ಹಾಯ್ಕುಗಳು.
ಹುಡುಕಿ ಕೊಡಿ
ಸಂಭ್ರಮದ ಬಾಲ್ಯವ
ಮರೆಯಲಾರೆ
ಅವ್ವನ ಸೀರೆ
ಸೆರಗಲ್ಲಿ ಅವಿತು
ಆಟ ಆಡಿದ್ದು
ಮಳೆ ಬಂದಾಗ
ಕಾಗದದ ದೋಣಿಯ
ಹರಿಬಿಟ್ಟ ದ್ದು
ಅಪ್ಪನ ಬೆನ್ನ
ಮೇಲೆ ಸವಾರಿ ಮಾಡಿ
ಆನಂದಿಸಿದ್ದು.
ಕುಂಟೆ ಬಿಲ್ಲೆಯ
ಆಡುವಾಗ ಕುಂಟುತ್ತಾ
ಜಾರಿ ಬಿದ್ದಿದ್ದು.
ಅಟ್ಟದ ಮೇಲೆ
ಅವಿತು ಕಣ್ಣಾಮುಚ್ಚಿ
ಆಟ ಆಡಿದ್ದು.
ಅಣ್ಣನ ಜೊತೆ
ಜಗಳಾ ಮಾಡಿ ಬೊಂಬೆ
ಹರಿದಾಕಿದ್ದು.
ಉಸುಕಿನಲಿ
ಪಾದ ಸೇರಿಸಿ ಗುಬ್ಬಿ
ಮನೆ ಕಟ್ಟಿದ್ದು.
ಕೆಂಪು ಹುಣಸೆ
ಹರಿದು ಅಂಗೈ ಮೇಲೆ
ತಿದ್ದಿ ತೀಡಿದ್ದು.
ಅಂಗಿ ಒಳಗೆ
ತಿಂಡಿಯ ಇಟ್ಟು ಕಚ್ಚಿ
ಹಂಚಿ ತಿಂದಿದ್ದು.
ಪಾಟಿಯ ಮೇಲೆ
ಉಗುಳುತ್ತಾ ಅಕ್ಷರ
ಅಳಕಿಸಿದ್ದು.
ಎಂಥಾ ಚೆಂದದ
ಮಧುರ ಮರೆಯದ
ಬಾಲ್ಯ ನನ್ನದು.
–ಜಯಶ್ರೀ ಭ ಭಂಡಾರಿ.
ಬಾದಾಮಿ.