ಅಕ್ಕನೆಡೆಗೆ-ವಚನ – 33
ಅಕ್ಕನ ಕನಸಿನ ಪರಿ
ಅಕ್ಕ ಕೇಳೌ ನಾನೊಂದು ಕನಸು ಕಂಡೆ
ಅಕ್ಕಿ ಅಡಕೆ ಓಲೆ ತೆಂಗಿನಕಾಯಿ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ
ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು
ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆನು
ಅಕ್ಕಮಹಾದೇವಿಯ ಕನಸಿನ ಪ್ರಪಂಚವನ್ನು ಈ ವಚನದಲ್ಲಿ ಕಾಣುತ್ತೇವೆ. ತನ್ನ ಆತ್ಮಸಂಗಾತಿಯ ನಿಜಸ್ವರೂಪವನ್ನು, ಇರುಳಿನ ಸುಪ್ತಾವಸ್ಥೆಯ ಕನಸಿನಲ್ಲಿ ಕಂಡು ಬೆರಗಾದ ಪರಿ ವಿವರಿಸಿದಂತೆ ಮೇಲ್ನೋಟಕ್ಕೆ ತೋರುತ್ತದೆ. ಹಾಗೆ ಕೋಲ್ಮಿಂಚಿನಂತೆ ಅವನನ್ನು ಕಂಡ ಕ್ಷಣ ಎಚ್ಚೆತ್ತುಕೊಂಡ ದೃಶ್ಯ ಆಪ್ತವಾಗಿ ಕಣ್ಮುಂದೆ ಬರುತ್ತದೆ. ಅಕ್ಕನ ಅನೇಕ ವಚನಗಳಲ್ಲಿ ಮನದ ವ್ಯಾಪಾರವನ್ನು ಅತಿ ಸೂಕ್ಷ್ಮವಾಗಿ ದಾಖಲಿಸುತ್ತಾಳೆ. ಅವುಗಳಲ್ಲಿ ಮನಶಾಸ್ತ್ರಜ್ಞರ ಆಲೋಚನಾ ಕ್ರಮ ತೀವ್ರವಾಗಿ ಮೂಡಿ ಬಂದಿವೆ.
ಮನಶಾಸ್ತ್ರಜ್ಞರಾದ ಸಿಗ್ಮಂಡ್ ಫ್ರಾಯ್ಡ್, ಜಂಗ್, ಕ್ಯಾಲ್ವಿನ್ ಎಸ್. ಹಾಲ್ನ್ ಮುಂತಾದವರು ‘ಕನಸು’ ಕುರಿತು ಆಳ ಅಧ್ಯಯನ ಹಾಗೂ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ. ಅವರೆಲ್ಲರ ಪ್ರಕಾರ ಕನಸುಗಳು ಸುಪ್ತ ಮನಸಿನ ಆಸೆಗಳು ಎಂದು ಆರಂಭದಲ್ಲಿ ಗ್ರಹಿಸಿರುತ್ತಾರೆ. ನಂತರದಲ್ಲಿ ಅರಿವಿನ ಸಿದ್ಧಾಂತದ ಮೂಲಕ ಅರ್ಥೈಸಲಾಯಿತು. ಆಗ, ಕನಸುಗಳು ಕೇವಲ ನಿದ್ರೆಯ ಸಮಯದಲ್ಲಿ ಮನಸ್ಸಿನಲ್ಲಿ ಕಾಣಿಸಿಕೊಳ್ಳುವ ಆಲೋಚನೆಗಳಾದರೂ, ಅವು ವೈಯಕ್ತಿಕ ಜೀವನವನ್ನು ಅರಿವಿನ ರಚನೆಗಳ ಮೂಲಕ ಪ್ರತಿನಿಧಿಸುತ್ತವೆ. ಈ ನೆಲೆಯಲ್ಲೇ ಅಕ್ಕನ ಮೇಲಿನ ವಚನದ ಆಳಕ್ಕಿಳಿಯುವ ಪ್ರಯತ್ನ ಮಾಡದರೆ ಅರ್ಥಪೂರ್ಣ ಹಾಗೂ ಸೂಕ್ತ.
ಅಕ್ಕ ಕೇಳೌ ನಾನೊಂದು ಕನಸು ಕಂಡೆ
ಹೆಣ್ಣಿರಲಿ, ಗಂಡಿರಲಿ ಯೌವನಕ್ಕೆ ಕಾಲಿಡುತ್ತಿದ್ದ ಹಾಗೆಯೆ ಮನಸು ಸಹಜವಾಗಿ ಅನೇಕ ಸುಂದರ ಕನಸುಗಳ ಕಟ್ಟುತ್ತ, ಅವುಗಳ ಬೆನ್ನಟ್ಟಿ ಹೋಗುತ್ತವೆ. ಆಗ ತನ್ನ ಸಂಗಾತಿಯ ಚಿತ್ರಣ ಮೂಡಲಾರಂಭಿಸಿ ಮುದದ ಅನುಭವ ನೀಡುತ್ತದೆ. ಅಂತೆಯೇ ಅಕ್ಕ ತಾನು ಕಂಡ ಕನಸಿನ ವಿವರಣೆಯನ್ನು ಸೋದರಿಯಂತಿರುವ ಸ್ನೇಹಿತೆಗೆ ಹೇಳುತ್ತಾಳೆ. ನಾವು ಸಾಮಾನ್ಯರು ಕಾಣುವ ಕನಸಿಗೂ, ಅಕ್ಕನ ಕನಸಿಗೂ ಬಹಳ ವ್ಯತ್ಯಾಸವಿದೆ. ಅದನ್ನು ಮುಂದಿನ ಸಾಲುಗಳು ಸ್ಪಷ್ಟಪಡಿಸುತ್ತವೆ.
ಅಕ್ಕಿ ಅಡಕೆ ಓಲೆ ತೆಂಗಿನಕಾಯಿ ಕಂಡೆ
ಮದುವೆಯ ಹೆಸರಿನಲ್ಲಿ ನಡೆಯುವ ಸಾಂಪ್ರದಾಯಿಕ ಕ್ರಿಯೆ ಎಂದರೆ ತಾಂಬೂಲ ಬದಲಿಸಿಕೊಳ್ಳುವುದು. ಹೆಣ್ಣು ಮತ್ತು ಗಂಡಿನ ಮನೆಯವರು ತಟ್ಟೆಯಲ್ಲಿ ಅಕ್ಕಿ, ಎಲೆ, ಅಡಿಕೆ, ತೆಂಗಿನಕಾಯಿಯನ್ನು ಇಟ್ಟುಕೊಂಡು ಸಂಬಂಧ ಬೆಳೆಸುವ ವಾತಾವರಣದ ಚಿತ್ರಣ ಅಕ್ಕನ ಕನಸಿನಲ್ಲಿ ಕಾಣುತ್ತದೆ.
ಅಕ್ಕಮಹಾದೇವಿ ತನ್ನ ಇನ್ನೊಂದು ವಚನದಲ್ಲಿ, “ನಾನು
ಚೆನ್ನಮಲ್ಲಿಕಾರ್ಜುನದೇವರ ಅವಸರದ ಓಲೆಯನೊಯ್ಯುತ್ತಲಿದ್ದೇನೆ ಶರಣಾರ್ಥಿ” ಎಂದು ಹೇಳಿರುವುದನ್ನು ನೆನಪಿಸಿಕೊಂಡರೆ, ಬಹುಶಃ ತಾನು ಬರೆದ ಓಲೆಯನ್ನು ಅಕ್ಕ ನೆನಪಿಸಿಕೊಳ್ಳುತ್ತಿರಬಹುದು. ಅಥವಾ ತನ್ನ ಓಲೆಗೆ ಪ್ರತಿಕ್ರಿಯೆಯನ್ನು ನೀರೀಕ್ಷಿಸುವ ಮನಸು ಅದನ್ನೇ ಕಂಡಿರಬಹುದು ಎನ್ನುವ ಊಹೆಯ ಮಾತು ಮನದಲ್ಲಿ ಬಂದು ಹೋಗುತ್ತದೆ.
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ.
ಅಕ್ಕ ತನ್ನ ಕನಸಿನಲ್ಲಿ ಬಂದವನು ಯಾರೆಂದು ವಿವರಣೆ ಕೊಡುವ ಮೂಲಕ ನಮ್ಮ ಮನದಲ್ಲೂ ಒಂದು ಸುಂದರ ಚಿತ್ರಣ ಮೂಡಿಸುತ್ತಾಳೆ. ಅವನು ಚಿಕ್ಕ ಚಿಕ್ಕ ಜಡೆಗಳನ್ನು ಹೊಂದಿದ್ದಾನೆ. ಅವನ ಸುಂದರ ಬಿಳುಪಾದ ಹಲ್ಲುಗಳು ಕಾಣುತ್ತವೆ. ಅವನು ಭಿಕ್ಷುಕನಿದ್ದಾನೆ. ಭಿಕ್ಷೆ ಬೇಡಲು ಬಂದು ನಿಂತ ದೃಶ್ಯ ಕನಸಿನಲ್ಲಿ ಮುಂದುವರಿಯುತ್ತದೆ. ಇಲ್ಲಿ ಭಿಕ್ಷೆ ಅಂದರೆ ಕನ್ಯಾಭಿಕ್ಷೆ ಎಂದು ಅರ್ಥೈಸಬಹುದು.
ಗೊರವ ಪದದ ಅರ್ಥ ಹುಡುಕುತ್ತ ಹೋದರೆ, ‘ಗೊರವರು’ ಯಾರೆಂದು ತಿಳಿಯುತ್ತದೆ. ಗೊರವರು ಧಾರ್ಮಿಕ ಪರಂಪರೆಯ ಮೂಲದಿಂದ ಬಂದು ಮೈಲಾರಲಿಂಗನ ಪರಮ ಭಕ್ತರಾದವರು. ಗೊರವರಲ್ಲಿ ಕೆಲವರು ತಮ್ಮನ್ನು ತಾವು ಮೈಲಾರಲಿಂಗನಿಗೆ ಅರ್ಪಿಸಿಕೊಳ್ಳುತ್ತಾರೆ. ಇದನ್ನು ‘ಹೊರೆ ಹೊರುವುದು‘ ಅಥವಾ ‘ದೇವರನ್ನು ಹೊರುವುದು’ ಎಂದು ಕರೆಯುತ್ತಾರೆ. ಇಷ್ಟೆಲ್ಲಾ ತಿಳಿದ ಮೇಲೆ ಗೊರವ ಅಂದರೆ ಅವನೊಬ್ಬ ತಪಸ್ವಿ, ಲೋಕ ಕಲ್ಯಾಣಾಭಿಲಾಷಿ ಅಥವಾ ಲೋಕೋದ್ಧಾರಕ ಎನಿಸುತ್ತದೆ. ಹೀಗೆ ಗೊರವ ಪದದ ಆಳಕ್ಕಿಳಿದಾಗ ಅದು ಈ ಸೃಷ್ಟಿ, ನಿಸರ್ಗ, ಇಹವಲ್ಲದ ಪರವೂ ಆಗಬಹುದು. ಅಂತಹ ಒಂದು ‘ಪರ‘ ಆತ್ಮದ ಸಂದೇಶವನ್ನು ಅಕ್ಕ ಬಯಸಿದ ಹೊಳವು ನಮಗೆ ಸಿಗುತ್ತದೆ. ಅದೊಂದು ದರ್ಶನದಂತೆ ಅಕ್ಕನಿಗೆ ಆದ ಅನುಭಾವವನ್ನು ಅರಿಯುವ ಪ್ರಯತ್ನ ಮಾಡಬಹುದು.
ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು
ಭೌತಿಕ ಶರೀರ ಒಬ್ಬರಿಗೊಬ್ಬರ ಸ್ಪರ್ಶದ ಅನುಭವ ನೀಡುತ್ತದೆ. ನಾವು ಕಾಣುವ ಕನಸಿನಲ್ಲಿ ನಾವು ಮಾಡಲೇ ಬೇಕೆಂದು ನಿರ್ಧರಿಸಿದ ಸಂಗತಿಯನ್ನು ಸಾಕಾರಗೊಳಿಸಲು ಸಾಧ್ಯವಾಗುವುದಿಲ್ಲ. ಅದೇನೊ ನಡೆದು ಹೋಗುತ್ತದೆ. ಆಗ ಕನಸು ಕಾಣುವವರು ಅಸಹಾಯಕತೆಯನ್ನು ಅನುಭವಿಸುತ್ತಾರೆ. ಇದು ಕನಸು ಕಾಣುವವರ ಅನುಭವಕ್ಕೆ ಖಂಡಿತ ಬಂದಿರುತ್ತದೆ. ಆ ಕ್ಷಣದಲ್ಲಿ ಕನಸು ಒಡೆದು ಹೊರ ಬಂದಿರುತ್ತೇವೆ. ಕನಸಿನ ಹಲವು ಸಾಧ್ಯತೆಗಳನ್ನು ಅಕ್ಕ ಬಹಳ ಸುಂದರವಾಗಿ ಸೆರೆ ಹಿಡಿಯುತ್ತಾಳೆ.
ಇಲ್ಲಿ ಅಕ್ಕ ಕೊಡುವ ಚಿತ್ರಣ ಶಿವನದು. ಅವನು ಅಸಾಮಾನ್ಯ! ಯಾರ ಕೈಗೂ ಎಟುಕದವನು! ಅಂಥವನನ್ನು ಪಡೆಯುವುದು ಸರಳ ಸಾಧ್ಯವಲ್ಲ.
‘ಇನ್ನೇನು ಅವನು ಕೈತಪ್ಪಿ ಹೋಗೇ ಬಿಡುತ್ತಾನೆ ಎನ್ನುವಷ್ಟರಲ್ಲಿ ಬೆನ್ನಟ್ಟಿ ಹೋಗಿ ಹಿಡಿದೆನು’ ಎನ್ನುವ ಸಾಲು ಅಕ್ಕನಲ್ಲಿ ತನಗೆ ಬೇಕಾದುದನ್ನು ಪಡೆದೆನೆಂಬ ನಿರಾಳತೆ ಬಿಂಬಿಸುತ್ತದೆ. ಅವಳು ಕನಸಿನಲ್ಲಿ ಸಾಧ್ಯವಾಗದೆ ಇರುವುದನ್ನು ಸಾಧಿಸಿ ತೋರಿಸಿದ್ದಾಳೆ. ಅಶಾಶ್ವತ ಜೀವನದಿಂದ ಶಾಶ್ವತದೆಡೆಗೆ ಸಾಗುವ ತಾತ್ವಿಕ ಸೂಚನೆ ನೀಡಿದ್ದಾಳೆ
ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆನು
ಅಕ್ಕನಿಗೆ ಕನಸು ಮುಗಿದೇ ಹೋಯಿತು ಎನ್ನುವ ಸಮಯದಲ್ಲಿ, ಬಂದವನು ಬೇರೆ ಯಾರೂ ಅಲ್ಲ, ಅವನು ಸಾಕ್ಷಾತ್ ಚೆನ್ನಮಲ್ಲಿಕಾರ್ಜುನನೇ ಎಂದು ಖಾತ್ರಿಯಾಗುತ್ತದೆ. ಆಗ ಅವನ ದರ್ಶನ ಪಡೆದು, ನಿದ್ರೆಯಿಂದ ಹೊರ ಬರುತ್ತಾಳೆ. ಇದು ಕನಸಿನಲ್ಲಿ ಆತ್ಮ ಸಾಕ್ಷಾತ್ಕಾರವಾದಂತೆ ಪರಿಭಾವಿಸಬಹುದು.
ಈ ವಚನದಲ್ಲಿ ಅಕ್ಕನ ಸುಪ್ತ ಮನಸಿನ ಬಯಕೆ, ಮುಂದಿನ ಜೀವನದ ಯೋಜನೆ ಮತ್ತು ಆ ಯೋಜನೆಯ ಫಲಶೃತಿಯನ್ನು ಕಾಣುತ್ತೇವೆ. ತಾನು ಯಾರು? ತಾನು ಎಲ್ಲಿಗೆ ಹೊರಟಿರುವೆ? ತನ್ನ ಹುಡುಕಾಟವೇನು? ಆ ಹುಡುಕಾಟವನ್ನು ಸರಳಗೊಳಿಸುವವರು ಯಾರು? ಕೊನೆಯಲ್ಲಿ ಆ ಹುಡುಕಾಟದ ಗಮ್ಯ ಯಾವುದು? ಒಟ್ಟಾರೆ ಅರಿವಿನ ದರ್ಶನದ ಕನಸು ನನಸಾದ ವಚನವಿದು. ಅಕ್ಕ ವಿರಾಗಿಣಿ ಎನ್ನುವ ಮಾತು ಬರುತ್ತದೆ. ಅದಕ್ಕೆ ಸಾಕ್ಷಿ ಈ ವಚನ. ಅವಳಲ್ಲಿ ವಿರಕ್ತಭಾವ ಜನ್ಮತಃ ಇತ್ತೆಂದು ಸಂಶೋಧಕರು ಹೇಳುತ್ತಾರೆ. ಅದು ಈ ವಚನದಿಂದ ಸ್ಪಷ್ಟವಾಗುತ್ತದೆ. ಅಕ್ಕಮಹಾದೇವಿ ಜ್ಞಾನೋದಯದ ಕನಸು ಕಂಡ ಪರಿ ಆಶ್ಚರ್ಯ ಮೂಡಿಸುತ್ತದೆ.
ಶೂನ್ಯ ಸಂಪಾದನೆ ಮತ್ತು ವಚನಗಳ ಮೂಲಕ ಅಕ್ಕನ ಇಡೀ ಜೀವನ ಅವಲೋಕಿಸಿದಾಗ, ಆತ್ಮ ಸಾಕ್ಷಾತ್ಕಾರದ ಕನಸು ಆರಂಭದಿಂದಲೇ ಇತ್ತೆಂದು ಸಾಬೀತಾಗುತ್ತದೆ. ಅವಳ ಜೀವನದಲ್ಲಿ ನಡೆಯುವ ಕೌಶಿಕ ಅಥವಾ ಕಸಪ್ಪಯ್ಯನ ಜೊತೆಗಿನ ಸಂಘರ್ಷ, ವೈರಾಗ್ಯ, ಶರಣರ ಸಂಗದ ಫಲ, ಆತ್ಮದರ್ಶನ, ಶ್ರೀಶೈಲದತ್ತ ಪಯಣ, ಜ್ಞಾನೋದಯ, ಎಲ್ಲವೂ ಕನಸಿನ ರೂಪದಲ್ಲಿ ಸ್ಪಷ್ಟವಾಗಿ ಅಕ್ಕನ ಮನದಲ್ಲಿ ಮೊದಲೇ ಮೂಡಿತ್ತು ಎನ್ನುವ ಭಾವವಿದೆ. ಪಂಚೇಂದ್ರಿಯಗಳ ಸುಖದಾಚೆಗಿನ ಆಂತರ್ಯದ ಮತ್ತು ಪಂಚಭೂತಗಳ ಅನುಭೂತಿಗೆ ಒಳಗಾಗುವ ಅಕ್ಕನನ್ನು ಅರಿಯುವ ಪ್ರಯತ್ನ ನಮಗೆಟುಕದು.
ಸಿಕಾ