ಹುಡುಕಿಕೊಡಿ ನನ್ನ ಬಾಲ್ಯ

ಹುಡುಕಿಕೊಡಿ ನನ್ನ ಬಾಲ್ಯ

ಹದವಾಗಿ ಮಳೆ ಸುರಿದು
ಹಸಿರಾದ ಅಂಗಳದಲ್ಲಿ ಆಡಿದ
ಆಟದ ಚಿತ್ತಾರದ ಸುಳಿಯೊಳೊಗಿನ
ಬಾಲ್ಯದ ಸವಿ ನೆನಪಿಗೆ ಜಾರಿದಾಗ…

ಒಟ್ಟು ಕುಟುಂಬವಾದರೂ
ಬೆಟ್ಟದಷ್ಟು ಕೆಲಸ ನಮಗೆ
ಹಟ್ಟಿಯ ಕಸ ಗುಡಿಸಬೇಕು
ದನದ ಸೆಗಣಿ ಎತ್ತಬೇಕು
ಸಣ್ಣ ಪುಟ್ಟ ಕೆಲಸ ಮಾಡಲೇಬೇಕು..

ಎಲ್ಲ ಮಕ್ಕಳಂತೆ ಆಡುವ ಆಸೆ
ಆದರೆ ಅಪ್ಪನ ಭಯ
ಮನೆಗೆಲಸದ ನಂತರವೇ ಆಟ
ಚಿಣ್ಣರೆಲ್ಲರೂ ಕಣ್ತಪ್ಪಿಸಿ
ಹೊರಟೆವು ನೋಡಿ ಕೆರೆಯ ಅಂಗಳಕೆ…

ಕೆರೆಯ ಕರಿಯ ಕಪ್ಪು ಮಣ್ಣಿನಲ್ಲಿ
ಮಾಡಿದ ಆಟಿಕೆಗಳೆಷ್ಟೋ,
ಅರಿವೆಗಳಲ್ಲಿ ಮಾಡಿದ ಗೊಂಬೆಗಳೆಷ್ಟೋ
ಗಿಡಗಂಟಿಗಳ ಅಲೆದು ತಿಂದ ಬಗೆಬಗೆಯ ಹಣ್ಣುಗಳೆಷ್ಟೋ…

ಹಸಿ ನೆಲದಲ್ಲಿ ಪಟ್ಟೆಕೊರೆದು
ಆಡಿದ ಕುಂಟೆಪಿಲ್ಲಿಯ ನೆನಪು,
ಗೋಲಿ,ಚಿನ್ನಿದಾಂಡಿನ ಕಂಪು
ಚೌಕಭಾರ,ಕಣ್ಣಾಮುಚ್ಚಾಲೆಯಾಟದ ಇಂಪು
ಮರಕೋತಿ ಲಗೋರಿ ಆಟ ಸಂಪು..

ಅಬ್ಬಾ…! ಶಿಸ್ತಿನಲ್ಲೂ ಸುಖವಿತ್ತು
ನೋವಿನಲ್ಲೂ ನಲಿವಿತ್ತು
ಅಜ್ಜ ಅಜ್ಜಿಯರ ಜೊತೆ
ಒಂದೇ ತಟ್ಟೆಯಲ್ಲಿ ಬೆಣ್ಣೆ ರೊಟ್ಟಿ
ತಿಂದ ಆ ದಿನಗಳ ಹೇಗೆ ಮರೆಯಲಿ ನಾನು ..

ಬೋಳು ಗುಡ್ಡದ ಮರೆಯಲ್ಲಿ
ಖಾಲಿ ಎನಿಸುವ ಮೈ ಮನಗಳು
ಎಲ್ಲಾ ಇದೆ, ಆದರೆ ಏನೂ ಇಲ್ಲ
ಹುಡುಕಿ ಕೊಡಿ ನನ್ನ ಮಧುರ ಬಾಲ್ಯವ..

ಗೀತಾ.ಜಿ.ಎಸ್
ಹರಮಘಟ್ಟ ಶಿವಮೊಗ್ಗ

Don`t copy text!