ಅನಾವರಣ
ಜಾತಿ, ಧರ್ಮ,ವರ್ಗ ವರ್ಣ
ಲಿಂಗಬೇಧ ಹೊಸಕಿಹಾಕಿ
ಮಾನವೀಯತೆಯ ದೀಪ ಬೆಳಗಿಸಿ
ದಯೆಯೇ ಧರ್ಮದ ಮೂಲವಾಗಿಸಿ
ಇದೋ ಇಲ್ಲಿದೆ ಸಮಸಮಾಜದ ಅನಾವರಣ
ಕಾಯಕ ದಾಸೋಹದ ತತ್ವದಲಿ
ಷಟಸ್ಥಲದ ಹೂರಣದಲಿ
ಪಂಚಾಚಾರದ ಆಚಾರಗಳಲಿ
ಅಷ್ಟಾವರಣದ ಸಾಧನೆಯಲಿ
ಇದೋ ಇಲ್ಲಿದೆ ವ್ಯಕ್ತಿವಿಕಾಸದ ಅನಾವರಣ
ಸ್ವರ್ಗ ನರಕ ಎಂಬುದಿಲ್ಲ
ಪಾಪ ಪುಣ್ಯ ಬುತ್ತಿಯಿಲ್ಲ
ಮೂರ್ತಿ ಪೂಜೆ ಕಟ್ಟಲಿಲ್ಲ
ಕಾಯಕವಿಲ್ಲದೇ ಕೈಲಾಸವಿಲ್ಲ
ಇದೋ ಇಲ್ಲಿದೆ ಶರಣ ತತ್ವದ ಅನಾವರಣ
ಗುರು ಎಂಬುದು ವ್ಯಕ್ತಿಯಲ್ಲ
ಲಿಂಗವೆಂಬುದು ವಸ್ತುವಲ್ಲ
ಜಂಗಮವೆಂಬುದು ಜಾತಿಯಲ್ಲ
ಮೂಢನಂಬಿಕೆಗೆ ಬೆಲೆಯಿಲ್ಲ
ಇದೋ ಇಲ್ಲಿದೆ ಶರಣ ಆಶಯದ ಅನಾವರಣ
ಅರಿವೇ ಗುರು, ಆಚಾರವೇ ಲಿಂಗ,
ಅನುಭಾವವೇ ಜಂಗಮ
ಶರಣಮಾರ್ಗದ ಸಂಗಮ
ನುಡಿದಂತೆ ನಡೆ,ಇದೇ ಜನ್ಮ ಕಡೆ
ಇದೋ ಇಲ್ಲಿದೆ ಶರಣ ಜ್ಯೋತಿ ಅನಾವರಣ
ಹಾರುತಿದೆ ಷಟಸ್ಥಲದ ಧ್ವಜ
ಏರುತಿದೆ ವಿಶ್ವ ಮಾನವತೆಯ ಮತ
ಕಟ್ಟುತಿಹರು ಅನುಭಾವದ ಪಥ
ಮೆಟ್ಟಿನಿಂತಿಹರು ಕರ್ಮಸಿದ್ಧಾಂತ ಪಂಥ
ಇದೋ ಇಲ್ಲಿದೆ ಶರಣ ಜೀವನದ ಅನಾವರಣ
–ಡಾ.ದಾನಮ್ಮ ಝಳಕಿ, ಬೆಳಗಾವಿ