ಗುಹೇಶ್ವರಲಿಂಗ ಲೀಯವಾಯಿತ್ತು
ನೆನೆ ಎಂದಡೆ ಏನ ನೆನೆವೆನಯ್ಯಾ? ಎನ್ನ ಕಾಯವೆ ಕೈಲಾಸವಾಯಿತ್ತು, ಮನವೆ ಲಿಂಗವಾಯಿತ್ತು, ತನುವೆ ಸೆಜ್ಜೆಯಾಯಿತ್ತು. ನೆನೆವಡೆ ದೇವನುಂಟೆ? ನೋಡುವಡೆ ಭಕ್ತನುಂಟೆ? ಗುಹೇಶ್ವರಲಿಂಗ ಲೀಯವಾಯಿತ್ತು.
–ಅಲ್ಲಮಪ್ರಭುದೇವರು
ಅಲ್ಲಮರು ಜಗವು ಕಂಡ ಶ್ರೇಷ್ಠ ದಾರ್ಶನಿಕ ತತ್ವಜ್ಞಾನಿ ಮೇಧಾವಿ ಕಾಲಜ್ಞಾನಿ ಮತ್ತು ಉದಾತ್ತಿಕರಣ ಸಿದ್ಧಾಂತದ ಮೇರು ಪರ್ವತ. ನಿರಾಕಾರ ನಿರ್ಗುಣ ತತ್ವವನ್ನು ಸಾದರ ಪಡಿಸಿ ಶರಣರಲ್ಲಿ ವೈಚಾರಿಕ ಮನೋಭಾವ ಹೆಚ್ಚಿಸಿದ ಧೀಮಂತ ನಾಯಕ.
ನೆನೆ ಎಂದಡೆ ಏನ ನೆನೆವೆನಯ್ಯಾ?
ದೇವರು ಅಧ್ಯಾತ್ಮ ಸಾಧನೆಗಾಗಿ
ದೇವರನ್ನು ನೆನೆಯುವ ಸುಖ ಶಾಂತಿ ನೆಮ್ಮದಿ ಸಂತಸ ತರುವ ಪ್ರಯತ್ನ ಪ್ರಾರ್ಥನೆ ಪೂಜೆ ನೆನಹುವಿನಿಂದ ಆಗುತ್ತದೆ. ಹೀಗಾಗಿ ಬಹುತೇಕ ಸಾಧಕರು
ನೆನೆಯುವ ಪ್ರಯಸದಲ್ಲಿ ಸಿಲುಕಿ ಬಿಡುತ್ತಾರೆ. ಆದರೆ ಅಲ್ಲಮ ಪ್ರಭುಗಳು ಏನು ನೆನೆಯಲಿ ಎಂಬ ಪ್ರಶ್ನೆ ಹಾಕಿಕೊಂಡು ಅದಕ್ಕೆ ಉತ್ತರವನ್ನು ತಾವೇ ಹುಡುಕಲು
ಯತ್ನಿಸುತ್ತಾರೆ.
ಎನ್ನ ಕಾಯವೆ ಕೈಲಾಸವಾಯಿತ್ತು
ಸ್ವರ್ಗ ನರಕ ಪಾಪ ಪುಣ್ಯ ತಿಥಿ ಮುಹೂರ್ತ ಪೂಜೆ ಪ್ರಾರ್ಥನೆ ಮಾಡಿಕೊಳ್ಳುವ ಜನರಿಗೆ ಚಾಟಿ ಏಟು ನೀಡುವ ಬಲವಾದ ವೈಚಾರಿಕ ಮನೋಭಾವ ನಿಲುವು ಅಲ್ಲಮರದ್ದು.
ಬಸವಣ್ಣನವರು ಹೇಳಿದಂತೆ
ಕಾಯವೇ ಕೈಲಾಸ ಎಂಬ ನೀತಿ ತತ್ವವನ್ನು ಅರಿತವನು ಅಕ್ಕನ ಅದನ್ನು ಸಾರ್ವತ್ರಿಕಗೊಳಿಸುವ ಪ್ರಾಮಾಣಿಕ ಹಂಬಲ ಉಳ್ಳವರು ಅಲ್ಲಮರು.
ಕಾಯವೇ ಕೈಲಾಸವಾದ
ಕಾರಣ ಮತ್ತೆ ಏನು ನೆನೆಯಲಿ ಎಂಬ ಪ್ರಶ್ನೆ ಇಡುತ್ತಾರೆ.
ಮನವೆ ಲಿಂಗವಾಯಿತ್ತು,
ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ ಎಂಬ ಗಟ್ಟಿ ನಿರ್ಧಾರ ಹೊಂದಿದ ಶರಣ ಚಳುವಳಿ ಎಂದಿಗೂ ಆಚರಣೆಗೆ ಸೀಮಿತಗೊಳಿಸುವ ಕಾರ್ಯಕ್ಕೆ ಕೈ ಹಾಕಲಿಲ್ಲ. ಕಾಯಕ ಪ್ರಧಾನ ಶ್ರಮ ಸಂಸ್ಕೃತಿ ವಿಚಾರವನ್ನು ಇಟ್ಟು ಸತ್ಯ ಶುದ್ಧ ಕಾಯಕ ಮತ್ತು ದಾಸೋಹ ತತ್ವವನ್ನು ನೀಡಿದ ಬಸವಣ್ಣನವರ ಚಿಂತನೆ ವಿಶಾಲ ವ್ಯಾಪ್ತಿಯ ವೈಚಾರಿಕ ಕ್ರಾಂತಿಯ ಬೀಜಗಳು.
ಹೀಗಾಗಿ ಅಲ್ಲಮರು ಲಿಂಗವೆಂಬುದು ಅರಿವಿನ ಕುರುಹು ಅದು ಮನದಲ್ಲಿ ನೆಲೆಗೊಂಡ ಬಳಿಕ ಲಿಂಗವೇ ಆಚಾರವಾದಾಗ ಬೇರೆ ಸ್ಥಾವರ ಲಿಂಗವುಂಟೆ. ಮನವೆ ಮಹಾದೇವ ಎಂಬ ಭಾವ ಅಲ್ಲಮರದ್ದು.
ತನುವೆ ಸೆಜ್ಜೆಯಾಯಿತ್ತು
ತನುವ ತೊಂಟವ ಮಾಡಿ ಮನವ ಗುದ್ದಲಿ ಮಾಡಿ ಅಗೆದು ಬಗೆದನಯ್ಯ ಭ್ರಾಂತಿ ಎಂಬ ಬೇರು ಎಂದು ಅಲ್ಲಮರು ಹೇಳುವಂತೆ.
ತನುವನ್ನು ಮನೆಯನ್ನಾಗಿ ತೋಟವನ್ನಾಗಿ ಮಾಡಿ ಆಯಾ ಸಂದರ್ಭದಲ್ಲಿ ಬೇರೆ ಬೇರೆ ಪ್ರತಿಮೆ ಬೆಡಗು ಬಳಸಿ ಜೀವನ ದರ್ಶನ ಸುಂದರವಾಗಿಸುವ ಅಪ್ರತಿಮ ಸಾಧಕರು ಅಲ್ಲಮರು. ತನುವು ಮನೆಯಾಗಿದೆ. ಸ್ಥಾವರವಲ್ಲದ ಮನೆ ಮನಕ್ಕೆ ಆಶ್ರಯ ತಾಣವಾಗಿದೆ.
ನೆನೆವಡೆ ದೇವನುಂಟೆ?
ಇಷ್ಟೆಲ್ಲಾ ನಿರಾಕಾರ ನಿರ್ಗುಣ ಶಾಶ್ವತ ಜ್ಞಾನ ಸುಖ ನೆಮ್ಮದಿ ನೀಡುವ ಕಾಟ ಗುಣ ಇರುವಾಗ ಮತ್ತೆ ನೆನೆದರೆ ಬೇರೆ ದೇವರುಂಟೆ ಇಂತಹ ಸಾತ್ವಿಕ ಸ್ವಭಾವದ ಪ್ರಶ್ನೆ ಅಲ್ಲಮರದ್ದು.
ಹೀಗಾಗಿ ನೆನೆಯುವುದು ಜಪ ತಪ ಮಂತ್ರ ಮೋಕ್ಷ ಎಂದು ಸಮಯ ಹರಣ ಮಾಡುವವರಿಗೆ ಸತ್ ಚಿತ್ ಆನಂದ ನೀಡುವ ಅಂತರಂಗದ ಅನುಸಂಧಾನ ಮಾಡುವ ಸಾಧಕ ನಿಜವಾದ ದೇವನಾಗ ಬಲ್ಲ.
ನೋಡುವಡೆ ಭಕ್ತನುಂಟೆ?
ಭಕ್ತ ಬೇರೆ ದೇವ ಬೇರೆ ಎಂಬ ನಂಬಿಕೆ ವಿಶ್ವಾಸ ಹೊತ್ತ ಸಮಾಜದಲ್ಲಿ ಸತ್ಯ ಶುದ್ಧ ಕಾಯಕ ಪ್ರಧಾನ ಶರಣ ಶ್ರಮ ಸಂಸ್ಕೃತಿ ನಾಯಕ. ಲಿಂಗಾಯತ ಧರ್ಮದಲ್ಲೀ ಶ್ರೇಣೀಕೃತ ಜಾತಿ ಗುರು ಶಿಷ್ಯ ದೇವ ಭಕ್ತ ಎಂಬ ಭೇದಗಳಿಲ್ಲ. ಇಂತಹ ಸೃಷ್ಟಿ ಪರಿಸರ ಬಯಲು ಪ್ರಧಾನವಾದ ಸುಂದರ ಭಾವ ಸಿದ್ಧಾಂತ ಹೊಂದಿದ ಶರಣ
ಕಣ್ಣು ತೆರೆದು ನೋಡಿದರೆ ಭಕ್ತನೆಂಬ ಕಿಂಕರನಿಲ್ಲ . ಶರಣನ ಕಾಯವೇ ಕೈಲಾಸ ಮನಸು ಲಿಂಗ ತನುವು ಸಜ್ಜೆ ಹಾಗಾದಲ್ಲಿ ಎಲ್ಲಿ ಭಕ್ತ ಎಂಬುದು ಅಲ್ಲಮರು ದಿಟ್ಟ ನಿರ್ಧಾರ.
ಗುಹೇಶ್ವರಲಿಂಗ ಲೀಯವಾಯಿತ್ತು.
ತನ್ನ ಬಿಟ್ಟು ದೇವರಿಲ್ಲ ಮಣ್ಣು ಬಿಟ್ಟು ಮಡಿಕೆ ಇಲ್ಲ. ದೇವರನ್ನು ಅಂತರಂಗದಲ್ಲಿ ಹುಡುಕುವ ಹಾದಿಯಲ್ಲಿ ಶರಣರು ಅತ್ಯಂತ ಸುಂದರ ಸರಳ ಶಿವಯೋಗ ಸಾಧನೆ ಮಾಡಿದರು .ಮಡಕೆಯ ಮಾಡುವರೇ ಮಣ್ಣೆ ಮೊದಲು ತೊಡಿಗೆಯ ಮಾಡುವರೇ ಹೊನ್ನೆ ಮೊದಲು ಶಿವ ಪಥ ಅರಿವೊಡೆ ಗುರು ಪಥ ಮೊದಲು ಕೂಡಲ ಸಂಗಮ ದೇವನ ಅರಿವೋಡೆ ಶರಣರ
ಸಂಗವೇ ಮೊದಲು ಮೊದಲು ಎಂದು ಬಸವಣ್ಣ ಹೇಳಿದ ಹಾಗೆ
ಭಕ್ತನೇ ದೇವನ ಪರಿ ಶರಣರದ್ದು ಹೀಗಾಗಿ ಲಿಂಗವೆನ್ನುವುದು ಇಂತಹ ಅತ್ಯುನ್ನತ ಮಟ್ಟದ ವೈಚಾರಿಕ ಮನೋಭಾವದ ಮೌಲ್ಯಗಳ ಮೊತ್ತ. ಅದು ಕಾಯವೇ ಅದು ಭಕ್ತನೇ ಆದಲ್ಲಿ ಲಿಂಗವು ಇವನಲ್ಲಿ ಲೀನವಾಗುವುದು ಎಂದರ್ಥ.
–ಡಾ ಶಶಿಕಾಂತ ಪಟ್ಟಣ ರಾಮದುರ್ಗ