ಲೇಖಕ ಚಂದ್ರಶೇಖರ್ ರಾವ್ ಅವರ ಕನಸು ಇಂದು ನನಸಾಗಿದೆ+ ಶ್ರೀದೇವಿ ಸಿ. ರಾವ್
e-ಸುದ್ದಿ ಮುಂಬಯಿ
ಏಳು ವರ್ಷಗಳ ಪ್ರಯತ್ನದಿಂದ ಮತ್ತು ಮುಂಬಯಿ ಚುಕ್ಕಿ ಸಂಕುಲ ಬಳಗದ ಪರಿಶ್ರಮ ಹಾಗೂ ಸಹಕಾರದಿಂದ ಈ ಕೃತಿ ಇಂದು ಲೋಕಾರ್ಪಣೆಗೊಂಡಿದೆ. ಚಂದ್ರಶೇಖರ ಅವರ ಈ ಹರಟೆ ಕೃತಿ ಬೆಳಕು ಕಾಣಲು ಸಹಕರಿಸಿದ ಚುಕ್ಕಿ ಸಂಕುಲದ ಕವಿ ಸಾ.ದಯಾ ಮತ್ತು ಇತರ ಎಲ್ಲರಿಗೂ ಧನ್ಯವಾದಗಳು.
ರಾವ್ ಅವರ ಇಚ್ಛೆಯಂತೆ ಟ್ರಸ್ಟ್ ನ್ನು ಮಾಡಿ ಅದನ್ನು ಮುಂದುವರೆಸಿಕೊಂಡು ಹೋಗಲು ತುಂಬಾ ಶ್ರಮ ವಹಿಸುತ್ತಿದ್ದೇವೆ. ಸಾರ್ಥಕತೆಯ ದಿನ ಇಂದು! ಈ ಸಾಹಿತ್ಯಕ ಒಡನಾಟ ನನಗೆ ಮತ್ತೊಂದು ಸೌಭಾಗ್ಯ ತಂದುಕೊಟ್ಟಿದೆ. ಎಂದು ಚಂದ್ರಶೇಖರ ಮೆಮೋರಿಯಲ್ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ
ಶ್ರೀದೇವಿ ಚಂದ್ರಶೇಖರ್ ರಾವ್ ಅವರು ಹೇಳಿದರು.
ಮುಂಬಯಿ ಚುಕ್ಕಿ ಸಂಕುಲ ಬಳಗದ ಸಹಯೋಗದೊಂದಿಗೆ ಮೇ.13 ರಂದು ಮಾಟು0ಗಾದ ಮೈಸೂರು ಅಸೋಸಿಯೇಷನ್ ನ ಕಿರು ಸಭಾಗೃಹದಲ್ಲಿ ಏರ್ಪಡಿಸಲಾಗಿದ್ದ ಚಂದ್ರಶೇಖರ್ ರವರ ಹರಟೆ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಾಸ್ತಾವಿಕ ಮತ್ತು ಸ್ವಾಗತ ಮಾತುಗಳನ್ನಾಡಿದ ಕವಿ ಗೋಪಾಲ ತ್ರಾಸಿ ಅವರು, ಚಂದ್ರಶೇಖರರಂತಹ ಸಹೃದಯ ಗೆಳೆಯನ ಕೃತಿ ಬಹಳ ವರ್ಷಗಳ ಹಿಂದೆಯೇ ಬರಬೇಕಿತ್ತು. ಆದರೆ ಸದಾ ಮತ್ತೊಬ್ಬರನ್ನು ಪ್ರೋತ್ಸಾಹಿಸುತ್ತಾ ಹುರುದುಂಬಿಸಿ ಹಾರೈಸುತ್ತಿದ್ದ ಕವಿಮಿತ್ರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನಾವು ಮುಂಬಯಿ ಚುಕ್ಕಿ ಸಂಕುಲದ ಗೆಳೆಯರೆಲ್ಲ ಅವರ ಪುಸ್ತಕ ಬಿಡುಗಡೆಯಾಗಲೇಬೇಕೆಂದು ಸದಾ ಅವರನ್ನು ಒತ್ತಾಯಿಸುತ್ತಿದ್ದೆವು. ಎಂದು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.
ಮಡಿಕೇರಿಯ ಲೇಖಕಿ,ಉಪನ್ಯಾಸಕಿ ಜಯಲಕ್ಷ್ಮಿ ಕೆ. ಅವರು ಹರಟೆ ಕೃತಿಯನ್ನು ಬಿಡುಗಡೆಗೊಳಿಸಿ, ರಂಗತಜ್ಞ, ಸಾಹಿತಿ ಸಾ.ದಯಾ ಅವರ ಸಂಪಾದಕತ್ವದಲ್ಲಿ ಹರಟೆ ಕೃತಿ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಬಹುಮುಖ ಪ್ರತಿಭೆ ನೆನಪಿನ ಗುರುತನ್ನು ಈ ಬರಹಗಳ ಮೂಲಕ ಬಿಟ್ಟುಹೋಗಿದ್ದಾರೆ. ತಾನು ಬೆಳೆಯುವುದನ್ನು ಬದಿಗಿರಿಸಿ ಇನ್ನೊಬ್ಬರ ಏಳಿಗೆಗೆ ಶ್ರಮಿಸಿದ ಚಂದ್ರಶೇಖರ್ ರವರು ಸದಾ ಸ್ಮರಣೀಯರು. ಪುಸ್ತಕ ಬಿಡುಗಡೆಗೆ ತೆರೆಮರೆಯಲ್ಲಿ ಬಹಳಷ್ಟು ಶ್ರಮಿಸಿದ ಮುಂಚುಸಂ ಬಳಗಕ್ಕೆ ಅಭಿನಂದನೆಗಳ ಜೊತೆಗೆ ಧನ್ಯವಾದಗಳು. ನಾವು ಸದಾ ಮನುಷ್ಯ ಪ್ರೀತಿಗೆ ಮೊದಲ ಆದ್ಯತೆ ಕೊಡೋಣ. ಸಾಹಿತ್ಯದ ಮೂಲಕ ಅದು ಸಾಧ್ಯ. ಟ್ರಸ್ಟ್ ನ ವತಿಯಿಂದ ಮುಂದೆಯೂ ಹೀಗೆಯೇ ಸಾಹಿತ್ಯಪರ ಚಟುವಟಿಕೆಗಳು ಸಾಗುತ್ತಿರಲಿ ಎಂದು ಹಾರೈಸಿದರು.
ಹರಟೆ ಕೃತಿಯ ಪರಿಚಯ ಮಾಡಿದ ಹಿರಿಯ ಸಾಹಿತಿ ಡಾ.ದಾಕ್ಷಾಯಣಿ ಯಡಹಳ್ಳಿ ಅವರು ನಗುಮುಖದ ಚಂದ್ರಶೇಖರ್ ರವರು ಹಾಸ್ಯ ಬರಹದಲ್ಲಿ ಸಿದ್ಧಹಸ್ತರು. ಇಂದು ಬಿಡುಗಡೆಗೊಂಡ ಅವರ ಕೃತಿಯಲ್ಲಿ ಸಮಾಜದ ಆಗುಹೋಗುಗಳು, ಜನಸಾಮಾನ್ಯರು, ರಾಜಕೀಯ ಧುರೀಣರ ಸ್ವಭಾವಗಳನ್ನು ಅನಾವರಣ ಮಾಡಿದ್ದಾರೆ. ಜೊತೆಗೆ ಲೇಖಕನ ಅನುಭವದ ಪಯಣವು ಇಲ್ಲಿ ಅಕ್ಷರರೂಪ ಕಂಡಿದೆ. ನೊಂದವರಿಗೆ ಅನುಕಂಪವುಳ್ಳ ಇವು ಕೇವಲ ಹರಟೆಗಳಲ್ಲ!.ಇಲ್ಲಿನ ಬರಹಗಳಿಗೆ ನಿರ್ದಿಷ್ಟ ಸ್ಥಾನವಿದೆ. ವ್ಯಕ್ತಿಚಿತ್ರಣವಿದೆ.ಮನುಷ್ಯ ಅವಕಾಶವಾದಿ ಎಂಬ ಮಾರ್ಮಿಕ ಸತ್ಯವನ್ನು ಅವರು ತೆರೆದಿಟ್ಟಿದ್ದಾರೆ ಎಂದು ಕೃತಿಯ ಬಗ್ಗೆ ತಿಳಿಸಿದರು.
ನಂತರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತಿ ಡಾ. ಜಿ ಪಿ ಕುಸುಮಾ ಅವರು ಮಾತನಾಡುತ್ತಾ , ಕವಿತೆ ಯಾವಾಗಲೂ ಜೀವಂತವಾಗಿರಬೇಕು. ಕವಿಯೊಬ್ಬ ವಾಚಿಸಿದ ಕವನದ ಒಂದೆರಡು ಸಾಲುಗಳಾದರೂ ಧೀರ್ಘ ಕಾಲದ ನಂತರವೂ ಸಹೃದಯ ಕೇಳುಗನ ಮನದಲ್ಲಿ ಇದ್ದರೆ ಆ ಕವಿತೆ ಗೆದ್ದಂತೆ. ಅದಕ್ಕಿಂತ ದೊಡ್ಡ ಪ್ರಶಸ್ತಿ ಬೇರೆ ಯಾವುದೂ ಇಲ್ಲ. ಕವನ ಮತ್ತು ಕವಿತೆಗಳಿಗೆ ಇರುವ ವ್ಯತ್ಯಾಸ, ವಾಚನ ಮಾಡುವ ಕವಿತೆಗಳು, ಹಾಡುವ ಕವಿತೆಗಳು ಹೀಗೆ ವಿವರಿಸುತ್ತಾ ಕುಸುಮ ಅವರು, ಹೊಸ ಕವಿಗಳು ಹಿರಿಯ ಕವಿಗಳ ಬರಹ, ಕವಿತೆಗಳನ್ನು ಓದಬೇಕು. ಪ್ರಶಸ್ತಿಯ ಹಿಂದೆ ಬೀಳದೆ ಶೃಮಪಟ್ಟು ಸಾಧನೆ ಮಾಡುವತ್ತ ಮೊದಲು ಗಮನ ಹರಿಸಬೇಕು ಎಂದು ನುಡಿದರು.
ಜಯಲಕ್ಷ್ಮಿ ಕೆ. ಮಡಿಕೇರಿ , ಶ್ವೇತಾ ಎಂ.ಯು. ಮಂಡ್ಯ, ಸುಜಾತ ಶೆಟ್ಟಿ, ದೀಪಾ ಶೆಟ್ಟಿ, ದಿನಕರ ಚಂದನ, ಕುಮುದಾ ಶೆಟ್ಟಿ, ಲಲಿತಾ ಅಂಗಡಿ, ವಿಶ್ವೇಶ್ವರ ಮೇಟಿ, ರಶ್ಮಿ ಭಟ್, ಸುಜ್ಞಾನಿ ಬಿರಾದಾರ್, ಕುಸುಮ ಅಮೀನ್ ಮತ್ತು ಸರೋಜಾ ಅಮಾತಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಚಂದ್ರಶೇಖರ್ ರಾವ್ ರವರ ಬಂಧುಗಳು, ಹಿತೈಷಿಗಳು, ಮಿತ್ರವೃಂದ ಮತ್ತು ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಆರಂಭದಲ್ಲಿ ಸುಶೀಲಾ ದೇವಾಡಿಗ ಪ್ರಾರ್ಥನೆಗೈದರು. ರಂಗಕರ್ಮಿ, ಸಾಹಿತಿ ಗೋಪಾಲ ತ್ರಾಸಿ ಕೃತಿ ಬಿಡುಗಡೆಯ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರೆ, ಸರೋಜಾ ಅಮಾತಿ ಕವಿಗೋಷ್ಠಿಯನ್ನು ನಿರೂಪಿಸಿದರು. ಕೊನೆಯಲ್ಲಿ ಕುಸುಮ ಅಮೀನ್ ವಂದನಾರ್ಪಣೆಗೈದರು.
ಭೀಮರಾಯ್ ಚಿಲ್ಕ ಸಹಕರಿಸಿದರು.
ವರದಿ:ಸರೋಜಾ ಎಸ್.ಅಮಾತಿ.ಮುಂಬೈ
9769843865