ಅಂಕಣ:೧೮-ಅಂತರಂಗದ ಅರಿವು
ರಾಜನ ಭಕ್ತಿ ತಾಮಸದಿಂದ ಕೆಟ್ಟಿತ್ತು
ರಾಜನ ಭಕ್ತಿ ತಾಮಸದಿಂದ ಕೆಟ್ಟಿತ್ತು
ಪಂಡಿತನ ಯುಕ್ತಿ ಖಂಡನವಿಲ್ಲದೆ ನಿಂದಿತ್ತು
ಸುಸಂಗಿಯ ನಿರಂಗ ದುಸ್ಸಂಗದಿಂದ ಕೆಟ್ಟಿತ್ತು.
ಪತಂಗನಂತಾಗದೆ ಮುನ್ನವೆ ನಿನ್ನ ನೀನರಿ.
ಅರಿದಡೆ ನಿನಗಿದಿರಿಲ್ಲ, ಮನಸಂದಿತ್ತು ಮಾರೇಶ್ವರಾ
-ಮನಸಂದ ಮಾರಿತಂದೆ
ಶರಣರು ತಮ್ಮನ್ನು ತಾವು ಅರಿಯುವುದಕ್ಕೆ ಹೆಚ್ಚಿನ ಮಹತ್ವವನ್ನ ನೀಡಿದ್ದರು. ಶರಣಪಥದಲ್ಲಿ ನಡೆಯಬೇಕಾದವನು ತನ್ನ ಅಹಂ ಭಾವಗಳನ್ನ ತೊರೆದು ತನ್ನನ್ನು ತಾನು ಅರಿತು ನಡೆಯಬೇಕು ಅದನ್ನ ಇತರರಿಗೆ ಹೇಳಲು ಶರಣ ಮನಸಂದ ಮಾರಿತಂದೆ ಈ ವಚನದಲ್ಲಿ ಸುಂದರವಾದ ರೂಪಕಗಳನ್ನ ಬಳಸಿ ಹೇಳಿದ್ದಾರೆ.
ರಾಜನ ಭಕ್ತಿ ತಾಮಸದಿಂದ ಕೆಟ್ಟಿತ್ತು
ರಾಜನಾದವನು ಕೂಡ ತನ್ನ ಭಕ್ತಿ ಸೇವೆಯನ್ನ ದೇವರಿಗೆ ಅರ್ಪಿಸಲು ಇಚ್ಛಿಸುತ್ತಾನೆ. ಆದರೆ ಆ ಸೇವೆಯಲ್ಲಿ ಅವನ ಬೇಡಿಕೆಗಳೆ ಹೆಚ್ಚಾಗಿರುತ್ತವೆ. ಅವನು ಹೊನ್ನು, ಹೆಣ್ಣು ,ಮಣ್ಣು ಇವುಗಳನ್ನ ಪಡೆಯುವುದಕ್ಕೋಸ್ಕರ ದೇವರಿಗೆ ಸೇವೆಯನ್ನ ಸಲ್ಲಿಸುತ್ತಾನೆ. ಯುದ್ಧ ಮಾಡಿ ಗೆದ್ದು ರಾಜ್ಯ ವಿಸ್ತಾರ ಮಾಡಿಕೊಂಡಾಗ, ಅದರ ನೆನಪಿಗಾಗಿ ಗುಡಿ ಗುಂಡಾರಗಳನ್ನ ಕಟ್ಟಿಸುತ್ತಾನೆ. ದತ್ತಿ ದಾನಗಳನ್ನ ನೀಡುತ್ತಾನೆ. ಹಾಗೆ ನೀಡುವಾಗ ಅವನ ಭಕ್ತಿ ಅಹಂಕಾರ ಪ್ರೇರಿತವಾಗಿರುತ್ತದೆ. ಅವನಲ್ಲಿಯ ನಿಜವಾದ ಭಕ್ತಿ ಸೇವೆ ಮಾಡುವ ಗುಣವನ್ನು ತಾಮಸಗುಣ ನುಂಗಿ ಹಾಕುತ್ತದೆ. ಹಾಗಾಗಿ ರಾಜನ ಭಕ್ತ ತಾಮಸದಿಂದ ಕೆಟ್ಟು ಹೋಗುತ್ತದೆ.
ಪಂಡಿತನ ಯುಕ್ತಿ ಖಂಡನವಿಲ್ಲದೆ ನಿಂದಿತ್ತು
ಸಕಲ ವೇದ, ಶಾಸ್ತ್ರ, ಉಪನಿಷತ್, ಪುರಾಣ ಮುಂತಾದವುಗಳಲ್ಲಿ ಪಾರಂಗತನಾದ ಪಂಡಿತನನ್ನು ಒರೆಗೆ ಹಚ್ಚುವ, ಚರ್ಚೆಗಳು ನಡೆಯಬೇಕು. ಪಂಡಿತನು ಆಡುವ ಯಾವುದೇ ಮಾತು, ವಾಕ್ಯ, ಸಂಗತಿ, ಸಿದ್ಧಾಂತಗಳನ್ನ ವಿರೋಧಿಸುವವರು ಪ್ರಶ್ನಿಸುವವರು ಇರಬೇಕು.ಏಕೆ, ಹೇಗೆ, ಎನ್ನುವ ಪ್ರಶ್ನೆ ಇದ್ದಾಗ ಮಾತ್ರ, ಪಂಡಿತನು ತಾನು ಪಡೆದ ಜ್ಞಾನದ ಬಲದಿಂದ ಪ್ರಶ್ನೆಗಳಿಗೆ ಸಮರ್ಥ ಉತ್ತರವನ್ನು, ಸಮರ್ಥನೆಯನ್ನು ನೀಡುತ್ತಾನೆ. ಅವನ ಜ್ಞಾನ ಹೆಚ್ಚಾಗುತ್ತದೆ. ಕಲ್ಲು ಕಲ್ಲುಗಳು ಮಸೆದಾಗ ಬೆಂಕಿ ಹೊತ್ತಿಕೊಳ್ಳುವಂತೆ ಖಂಡನೆಯಿಂದ ಹೊಸ ಜ್ಞಾನ ವಿಚಾರಗಳು ಹುಟ್ಟಿಕೊಳ್ಳುತ್ತವೆ. ಜ್ಞಾನ ಪ್ರಸರಣವಾಗುತ್ತದೆ. ಚಿನ್ನವನ್ನು ಪರೀಕ್ಷಿಸಲು, ಪ್ರಾಮಾಣಿಕರಿಸಲು ಒರೆಗಲ್ಲು ಹೇಗೆ ಸಹಾಯ ಮಾಡುತ್ತದೆಯೋ ಅದೇ ರೀತಿ ಚರ್ಚೆ ವಾದ ಖಂಡನೆಗಳಿಂದ ಪಂಡಿತನ ಯುಕ್ತಿಯನ್ನು ಒರಗೆ ಹಚ್ಚಲು, ಖಂಡನೆ ಸಹಾಯ ಮಾಡುತ್ತದೆ. ಇಲ್ಲವಾದರೆ ಅವನ ಯುಕ್ತಿ ನಿಂತ ನೀರಾಗುತ್ತದೆ. ಅಂದರೆ ಪಂಡಿತನ ಅಪಾರ ಜ್ಞಾನ ಸಮಾಜದ ಒಳಿತಿಗೆ ಉಪಯೋಗಕ್ಕೆ
ಬರದಂತಾಗುತ್ತದೆ .
ಸುಸಂಗಿಯ ನಿರಂಗ ದುಸ್ಸಂಗದಿಂದ ಕೆಟ್ಟಿತ್ತು.
ಮನುಷ್ಯ ಒಳ್ಳೆಯನಾದರೂ ಕೆಟ್ಟ ಜನರ ಸಹವಾಸದಿಂದ ತನ್ನ ಪ್ರಜ್ಞೆಯನ್ನು ಕಳೆದುಕೊಂಡು ವರ್ತಿಸುತ್ತಾನೆ. ಕೆಟ್ಟ ಜನರ ಸಹವಾಸದ ಪ್ರಭಾವದಿಂದ ಒಳ್ಳೆಯವನು, ತನ್ನ ವಿವೇಕ ಕಳೆದುಕೊಳ್ಳುತ್ತಾನೆ. ಸಂಘ ಸಹವಾಸದ ಪ್ರಭಾವವು ವ್ಯಕ್ತಿಯ ವಿವೇಕದ ಮೇಲೆ ಪರಿಣಾಮವನ್ನು ಬಿರುತ್ತದೆ.ಸಮಾಜ ಅವನನ್ನು ಅವರಂತೆ ಎಂದು ಭಾವಿಸುತ್ತದೆ. ಹಾಗಾಗಿ ಒಳ್ಳೆಯ ಮನುಷ್ಯ ಒಳ್ಳೆಯ ಜನರ ಸಹವಾಸವನ್ನು ಮಾಡಬೇಕು. ಕೆಟ್ಟ ಜನರ ಸಹವಾಸ ಮಾಡಿದರೆ ಒಳ್ಳೆಯವನಾದರೂ ಸಮಾಜದ ಕಣ್ಣಿಗೆ ಕೆಟ್ಟವನಾಗಿ ಕಾಣಿಸುತ್ತಾನೆ.
ಪತಂಗನಂತಾಗದೆ ಮುನ್ನವೆ ನಿನ್ನ ನೀನರಿ.
ಪತಂಗವು ದೀಪವನ್ನು ಕಂಡು ಅದಮ್ಯ ಆಕರ್ಷಣೆಗೆ ಒಳಗಾಗಿ ಅದರ ಸಮೀಪಕ್ಕೆ ಹೋಗಿ, ತನ್ನನ್ನು ತಾನು ಸುಟ್ಟುಕೊಳ್ಳುತ್ತದೆ. ಅದರಂತೆ ಭಕ್ತನಾದವನು ಹಲವಾರು ಪ್ರಾಪಂಚಿಕ ಆಕರ್ಷಣೆಗಳ ನಡುವೆ ತನ್ನನ್ನು ಮರೆಯದೆ, ಪತಂಗದಂತೆ ಸುಟ್ಟು ಹೋಗದೆಂತೆ ನೋಡಿಕೊಳ್ಳಬೇಕು. ತನ್ನನ್ನು ತಾನು ಅರಿಯಬೇಕು. ತನ್ನನ್ನು ತಾನು ಅರಿತಾಗ ಜೀವನದ ಪರಮೋಚ್ಚ ಗುರಿಯನ್ನು ಸಾಧಿಸಲು ಸಾಧ್ಯ. ಹಾಗಾಗಿ ನಿನ್ನನ್ನು ಅರಿಯುವುದರ ಕಡೆಗೆ ಗಮನಹರಿಸಬೇಕು. ಪತಂಗದಂತೆ ಕ್ಷಣಿಕ ಆಕರ್ಷಣೆಗೆ ಒಳಗಾಗಿ ಜೀವನದ ಅಮೂಲ್ಯವಾದ ಸಾಧನೆಯನ್ನ ಕಡೆಗಣಿಸಬಾರದು.
ಅರಿದಡೆ ನಿನಗಿದಿರಿಲ್ಲ, ಮನಸಂದಿತ್ತು ಮಾರೇಶ್ವರ
ಬದುಕಿನ ನಿಜ ತತ್ವಗಳನ್ನ ಅರಿತಾಗ ಅವನು ಶರಣನಾಗುತ್ತಾನೆ ಶರಣನು ಯಾರಿಗೂ ಎದುರಾಗಿ ನಿಲ್ಲಬೇಕಾಗಿಲ್ಲ ಯಾರ ಜೊತೆ ವಾದ ಕದನ ಮಾಡಬೇಕಾಗಿಲ್ಲ ತನ್ನ ಅಂತಶಕ್ತಿ ,ಸಾಮರ್ಥ್ಯಗಳನ್ನು ಮತ್ತು ದೌರ್ಬಲ್ಯಗಳನ್ನು ಅರಿತುಕೊಂಡರೆ ಇರಬೇಕು.ಆಗ ಅವನ ಜೀವನದ
ಗುರಿ ಉದ್ದೇಶಗಳು ಸ್ಪಷ್ಟವಾಗುತ್ತವೆ.
ಆವಾಗ ಅವನು ಯಾರನ್ನು ಎದುರಿಸಬೇಕಾಗಿಲ್ಲ ಎಂದು ಮನಸ್ಸು ಅಂದರೆ ತನ್ನನ್ನು ತಾನು ಅರಿತವನಿಗೆ ಅವನ ಮನಸ್ಸೇ ಅವನಿಗೆ ಪ್ರಮಾಣಿಕರಿಸುತ್ತದೆ ಎಂದು ಮನಸನ್ನ ಮಾರಿತಂದೆ ಈ ವಚನದಲ್ಲಿ ಹೇಳಿದ್ದಾರೆ.
-ಡಾ. ನಿರ್ಮಲ ಬಟ್ಟಲ