ಭಾರವಾಗದಿರಲಿ ಬದುಕು ಮಕ್ಕಳಿಗೆ

ಬದುಕು ಭಾರವಲ್ಲ 30

ಭಾರವಾಗದಿರಲಿ ಬದುಕು ಮಕ್ಕಳಿಗೆ

ಇಂದಿನ ಮಕ್ಕಳೇ ನಾಳಿನ ನಾಗರಿಕರು ಎಲ್ಲರಿಗೂ ಗೊತ್ತು.ನಮ್ಮ ನಮ್ಮ ಬದುಕನ್ನು ಕಟ್ಟಿಕೊಂಡ ನಾವುಗಳು ನಮ್ಮ ಬದುಕಿನ ನೋವುಗಳನ್ನು ದುಃಖ ದುಮ್ಮಾನಗಳನ್ನು ಮಕ್ಕಳ ಮುಂದೆ ಹೇಳಿ ಮನಸ್ಸಿನ ಭಾರವನ್ನು ಇಳಿಸಿಕೊಳ್ಳುತ್ತೇವೆ.
ನಮ್ಮ ಬದುಕಿನ ಭಾರವನ್ನು ಮಕ್ಕಳ ಮೇಲೆ ಹೊರಿಸಿ ಸುಮ್ಮನಾಗುತ್ತೇವೆ.
ನಮ್ಮ ನಿಮ್ಮ ಮನೆಗಳಲ್ಲಿ ನೋಡಿ ,ವಿವಿಧ ಹೊಟೇಲುಗಳಲ್ಲಿ ನೋಡಿ ಕಾರ್ಖಾನೆಗಳಲ್ಲಿ ನೋಡಿ ,ಬಸ್ ಸ್ಟ್ಯಾಂಡಗಳಲ್ಲಿ ಭಿಕ್ಷೆ
ಬೇಡುವ ಮಕ್ಕಳನ್ನು ನೋಡಿ
ಚಿಕ್ಕ ವಯಸ್ಸಿನಲ್ಲಿಯೇ ಏನೂ ಅರಿಯದ ಮುಗ್ಧ ಮಕ್ಕಳ ಮನಸ್ಸಿನ ಮೇಲೆ ಅದೆಷ್ಷು ಬದುಕಿನ ಭಾರ
ನಮ್ಮ ತವರು ಊರಿನ ಒಂದು ಕುಟುಂಬದ ಚಿತ್ರಣ ಇನ್ನೂ ನನ್ನ ಕಣ್ಣು ಕಟ್ಟಿದಂತೆ ಇದೆ .
ತಂದೆ ಊರಿನಲ್ಲಿ ತಿರುಗಾಡಿ ಕೊಡ ರಿಪೇರಿ ಮಾಡುವರು ತಮ್ಮ ಜೊತೆಗೆ ಚಿಕ್ಕ ಹುಡುಗನನ್ನು ತಮ್ಮ ಜೊತೆಗೆಯೇ ಕರೆದುಕೊಂಡು ಸುತ್ತುತ್ತ ಬದುಕನ್ನು ಸಾಗಿಸುವ ಕುಟುಂಬ.ಇದ್ದಕ್ಕಿದ್ದ ಹಾಗೆ ಹುಡುಗನ ತಾಯಿ ತೀರಿಹೋದಳು .ಹುಡುಗನಿಗೆ ಅನಾಥ ಭಾವ ಕೊರಗು ಅದೇ ಕೊರಗಿನಲ್ಲಿ ಹುಡುಗನ ತಂದೆಯೂ ತೀರಿಹೋದ ಹುಡುಗನಿಗೆ ಬದುಕು ಭಾರವಾಯಿತು .ತಂದೆ ತಾಯಿಯನ್ನು ಕಳೆದುಕೊಂಡ ಹುಡುಗ ನ ಸಂಬಂಧಿಕರಾರೂ ಇರಲಿಲ್ಲ ಅಪ್ಪ ಕಲಿಸಿದ ಕಾಯಕ ಕಲಿತ ಹುಡುಗ ಚಿಕ್ಕ ವಯಸ್ಸಿನಲ್ಲಿಯೇ ಬದುಕು ಕಟ್ಟಿಕೊಂಡು ಈಗ ಮದುವೆ ಮಾಡಿಕೊಂಡು ತನ್ನ ಮಕ್ಕಳಿಗೂ ತನ್ನದೇ ವೃತ್ತಿ ಕಾಯಕದಲ್ಲಿ ತೊಡಗಿಸಿಕೊಂಡ ಹುಡುಗನಿಗೆ ಹೇಳಿದ್ದೆ ನೋಡಪ್ಪ ನಿನ್ನ ಹಾಗೇ ನಿನ್ನ ಮಕ್ಕಳಿಗೆ ಈ ಬದುಕು ಭಾರವಾಗಬಾರದು .ಶಾಲೆಗೆ ಕಳುಹಿಸು ನಾಲ್ಕಕ್ಷರ ಕಲಿತು ದೊಡ್ಡ ವ್ಯಕ್ತಿಗಳಾಗಲಿ ಎಂದು ಹೇಳಿದ್ದೆ ಮೊನ್ನೆ ಶಿವರಾತ್ರಿ ಯ ದಿವಸ ತವರಿನ ಸ್ನೇಹಿತೆಯ ಮನೆಗೆ ಹೋದಾಗ ಗೊತ್ತಾಯಿತು ಕಲಾಯಿ ಮಾಡುವ ಹುಡುಗ ಎರಡು ಚಿಕ್ಕ ಚಿಕ್ಕ ಮಕ್ಕಳನ್ನು ಬಿಟ್ಟು ಸತ್ತು ಹೋದ ಎಂದು .
ಎಷ್ಟು ವಿಚಿತ್ರ ಬದುಕು ನೋಡಿ ಬದುಕಿರುವಾಗ ಸುಂದರ ಜೀವನ ಕಾಣದೇ ಮಣ್ಣಲ್ಲಿ ಮಣ್ಣಾಗಿ ಹೋದ ಹುಡುಗ ನಂತೆ ಇತರ ಮಕ್ಕಳ ಗತಿಯೂ ಹಾಗೇ ಆಗದಿರಲಿ.
ದುಡಿಯುವ ಚಿಕ್ಕ ಮಕ್ಕಳಿಗೆ ಶಿಕ್ಷಣದ ಅರಿವು ಮೂಡಿಸಿ ಬದುಕು ಸುಂದರ ಎನಿಸುವಂತೆ ಹೇಳಿಕೊಡಬೇಕು .
ಎಷ್ಟೋ ಎಲೆ ಮರೆ ಕಾಯಿ ಯಂತೆ ಚಿಕ್ಕ ಚಿಕ್ಕ ಮಕ್ಕಳು ತಂದೆ ತಾಯಿಗಳಿಗೆ ಬದುಕಿಗೆ ಹೆಗಲಾಗಿ ದುಡಿಯುತ್ತಿದ್ದಾರೆಯೂ ಕೂಡ…
ಬೇಡ ಚಿಕ್ಕ ಮಕ್ಕಳ ಹೆಗಲಿಗೆ ಬದುಕು ಭಾರವಾಗುವುದು ಬೇಡ.
ಹೀಗೆ ನಾನು ನನ್ನ ಸ್ಕೂಟಿ ಮೇಲೆ ಕಾಲೇಜಿಗೆ ಹೋಗುವಾಗ ಗಾರೆ ಕೆಲಸ ರಸ್ತೆಯ ಸುಧಾರಣೆಯ ಕೆಲಸ ನಡೆದಿತ್ತು ರಸ್ತೆಯ ಬದಿಯಲ್ಲಿ ಕಲ್ಲುಗಳನ್ನು ಪುಡಿ ಪುಡಿ ಮಾಡಲು ಕೈಯಲ್ಲಿ ಸುತ್ತಿಗೆಯಿಂದ ಕಲ್ಲನ್ನು ಒಡೆಯುತ್ತಿದ್ದರು ಒಂದೊಂದು ಗುಂಪಿನಲ್ಲಿ ನಾಲ್ಕು ನಾಲ್ಕು ಜನರು ಹೆಂಗಸರು ಗಂಡಸರು ಅವರ ಜೊತೆಗೆ ಇಬ್ಬರು ಸುಮಾರು ಎಂಟು ಹತ್ತು ವರ್ಷ ಆಗಿರಬೇಕು ಬಿಸಿಲಿನಲ್ಲಿ ಕುಳಿತು ಕಲ್ಲು ಒಡೆಯುವುದನ್ನು ನೋಡಿ ನನ್ನ ಸ್ಕೂಟಿಯನ್ನು ಬಂದಮಾಡಿ ಅವರ ಬಳಿ ಹೋಗಿ ಯಾಕಮ್ಮ ಈ ಚಿಕ್ಕ ಮಕ್ಕಳನ್ನು ಈ ಕೆಲಸದಲ್ಲಿ ನಿಮ್ಮ ಹಾಗೆಯೇ ಕಲ್ಲು ಒಡೆಯುವುದನ್ನು ಕಲಿಸುವಿರಾ ? ಶಾಲೆಗೆ ಕಳುಹಿಸಿ ದೊಡ್ಡ ವ್ಯಕ್ತಿಯಾಗಿ ನಿಮ್ಮನ್ನು ಚೆನ್ನಾಗಿ ಸಾಕುವರು ಅಂದೆ .ಅವರು ದೊಡ್ಡವರಾಗಿ ನಮ್ಮನ್ನು ಸಾಕುವರು ಎನ್ನುವುದನ್ನು ನೀವು ಹೇಗೆ ಹೇಳುತ್ತೀರಿ ?ನೀವು ಟೀಚರಾ ? ಇದೆಲ್ಲ ಕನಸ್ಸು ಬಿಡಿ ಇವಾಗ ನಮಗೆ ಸಹಾಯ ಮಾಡುವರು ದೊಡ್ಡವರಾಗಿ ಸಾಲಿ ಕಲಿತ ನೌಕರಿ ಹಿಡಿದ್ ಎಂದು ನನ್ನ ಮಾತುಗಳಿಗೆ ಪೂರ್ಣ ವಿರಾಮ ಇಟ್ಟರು ನೋಡ್ರಿ ಇನ್ನೂ ಎಷ್ಟು ಜನ ಮಕ್ಕಳನ್ನು ಕರೆದುಕೊಂಡು ಬಂದು ತಮ್ಮ ಬದುಕಿನ ಭಾರವನ್ನು ಮಕ್ಕಳ ಮೇಲೆ ಹೇರಿದ್ದಾರೆ ನೋಡಿ .
ಸರ್ಕಾರ ಮಕ್ಕಳಿಗಾಗಿ ಅನೇಕ ನಿಯಮಗಳನ್ನು ಕಾನೂನುಗಳನ್ನು ಹೊರಗೆ ತಂದರೂ ಕಣ್ಣಲ್ಲಿ ಮಣ್ಣಾಗಿ ಮಕ್ಕಳಿಗೂ ಕೂಡಾ ಅಂಧಕಾರದಲ್ಲಿ ಮುಳುಗಿಸಿದ ಇಂಥಹ ಪಾಲಕರಿಗೆ ಏನು ಹೇಳಬೇಕು ಎಂದು ಸುಮ್ಮನೇ ಸ್ಕೂಟಿ ಆನ್ ಮಾಡಿಕೊಂಡು ಕಾಲೇಜಿಗೆ ಬಂದೆ .
ಇಂಥಹ ಅದೆಷ್ಟು ಮಕ್ಕಳು ಶಾಲೆಯಿಂದ ವಂಚಿತರಾಗಿದ್ದಾರೆ ಅವರನ್ನು ಹೊರಗೆ ಕರೆದುಕೊಂಡು ಬರುವುದು ಪ್ರತಿಯೊಬ್ಬ ಪ್ರಜೆಯೂ ಕೈಗೂಡಿ ಅರಿವು ಮೂಡಿಸುವ ಕೆಲಸ ಆಗಬೇಕು .

ಇನ್ನೂ ಕೆಲವೊಂದು ಹಳ್ಳಿಗಳಲ್ಲಿ ಪ್ರಜ್ಞಾವಂತರೇ ತಮ್ಮ ತಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ಹಳ್ಳಿಯಿಂದ ಬೇರೆ ಶಾಲೆಗೆ ಅಥವಾ ಕಾಲೇಜಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಳುಹಿಸಲು ಹಿಂದೇಟು ಹಾಕುವ ಅನೇಕ ಪೋಷಕರನ್ನು ನಾನಿಂದು ಕಂಡಿದ್ದೇನೆ .

ನಮ್ಮ ಕಾಲೇಜಿನ ಉದಾಹರಣೆಯನ್ನೇ ತೆಗೆದುಕೊಂಡಾಗ ನನಗೆ ತುಂಬಾ ಬೇಸರ ಆಯಿತು ಜಾಣೆ ಹುಡುಗಿ ದ್ವಿತೀಯ ಪಿಯುಸಿಯನ್ನು ಪ್ರಥಮ ತರಗತಿಯಲ್ಲಿ ಪಾಸ್ ಆಗಿ ನನ್ನನ್ನು ಭೇಟಿಯಾಗಲು ಬಂದಳು. ಮೇಡಂ ನಮ್ಮ ಮನೆಯಲ್ಲಿ ಮುಂದೆ ಕಲಿಯುವುದು ಬೇಡ ಮನೆಯಲ್ಲಿ ನಿಮ್ಮ ಅವ್ವನ ಕೈಯಾಗ ಕೆಲಸ ಮಾಡು ಯಾವುದಾದರೂ ಇಲ್ಲೇ ಹೊಲಿಗೆ ಹೊಲಿಯಾಕ ಹೋಗು ಅಂತಾರಿ ಮೆಡಂ ನೀವು ನಮ್ಮ ಅಪ್ಪನಿಗೆ ಹೇಳಿ ನಾನು ಮುಂದೆ ಓದಬೇಕು ಎನ್ನುವ ಆಸೆ ಇದೆ ನಿಮ್ಮಂಗ ನನಗೂ ಆಗಬೇಕು ಎನ್ನುವುದಿದೆ ಆದ್ರ ನಮ್ಮಪ್ಪ ಕಳುಸುತ್ತಿಲ್ಲ ನಾನು ಮನಿಯಾಗಿನ ಕೆಲಸ ಎಲ್ಲಾ ಮಾಡಿ ಕಾಲೇಜಿಗೆ ಹೋಗತ್ತನ ಅಂದ್ರ ಕಳಾಸಾತ್ತಿಲ್ಲರಿ ನೀವ್ ಹೇಳ್ರೀ ಎಂದಾಗ ನಿಜಕ್ಕೂ ಇನ್ನೂ ಎಷ್ಟು ಹಿಂದೆ ನಮ್ಮ ಜನರು ಇದ್ದಾರೆ ಎಂದು ನನಗೆ ಅನಿಸಿತು .ಆಯಿತಮ್ಮ ಖಂಡಿತ ಹೇಳುತ್ತೇನೆ ನೀನು ಕಾಲೇಜಿಗೆ ಹೆಸರು ಹಚ್ಚಿ ಬಾ ಹೆದರಬೇಡ ಎಂದು ಹೇಳಿ ಕಳುಹಿಸಿದೆ .

ಸುಮಾರು ಏಳು ಎಂಟು ವರ್ಷದ ಹಿಂದಿನ ಘಟನೆ ಹೀಗೆ ಒಬ್ಬಳು ವಿದ್ಯಾರ್ಥಿನಿ ರಾತ್ರಿ 10 ಗಂಟೆ ಆಗಿತ್ತು ತುಂಬಾ ಬೇಜಾರಿನ ಧ್ವನಿಯಿಂದ ಮಾತನಾಡಿ ಮೇಡಂ ನಮ್ಮ ಮನೆಯಲ್ಲಿ ನನಗೆ ಮದುವೆ ಮಾಡುತ್ತಿದ್ದಾರೆ ನನಗೆ ಮುಂದೆ ಕಲಿಯುವ ಆಸೆ ನಮ್ಮತಂದೆಯವರು ನಿಮ್ಮ ಜೊತೆಗೆ ಮಾತನಾಡುವರು ಎಂದು ಮಾತನಾಡಿಸಿದಾಗ ಪೋಷಕರಿಗೆ ಮುಂದಿನ ಬದುಕಿನ ಆಗು ಹೋಗುಗಳ ಚಿತ್ರಣ ಬಿಚ್ಚಿ ಇಟ್ಟು ಮನವರಿಕೆ ಮಾಡಿ ಮದುವೆ ಮಾಡಬೇಡಿ ಅವಳ ಕಾಲ ಮೇಲೆ ಅವಳು ಖಂಡಿತ ನಿಲ್ಲು ತ್ತಾಳೆ ಕಾಲೇಜಿಗೆ ಕಳುಹಿಸಿ ಎಂದು ಹೇಳಿದೆ ಇವಾಗ ನಾನು ಹೇಳಿದ ವಿದ್ಯಾರ್ಥಿನಿ ತನ್ನ ಕಾಲ ಮೇಲೆ ತಾನು ನಿಂತು ಬೆಂಗಳೂರಿನ ಅರಕ್ಷಕ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾಳೆ.
ಅದೆಷ್ಷು ಮಕ್ಕಳು ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಲಾರದೇ ಬದುಕು ಭಾರವಾಗಿಸಿಕೊಂಡಿದ್ದಾರೆ .ಇಂಥಹ ಮಕ್ಕಳಿಗೆ ನಾವು ನೀವೂಗಳೆಲ್ಲ ತಿಳಿ ಹೇಳಿ ಭಾರವಾದ ಬದುಕನ್ನು ಹಗುರ ಗೊಳಿಸೋಣ ಎನಂತಿರಿ

ಡಾ. ಸಾವಿತ್ರಿ ಮಹಾದೇವಪ್ಪ ಕಮಲಾಪೂರ

Don`t copy text!