ಸಕಲೇಂದ್ರಿಯದೊಳಗಿರ್ದು ವಸ್ತುವನರಿದನೆಂಬ
ಹುತ್ತದೊಳಗಣ ಹಾವ, ಮಡುವಿನೊಳಗಣ ಮತ್ಸ್ಯವ, ಮಹಾಕಾನನದ ವಾನರವ, ಹಿಡಿವ ಪರಿಯಿನ್ನೆಂತೊ ? ಹುತ್ತವನಗೆದು, ಮಡುವ ಹೂಳಿ, ಕಾನನವ ತರಿದು, ಇಂತಿವ ಹಿಡಿಯಬೇಕು. ಸಕಲೇಂದ್ರಿಯದೊಳಗಿರ್ದು ವಸ್ತುವನರಿದನೆಂಬ ಮಿಟ್ಟೆಯ ಭಂಡರನೊಪ್ಪ ಏಣಾಂಕಧರ ಸೋಮೇಶ್ವರಲಿಂಗ.
–ಬಿಬ್ಬಿ ಬಾಚಯ್ಯ
ಬಿಬ್ಬಿ ಬಾಚಯ್ಯ ಬಸವಣ್ಣನವರ ಸಮಕಾಲೀನ ಶರಣ .
ಕಾಯ ಪ್ರಧಾನ ತತ್ವ ಚಿಂತನೆ ಮತ್ತು ಪಾಲನೆಗೆ
ಆದ್ಯತೆ ನೀಡಿದ್ದಾನೆ. ಇಂದ್ರಿಯ ಚಪಲತೆ ವಿಷಯಾದಿ ಬಳಲಿಕೆಗಳನ್ನು ಪ್ರಾಣಿಗಳ ಪ್ರತಿಮೆಗಳ ಮೂಲಕ ತನ್ನ ವಚನ ಬರೆದಿದ್ದಾನೆ.
ಹುತ್ತದೊಳಗಣ ಹಾವ, ಮಡುವಿನೊಳಗಣ ಮತ್ಸ್ಯವ, ಮಹಾಕಾನನದ ವಾನರವ, ಹಿಡಿವ ಪರಿಯಿನ್ನೆಂತೊ ?
ಶರೀರವು ಒಂದು ಹಾವಿನ ಹುತ್ತ ಇದ್ದಂತೆ ಇಲ್ಲಿ ಒಳಗೆ ಅಡುಗಿ ಕುಳಿತ ವಿಷಯಾದಿ ಕಾಮ ಕ್ರೋಧ ಮೋಹ ಲೋಭ ಮದ ಮತ್ಸರ ಎಂಬ ವಿಷಮ ಜಗತ್ತಿಗೆ ಬಿಬ್ಬೀ ಬಾಚಿದೇವ ಹಾವು ಎಂದು ಕರೆದಿದ್ದಾನೆ. ಅರಿಷಡ್ವರ್ಗಗಳ ಅಪಾಯವು ಹಾವಿನ ವಿಷವು ಇದ್ದಂತೆ ಎಂದು ಹೇಳಿದ್ದಾನೆ.
ಅದೇ ರೀತಿ ಮನುಷ್ಯನ ಶರೀರವು ಒಂದು ಮಡುವು ಇದ್ದಂತೆ . ಆಳವಾದ ನೀರಿನ ಮಡುವು ಮತ್ತು ಅದರಲ್ಲಿರುವ ಮೀನವು ಹರಿದಾಡುವ ಮನಸ್ಸಿನಂತೆ ಒಂದೇ ಕಡೆಗೆ ನಿಲ್ಲದು. ಹೀಗೆ ನಿರಂತರ ನೀರಿನಲ್ಲಿ ಹರಿದಾಡುವ ಮನಸ್ಸಿನಂತೆ ಮತ್ಸವು. ದಟ್ಟವಾದ ಅಡವಿಯೊಳಗೆ ವಾನರ ಮಂಗಗಳನ್ನು ಹಿಡಿಯುವುದು ಹೇಗೆ ಸಾಧ್ಯ. ಚಂಚಲತೆ ಪ್ರತೀಕವಾದ ಮಂಗ ಕೋತಿ ವಾನರಗಳನ್ನು ಕಟ್ಟಿ ಹಾಕುವುದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡುತ್ತಾನೆ. ಇಲ್ಲಿಯೂ ಕೂಡ ಶರೀರ ಒಂದು ದಟ್ಟವಾದ ಅಡವಿ. ಅಲ್ಲಿರುವ ಚಂಚಲ ಸ್ವಭಾವವು ಕೋತಿ ಮಂಗ ಇದ್ದ ಹಾಗೆ ಎಂದು ನಿರೂಪಿಸಿದ್ದಾನೆ.
ಹುತ್ತವನಗೆದು, ಮಡುವ ಹೂಳಿ, ಕಾನನವ ತರಿದು, ಇಂತಿವ ಹಿಡಿಯಬೇಕು.
ಶರಿದೊಳಗಿನ ಹುತ್ತವ ಹೊಕ್ಕಡೆ ಹಾವು ಸಿಗುತ್ತದೆ. ಹುತ್ತನ್ನು ಅಗೆದು ಬಗೆದರೆ ಅಲ್ಲಿ ಹಾವು ಜೀವಿಸದೆ ಬೇರೆ ಕಡೆಗೆ ಹೋಗುವುದು. ಹುತ್ತ ಆಗೇದ ಮೇಲೆ ಹಾವು ಸಿಗುತ್ತದೆ.
ಮಡುವ ಹೊಕ್ಕು ಅಲ್ಲಿರುವ ಮೀನ ಒಂದು ಹರಿದಾಡುವ ಮನಸ್ಸು ಇದ್ದಂತೆ . ನೀರಿನ ಆಳಕ್ಕೆ ಇಳಿದು ಮೀನನ್ನು ಹಿಡಿಯ ಬೇಕು. ಮಿನವು ಹರಿದಾಡುವ ಮನಸ್ಸು ಅದನ್ನು ನಿಗ್ರಹಿಸುವ ಮತ್ತು ಮತ್ತು ಕಟ್ಟಿ ಹಾಕುವ ಕಾರ್ಯ ನಡೆಯಬೇಕು ಎಂದು ಹೇಳಿದ್ದಾರೆ ಬಾಚಯ್ಯಾ.
ಅಡವಿಯೊಳಗಿನ ಮರಗಳ ಕೊಂಬೆ ರೆಂಬೆ ಕಡಿದರೆ ಮಂಗಗಳಿಗೆ ಆಶ್ರಯ ಇರುವದಿಲ್ಲ. ಹೀಗಾಗಿ ಚಂಚಲವಾದ ಮನಸ್ಸು ವಿವೇಚನಾ ಬುದ್ಧಿ ಒಂದೆಡೆ ಕಟ್ಟಿ ಹಾಕಬಹುದು.
ಸಕಲೇಂದ್ರಿಯದೊಳಗಿರ್ದು ವಸ್ತುವನರಿದನೆಂಬ ಮಿಟ್ಟೆಯ ಭಂಡರನೊಪ್ಪ ಏಣಾಂಕಧರ ಸೋಮೇಶ್ವರಲಿಂಗ.
ಬಾಹ್ಯ ಜಗತ್ತಿನ ಹಾವಿನ ಹುತ್ತ ಅಗೆದು ಹಾವ ಹಿಡಿಯುವ .ಆಯ್ತು ನೀರಿನ ಆಳಕ್ಕೆ ಇಳಿದು ಮೀನನ್ನು ಹಿಡಿದು ಬಿಟ್ಟೆ ಎನ್ನುವ ಭಾವ. ಕಾನನದ ಮರಗಳ ರೆಂಬೆ ಕೊಂಬೆ ತರಿದು ಮಂಗಗಳ ಹಿಡಿಯಬಹುದು ಎನ್ನುವಂತೆ.
ಸಕಲ ಇಂದ್ರಿಯಗಳಲ್ಲಿ ಹುದುಗಿದ್ದ ಅರಿಷಡ್ವರ್ಗಗಳ ವಿಷಯ ಹಿಡಿದಿಡುವ ಅಥವಾ ಕಟ್ಟಿ ಹಾಕುವ ಮತ್ತು
ಅವುಗಳನ್ನು ಸಂಪೂರ್ಣ ಅರಿತೇನೆಂಬುದು ಕುಹಕದ ಮಾತು . ಇಂತವರನ್ನು ಕಂಡು
ಮಿಟ್ಟೆಯ ಭಂಡರನೊಪ್ಪ ಏಣಾಂಕಧರ ಸೋಮೇಶ್ವರಲಿಂಗ. ಎಂದಿದ್ದಾನೆ. ದೇವ ಚೈತನ್ಯ ಇಂತಹ ಸುಳ್ಳು ಸಾಧಕರನ್ನು ಒಪ್ಪನು ಎಂದು
ಬಾಚಯ್ಯ ತನ್ನ ತೀವ್ರವಾದ ಕಠಿಣ ಪದಗಳಲ್ಲಿ ಲೇವಡಿ ಮಾಡಿದ್ದಾರೆ.
-ಡಾ ಶಶಿಕಾಂತ ಪಟ್ಟಣ ರಾಮದುರ್ಗ 9552002338