ಕಲ್ಲು ಲಿಂಗವಾದ ಪರಿ
ಭೈರವೇಶ್ವರ ಕಾವ್ಯದ ” ಕಥಾಮಣಿಸೂತ್ರರತ್ನಾಕರ “ದಲ್ಲಿ ನ ಒಂದು ಕಥೆಯೊಂದಿಗೆ ಉರಿಲಿಂಗಪೆದ್ದಿಯ ಪರಿಚಯ ಮಾಡಿಕೊಳ್ಳೋಣ. ಅವಸೆ ಕಂಧಾರ ಎಂಬುದು ಒಂದು ಪಟ್ಟಣ. ಅದರಲ್ಲಿ ಉರಿಲಿಂಗದೇವ ಎಂಬ ಆಚಾರ್ಯರೊಬ್ಬರು ವೀರಶೈವ ಮತದ ಗುರುವಾಗಿದ್ದರು. ಅವರು ಒಮ್ಮೆ ನಂದ್ಯವಾಡದಲ್ಲಿ ಸೂರಯ್ಯ ಎಂಬ ಭಕ್ತನ ಮನೆಯಲ್ಲಿ ಪೂಜೆಗೆ ಹೋದ ಸಂದರ್ಭದಲ್ಲಿ ಉಪದೇಶ ಮಾಡುವಾಗ ಪೆದ್ದಣ್ಣನೆಂಬ ಕಳ್ಳನು ಕಳ್ಳತನ ಮಾಡಲು ಅದೇ ಸಂದರ್ಭದಲ್ಲಿ ಆ ಮನೆಗೆ ಬಂದನು. ಗವಾಕ್ಷಿಯ ಮೂಲಕ ಮನೆಯಲ್ಲಿ ಏನು ನಡೆದಿದೆ, ಎಂದು ನೋಡಿದಾಗ ಅಲ್ಲಿ ಗುರುವು ಶಿಷ್ಯನಿಗೆ ಲಿಂಗದೀಕ್ಷೆ ನೀಡುವ ಕಾರ್ಯಕ್ರಮ ನಡೆದಿತ್ತು. ನಂತರ ಎಲ್ಲರೂ ನಮಸ್ಕಾರ ಮಾಡುವುದನ್ನು ನೋಡಿ ತಾನೂ ಸಹ ಹೋಗಿ ನಮಸ್ಕಾರ ಮಾಡಿದ.
ಮರುದಿನ ಬೆಳಿಗ್ಗೆ ಪೆದ್ದಣ್ಣ ಉರಿಲಿಂಗದೇವರ ಮನೆಗೆ ಬಂದ. ಅವರು ಹೇಳದಿದ್ದರೂ ತಾನಾಗಿಯೇ ಅವರಿಗೆಂದು ಒಂದು ಹೊರೆ ಹುಲ್ಲು ಮತ್ತು ಒಂದು ಹೊರೆ ಕಟ್ಟಿಗೆಯನ್ನು ತಂದು ಹಾಕಿದ. ದಿನವೂ ಈ ಕಾಯಕ ಮುಂದುವರೆಸಿದ. ಹೀಗೇ ಕೆಲವು ದಿನಗಳು ಕಳೆದವು. ಒಂದು ದಿನ ಉರಿಲಿಂಗದೇವರು ನಿನಗೇನು ಬೇಕು? ಇದುವರೆಗೆ ಹುಲ್ಲು ಕಟ್ಟಿಗೆ ಹೊರೆಗಳನ್ನು ತಂದು ಹಾಕಿದುದರ ಲೆಕ್ಕ ಹೇಳಿ ತೆಗೆದುಕೊಂಡು ಹೋಗು, ಮತ್ತೆ ಈ ಕಡೆ ಬರಬೇಡ ಆಂಗಳದಲ್ಲಿಯೇ ನಿಂತುಕೊ ಎಂದು ಗದರಿಸಿದರು. ತನಗೆ ಲಿಂಗದೀಕ್ಷೆ ಕೊಡಲು ಸಾಧ್ಯವಿಲ್ಲ, ಅದಕ್ಕೆ ಬರಬೇಡ ಎಂದು ಹೇಳುತ್ತಿದ್ದಾರೆ ಎಂಬುದಾಗಿ ಪೆದ್ದಣ್ಣ ಅರ್ಥಮಾಡಿಕೊಂಡ. ಆದರೆ ಹುಲ್ಲುಕಟ್ಟಿಗೆ ಹೊರೆಗಳನ್ನು ತಂದು ಹಾಕುವುದನ್ನು ಮಾತ್ರ ನಿಲ್ಲಿಸಲಿಲ್ಲ. ಹೀಗೆಯೇ ಮತ್ತೆ ಕೆಲವು ದಿನಗಳು ಸಂದವು. ಮುಂದೆ ಒಂದು ದಿನ ಕಟ್ಟಿಗೆಯನ್ನು ತಂದಾಗ ಉರಿಲಿಂಗದೇವರು ಮತ್ತೆ ನಿನಗೆ ಏನು ಬೇಕು?ಎಂದು ಕೇಳಿದರು.
ಆಗ ಪೆದ್ದಣ್ಣನು ಸ್ವಾಮಿ, ನಂದ್ಯವಾಡದ ಸೂರಭಕ್ತ ನಿಗೆ ದೀಕ್ಷೆಯನ್ನು ನೀಡಿದಂತೆ ನನಗೂ ನೀಡಿ ಎಂದು ವಿನಯದಿಂದ ಕೇಳಿಕೊಂಡ. ಆ ವಿಚಾರ ನಿನಗೆ ಹೇಗೆ ತಿಳಿಯಿತು? ಎಂದು ಉರಿಲಿಂಗದೇವರು ಕೇಳಿದಾಗ ಪೆದ್ದಣ್ಣನು ತಾನು ಮಾಳಿಗೆಯ ಮೇಲಿನಿಂದ ಅದನ್ನು ಕಂಡ ವಿಷಯವನ್ನು ವಿವರಿಸಿದ. ಗುರುಗಳು ಆಗ ಸುಮ್ಮನಾದರು. ಮತ್ತೂ ಕೆಲವು ದಿನಗಳು ಕಳೆದವು.
ಪೆದ್ದಣ್ಣ ಹುಲ್ಲು ಕಟ್ಟಿಗೆಯನ್ನು ತರುವುದನ್ನು ನಿಲ್ಲಿಸಲಿಲ್ಲ. ಇನ್ನೊಂದೂ ದಿನವೂ ತನಗೆ ಲಿಂಗವನ್ನು ಕೊಡಿ, ಎಂದು ಕೇಳಿಕೊಂಡ. ಇವನು ತಾನು ಹೋದಲ್ಲಿ ಹಿಂಬಾಲಿಸುತ್ತಾನೆ, ಇವನ ಕಾಟ ಕಳೆದುಕೊಳ್ಳಬೇಕೆಂದು ಬಗೆದು ಉರಿಲಿಂಗದೇವರು ಒಂದು ಕಲ್ಲನ್ನು ಕೈಯಲ್ಲಿ ತೆಗೆದುಕೊಂಡು ತಗೋ ಕಲ್ಲು, ತೊಲಗು ಎಂದು ಹೇಳಿ ಒಂದು ಕಲ್ಲು ಕೊಟ್ಟರು.
ಅದನ್ನು ಸ್ವೀಕರಿಸಿದ ಮುಗ್ದ ಪೆದ್ದಣ್ಣ ಗುರು ಹೇಳಿದ್ದನ್ನೇ ಮಂತ್ರವೆಂದು ತಿಳಿದು ತಗೋ ಕಲ್ಲು ತೊಲಗು, ಎಂದು ಹೇಳಿಕೊಳ್ಳುತ್ತಾ ನಡೆದ. ಪೆದ್ದಣ್ಣನ ಭಾವದ ಒಲುಮೆಯಿಂದ ಕಲ್ಲು ಜ್ಯೋತಿರ್ಮಯಲಿಂಗವಾಯಿತು. ಅವನು ಗುರುಸೇವೆಯನ್ನು ಮುಂದುವರೆಸಿದ.
ಆ ಸಮಯದಲ್ಲಿ ನಡೆದ ಒಂದು ಮಹತ್ವದ ಘಟನೆಯಿಂದಾಗಿ ಉರಿಲಿಂಗದೇವರಿಗೆ ಪೆದ್ದಣ್ಣನ ಮಹಿಮೆ ಅರಿವಿಗೆ ಬಂದಿತು. ಅವನು ದೊಡ್ಡ ಗುರುಭಕ್ತನೆಂಬುದನ್ನು ಮನಗಂಡ, ಹಾಗೂ ತಾತ್ಸಾರದಿಂದ ತಾನಿತ್ತಿದ್ದ ಕಲ್ಲೇ ಅವನ ಕೈಯಲ್ಲಿ ಜ್ಯೋತಿರ್ಮಯಲಿಂಗವಾದುದನ್ನು ಕಂಡು ಅಚ್ಚರಿಗೊಂಡ. ಅವನಿಗೆ ಉರಿಲಿಂಗಪೆದ್ದಣ್ಣ ಎಂಬ ಹೊಸ ಹೆಸರನ್ನಿತ್ತು ಯಥಾವಿಧಿಯಾಗಿ ಉಪದೇಶ ಮಾಡಿದ. “ಯಥಾ ಭಾವಸ್ತಥಾ ಸಿದ್ಧಿ: “ ಎಂಬ ಆಗಮದ ಮಾತಿನ0ತೆಯೇ ” ಭಕ್ತರ ಭಾವದಲ್ಲಿ ಶಿವ ನೆಲೆಗೊಂಬುದು ಸತ್ಯ “ ಎಂದು ತಿಳಿದು ಉರಿಲಿಂಗದೇವರು ತಮ್ಮ ಆಚಾರ್ಯಪೀಠವನ್ನು ಪೆದ್ದಣ್ಣನಿಗೆ ಇತ್ತು ” ಗುರುಸಂಪ್ರದಾಯವ ನಡೆಸು ” ಎಂದು ಸೂಚಿಸಿದ. ಅದರಂತೆ ಪೆದ್ದಣ್ಣನು ಶಿವಭಕ್ತಿಯನ್ನು ಆಚರಿಸುತ್ತಾ ಕೆಲವು ಕಾಲವಿದ್ದು, ಕೊನೆಗೆ ತನ್ನ ” ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ “ನೆಂಬ ಇಷ್ಟಲಿಂಗದಲ್ಲಿ ಬೆರೆದು ಲೀನಗೊಂಡ. ಹೀಗೆ ಕಥೆ ಮುಕ್ತಾಯವಾಗುತ್ತದೆ.
ಈಗ ನಾವು ಇನ್ನೊಂದಿಷ್ಟು ವಿಷಯಗಳನ್ನು ಅವಲೋಕಿಸೋಣ.
ಉರಿಲಿಂಗದೇವರು ಪೆದ್ದಣ್ಣನಿಂದ ಪ್ರಭಾವಿತರಾಗಿ ತನ್ನ ಹೆಸರನ್ನೇ ಅವನಿಗೆ ಇಟ್ಟು ಉರಿಲಿಂಗಪೆದ್ದಿಯಾಗಿ ಮಾಡಿದ್ದಲ್ಲದೆ, ಅವನಿಗೆ ತನ್ನ ಪೀಠದ ಉತ್ತರಾಧಿಕಾರಿತ್ವವನ್ನೇ ನೀಡಿ , ಗುರುಸಂಪ್ರದಾಯವನ್ನು ನಡೆಸಲು ಅವಕಾಶ ನೀಡಿದ. ಒಬ್ಬ ಅಸ್ಪೃಶ್ಯನೆನಿಸಿಕೊಂಡವನಿಗೆ ಮಠದ ಅಧಿಪತ್ಯವನ್ನು ಕೊಟ್ಟುದು ಅಪೂರ್ವ ಸಂಗತಿಯಾಗಿದೆ. ಈ ಪೀಠದ ಅಧಿಕಾರದ ಪ್ರಸಂಗವು ನಮ್ಮ ಸಾಂಸ್ಕೃತಿಕ ಇತಿಹಾಸದ ಒಂದು ಪ್ರಮುಖ ಘಟನೆಯಾಗಿಯೂ ಉಲ್ಲೇಖಗೊಳ್ಳುವಂತಿದೆ.
ಹನ್ನೆರಡನೆಯ ಶತಮಾನದಲ್ಲಿ ಅಸ್ಪೃಶ್ಯನೊಬ್ಬ ಸಂಸ್ಕೃತವನ್ನು ಕಲಿತುದು ಹಾಗೂ ಮಠಾಧಿಪತಿಯಾದುದು ವಚನ ಚಳುವಳಿಯ ಪ್ರತಿಭಟನೆಯ ತೀವ್ರತೆಯ ಸ್ವರೂಪದ ಸಂಕೇತವಾಗಿರುವುದರ ಜೊತೆಗೆ ನಮ್ಮ ಸಮಾಜದಲ್ಲಿ ತಂದ ತೀವ್ರ ಬದಲಾವಣೆಯನ್ನೂ ಸೂಚಿಸುತ್ತದೆ. ದಲಿತ ಶಿವಭಕ್ತರ ಅನೇಕ ಮಠಗಳು ಕರ್ನಾಟಕದಲ್ಲಿವೆ. ಅವುಗಳನ್ನು ಉರಿಲಿಂಗಪೆದ್ದಿಯ ಮಠಗಳೆ0ದೇ ಕರೆಯುತ್ತಾರೆ. ಉರಿಲಿಂಗಪೆದ್ದಿಯ ಮಠಗಳ ಶಾಖೆಗಳು ಇವತ್ತಿಗೂ ಉತ್ತರಕರ್ನಾಟಕದ ಕಲ್ಯಾಣ, ಕೊರಳಿ , ಬೇವಿನ ಚಿಂಚೋಳಿ, ಭಾಲ್ಕಿ ಮೊದಲಾದ ಊರುಗಳಲ್ಲಿ ಇವೆಯೆಂದು ತಿಳಿದು ಬರುತ್ತದೆ.
ಈಗ ಉರಿಲಿಂಗಪೆದ್ದಿಯ 366 ವಚನಗಳು ದೊರೆಯುತ್ತವೆ. ಅವುಗಳು ” ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ” ಎಂಬ ಮುದ್ರಿಕೆಯಿಂದ ಕಾಣಸಿಗುತ್ತವೆ. ಅವನ ವಚನಗಳಲ್ಲಿ ಕಾಣುವ ಸಾಮಾಜಿಕ ಪ್ರಜ್ಞೆ ತುಂಬ ಆಶ್ಚರ್ಯಕರವಾದುದು. ಅವನ ಹಲವಾರು ವಾಚನಗಳಲ್ಲಿನ ಧಾಟಿಯು ಮೃದುತ್ವ ಮತ್ತು ವಿನೀತತೆಗಳಿಂದ ದೂರವಾಗಿ ಕೆಚ್ಛೆದೆಯನ್ನು ಪ್ರದರ್ಶಿಸುವಂಥವು. ಅದರ ಹಿಂದಿನ ಆತ್ಮವಿಶ್ವಾಸ ಅಚ್ಚರಿಯನ್ನು0ಟುಮಾಡುವಂಥದು. ಬೇರೆ ಅನೇಕ ಕೆಲವರ್ಗದ ವಚನಕಾರರ ರಚನೆಗಳಲ್ಲಿ ಕಾಣಿಸದ ಗಟ್ಟಿದನಿ ಇವನ ವಚನಗಳ ವೈಶಿಷ್ಟ್ಯವಾಗಿದೆ.
ಉರಿಲಿಂಗಪೆದ್ದಿಯ ವಚನಗಳಲ್ಲಿ ಎದ್ದು ಕಾಣುವ ಪ್ರಮುಖ ಧಾರ್ಮಿಕ ನಿಲುವುಗಳಲ್ಲಿ ಮುಖ್ಯವಾದುದು ಅವನ ಅಚಲ ಶಿವನಿಷ್ಠೆ ಹಾಗೂ ಅವನು ಅಷ್ಟಾವರಣಗಳಲ್ಲಿನ ಪ್ರತಿಯೊಂದರ ಬಗ್ಗೆಯೂ ತೋರ್ಪಡಿಸುವ ಭಕ್ತಿಗೌರವಗಳು. ಶಿವನು ಕರ್ತ ಎಂದು ನಂಬಿದ್ದರಿಂದ ತನ್ನೆಲ್ಲ ಬಳಲಿಕೆಯೂ ಅಂತ್ಯಗೊಂಡಿತೆಂದು ಒಂದು ವಚನದಲ್ಲಿ ಉರಿಲಿಂಗಪೆದ್ದಿಯು ತೋಡಿಕೊಳ್ಳುತ್ತಾನೆ. ” ಶಿವನೇ ಕರ್ತನು , ನಾನು ಭ್ರತ್ಯನು, ಮಿಕ್ಕುದೆಲ್ಲ ಮಿಥ್ಯವೆಂದರಿದು ಈ ಮಹಾಜ್ಞಾನಪದಕ್ಕೆ ಇನ್ನಾವುದೂ ಸರಿಯಲ್ಲ ” ಎಂಬುದು ಅವನ ಘೋಷಣೆ. ತನ್ನಲ್ಲಿಯೇ ಅಡಗಿರುವ ಶಿವನ ಬಗ್ಗೆ ಅವನದು ಅಚಲವಾದ ನಂಬಿಕೆ. ಮಾನವ ದೇಹದಲ್ಲಿಯೇ ಶಿವಾರಾಧನೆಯು ಸಹಜವಾಗಿಯೂ ಸತತವಾಗಿಯೂ ನಡೆಯುವ ಪರಿಯನ್ನು ತುಂಬ ಹೃದಯಸ್ಪರ್ಶಿಯಾಗಿ ಅವನ ಒಂದು ವಚನ ಚಿತ್ರಿಸುತ್ತದೆ.
ಎನ್ನ0ಗಳದಲ್ಲಿ ನಿನಗೆ ಮಜ್ಜನ
ಎನ್ನ ಲಲಾಟದಲ್ಲಿ ನಿನಗೆ ಗಂಧಾಕ್ಷತೆ
ಎನ್ನ ತುರುಬಿನಲ್ಲಿ ನಿನಗೆ ಕುಸುಮಪೂಜೆ
ಎನ್ನ ನೇತ್ರದಲ್ಲಿ ನಿನಗೆ ನಾನಾ ರೂಪು ವಿಚಿತ್ರವಿನೋದ
ಎನ್ನ ಶ್ರೋತ್ರದಲ್ಲಿ ನಿನಗೆ ಪಂಚಮಹಾವಾದ್ಯ ಕೇಳಿಕೆ
ಎನ್ನ ನಾಸಿಕದಲ್ಲಿ ನಿನಗೆ ಸುಗಂಧ, ಧೂಪ ಪರಿಮಳ
ಎನ್ನ ಜಿಹ್ವೆಯಲ್ಲಿ ನಿನಗೆ ಷಡ್ರಸಾನ್ನ ನೈವೇದ್ಯ
ಎನ್ನ ತ್ವಕ್ಕಿನಲ್ಲಿ ನಿನಗೆ ವಸ್ತ್ರಾಭರಣಾಲಂಕಾರ ಪೂಜೆ
ಎನ್ನ ಸಚ್ಚಿದಾನಂದ ಸೆಜ್ಜೆಗೃಹದಲ್ಲಿ ನೀನು
ಸ್ಪರ್ಶನಂಗೈದು ನೆರೆದಿಪ್ಪೆಯಾಗಿ ನೀ ನಾನೆಂಬೆರಡಳಿದು
ತಾನು ತಾನಾದ ನವನೇನೆ0ಬೆನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
ಅನೇಕ ಕಡೆಗಳಲ್ಲಿ ಉರಿಲಿಂಗಪೆದ್ದಿಯ ಮಾತುಗಳು ಗಾದೆ -ನಾಣ್ಣುಡಿಗಳಂತೆ ಸೂತ್ರಬದ್ಧವಾಗಿರುತ್ತವೆ. ಅಪಾರ ಅರ್ಥವನ್ನು ಕಿರುಸಾಲಿನಲ್ಲಿ ಹುದುಗಿಸಿರುತ್ತಾನೆ ಈ ವಚನಕಾರ. ” ಅರಿದಡೆ ಪಾದೋದಕ, ಅರಿಯದಿರ್ದಡೆ ಬರಿಯ ನೀರು ” “ತತ್ ಶಿಷ್ಯನ ಶರೀರವೆ ನಡೆ ದೇವಾಲಯ ” ” ಇಹದಲೂ ಮಹಾಗ್ರಾಸ , ಪರದಲೂ ಮಹಾಮುಕ್ತಿ “
” ಹೊನ್ನು ಹೆಣ್ಣು ಮಣ್ಣು ತ್ರಿವಿಧವು ಶಿವನು ಕಾಣಿರೋ ” “ಪಂಕವಿಲ್ಲದ ಕಮಲಕ್ಕೆ ಸುಗಂಧ ಸುಲಲಿತವೆಂತಪ್ಪುದಯ್ಯಾ?” ” ಮರೆದಡೆ ಬಂಧನ, ಅರಿದಡೆ ಮೋಕ್ಷ ” ” ತ್ರಿವಿಧದಲ್ಲಿ ನಿರ್ವ0ಚನೆಯೆ ವೈರಾಗ್ಯ, ಪ್ರಸಾದವೆ ಮುಕ್ತಿ ” ” ಕಾಮಧೇನುವಿನ ಶಿಶು ಕಾಮಧೇನುವಪ್ಪುದು ತಪ್ಪದು ” ” ಕಾದ ಲೋಹದ ಮೇಲೆ ಉದಕವನೆರೆದಂತೆ. ” ” ಅಮೃತಕ್ಕೆ ಹಸಿವು0ಟೆ? ಜಲಕ್ಕೆ ತೃಷೆಯು0ಟೆ ? ಮುಂತಾದ ಸಾಲುಗಳನ್ನು ನಿದರ್ಶನಕ್ಕೆ0ದು ನೋಡಬಹುದು.
ಒಟ್ಟಾರೆ ಉರಿಲಿಂಗ ಪೆದ್ದಿಯ ವಚನಗಳು, ವಚನ ಚಳುವಳಿಯ ಉತ್ತಮ ಫಲಗಳಲ್ಲಿ ಒಂದು. ಆ ಕಾಲದ ವೈಚಾರಿಕತೆ, ವ್ಯವಸ್ಥಾವಿರೋಧ ಹಾಗೂ ಸಮಾನತೆಯ ಮೌಲ್ಯಗಳನ್ನು ರೂಢಿಸಿಕೊಂಡಿದ್ದ. ಎಚ್ಛೆತ್ತ ಚೇತನದ ಪ್ರತೀಕ ಅವನು. ಸಮಾಜದ ಅತ್ಯಂತ ಕೆಲವರ್ಗದಿಂದ ಬಂದಿದ್ದರೂ ತನ್ನ ವರ್ಗದಲ್ಲಿ
ಇದ್ದಿರಬಹುದಾದ ಕೀಳರಿಮೆಯನ್ನು ಬಿಸುಟು, ಆತ್ಮ ವಿಶ್ವಾಸದಿಂದ ಕೂಡಿ ಜನಪರ ಆಲೋಚನೆ ಮತ್ತು ಕಾರ್ಯಗಳಲ್ಲಿ ತೊಡಗಿದ್ದವನು ಅವನು. ಅವನೊಬ್ಬ ಧೀರ, ಉತ್ಸಾಹಿ, ಜನಪರ ಧೋರಣೆಯ ಮತ್ತು ಆತ್ಮ ವಿಶ್ವಾಸದ ಉಜ್ವಲವಾದ ನಿದರ್ಶನವಾಗಿದ್ದಾನೆ.
ಕಾಳವ್ವೆ
ಉರಿಲಿಂಗಪೆದ್ದಿಯ ಪುಣ್ಯಸ್ತ್ರೀ ಕಾಳವ್ವೆಯ ವೈಯಕ್ತಿಕ ಬದುಕಿನ ಬಗೆಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗುವುದಿಲ್ಲ. ಆದರೆ ವಚನಗಳನ್ನು ಗಮನಿಸಿದರೆ ಅವಳು ಉರಿಲಿಂಗಪೆದ್ದಿಗೆ ಅನುಗುಣವಾದ ಮನೋಭಾವವುಳ್ಳ ವಚನಕಾರ್ತಿಯೇ ಸರಿ. ಇವಳ ಹನ್ನೆರಡು ವಚನಗಳು ದೊರೆಯುತ್ತವೆ. ಅವಳ ವಚನಾ0ಕಿತ ಉರಿಲಿಂಗಪೆದ್ದಿ ಗಳರಸಕಿ ಎಂದು, ಈ ಮೂಲಕವೂ ಅವಳು ಉರಿಲಿಂಗಪೆದ್ದಿಗೆ ನಿಷ್ಠೆ ತೋರುತ್ತಾಳೆ. ಇವಳ ಅನೇಕ ವಚನಗಳು ವ್ರತದ ಬಗೆಗೆ ಕಾಳಜಿಯನ್ನು ವ್ಯಕ್ತಪಡಿಸುತ್ತವೆ. ” ವ್ರತವೆಂಬುದು ನಾಯಕರತ್ನ, ವ್ರತವೆಂಬುದು ಸುಪ್ಪಾಣಿಯ ಮುತ್ತು, ವ್ರತವೆಂಬುದು ಜೀವನ ಕಳೆ, ವ್ರತವೆಂಬುದು ಸುಯಿದಾನ, ವ್ರತ ತಪ್ಪಲು ಉರಿಲಿಂಗಪೆದ್ದಿಗಳರಸನೊಲ್ಲನವ್ವಾ ಎಂದು ಒಂದು ವಚನ ಹೇಳುತ್ತಾಳೆ.
ಜಾತಿಪದ್ಧತಿಯ ಬಗ್ಗೆ ಕಾಳವ್ವೆಗೂ ತೀವ್ರ ಅಸಹಿಷ್ಣುತೆ. ಅವಳ ಒಂದು ವಚನ ಮಾರ್ಮಿಕವಾಗಿ ಜಾತಿಶ್ರೇಣಿಯ ಅವೈಚಾರಿಕತೆಯನ್ನು ವಿಡಂಬಿಸುತ್ತದೆ.
ಆ ವಚನ ಹೀಗಿದೆ.
ಕುರಿ ಕೋಳಿ ಕಿರಿಮೀನು ತಿಂಬವರಿಗೆಲ್ಲ
ಕುಲಜ ಕುಲಜರೆಂಬರು
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ
ಕೀಳುಜಾತಿಯೆ0ಬರು
ಅವರೆಂತು ಕೀಳುಜಾತಿಯಾದರು? ಜಾತಿಗಳು
ನೀವೇಕೆ ಕೀಳಾದಿರೋ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ
ನೆಕ್ಕಿ ಹೋಯಿತು
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು
ಅದೆ0ತೆ0ದಡೆ
ಸಿದ್ದಲಿಕೆಯಾಯಿತು , ಸಗ್ಗಳೆಯಾಯಿತು.
ಸಿದ್ಧಲಿಕೆಯ ತುಪ್ಪವನು, ಸಗ್ಗಳೆಯ ನೀರನು
ಶುದ್ಧವೆಂದು ಕುಡಿದ ಬುದ್ಧಿಗೇಡಿ
ವಿಪ್ರ0ಗೆ ನಾಯಕ ನರಕ ತಪ್ಪದಯ್ಯಾ
ಉರಿಲಿಂಗಪೆದ್ದಿಗಳರಸ ಒಲ್ಲನವ್ವಾ
ಇಲ್ಲಿ ವಚನಕಾರ್ತಿಯು ಉರಿಲಿಂಗಪೆದ್ದಿಯಂತೆಯೇ ಅಂತ್ಯಜನು ಬ್ರಾಹ್ಮಣನಿಗಿಂತಲೂ ಮಿಗಿಲು ಎಂಬ ಭಾವನೆಯನ್ನು ವ್ಯಕ್ತಪಡಿಸುವ ದಿಟ್ಟತನ ತೋರುತ್ತಿದ್ದಾಳೆ. ಹೀಗೆ ಅನಕ್ಷರಸ್ತೆಯಾದ ಕಾಳವ್ವೆ ಸಹ ತಾನೂ ಶರಣೆಯಾಗಿ ವಚನರಚನೆಯಲ್ಲಿ ತೊಡಗಿಕೊಂಡಿರುವುದು ಒಂದು ಮಹತ್ತರವಾದ ವಿಷಯವೇ ಸರಿ.
–ಸುಧಾ ಪಾಟೀಲ್
ಬೆಳಗಾವಿ
Well written and very informative for youngsters.