ಮಮತೆಯ ರೂಪ ತಾಯಿ
ಒಡಲಲ್ಲಿ ಬೆಳೆಸಿ ಮಡಿಲಲ್ಲಿ ಆಡಿಸಿ
ತೊಟ್ಟಿಲು ತೂಗಿ ಜೋಗುಳಪಾಡಿ
ಉಸಿರಿಗೊಂದು ಹೆಸರನಿಟ್ಟು
ಬೆಳೆಸಿದವಳು ತಾಯಿಯಲ್ಲವೆ ||
ಹಾಲು ತುಪ್ಪ ಉಣಿಸಿ
ಸಂಸ್ಕಾರ ಸಂಸ್ಕೃತಿ ಕಲಿಸಿ
ಪರಿಪಕ್ವವಾಗಿ ಪರಿಮಳ ಸೂಸಲು
ಅಕ್ಷರವ ಅರುಹಿದವಳು ತಾಯಲ್ಲವೆ ||
ಸಂಸಾರ ಸಾಗರದಲಿ
ಸಂಯಮದ ಹಾದಿಯಲಿ
ಸುಂದರ ಬದುಕು ಕಟ್ಟಿ ಕೊಟ್ಟವಳು
ಶ್ರಮ ಜೀವಿ ತಾಯಿಯಲ್ಲವೆ ||
ಶಾಂತಿ ಸಹನ ನಿನ್ನ ಮಂತ್ರವು
ದುಡಿಮೆ ಗಳಿಕೆ ಬಾಳ ಯಂತ್ರವು
ಪ್ರೀತಿ ಕರುಣೆ ಜಗದ ತಂತ್ರವು
ಕರುಳ ಬಳ್ಳಿ ಹೆಣೆದವಳು ತಾಯಿಯಲ್ಲವೆ ||
ಸರಿಸಾಟಿಯಾರಿಹರು
ಮೂಜಗದಿ ಇವಳಿಗೆ
ಮೂಕ್ಕೋಟಿ ದೇವರುಗಳು
ನಿಲ್ಲುವರು ಇವಳಡಿಗೆ
ಸ್ವರ್ಗಕ್ಕೆ ಸಮನಿವಳು ತಾಯಿಯಲ್ಲವೆ ||
–ಸವಿತಾ ಮಾಟೂರು ಇಳಕಲ್ಲ