e-ಸುದ್ದಿ, ಮಸ್ಕಿ
ಶಾಸಕರು ಸಂಸದರನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರ ಶ್ರಮ ದೊಡ್ಡದಾಗಿದ್ದು ಕಾರ್ಯಕರ್ತರಿಗೂ ಕೂಡ ಅಧಿಕಾರ ಸಿಗುವಂತೆ ಮಾಡಲು ಬಿಜೆಪಿಯ ನಾಯಕರು ಕಾರ್ಯಕರ್ತರಿಗಾಗಿ ಶ್ರಮಿಸೋಣ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಸೋಮವಾರ ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ಲಿಂಗಸುಗೂರು, ಮಸ್ಕಿ ಮತ್ತು ಸಿಂಧನೂರು ಮಂಡಲಗಳ ಗ್ರಾಮ ಸ್ವಾರಾಜ್ಯ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾ.ಪಂ.ಚುನಾವಣೆ ದಿನಾಂಕ ಪ್ರಕಟವಾಗಿದ್ದು ಡಿ.22 ಮತ್ತು 27 ರಂದು ಎರಡು ದಿನಗಳಲ್ಲಿ ಚುನಾವಣೆ ನಡೆಯಲಿದೆ. ನಾಯಕರಿಗಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಗ್ರಾ.ಪಂ. ಆಯ್ಕೆ ಯಾಗುವಂತೆ ಮಾಡಲಾಗುವುದು. ರಾಜ್ಯದ 31 ಜಿಲ್ಲೆಗಳಲ್ಲಿ 6 ತಂಡಗಳಿಂದ 62 ಗ್ರಾಮ ಸ್ವರಾಜ್ಯ ಸಮಾವೇಶ ಮಾಡಿ ಕಾರ್ಯಕರ್ತರನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡಲಾಗುತ್ತದೆ ಎಂದರು.
ಮಸ್ಕಿ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ 5ಎ ಕಾಲುವೆ ಮತ್ತು ಕನಕ ನಾಲ ಯೋಜನೆ ಅನುಷ್ಠಾನ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವದು. ಈಗಾಗಲೇ ಭತ್ತದ ಬೆಳೆಯ ನಷ್ಟ ಸಮೀಕ್ಷೆ ಮಾಡುತ್ತಿದ್ದು ಡಿ.1 ರಿಂದ ಭತ್ತವನ್ನು ಬೆಂಬಲ ಬೆಲೆಗೆ ಖರೀಧಿಸಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.
ಮೀಸಲಾತಿ ಅನುಷ್ಠಾನಕ್ಕೆ ಉಪ ಸಮಿತಿ ಃ ರಾಜ್ಯದಲ್ಲಿ ಎಸ್.ಟಿ ಮತ್ತು ಎಸ್‍ಸಿ ಜನಾಂಗಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ಸರ್ಕಾರ ಬದ್ಧವಾಗಿದ್ದು ಈಗಾಗಲೇ ಉಪ ಸಮಿತಿ ರಚಿಸಲಾಗಿದೆ. ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ ಕೂಡಲೇ ಜಾರಿಗೊಳಿಸುವುದಾಗಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಘೋಷಿಸಿದರು.
ನರೇಂದ್ರ ಮೋದಿ ಮತ್ತು ಅಮಿತ ಷಾ ಆಶಯದಂತೆ ಈ ಬಾರಿಯ ಗ್ರಾ.ಪಂ.ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯಾರ್ಥಿಗಳು ಗೆಲ್ಲುವ ಮೂಲಕ ಕನಾರ್ಟಕದಲ್ಲಿ ಕಾಂಗ್ರೆಸ್ ಮುಕ್ತ ಮಾಡುತ್ತೇವೆ. ಅಲ್ಲದೆ ಮುಂಬರುವ ಉಪ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ ಗೆದ್ದು ಸಚಿವರಾಗುವದರಲ್ಲಿ ಅನುಮಾನವಿಲ್ಲ ಎಂದು ಬಿ.ಶ್ರೀರಾಮುಲು ತಿಳಿಸಿದರು.
ಚೆಕ್ ಸಹಿ ಮಾಡುವ ಅಧಿಕಾರ ಗ್ರಾ.ಪಂ. ಅಧ್ಯಕ್ಷನಿಗೆ ಃ ಅರಣ್ಯ ಖಾತೆ ಸಚಿವ ಆನಂದ ಸಿಂಗ್ ಮಾತನಾಡಿ ಶಾಸಕರು ಸಂಸದರಿಗಿಲ್ಲದ ಅಧಿಕಾರ ಗ್ರಾ.ಪಂ.ಅಧ್ಯಕ್ಷರಿಗೆ ಇದೆ. ತಮ್ಮ ತಮ್ಮ ಪಂಚಾಯತಿಗಳ ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡಲು ಗ್ರಾ.ಪಂ.ಅಧ್ಯಕ್ಷರು ಚೆಕ್‍ಗೆ ಸಹಿಮಾಡುವ ಅಧಿಕಾರ ಇದ್ದು ಗಾಂಧಿ ಕನಸಿನ ಗ್ರಾಮ ಸ್ವರಾಜ್ಯ ಅನುಷ್ಠಾನಕ್ಕಾಗಿ ದೇಶದಲ್ಲಿ ಪ್ರಧಾನಿ ಮೋದಿ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೆಚ್ಚು ಹೆಚ್ಚು ಅನುದಾನ ನೀಡಲಿದ್ದಾರೆ ಎಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಸಂಸದರಾದ ಸಂಗಣ್ಣ ಕರಡಿ ಕೊಪ್ಪಳ, ಅಮರೇಶ್ವರ ನಾಯಕ ರಾಯಚೂರು, ದೇವೆಂದ್ರಪ್ಪ ಬಳ್ಳಾರಿ ಮಾತನಾಡಿದರು. ಜಿ.ಪಂ.ಅಧ್ಯಕ್ಷೆ ಹಾದಿಮನಿ ವೀರಲಕ್ಷ್ಮೀ ಇದ್ದರು.
——————
ಸರ್ಕಾರಿ ಕಾರು ವಾಪಸ್
ಚುನಾವಣಾ ಆಯೋಗ ಗ್ರಾ.ಪಂ.ಗಳಿಗೆ ಚುನಾವಣೆ ದಿನಾಂಕ ಪ್ರಕಟಿಸುತ್ತಿದ್ದಂತೆ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಸಚಿವರುಗಳಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬಿ.ಶ್ರೀರಾಮುಲ, ಆನಂದ ಸಿಂಗ್ ಸರ್ಕಾರಿ ಕಾರುಗಳನ್ನು ತ್ಯಾಜಿಸಿ ಖಾಸಗಿ ಕಾರಿನಲ್ಲಿ ಗ್ರಾಮ ಸ್ವರಾಜ್ ಕಾಯಕ್ರಮಕ್ಕೆ ತೆರಳಿದರು.