ನಮ್ಮಕುಟುಂಬ

ನಮ್ಮಕುಟುಂಬ

ಕೂಡು ಕುಟುಂಬದಲಿ ಬೆಳೆದೆ
ಎಲ್ಲರಲಿ ಒಂದಾಗುತ ಬಾಳಿದೆ
ರಾಜಕುಮಾರಿಯಂತೆ ನಲಿದಾಡಿದೆ
ಕಳೆದ ದಿನಗಳು ಮರಳಿ ಬಾರವು

ನನ್ನ ಅಜ್ಜ ನೇಗಿಲಯೋಗಿ
ನನ್ನ ಅಪ್ಪ ಕರ್ಮಯೋಗಿ
ಅಜ್ಜ ಶಿವ ಬಸವರ ಕಥೆ ಹೇಳುತಿದ್ದ
ಅಪ್ಪ ಕೃಷ್ಣ ಕ್ರಿಸ್ತರನು ಅರಹುತಿದ್ದ

ಅಜ್ಜಿಯ ನಿಷ್ಠೆ ರೂಢಿ ಪರಂಪರೆ
ನಮ್ಮ ವಿಚಾರಗಳಿಗೀಗ ಆಸರೆ
ಅವ್ವನ ಅಕ್ಷರ ಕಲೆಯ ಸಂಸ್ಕಾರ
ಮಕ್ಕಳಿಗೆ ಕಲಿಸಲು ನಮಗಾಧಾರ

ಮಾನವಜಾತಿ ಒಂದೇ ಎನುತ
ಪ್ರೀತಿ ಪ್ರೇಮಗಳ ತಿಳಿಸುತ
ತತ್ವಪದಗಳ ಅರ್ಥವ ಕಲಿಸುತ
ಜಾತಿಭೇದವನಡಗಿಸಿದರು

ಸತ್ಯ ಅಹಿಂಸೆಯೇ ಬೀಜಮಂತ್ರ
ನ್ಯಾಯ ನಿಷ್ಠುರತೆಯೇ ಆಚಾರ ತಂತ್ರ
ಕಠಿಣ ಶಿಕ್ಷೆಗೆ ಪಾತ್ರರು ನಾವು
ಶಿಕ್ಷಣದ ಮೊದಲ ಪಾಠ ಎಂದರವರು

ಪರಿಪಕ್ವ ಪರಿಪೂರ್ಣ ಜೀವನದ
ಮಧು ರಸಪಾನ ಮಾಡುತಲಿರುವ
ಮಕರಂದವನೇ ಕೊಡುತಿರುವ
ಜ್ಯೇಷ್ಠ ಶ್ರೇಷ್ಠ ಅಜ್ಜ ಅಜ್ಜಿಯರು ನಾವೀಗ

ಸಾಹಿತ್ಯ ಅಧ್ಯಾತ್ಮದ ಮಿಲನದಿ
ಓಂಕಾರ ಝೇಂಕಾರದ ನಾದದಿ
ಅತಿ ಆಶೆ ಪಡದೆ ಶಿವನಿತ್ತ ತುತ್ತಿನಲಿ ತೃಪ್ತಿಯ ಬದುಕು
ನಮ್ಮದು.

ರಚನೆ – ಅನ್ನಪೂರ್ಣ ಸು ಸಕ್ರೋಜಿ. ಪುಣೆ
8975323059

Don`t copy text!