ಶರಣರ ಕಾಯಕ ತತ್ವ

ಶರಣರ ಕಾಯಕ ತತ್ವ

ವಿಶ್ವಗುರು ಬಸವಣ್ಣನವರು ಹಾಗೂ ಬಸವಾದಿ ಶರಣರು. ಗುರು ವ್ಯಕ್ತಿಯಲ್ಲ, ಲಿಂಗ ವಸ್ತುವಲ್ಲ ಜಂಗಮ ಜಾತಿ ಅಲ್ಲ ಎಂದು ಹೇಳುವ ಮೂಲಕ ನವ ಧರ್ಮದ ಹೊಸ ಅಧ್ಯಾಯವನ್ನೇ ಪ್ರಾರಂಭಿಸಿದರು. ವರ್ಣ, ವರ್ಗ, ಜಾತಿ, ಧರ್ಮ, ಹಾಗೂ ಲಿಂಗ ಆಧಾರದಲ್ಲಿ ಸಮಾಜದಲ್ಲಿ ಶ್ರೇಣೀಕೃತ ವ್ಯವಸ್ಥೆಯನ್ನು ಹುಟ್ಟು ಹಾಕಿ, ದೀನ ದಲಿತರ, ಬಡವರ, ಶೋಷಿತರ, ಮಹಿಳೆಯರ, ಅಲ್ಪಸಂಖ್ಯಾತರ ಹಾಗೂ ಕೆಳ ಅಂಚಿನಲ್ಲಿ ಇರುವ ಎಲ್ಲರನ್ನೂ ಉಸಿರುಗಟ್ಟಿಸುವ ಜಡ ವ್ಯವಸ್ಥೆಯಲ್ಲಿ ಬದುಕುವಂತೆ ಮಾಡಿದ ವೈದಿಕ ಆಚರಣೆಗಳನ್ನು ಮೆಟ್ಟಿನಿಂತು ಸಾಮಾಜಿಕ ಕ್ರಾಂತಿಗೆ ದಾರಿದೀಪವಾದರು.
ಶರಣರು ಸಮಸಮಾಜವನ್ನು ಹುಟ್ಟು ಹಾಕುವದರ ಮೂಲಕ ಎಲ್ಲರಿಗೂ ಆಧ್ಯಾತ್ಮದ ಪ್ರಸಾದವನ್ನು ನೀಡಿದರು. ವಿಶ್ವಧರ್ಮ, ಮಾನವತಾವಾದದ ಹರಿಕಾರರೂ ಸಂಸ್ಥಾಪಕರೂ ಆದ ಗುರು ಬಸವಣ್ಣನವರು ಅರಿವೇ ಗುರು ಆಚಾರವೇ ಲಿಂಗ ಅನುಭವವೇ ಜಂಗಮ ಎಂಬ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದರು. ದಯವೇ ಧರ್ಮದ ಮೂಲತವಯ್ಯ ಎಂದು ಹೇಳುವ ಮೂಲಕ ಸಕಲ ಜೀವಿಗಳ ಹಿತ ಬಯಸಿದರು. ಕಾಯಕ ಹಾಗೂ ದಾಸೋಹ ಎಂಬ ಅದ್ಬುತ ಪರಿಕಲ್ಪನೆಯನ್ನು ಬಿತ್ತಿ, ನೈಜ ಜೀವನದಲ್ಲಿ ಅಳವಡಿಸಿಕೊಂಡು ಸಮಸಮಾಜವನ್ನು ನಿರ್ಮಿಸಿದರು.
ದಾನ ಎಂಬ ವೈದಿಕ ಪರಿಕಲ್ಪನೆಯನ್ನು ತಿರಸ್ಕರಿಸಿ ದಾಸೋಹ ಎಂಬ ಸಮಷ್ಠಿಭಾವವನ್ನು ಮೈಗೂಡಿಸಿದರು. ಕರ್ಮ ಎಂಬ ಸಂಕೋಲೆಯನ್ನ ಕಿತ್ತು ಹಾಕಿ, ಕಾಯಕ ಎಂಬ ಪರಿಕಲ್ಪನೆಯ ಮೂಲಕ ಶ್ರಮಗೌರವನ್ನು, ವೃತ್ತಿ ಗೌರವವನ್ನು ಎತ್ತಿಹಿಡಿಯುವ ಮೂಲಕ ವ್ಯಕ್ತಿಗೌರವನ್ನು ತಂದುಕೊಟ್ಟರು. ಶರಣರು ಪ್ರಾಪಂಚಿಕ ಬದುಕಿನಲ್ಲಿ ಪಾರಮಾರ್ಥಿಕ ಮೌಲ್ಯಗಳನ್ನು ಕಂಡುಕೊಂಡವರು. ಸತ್ಯ ಶುದ್ಧ ಕಾಯಕ ಪ್ರಸ್ತುತಪಡಿಸಿದ್ದಾರೆ. ಕಾಯಕ ದಾಸೋಹದ ಮೂಲಕ ಬದುಕಿಗೆ ಹೊಸ ಪರಿಕಲ್ಪನೆ ತಂದುಕೊಟ್ಟರು.
ಇಡೀ ಬ್ರಹ್ಮಾಂಡವು ಕಾಯಕ ತತ್ವದ ಮೇಲೆ ನಿಂತಿದೆ. ನಿಸರ್ಗದಲ್ಲಿ ಒಂದು ಮರ ಕೂಡ ಕಾಯಕ – ಪ್ರಸಾದ-ದಾಸೋಹ ತತ್ವವನ್ನು ಪಾಲಿಸುವಾಗ ನರರಿಗೇಕೆ ಸಾಧ್ಯವಾಗದು ಎಂದು ಬಸವಧರ್ಮ ಪ್ರಶ್ನಿಸುತ್ತದೆ. ಕಾಯಕವು ನಮ್ಮ ದೈಹಿಕ ಮತ್ತು ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುವುದು. ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುವುದು. ಮಾನಸಿಕ ಒತ್ತಡಗಳಿಂದ ರಕ್ಷಿಸುವುದು. ಪರಾವಲಂಬಿಗಳಾಗದಂತೆ ನೋಡಿಕೊಳ್ಳುವುದು. ಕೊನೆಗೆ ನಮ್ಮನ್ನು ಸ್ವತಂತ್ರಧೀರರನ್ನಾಗಿ ಮಾಡುವುದು. “ಕೂಡಲಸಂಗನ ಶರಣರು ಸ್ವತಂತ್ರ ಧೀರರು” ಎಂದು ಬಸವಣ್ಣನವರು ಹೇಳುತ್ತಾರೆ. ಕಾಯಕ ಮಾಡದವನಿಗೆ ಹಸಿವು,ರುಚಿ ವಿಶ್ರಾಂತಿ ಮತ್ತು ನಿದ್ರೆಯ ಮಹತ್ವ ಗೊತ್ತಾಗುವುದಿಲ್ಲ. ಕಾಯಕ ಜೀವಿಯ ಹಸಿವು ಎಲ್ಲ ಆಹಾರ ಪದಾರ್ಥಗಳನ್ನು ಪ್ರಸಾದವಾಗಿಸುತ್ತದೆ. ರುಚಿಕರವಾಗಿಸುತ್ತದೆ. ಆತನಿಗೆ ವಿಶ್ರಾಂತಿ ಮತ್ತು ನಿದ್ರೆಯ ಸುಖ ಸಹಜವಾಗಿಯೇ ಸಿಗುತ್ತದೆ. ಸತ್ಯ ಶುದ್ಧ ಕಾಯಕದಿಂದ ಮನಸ್ಸು ಪವಿತ್ರವಾಗಿರುತ್ತದೆ. ಆದ್ದರಿಂದ ಕಾಯಕ ತತ್ವವು ವಿಶ್ವಮಾನ್ಯವಾಗಿದೆ.

ಕಾಯಕ ಸಿದ್ಧಾಂತ
ದೇಹವನ್ನೇ-ದೇವಾಲಯವನ್ನಾಗಿ ಮಾಡಿದ್ದು ಶರಣರ ಧಾರ್ಮಿಕ ಸಿದ್ಧಾಂತವಾದರೆ, ಕಾಯದಿಂದಲೇ ಕಾಯಕವನ್ನು ಕಟ್ಟಿದ್ದು ಅವರ ಸಾಮಾಜಿಕ ಸಿದ್ಧಾಂತವಾಗಿದೆ. ಚಾತುರ್ವರ್ಣ ವ್ಯವಸ್ಥೆಯ ಕರ್ಮಸಿದ್ಧಾಂತಕ್ಕೆ ಪರ್ಯಾಯವಾಗಿ ಶರಣರು ಕಾಯಕ ಸಿದ್ದಾಂತವನ್ನು ಕಟ್ಟಿದರು. ಕರ್ಮ ವಿಭಜನೆಯ ಮೂಲಕ ಜಾತಿವ್ಯವಸ್ಥೆಯನ್ನು ಹುಟ್ಟುಹಾಕಿದ್ದ ವರ್ಣವ್ಯವಸ್ಥೆಯನ್ನು ವಿರೋಧಿಸಿದ ಅವರು ಕಾಯಕ ಸಿದ್ಧಾಂತದ ಮೂಲಕ ಜಾತಿಯ ತಾರತಮ್ಯವನ್ನು ಹೋಗಲಾಡಿಸಿದರು. ಹೀಗಾಗಿ ಕಾಯಕ ಸಿದ್ಧಾಂತವು ಕೇವಲ ಕೆಲಸ-ದುಡಿಮೆಗೆ ಮಾತ್ರ ಸಂಬಂಧಿಸಿರದೆ, ಅದು ಜಾತಿವಿನಾಶದ ಪ್ರಬಲ ಅಸ್ತ್ರವೂ ಆಯಿತೆಂಬುದನ್ನು ಮರೆಯುವಂತಿಲ್ಲ.“ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ” ಎಂಬ ಬಸವಣ್ಣನವರ ವಚನದಲ್ಲಿ ಈ ಸೈದ್ಧಾಂತಿಕ ಸ್ಪಷ್ಟತೆಯಿದೆ. ಶರಣರ ವಚನಗಳಲ್ಲಿ ಜಾತಿನಿರಸನ ಸಿದ್ಧಾಂತವಿದೆ. ಹೀಗಾಗಿ ಕಾಯಕವೆಂದರೆ ಕೇವಲ ದುಡಿಯುವ, ಕೆಲಸ ಮಾಡುವ ವಿಷಯಕ್ಕೆ ಮಾತ್ರ ಸಂಬಂಧಿಸಿರದೆ, ಅದು ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಕಾರಣವಾಯಿತೆಂಬುದನ್ನು ಮರೆಯುವಂತಿಲ್ಲ. ಜಾತಿನಿರ್ಮೂಲನೆ ಮಾಡುವ ಸಂದರ್ಭದಲ್ಲಿ ಕಾಯಕದಂತಹ ಮೌಲ್ಯ ಬಹುದೊಡ್ಡ ಅಸ್ತ್ರವಾಗಿದೆ.

ವಚನಕಾರರ ದೃಷ್ಠಿಯಿಂದ ಕಾಯಕ ಮತ್ತು ಕರ್ಮಗಳಲ್ಲಿ ಅಪಾರ ವ್ಯತ್ಯಾಸವಿದೆ. ಕಾಯಕ ಸಿದ್ಧಾಂತ ಚೈತನ್ಯದ ಪ್ರತೀಕವಾದರೆ ಕರ್ಮವು ಜಡತ್ವದ ಪ್ರತೀಕವಾಗಿದೆ. ಕಾಯಕ ಜನಸಂಸ್ಕೃತಿಯ ಪರವಾದರೆ ಕರ್ಮಶಾಸ್ತ್ರ ದಾಸ್ಯದ ಪರವಾಗಿದೆ. ಕಾಯಕ ಸಿದ್ಧಾಂತಕ್ಕೆ ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡುವ ಶಕ್ತಿ ಇದೆ. ಈ ಪೃಥ್ವಿಯನ್ನು ಬದುಕಲು ಹೆಚ್ಚು ಹೆಚ್ಚು ಯೋಗ್ಯಗೊಳಿಸುವ ಆಶಯವಿದೆ. ಕಾಯಕದ ಮೂಲಕ ಸ್ವತಂತ್ರನಾಗುತ್ತಾನೆ. ಪರಾವಲಂಬಿ ಜೀವನದಿಂದ ವ್ಯಕ್ತಿತ್ವವೇ ಕುಬ್ಜವಾಗುತ್ತದೆ. ಕಾಯಕವು ಆತ್ಮಗೌರವವನ್ನು ರಕ್ಷಿಸುತ್ತದೆ. ಆದ್ದರಿಂದ ವಚನಗಳು ಸಾರಿ ಸಾರಿ ಹೇಳುತ್ತಿವೆ ಕಾಯವೇ ಕೈಲಾಸ, ಕಾಯಕವೇ ಕೈಲಾಸ ಎಂದು. ಹೀಗೆ ಶರಣ ಪರಂಪರೆಯು ಜಗತ್ತಿನಲ್ಲಿಯೇ ಶ್ರಮ ಸಂಸ್ಕೃತಿಗೆ ಹೆಚ್ಚಿಗೆ ಮಹತ್ವ ಜಗತ್ತಿನ ಮೊಟ್ಟ ಮೊದಲ ವ್ಯವಸ್ಥೆಯಾಗಿದೆ.
ಶ್ರಮಜೀವನದ ಶ್ರೇಷ್ಠತೆಯನ್ನು ಸಂಸ್ಥಾಪಿಸುವ ಸಲುವಾಗಿ, ವೃತ್ತಿ ಗೌರವವನ್ನು ಕಾಪಾಡುವ ಸಲುವಾಗಿ, ಸಮಾಜದ ಐಕ್ಯವನ್ನು ಸುಭದ್ರಗೊಳಿಸುವ ಸಲುವಾಗಿ, ಸಂಪತ್ತನ್ನು ವೃದ್ಧಿಗೊಳಿಸಲು ಸಂಪನ್ಮೂಲಗಳ ಸಮರ್ಥ ಬಳಕೆಗಾಗಿ ಕಾಯಕ ಸಿದ್ಧಾಂತಕ್ಕೆ ಒತ್ತುಕೊಟ್ಟರು
ಕಾಯಕ ತತ್ವವನ್ನು ವ್ಯಾಖ್ಯಾನಿಸಿದ ಈ ಕೆಳಗಿನ ವಚನದಲ್ಲಿ ಮಾರಯ್ಯನ ವಿಚಾರಶ್ರೇಣೆಯನ್ನು ಅರ್ಥಗರ್ಭಿತವಾಗಿ ನಿರೂಪಿಸಲಾಗಿದೆ.
ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದಡೂ ಮರೆಯಬೇಕು
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು.”
ಎಂದು ಆಯ್ದಕ್ಕಿ ಮಾರಯ್ಯ ಹೇಳುವಲ್ಲಿ ಕಾಯಕದ ಮಹತ್ವ ಪರಾಕಾಷ್ಠೆಯನ್ನು ತಲುಪುತ್ತದೆ.
ಜಗತ್ತಿನ ಪ್ರಗತಿಪರ ರಾಷ್ಟ್ರಗಳಾದ ಜಪಾನ, ಜರ್ಮನಿ ಮೊದಲಾದ ದೇಶಗಳು ಈ ತತ್ವವನ್ನು ಎತ್ತಿಕೊಂಡು ಕೃತಿಗಿಳಿಸಿರುತ್ತವೆ. ದಾರುಣ ದುರಂತವೆಂದರೆ ಯಾವ ನೆಲದಲ್ಲಿ ಈ ಸಿದ್ಧಾಂತವು ವ್ಯಕ್ತಗೊಂಡಿದೆಯೋ ಅಲ್ಲಿಯೇ ಇಂದು ನಿರುದ್ಯೋಗದ ತಾಂಡವ ನೃತ್ಯ ನಡೆದಿದೆ. ಇದಕ್ಕಿಂತ ವಿಪರೀತ ವಿಪರ್ಯಾಸ ಇನ್ನೊಂದುಂಟೇ? ರಾಷ್ಟ್ರದ ಪ್ರಗತಿಗೆ ಸಂಪನ್ಮೂಲಗಳೇ ಕಾರಣ ಈ ಸಂಪನ್ಮೂಲಗಳು ಹೆಚ್ಚಾಗಬೇಕಾದರೆ ಪ್ರತಿಯೊಬ್ಬರು ದುಡಿಯಲೇಬೇಕು. ಈ ದುಡಿತದಿಂದ ಜಡತ್ವ ತೊಲಗಿ, ಚೈತನ್ಯ ಹೊರಹೊಮ್ಮುತ್ತದೆ.
ಕಾಯಕವೇ ಪ್ರತಿಯೊಬ್ಬರ ಜೀವನದ ಕರ್ತವ್ಯವಾಗಬೇಕು ಈ ಕಾಯಕದಲ್ಲಿ ಮೇಲು ಕೀಳುಗಳಿರುವುದಿಲ್ಲ. ಮಾನವನಲ್ಲಿ ಸುಪ್ತವಾಗಿರುವ ವಿವಿಧ ಕ್ರಿಯಾಶಕ್ತಿಯನ್ನು ಉತ್ತಮಗೊಳಿಸಿ, ಅದರಿಂದ ತನಗೂ ಉಳಿದವರಿಗೂ ಸೊಗಸುಂಟಾಗುವಂತೆ ಮಾಡುವ ಕಲೆಯೇ ಕಾಯಕ. ಮಾನವನ ಭವಿಷ್ಯತ್ತಿಗೆ “ಜ್ಞಾನೋದಯದ ಕಣ್ಣು ಕಾಯಕದ ಕೈ” ಇದ್ದಂತೆ ವೃತ್ತಿ ಎಂಬ ಸಾಮಾನ್ಯ ಅರ್ಥ ಕಾಯಕಕ್ಕಿದ್ದರೂ ಅದನ್ನೊಂದು ಜೀವನ ಮೌಲ್ಯವನ್ನಾಗಿ ಮಾಡಿದವರು 12 ನೇ ಶತಮಾನದ ಶರಣರು. ಎಲ್ಲರೂ ದುಡಿಯಬೇಕು ಜೀವನದ ನಿರ್ವಹಣೆಗೆ ಸತ್ಯಶುದ್ಧವಾದ ಕಾಯಕವೊಂದಿರಲೇಬೇಕು. ನಡೆಸುವ ಕಾಯಕದಲ್ಲಿ ಮೋಸ ವಂಚನೆಗಳಿರಕೂಡದು ಕಾಯಕ ತತ್ವದಲ್ಲಿ ಸರ್ವರೂ ಸಮಾನರು. ಯಾರ ಹಂಗೂ ಇಲ್ಲದೇ, ಯಾರೊಡನೆ ಹೋರಾಟವೂ ಇಲ್ಲದೇ ಜೀವನವನ್ನೇ ಕೈಲಾಸವನ್ನಾಗಿ ಮಾಡುವ ಕ್ರಿಯಾತ್ಮಕ ತಪಸ್ಸೆ ಕಾಯಕ.
ನಾನು ಆರಂಭವ ಮಾಡುವೆನಯ್ಯಾ ಗುರುಪೂಜೆಗೆಂದು
ನಾನು ಬೆವಹಾರವ ಮಾಡುವೆನಯ್ಯಾ ಲಿಂಗಾರ್ಚನೆಗೆಂದು
ನಾನು ಪರಸೇವೆಯ ಮಾಡುವೆನಯ್ಯಾ ಜಂಗಮದಾಸೋಹಕ್ಕೆಂದು
ನಾನಾವಾವ ಕರ್ಮಂಗಳ ಮಾಡಿದಡೆಯೂ
ಆ ಕರ್ಮ ಫಲಭೋಗವ ನೀಕೊಡುವೆಯೆಂಬುದ ನಾ ಬಲ್ಲೆನು
ನೀ ಕೊಟ್ಟ ದ್ರವ್ಯವ ನಿಗಲ್ಲದೆ ಮತ್ತೊಂದು ಕ್ರೀಯ ಮಾಡೆನು
ನಿಮ್ಮ ಸೊಮ್ಮಿಂಗೆ ಸಲ್ಲಿಸುವೆನು ನಿಮ್ಮಾಣೆ, ಕೂಡಲ ಸಂಗಮ ದೇವಾ.
–ಬಸವಣ್ಣನವರು
ನಾನು ಒಕ್ಕುಲತನ ಮಾಡುವೆ ; ಅದರ ಆದಾಯ ಗುರುಪೂಜೆಗೆ ಸಲ್ಲುವುದೆಂದು, ವ್ಯಾಪಾರವನ್ನು ಮಾಡುವೆ ; ಅದರ ಸಂಪಾದನೆ ಲಿಂಗಪೂಜೆಗೆ ಅನುವು ಮಾಡಿ ಕೊಡುವುದೆಂದು. ಬೇರೆಯವರ ಬಳಿ ಉದ್ಯೋಗವ ಮಾಡುವೆ, ಬರುವ ಆದಾಯವನ್ನು ಜಂಗಮ ಸೇವೆಗೆ ವಿನಿಯೋಗ ಮಾಡಬಹುದೆಂದು. ಯಾವ ಉದ್ಯೋಗ ಮಾಡಿದರೆ ಏನಂತೆ ಅದರ ಆದಾಯವನ್ನು ನಾನು ನಿಮ್ಮ ಕೆಲಸಗಳಿಗೆ ಬಳಸುವನೇ ವಿನಾ ದೈವೀ ಜೀವನಕ್ಕೆ ಹೊರತಾದ ಕೆಲಸಗಳಿಗೆ ಬಳಸುವುದಿಲ್ಲ ಹೀಗೆ ವಚನದಲ್ಲಿ ಸತ್ಯ ಶುದ್ಧ ಕಾಯಕದಿಂದ ಬಂದ ಹಣ ಪವಿತ್ರವಾದುದು ಎಂದು ಹೇಳುವುದರ ಮೂಲಕ ಕಾಯಕದ ಮಹತ್ವ ತಿಳಿಸಿದ್ದಾರೆ.
ಅಣ್ಣ ಬಸವಣ್ಣನವರು ಎಲ್ಲರಿಗೂ ಕಾಯಕತತ್ವ ನೀಡಿ, ಆರ್ಥಿಕ ಭದ್ರತೆಗೂ, ನಿರುದ್ಯೋಗಕ್ಕೂ ಅಂದೇ ಪರಿಹಾರ ಸೂಚಿಸಿದ್ದಾರೆ. ಶರಣರ ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ದುಡಿಮೆಯೇ ಪರಿಪೂರ್ಣತೆಯ ಮಾರ್ಗವೆಂದು ತಿಳಿಸಿ ದುಡಿಮೆಯ ಗೌರವವನ್ನು ಹೆಚ್ಚಿಸಿದರು. ಕಾಯಕದ ಶ್ರಮ ಸಂಸ್ಕೃತಿಯನ್ನು ದೈವತ್ವಕ್ಕೇರಿಸಿದರು.
ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ,
ಏಡಿಸಿ ಕಾಡಿತ್ತು ಶಿವನ ಡಂಗುರ,
ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ,
ಮಾಡಿದೆನೆಂಬುದು ಮನದಲ್ಲಿಲ್ಲದಿದ್ದಡೆ,
ಬೇಡಿತ್ತನೀವನು ಕೂಡಲಸಂಗಮದೇವ.
– ಬಸವಣ್ಣ
ಯಾವುದೇ ಕಾರ್ಯ ಮಾಡಿದರೂ ಅದರಲ್ಲಿ ನಿಷ್ಠೆ ಪ್ರಾಮಾಣಿಕತೆ ಅತ್ಯವಶ್ಯಕ ತಾ ಮಾಡಿದೆನೆಂಬುದು ಮನದಲ್ಲಿ ಕೂಡ ಹೊಳೆಯಬಾರದು. ದುಡಿಮೆ ಮತ್ತು ಆರಾಧನೆ ಎರಡರ ಸಮನ್ವಯೇ ಕಾಯಕ ಎಂದಿರುವರು ವಚನಕಾರರು
ಕಾಯಕದಿಂದ ಇಹಲೋಕವೇ ಕೈಲಾಸವಾಗುವುದು. ಕಾಯಕದಲ್ಲಿ ಮಾದಾರ ಚೆನ್ನಯ್ಯ ತನಗಿಂತ ಶ್ರೇಷ್ಠ ಎಂದು ಅವರನ್ನು ಪುರಸ್ಕರಿಸಿದರು. ಮಾದರ ಚೆನ್ನಯ್ಯನ ಚಮ್ಮಾವುಗೆಯ ಕಾಯಕ ಕೀಳಲ್ಲ, ಚೋಳರಸನ ವೈಭವದ ಆರಾಧನೆ ಮೇಲಲ್ಲ ಎಲ್ಲವೂ ಕಾಯಕದ ದೃಷ್ಠಿಯಲ್ಲಿ ಒಂದೇ ಎಂದು ಸಾರಿದರು. ಹೀಗೆ ವೃತ್ತಿ ಸಮಾನತೆಯನ್ನು ಎತ್ತಿ ಹಿಡಿದರು.
ನಮ್ಮ ದೇಶದ ಪ್ರಮುಖ ಆರ್ಥಿಕ ಸಮಸ್ಯೆಗಳಿಗೆ ಬಡತನ, ನಿರುದ್ಯೋಗ ಮುಂತಾದವುಗಳಿಗೆ ಪರಿಪೂರ್ಣ ಪರಿಹಾರ ಶರಣ ತತ್ವದಲ್ಲಿದೆ. : ಆಳಾಗಿ ದುಡಿಯಬಲ್ಲವ ಅರಸನಾಗಿ ಉಣಬಲ್ಲ” ಎಂಬ ಗಾದೆಯನ್ನು ಬಸವಣ್ಣನವರು ತತ್ವಮಯ ಅಲ್ಲದೆ ಪ್ರಯೋಗಮಯವನ್ನಾಗಿ ಮಾಡಿದ್ದಾರೆ.
ಒಟ್ಟಿನಲ್ಲಿ ಶರಣರು ತಿಳಿಸಿದಂತೆ ಕಾಯಕ ನಮ್ಮ ಸಮಾಜದಲ್ಲಿ ಅಳವಡಿಸಿದರೆ ಬ್ರಷ್ಟಾಚಾರ, ಬಡತನ, ನಿರುದ್ಯೋಗ ಇಲ್ಲದ ಸಮಾಜ ಕಟ್ಟಲು ಸಾಧ್ಯ.
ವಿನೋಬಾ ಭಾವೆಯವರು ಕಾಯಕ ತತ್ವ ಬಹುವಾಗಿ ಮೆಚ್ಚಿ ನಮ್ಮಲ್ಲಿ ಸುಧಾರಣೆ ಯುಗ 12 ನೇ ಶತಮಾನದಲ್ಲಿಯೇ ಪ್ರಾರಂಭವಾಯಿತು ಎಂದಿದ್ದಾರೆ.
ಖ್ಯಾತ ಕಾಯಕಜೀವಿಯಾದ ಶಿವಶರಣ ನುಲಿಯ ಚಂದಯ್ಯ ತನ್ನ ವಚನದಲ್ಲಿ ಈ ರೀತಿಯಾಗಿ ಹೇಳುತ್ತಾರೆ
ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.
ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು.
ಗುರುವಾದಡೂ ಚರಸೇವೆಯ ಮಾಡಬೇಕು.
ಲಿಂಗವಾದಡೂ ಚರಸೇವೆಯ ಮಾಡಬೇಕು.
ಜಂಗಮವಾದಡೂ ಚರಸೇವೆಯ ಮಾಡಬೇಕು
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು. / 21

ಶರಣ ಸಿದ್ಧಾಂತದಲ್ಲಿ ಗುರು ಎಂದರೆ ವ್ಯಕ್ತಿಯಲ್ಲ, ಲಿಂಗ ಎಂದರೆ ವಸ್ತು ಅಲ್ಲ, ಜಂಗಮ ಎಂದರೆ ಜಾತಿ ಅಲ್ಲ. ಗುರು ಅರಿವಿನ ಸಂಕೇತ, ಅರಿವೇ ಗುರು, ಲಿಂಗವು ಆಚಾರದ ಸ್ವರೂಪಿಯಾಗಿದೆ, ಅರುವಿನೊಂದಿಗೆ ನಡೆಸುವ ಅನುಸಂಧಾನಕ್ಕೆ ಲಿಂಗ ಸಾಧನವಾಗಿದೆ. ಅರಿವಿನ ಜ್ಯೋತಿ ಆಗಿದೆ. ಆದ್ದರಿಂದ ಆಚಾರವೇ ಲಿಂಗ, ಲಿಂಗವೆಂಬುದು ದೇವರಲ್ಲ. ಭಕ್ತನ ಆತ್ಮದ ಚೈತನ್ಯ ಸ್ವರೂಪದ ಲಾಂಛನ. ಇಂಥಹ ಲಾಂಛನದ ವೇಶದ ಪಾಶ ಹರಿಯುವುದು ಕಾಯಕದಿಂದಲೇ ಎನ್ನುತ್ತಾರೆ ಶರಣರು. ಆದ್ದರಿಂದ ಲಿಂಗಧಾರಿಗಳು ಸಹ ಸತ್ಯ ಶುದ್ಧ ಕಾಯಕ ಮಾಡಬೇಕೆಂಬುದು ಮೇಲಿನ ವಚನದ ಆಶಯವಾಗಿದೆ. ಜಂಗಮ ಎಂಬುದು ಸಮಾಜ, ಸಮಷ್ಠಿಯ ಭಾವ. ಅನುಭಾವವೇ ಜಂಗಮ. ಜಂಗಮವು ಚರಸೇವೆ ಮಾಡಬೇಕು. ಎಲ್ಲರೂ ಒಂದಿಲ್ಲೊಂದು ಕಾಯಕ ಮಾಡಿ ಬದುಕಬೇಕೆಂಬುವುದು ಶರಣರ ಆಶಯ ಹಾಗೂ ನಿಲುವಾಗಿತ್ತು. ಹೀಗೆ ಮೇಲಿನ ವಚನ ಕಾಯಕದ ಮಹತ್ವವನ್ನು ಸಾರಿ ಸಾರಿ ಹೇಳುತ್ತದೆ.
ಒಟ್ಟಾರೆ ಕಾಯಕ ಸಿದ್ಧಾಂತ ಜಗತ್ತಿನಲ್ಲಿಯೇ ಒಂದು ವಿಶಿಷ್ಟ ಸಿದ್ಧಾಂತವಾಗಿದೆ ಇದು ಕೇವಲ ಸಿದ್ಧಾಂತವಾಗಿರದೇ ಬದುಕುವ ಕಲೆ ಆಗಿದೆ. ಸಮಷ್ಠಿಭಾವ ಒಳಗೊಂಡಿದೆ. ಮಾನವೀಯತೆಯ ತಿರುಳನ್ನು ಒಳಗೊಂಡಿದೆ. ಅರ್ಧಶಾಸ್ತ್ರದ ವಿಶಿಷ್ಟ ವಿಧಾನವಾಗಿದೆ. ಸಮಸಮಾಜದ ಬೇರು ಎನ್ನಬಹುದು. ವಾಸ್ತವಿಕವಾಗಿ ಇದನ್ನು ಜೀವನದಲ್ಲಿ ಅಳವಡಿಸಿ, ಹೊಸ ಸಮಾಜವನ್ನು ಕಟ್ಟಿತೋರಿಸಿದ್ದಾರೆ ನಮ್ಮ ಶರಣರು. ಈ ಕಾಯಕ ಸಿದ್ಧಾಂತವನ್ನು ಅಕ್ಷರಶಃ ಅಳವಡಿಸಿಕೊಂಡು ಜಪಾನದಂತಹ ದೇಶಗಳು ಅಭಿವೃದ್ಧಿ ದೇಶಗಳಾಗಿ ಹೊರಹೊಮ್ಮಿವೆ. ಅನೇಕ ದೇಶಗಳು ಕಾಯಕ ತತ್ವ ಕೈಹಿಡಿದು ನಿರುದ್ಯೋಗ ಹಾಗೂ ಬಡತನ ಸಮಸ್ಯೆಗಳ ಸುಳಿಯಿಂದ ಶಾಶ್ವತವಾಗಿ ಹೊರಬಂದಿವೆ. ಇಂತಹ ಕಾಯಕ ತತ್ವವನ್ನು ನೀಡಿದ ಶರಣರನ್ನು ಸದಾ ಸ್ಮರಿಸೋಣ ಹಾಗೂ ಅವರ ತತ್ವದ ಪಾಲಿಸೋಣ.

-ಡಾ.ದಾನಮ್ಮ ಝಳಕಿ ಬೆಳಗಾವಿ

Don`t copy text!