ಪಂಪನ ಕಾವ್ಯವು ಕಾವ್ಯಶೈಲಿಯಲ್ಲಿ ಶಿಷ್ಟವಾಗಿದ್ದರೂ ಕಥನಕ್ರಮದಲ್ಲಿ ದೇಸಿಯಾಗಿದೆ-ಡಾ.ಜಾಜಿ ದೇವೇಂದ್ರಪ್ಪ

e-ಸುದ್ದಿ ಮಸ್ಕಿ

“ಪಂಪನ ಕಾವ್ಯವು ಕಾವ್ಯಶೈಲಿಯಲ್ಲಿ ಶಿಷ್ಟವಾಗಿದ್ದರೂ ಕಥನಕ್ರಮದಲ್ಲಿ ದೇಸಿಯಾಗಿದೆ” ಎಂದು ಡಾ. ಜಾಜಿ ದೇವೇಂದ್ರಪ್ಪ ಹೇಳಿದರು. ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಮತ್ತು ಬಂಡಾರ ಪ್ರಕಾಶನ, ಮಸ್ಕಿ ಇವರ ಸಂಯುಕ್ತಾಶ್ರಯದಲ್ಲಿ ಮಸ್ಕಿಯಲ್ಲಿ ‘ಸಾಹಿತ್ಯ ವೇದಿಕೆ’ ಶೀರ್ಷಿಕೆಯಡಿಯಲ್ಲಿಹಮ್ಮಿಕೊಳ್ಳಲಾಗಿದ್ದವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಪಂಪಭಾರತದಲ್ಲಿ ಕರ್ಣನ ಪಾತ್ರ’ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ನೀಡಿ ಮಾತನಾಡಿದ ಅವರು ಮುಂದುವರಿದು ಪಂಪನ ಕಾವ್ಯದಲ್ಲಿನ ಕರ್ಣನಿಗೆ ಸಂಬಂಧಿಸಿದ ಕೆಲವು ಪದ್ಯಗಳನ್ನು ಉದಾಹರಿಸಿ ಕರ್ಣನನ್ನು ವಿಶೇಷವಾಗಿ ಚಿತ್ರಿಸುವ ಪಂಪನ ಈ ಗುಣವು ಜೈನ ಧರ್ಮದ ಗುಣವೇ ಆಗಿದೆ ಎಂದು ವಿವರಿಸಿದರು .

ಪಂಪನ ಪಾತ್ರ ಚಿತ್ರಣದ ಸೂಕ್ಷ್ಮತೆ, ಕರ್ಣನ ಪಾತ್ರಕ್ಕೆ ಜೀವ ತುಂಬುವ ವಿಶಿಷ್ಟ ಗುಣ ಇವುಗಳನ್ನು ಕುರಿತು ರಸವತ್ತಾಗಿ ಮಾತಾಡಿದ ಅವರು ಪಂಪನ ಕಾವ್ಯ, ಪಂಪನ ಕರ್ಣ, ಕರ್ಣನ ಪಾತ್ರವು ಹಾದು ಬರುವ ದಾರಿ, ಎದುರಿಸುವ ಸಂದರ್ಭಗಳು ಇಂದಿನ ಸಾಮಾಜಿ ಕ ಮತ್ತು ರಾಜಕೀಯ ಜೀವನದಲ್ಲಿಯೂ ಕಾಣಬಹುದು ಎಂದು ಅಭಿಪ್ರಾಯಪಟ್ಟರು.


ರಾಯಚೂರು ಆಕಾಶವಾಣಿ ಕೇಂದ್ರದ ನಿರ್ದೇಶಕರೂ, ಹಿರಿಯ ವಿದ್ವಾಂಸರೂ ಆದ ಡಾ. ಶರಭೇಂದ್ರಯ್ಯ ಬಿ.ಎಂ. ಅವರು ಪ್ರತಿಕ್ರಿಯೆ ನೀಡಿ ಸಂಸ್ಕೃತದ ಮೂಲ ಮಹಾಭಾರತ, ಪಂಪ ಭಾರತ ಮತ್ತು ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಇವುಗಳಲ್ಲಿ ಚಿತ್ರಿತಗೊಂಡ ಕರ್ಣನ ಪಾತ್ರವನ್ನು ತುಲನಿಕವಾಗಿ ಹೋಲಿಸಿ ಮಾತಾಡಿ, ಕರ್ಣನು ಬದುಕಿನಲ್ಲಿ ಹಂತಹಂತವಾಗಿ ಬೆಳೆಯುವ ಪರಿಯನ್ನು ವಿವರಿಸಿದರು.

ಇನ್ನೊಬ್ಬ ಹಿರಿಯ ವಿದ್ವಾಂಸರಾದ ಸಿಂಧನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದಪ್ರೊ. ಸಿ.ಬಿ. ಚಿಲ್ಕಾರಾಗಿ ಅವರು ಪ್ರತಿಕ್ರಿಯೆ ನೀಡಿ ಪಂಪನ ಕಾವ್ಯವು ಹೆಚ್ಚು ಜನಪದಕ್ಕೆ ಹತ್ತಿರವಾಗಿದ್ದು ಸಾಮಾನ್ಯರ ಬದುಕಿನ ಹತ್ತಿರಕ್ಕೆ ಬರುತ್ತದೆ ಮತ್ತು ಮಾನವೀಯ ಸಂಬಂಧಗಳನ್ನು ಒಳಗೊಂಡಿದೆ ಎಂದು ವಿವರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಮಹಾಂತೇಶ ಮಸ್ಕಿ ಅವರು ಹಳಗನ್ನಡ ಕಾವ್ಯವು ಮೌಲ್ಯಗಳನ್ನು ಬಿತ್ತರಿಸುವ ಮತ್ತು ಆ ಮೂಲಕ ಪ್ರಸ್ತುತ ಕಾಲಕ್ಕೆ ಸಾಮಾನ್ಯೀಕರಿಸಲು ಸಾಧ್ಯವಾಗುವ ಗುಣವಿಶೇಷ ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ. ಚಿದಾನಂದ ಸಾಲಿ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಮಾತಾಡಿ ಮಸ್ಕಿಯು ಸಾಂಸ್ಕೃತಿಕ ನೆಲೆಯಾಗಿದ್ದು ಇಂತಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮ ನಡೆಸುವುದು ಹೆಚ್ಚು ಅರ್ಥಪೂರ್ಣ ಎಂದು ಹೇಳಿದರು. ಅಕಾಡೆಮಿಯ ಕಡೆಯಿಂದ ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡುವ ಯೋಚನೆ ಇದೆ ಎಂದು ಹೇಳಿದರು.
ಬಂಡಾರ ಪ್ರಕಾಶನದ ಪ್ರಕಾಶಕರಾದ  ಪರಶುರಾಮ ಕೋಡಗುಂಟಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು.

Don`t copy text!