ಮಸ್ಕಿ ಮಲ್ಲಿಕಾರ್ಜುನ ಬೆಟ್ಟ ಸೇರಿದಂತೆ
20 ಬೆಟ್ಟಗಳಿಗೆ ರೋಪ್‍ವೇ ನಿರ್ಮಿಸಲಿ
e- ಸುದ್ದಿ ಮಸ್ಕಿ
ರಾಜ್ಯದಲ್ಲಿ ಸುಮಾರು 20ಕ್ಕೂ ಹೆಚ್ಚು ಗಿರಿಧಾಮಗಳಿವೆ. ಸುಂದರವಾದ ನಿಸರ್ಗ ರಮಣೀಯ ಹಸಿರಿನಿಂದ ನಳನಳಿಸುತ್ತಿವೆ.
ಇದರಲ್ಲಿ ಕೆಲವು ಧಾರ್ಮಿಕ ಶಕ್ತಿ ಕೇಂದ್ರಗಳು ಹೌದು.
ಜಲಪಾತಗಳಿಂದ ಭೋರ್ಗರೆವ ಸೌಂದರ್ಯ ಬೆಟ್ಟಗಳ ಉಂಟು.
ಈ ಗಿರಿಧಾಮಗಳಿಗೆ ವರ್ಷವಿಡೀ ಪ್ರವಾಸಿಗರು ಲಕ್ಷಗಟ್ಟಲೆ ಜನ ಭೇಟಿ ನೀಡಿ ಸಂತೋಷಿಸುತ್ತಾರೆ.
ಇವುಗಳಲ್ಲಿ ಮೈಸೂರಿನ ಚಾಮುಂಡಿಬೆಟ್ಟ,
ಚಿಕ್ಕಬಳ್ಳಾಪುರದ ನಂದಿಬೆಟ್ಟ,
ಶ್ರವಣಬೆಳಗೊಳದ ಗೊಮ್ಮಟೇಶ,
ಮಸ್ಕಿಯ ಮಲ್ಲಿಕಾರ್ಜುನ ಬೆಟ್ಟ,
ಕೊಪ್ಪಳದ ಕೋಟೆ,
ಬಳ್ಳಾರಿ ಕೋಟೆ,
ಗಂಗಾವತಿ ಯ ಅಂಜನಾದ್ರಿ ಬೆಟ್ಟ,
ಚಿತ್ರದುರ್ಗದ ಓಬವ್ವನ ಕಿಂಡಿ,
ಶಿವಗಂಗೆ ಬೆಟ್ಟ,
ಆಗುಂಬೆ ಘಾಟ್,
ಕೊಡಚಾದ್ರಿ, ಜಯಂತಿ ಬೆಟ್ಟ
ಹೀಗೆ ಪಟ್ಟಿ ಬೆಳೆಯುತ್ತವೆ
ದಿವಂಗತ ಶಂಕರನಾಗ್ ಈ ಬಗ್ಗೆ ಕೆಲವು ಕಡೆ, ಈ ರೀತಿ ಬೆಟ್ಟಗಳಿಗೆ ಪ್ರವಾಸಿ ಆಕರ್ಷಣೆ ಹೆಚ್ಚಿಸಲು, ರೋಪ್‍ವೇ ನಿರ್ಮಾಣ ಕುರಿತು ಆಗಾಗ ಹೇಳುತ್ತಿದ್ದರು. ಆದರೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಈವರೆಗೆ ಕರ್ನಾಟಕದಲ್ಲಿ ಒಂದೇ ಒಂದು ರೋಪ್‍ವೇ ನಿರ್ಮಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿಲ್ಲ. ಕೆಲವು ಗಿರಿಧಾಮ ಸೇರಿದರೇ ಪ್ರವಾಸಿಗರನ್ನು ಆಕರ್ಷಿಸುವ ಹಾಗೂ ಲಾಭದಾಯಕವಾಗಬಹುದಾದ ಅನೇಕ ಗಿರಿಧಾಮಗಳಿಗೆ, ರೋಪ್‍ವೇ ಮಾಡಿದರೆ, ಕರ್ನಾಟಕಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ ಸಾಧ್ಯ. ಜೊತೆಗೆ ಸರಕಾರಕ್ಕೆ ಹೆಚ್ಚಿನ ಲಾಭವೂ ಇದೆ. ಈ ಬಗ್ಗೆ ಯಾವ ಮಂತ್ರಿ, ಮುಖ್ಯಮಂತ್ರಿ ತಲೆ ಕೆಡಿಸಿಕೊಂಡಿಲ್ಲ. ಸರಕಾರ ಈ ವಿಷಯದಲ್ಲಿ ನಿರುತ್ಸಾಹ ತೋರಿಸಿ ಕರ್ನಾಟಕ ಪ್ರವಾಸೋದ್ಯಮ ಬೆಳೆಸುವಲ್ಲಿ ಸೋತಿದೆ.
ಈ ನಿಟ್ಟಿನಲ್ಲಿ 20 ಕಡೆ ಸ್ಥಳ ಆಯ್ಕೆ ಮಾಡಿ, ಈ ಗಿರಿಧಾಮಗಳಿಗೆ ಎರಡು ಮಾರ್ಗದ ರೋಪ್‍ವೇ ಮಾಡಲು ಖಾಸಗಿಯವರಿಗೆ ವಹಿಸಬಹುದಾಗಿದೆ. ಕೇವಲ ಅನುಮತಿ ಹಾಗೂ ಸ್ಥಳ ನೀಡಿದರೆ, ಬಂಡವಾಳ ಹಾಕಿ ನಿರ್ಮಿಸಲು ನೂರಾರು ಜನ ಬರುತ್ತಾರೆ. ಹೆದ್ದಾರಿ ಮಾದರಿಯಲ್ಲಿ ರೋಪ್‍ವೇ ನಿರ್ಮಿಸಲು ಸರ್ಕಾರ ಮುಂದಡಿ ಇಡಲಿ. (ಬೇರೆ ಬೆಟ್ಟಗಳು ಇದ್ದರೆ, ಸೂಚಿಸಿ)
ನಿರ್ಮಿಸಿದಾತನಿಗೆ 30 ರಿಂದ 50 ವರ್ಷದ ಗುತ್ತಿಗೆ ನೀಡಿ, ದುಡಿಮೆಯಲ್ಲಿ 60-40 ಅನುಪಾತದಲ್ಲಿ ಹಂಚಿಕೊಳ್ಳುವಂತೆ ಮಾಡಿದರೆ, ಒಂದೇ ಕಲ್ಲಿನಲ್ಲಿ ಸರ್ಕಾರಕ್ಕೆ 3 ಲಾಭಗಳಿವೆ.
ಪ್ರವಾಸಿ ಆಕರ್ಷಣೆ, ಪ್ರವಾಸಿಗರಿಗೆ ಸೌಲಭ್ಯ ಹಾಗೂ ಶೇ. 40ರ ಲಾಭಾಂಶದಿಂದ ಪೂರಕವಾಗಿ, ಅನೇಕ ಉದ್ಯೋಗ ಸೃಷ್ಟಿ ಸಾಧ್ಯ. ಈ ಬಗ್ಗೆ ಸುರಕ್ಷಿತ ದೃಷ್ಟಿಯಿಂದ 1 ಕೋಟಿ ಡಿಪಾಸಿಟ್ ಪಡೆದು, ಜಾಗತಿಕ ಟೆಂಡರ್ ಮೂಲಕ ರೋಪ್‍ವೇ ಮಾಡಲು ಮನಸ್ಸು ಮಾಡಲಿ. ಇದರಿಂದ ಸಾರಿಗೆ, ಹೋಟೆಲ್ ಉದ್ಯಮ, ಫೋಟೋಗ್ರಫಿ ಉದ್ಯಮ ಬೆಳೆಯಲು ಸಾಧ್ಯ. ಲಕ್ಷಾಂತರ ಜನರಿಗೆ ಉದ್ಯೋಗದ ಸಾಧ್ಯತೆ ಇದೆ. ಈ ಬಗ್ಗೆ ವಿಜಯೇಂದ್ರರವರು ಮನಸ್ಸು ಮಾಡಲಿ, ಮಸ್ಕಿ ಚುನಾವಣೆ ಹಿನ್ನಲೆಯಲ್ಲಿ ಮಸ್ಕಿ ಮಲ್ಲಯ್ಯನ ಬೆಟ್ಟಕ್ಕೆ, ರೋಪ್‍ವೇ ನಿರ್ಮಿಸುವ ಬರವಸೆ ನೀಡಲಿ.
ಈ ಬಗ್ಗೆ ಸನ್ಮಾನ್ಯ ಯಡಿಯೂರಪ್ಪನವರು, ನಿಗಮ ಮಂಡಳಿ ಮಾಡಿದಂತೆ, ಪ್ರವಾಸೋದ್ಯಮ ನಿಗಮ ಅಥವಾ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿ, ಈ ರೋಪ್‍ವೇ ನಿರ್ಮಿಸಲಿ.
– ರಮೇಶ ಸುರ್ವೆ,
ಹಿರಿಯ ಪತ್ರಕರ್ತ, ಬೆಂಗಳೂರು