ಆಲದ ಮರ
ಬೇರು ಬಿಟ್ಟು ಆಳಕ್ಕಿಳಿದು ತನ್ನ ತಾ ಗಟ್ಟಿಗೊಳಿಸುತ್ತಾ
ಟೊಂಗೆ ಟೊಂಗೆಯ ತುಂಬಾ ಹಕ್ಕಿ ಪಕ್ಕಿ ಚಿಲಿಪಿಲಿ ಸದ್ದು
ದಪ್ಪನಾದ ಬೊಡ್ಡೆ ಬೊಡ್ಡೆ ತುಂಬೆಲ್ಲ ಪೊಟರೆಗಳು
ಹಕ್ಕಿಗಳು ಗೂಡು ಕಟ್ಟಲು ಹಾವುಗಳು ಮೊಟ್ಟೆ ಇಡಲು
ಜೋತು ಬಿದ್ದ ಬಿಳಿಲುಗಳು ಮಕ್ಕಳ ಜೋಕಾಲಿ
ಕಳ್ಳ ಕಾಕರಿಗೆ ಅಡಗುದಾಣ
ದಾರಿಹೋಕರಿಗೆಲ್ಲ ನೆರಳು
ತಂಪನ್ನೀಯುವ ಪರೋಪಕಾರಿ
ಈ ಮರಕ್ಕೆಷ್ಟು ಪ್ರಾಯ
ನೂರಾರು ವರುಷಗಳಿರಬಹುದು
ಅಲ್ಲಿಂದ ಇಲ್ಲಿಯವರೆಗೆ
ಬದುಕಿ ಬಾಳಿ ನೆರಳನ್ನೀಯುವ ಸೇವೆ
ನಿರಂತರ ಸಾಗಿತ್ತು……… ಹೀಗೆ
ಯಾವನೋ ಬಂದ ಕೊಡಲಿ ಏಟು ಕೊಟ್ಟ
ಮರದ ಮನದಲ್ಲೇನೋ ನೋವು ಅಳಕು
ಮರ ಚೀರಿತು ಅತ್ತಿತು ಅತ್ತಿತ್ತ ನೋಡಿತು
ಕೊನರುವ ಕೊರಡಿನಲ್ಲೇ ನೆತ್ತರು
ನೆತ್ತರು ಕಣ್ಣೀರು ಒಂದಾದವು
ಬೇಡಿಕೊಂಡಿತು ಉಸಿರ ಕೊಟ್ಟವನ ಗೋಣನ್ನೇ ಮುರಿಯುವೆಯಾ ಬೇಡ ಗೋಗರೆಯಿತು ಮರ
ಕೇಳಿಸಿತೇ ಹೃದಯ ಹೀನ ಮಾನವನಿಗೆ
ಮರವನ್ನುರುಳಿಸಿದ ಯಂತ್ರದ ಬಾಯಿಗೆ ಆಹಾರವಾಗಿಸಿದ ಅಂದದ ಅರಮನೆಗೆ ಬಂಗಾರದ ಬಾಗಿಲು ಸಿಂಗಾರಗೊಂಡಿದೆ
ಇತ್ತ ಛಲ ಬಿಡದೆ ಬೇರು ಬಿಟ್ಟ ಕುರುಹಿನಲ್ಲೇ ಮತ್ತೆ ಚಿಗುರು
ಎಲ್ಲವನ್ನು ಕಾಯುವ ಒಬ್ಬನಿದ್ದಾನೆ
ನಾನಿಲ್ಲದೆ ನೀನಿಲ್ಲ ಎಲವೋ ಮಾನವ ಈ ಸತ್ಯವನು ನೀ ತಿಳಿದು ಬದುಕು
ಬದುಕಲು ಬಿಡು
–ಡಾ.ಮೀನಾಕ್ಷಿ ಪಾಟೀಲ ವಿಜಯಪುರ