮಾತ್ರ ಅದು ಸಾಧ್ಯ.
ದೇಹ ಹಾಗೂ ಮನಸು ಇಂತಹ ನಿರ್ಲಿಪ್ತ ಸ್ಥಿತಿ ತಲುಪಿದಾಗ, ಅಂಗೈಯೊಳಗಿನ ಲಿಂಗದ ಕಡೆಗೆ ಹಾತೊರೆಯುತ್ತೇವೆ. ಲಿಂಗಕ್ಕೆ ಒಲಿಯುವುದರಿಂದ ಲೌಕಿಕದ ಬಂಧನಗಳು ಸುಲಭವಾಗಿ ಬಿಡುಗಡೆ ಹೊಂದಲು ಸಾಧ್ಯ. ಆಗ ಅಲೌಕಿಕದ ಜಗತ್ತು ತೆರದುಕೊಂಡು ಆಂತರ್ಯದಲ್ಲಿ ಅರಿವು ಮೂಡಿಸುತ್ತದೆ. ಈ ವಚನದಲ್ಲಿ ಸಾಮಾಜಿಕ ವ್ಯವಸ್ಥೆಯ ಚಿಂತನೆಗಳು ನಡೆದು, ಆಧ್ಯಾತ್ಮಿಕ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ದೇವರ ಪ್ರೀತಿಯಲ್ಲಿ ಎಲ್ಲರೂ ಒಂದಾದರೆ, ಆ ಭಕ್ತಿಯ ಪರಿಯಿಂದಾಗಿ ಎಲ್ಲಾ ಭಕ್ತರೂ ಸಮಾನರು ಎನ್ನುವ ಭಾವ ಮೂಡುತ್ತದೆ. ಆಗ ಯಾವುದೇ ಜಾತಿ ಬೇಧಗಳು ಕಾಡುವುದಿಲ್ಲ ಎನ್ನುವ ಅಂಶ ಈ ವಚನದಲ್ಲಡಗಿದೆ. ನಾವು ಲಿಂಗ ಧ್ಯಾನದ ಮೂಲಕ ಲೌಕಿಕದಿಂದ ಅಲೌಕಿಕದೆಡೆಗೆ ಸಾಗುವ, ಆ ಹಾದಿಯ ಅರಿಯುವ ಪ್ರಯತ್ನ ಮಾಡುತ್ತ ಮಾನವೀಯತೆಗೆ ಹತ್ತಿರವಾಗೋಣ ಬನ್ನಿ.
ಸಿಕಾ
ತುಂಬ ಸುಂದರ ಹಾಗೂ ಅರ್ಥಪೂರ್ಣ ವಿಶ್ಲೇಷಣೆ.