ಅಕ್ಕಮಹಾದೇವಿಯರ ವಚನಗಳ ವಿಶ್ಲೇಷಣೆ
ಪುರುಷನ ಮುಂದೆ ಮಾಯೆ
ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು
ಸ್ತ್ರೀಯೆಂಬ ಮುಂದೆ ಮಾಯೆ
ಪುರುಷನೆಂಬ ಅಭಿಮಾನವಾಗಿ ಕಾಡುವುದು
ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯ
ಮರುಳಾಗಿ ತೋರುವುದು
ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ
ಮಾಯೆಯಿಲ್ಲ ಮರುಹಿಲ್ಲ ಅಭಿಮಾನವೂ ಇಲ್ಲ. . . .
ವಿಶ್ವದ ದಾರ್ಶನಿಕರಲ್ಲೇ ಶರಣೆ, ಅನುಭಾವಿ ಅಕ್ಕಮಹಾದೇವಿ ಅತ್ಯಂತ ಶ್ರೇಷ್ಟಳಾದವಳು. ಅವಳಿಂದ ರಚಿತವಾದ ವಚನಗಳಲ್ಲೇ ಅದ್ಭುತ ಮತ್ತು ವೈಶಿಷ್ಟ್ಯ ಪೂರ್ಣವಾದ ವಚನವಿದು. ಮಾತೃದೈವ ಆರಾಧನೆಯ ಸ್ತ್ರಿಶಕ್ತಿ ಆರಾಧನೆಯ ಪಾರಂಪರಿಕ ಇತಿಹಾಸದಲ್ಲಿಯೇ ಸ್ತ್ರೀಯು ಎಲ್ಲ ಕೆಡಕುಗಳ ಮೂಲ ಎಂದು ನೇತಾತ್ಮಕವಾಗಿ ಹೆಣ್ಣು ‘ಮಾಯೆ’ ಎಂದು ಅರ್ಥೈಸಿದ್ದುಂಟು. ಸ್ತ್ರೀ ಯನ್ನು ಅಪಮೌಲ್ಯಗೊಳಿಸಿದ ಲೋಕದ ನೀತಿಯನ್ನು ಮುರಿದು ಕಟ್ಟುವ ಕಾರ್ಯ ಅಕ್ಕನಿಂದ ನಡೆದುಬಂದ ಸ್ರ್ರೀ ಮಾತ್ರ ಪುರುಷನ ಮುಂದೆ ಮಾಯೆಯೆಂಬ ಅಭಿಮಾನವಾಗಿ ಕಾಡುತ್ತದೆ ಎಂಬ ಮಾತಿಗೆ ಪ್ರತಿಯಾಗಿ ಪುರುಷನೂ ಸ್ತ್ರೀಯ ಮುಂದೆ ಮಾಯೆ ಎಂಬ ಅಭಿಮಾನವಾಗಿ ನಿಲ್ಲುತ್ತದೆ ಎಂಬ ಹೊಸ ನಿಲುವಿನೊಂದಿಗೆ ಸಾಂಸ್ಕೃತಿಯನ್ನು ಪುನರ್ ಕಟ್ಟುವ ಭಿನ್ನ ಆಲೋಚನ ಕ್ರಮವನ್ನು ಅಕ್ಕನ ಈ ವಚನ ಸ್ಪಷ್ಟಗೊಳಿಸುತ್ತದೆ.
ಅಕ್ಕ ಬಿಚ್ಚಿಟ್ಟ ಅಂತರಂಗದ ನಿಲುವು, ಇತಿಹಾಸದಲ್ಲೇ ಎಲ್ಲೂ ಕಂಡಿಲ್ಲ. ಕಾವ್ಯಗಳೂ ಹೇಳಿಲ್ಲ. ಒಂದು ವೇಳೆ ಹಾಗೆ ಹೇಳುವ ಪ್ರಯತ್ನ ನಡೆದಾಗ ಅದು ಹೆಣ್ಣಿಗೆ ಮಾಡುವ ಘೋರ ಅಪರಾಧ, ಅಪಚಾರ ಎಂಬಂತೆ ಚಿತ್ರಿಸಿದೆ.
ಮಾಯೆ ಎಂಬುದು ಹೆಣ್ಣಾಗಿ, ಮಣ್ಣಾಗಿ, ಹೊನ್ನಾಗಿ ಕಾಡಿದ್ದು ಉಂಟು. ಆದರೆ ‘ಹೆಣ್ಣು-ಮಣ್ಣು-ಹೊನ್ನುಗಳು ಮಾಯೆಯಲ್ಲ’ ಎಂದ ಅಲ್ಲಮರ ನಿಲುವಾದರೆ, ‘ಮಾಯೆ ಎನ್ನುವುದೇ ಹೆಣ್ಣಲ್ಲ’ ಎಂಬುದು ಅಕ್ಕನ ನಿಲುವು. ಸ್ತ್ರೀಯತ್ವ ವನ್ನೇ ಮಾಯೆ ಎಂದು ಅಪಮೌಲ್ಯಗೊಳಿಸಿದ ಸಂಪ್ರದಾಯಕ ಗ್ರಹಿಕೆಗಳಿಗಿಂತ ಭಿನ್ನವಾಗಿ ಅಕ್ಕನ ಆಲೋಚನ ಕ್ರಮವಿದು.
ಮಾಯೆ ಎಂಬುದು ವ್ಯಕ್ತಿ-ವಸ್ತು-ವಿಷಯನಿಷ್ಟವಲ್ಲ. ಅದು ಒಂದು ಮಾನಸಿಕ ಪ್ರವೃತ್ತಿ. ಮನದ ಮುಂದೆ ಆಶೆ ಎಂಬ ಅಲ್ಲಮಪ್ರಭುಗಳ ಚಿಂತನೆಗೆ ಕಳಶರೂಪವಾಗಿ ಮಾಯೆ ಲಿಂಗಸಂಬಂಧಿಯಲ್ಲ ಎಂಬ ಸತ್ಯವನ್ನು ವೈಜ್ಞಾನಿಕ ವೈಚಾರಿಕ ನೆಲೆಗಟ್ಟಿನಲ್ಲಿ ಅಕ್ಕ ಮಾತನಾಡುತ್ತಾಳೆ. ಮಾಯೆಯನ್ನು ಲಿಂಗಾತೀತನೆಲೆಯಲ್ಲಿ ಅರ್ಥೈಸುತ್ತಾಳೆ.
‘ಹೆಣ್ಣು ಮಾಯೆ’ ಎನ್ನುವ ಸಿದ್ಧಮಾದರಿಗೆ ‘ಗಂಡೂ ಮಾಯೆ’ ಎಂಬ ಪ್ರತಿಮಾದರಿಯನ್ನು ಅಕ್ಕ ಸೃಷ್ಟಿಸುತ್ತಾಳೆ. ಪುರುಷನಿಗೆ ಮಾತ್ರ ಸಾಧ್ಯ ಎನಿಸುವ ಆಧ್ಯಾತ್ಮ ಪಥದಲ್ಲಿ ಹೆಣ್ಣು ಅಡ್ಡಿ ಎನ್ನುವ ಮನೋಭೂಮಿಕೆಯನ್ನೇ ಕಿತ್ತೊಗೆದು, ಹೆಣ್ಣು ಮಾಯೆಯಲ್ಲ ಎನ್ನುವುದರ ಮೂಲಕ ಜೀವಪರವಾದ ಕಳಕಳಿಯೊಂದನ್ನು ಇಲ್ಲಿ ಕಾಣಬಹುದಾಗಿದೆ.
ಅಜ್ಞಾನದ ಅಂಧಕಾರದಲ್ಲಿ, ವಿಷಯಾಸಕ್ತಿಯನ್ನು ಪ್ರೇರೇಪಿಸಿ ಪ್ರಭಲ ಆಕರ್ಷಣೆಗೆ ಒಳಪಡಿಸಿ ದಾರಿತಪ್ಪಿಸುತ್ತದೆ ಎಂಬ ಮಾಯಾ ಚಿತ್ರಣವು- ಜೀವ-ಮಾಯೆಯ ಸಂಬAಧವನ್ನು ನೇತಾತ್ಮಕವಾಗಿ ಕಂಡಿರಿಸುತ್ತದೆ. ಆತ್ಮಸಾಧನೆಗಾಗಿ ವೈರಾಗ್ಯದ ಹಾದಿಯಲ್ಲಿ ಸಾಗಿದ ಅಕ್ಕನಿಗೆ ಕಾಡಿದ ಅಡ್ಡಿಯಾದ ಸಂಗತಿಗಳು ಹಲವಾರು ಕಾಡುವ ಮನಸ್ಸಿನ ಮಾಯಾ ಪ್ರಭಾವವನ್ನು ಅನುಭವಿಸಿದ ಅಕ್ಕನಿಗೆ ಮನಸಿನ ಆಸೆ ಅಭಿಮಾನಗಳು ಹಸಿವಾಗಿ ತೃಷೆಯಾಗಿ ಮೋಹ-ಮಮಕಾರಗಳಾಗಿ ಕಾಡಿದ್ದುಂಟು. ಕಾಡುವ ಮನಸಿನ ಬಯಕೆಗಳಿಗೆ ಗಂಡು-ಹೆಣ್ಣೆಂಬ ಅಂತರವಿಲ್ಲ. ಅದು ಜೀವಮೂಲವಾದದ್ದು ಅಭಿಮಾನ-ಅಹಂಕಾರ ಮೂಲವಾದದ್ದು, ಅದು ಪುರುಷನಿಗೆ ಮಾತ್ರ ಕಾಡುವುದು ಎಂಬ ಪುರುಷ ಶ್ರೇಷ್ಟತೆ ಅಭಿಮಾನಕ್ಕೆ “ಅಕ್ಕ ಕೊಡಲಿಪೆಟ್ಟು ಹಾಕಿದ್ದಾಳೆ.
ಪುರುಷನಿಗೆ ಮಾಯೆ ಎನ್ನುವುದು ಹೆಣ್ಣಾಗಿ ಕಾಡಿದರೆ, ಹೆಣ್ಣಿಗೆ ಗಂಡಾಗಿ ಕಾಡಲು ಸಾಧ್ಯ ಎನ್ನುವ ಸತ್ಯದರ್ಶನವನ್ನು ಮಾಡಿಕೊಡುತ್ತಾಳೆ ಆಸೆ-ಬಯಕೆ-ಮೋಹ-ಕಾಮಗಳು ಗಂಡಿನಲ್ಲಿ ಇರುವಂತೆ ಸಹಜವಾಗಿ ಹೆಣ್ಣಲ್ಲಿ ಮೂಡಿಬರಲು ಸಾಧ್ಯ ಯಾಕೆಂದರೆ “ನಡುವೆ ಸುಳಿವಾತ್ಮಕ್ಕೆ ಹೆಣ್ಣು ಗಂಡೆAಬ ಬೇಧವಿಲ್ಲ” ವೈರಾಗ್ಯದ ಸಾಧನೆಯಲ್ಲಿ ನಡೆದವನಿಗೆ ಸಮಸ್ತ ಲೋಕವೆ ಮಾಯೆಯಾಗಿ ಕಂಡರೆ ಆಶ್ಚರ್ಯವಲ್ಲ. ಅರಿಷಡ್ವರ್ಗಗಳ ಮೋಹಪಾಶಕ್ಕೆ ಒಳಗಾದ ಮಾನವರಿಗೆ ಇವುಗಳನ್ನು ಗೆದ್ದ ಅನುಭಾವಿಗಳಿಗೆ, ಶರಣರಿಗೆ ಲೋಕವೇ ಮರುಳಾಗಿ ತೋರುವುದು ಆಶ್ಚರ್ಯವಲ್ಲ.
ತನ್ನ ತಾನು ಮರೆತ ಅಜ್ಞಾನದ ಒಂದು ಸ್ಥಿತಿಯೇ ಮಾಯೆ. ಅರಿವಿನ ಮರೆವೇ ಮಾಯೆ ಅಲ್ಲಿ ಗಂಡು ಹೆಣ್ಣು ಎಂಬ ಬೇಧದ ಅಭಿಮಾನದವಿಲ್ಲ. ಅಕ್ಕಮಹಾದೇವಿ ಲಿಂಗಬೇಧ ಭಾವವೆಂಬ-ದೇಹಭಾವವೆAಬ ಮಾಯೆಯನ್ನು ಕಳೆದುಕೊಂಡ ಅನುಭಾವಿ- “ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ.. ಮನದ ಸೂತಕ ಹಿಂಗಿದಡೆ ತನುವಿನ ಸೂತಕ ಹಿಂಗಿತ್ತು ನೋಡಾಎನ್ನುವಲ್ಲಿ ಪುರುಷ-ಸ್ತ್ರೀ ಎಂಸಬ ಲಿಂಗಭಾವ ಕಳೆದುಕೊಂಡ ನಿರ್ಲಿಂಗಭಾವದ ನಿರ್ಭಾರಸ್ಥಿತಿಗೆ ಬಂದಿದ್ದಾಳೆ. ಇದು ಲಿಂಗಪರಿವರ್ತನೆಯ ಸ್ಥಿತಿ. ಕಾಮಕ್ಕೆ ಕಾಯ ವಿಕಾರ ಬಂದರೆ ಅದು ಮಾಯೆ. “ಹಾವಿನ ಹಲ್ಲ ಕಳೆದು ಹಾವನಾಸಲಲ್ಲಡೆ ಹಾವಿನ ಸಂಗವೇ ಲೇಸು” ಎಂದಳು. ಅಕ್ಕ ದೇಹಭಾವವನ್ನು ಕಳೆದುಕೊಂಡ ಒಂದು ಸ್ಥಿತಿ ಭಕ್ತಸ್ಥಲವದು. ಮಾಯೆ ಲಿಂಗಸಂಬಂಧಿಯಾಗದೆ ಸಕಲ ಜೀವರಾಶಿಗಳನ್ನು ಪ್ರವೃತ್ತಿಯಲ್ಲಿ ತೊಡಗಿಸುವ ವಿಷಯಾಸಕ್ತಿ ಪ್ರಾಪಂಚಿಕ ಪ್ರಲೋಭನೆ ಎಂದು ಭಾವಿಸುವುದರ ಜೊತೆಗೆ ಮುಂದುವರೆದು. . ಯೋಗಿಗೆ ಯೋಗಿಣಿಯಾಗಿ, ಸವಣನಿಗೆ ಸವಣಿಯಾಗಿ. . ಬಿಟ್ಟೆನೆಂದಡೆ ಬಿಡದ ಈ ಮಾಯೆ ಗೆಲುವಡೆ ಎನ್ನಳವಿಲ್ಲ ಎಂಬ ನಿಲುವಿಗೆ ಬಂದು ನಿಲ್ಲುತ್ತಾಳೆ.
ಹೊರಗಿನ ಸಂಸಾರದ ಮಾಯೆ ಕಳಚಿಕೊಳ್ಳಬಹುದು ಆದರೆ ಒಳಗಿನ ಅಂತರAಗದ ಮಾಯೆ ಕಳಚಿಕೊಳ್ಳುವುದು ಹೇಗೆ? ಇಂಥ ಇಂದ್ರ-ಚಂದ್ರ ಬ್ರಹ್ಮ-ವಿಷ್ಣು-ಮಹೇಶ್ವರರನ್ನೇ ನುಂಗಿದ ಮಾಯೆಯನ್ನು ನಾನು ಗೆಲ್ಲಬಹುದೆ ಎಂಬುದು ಅಕ್ಕನ ಪ್ರಶ್ನೆ. ಮಾಯೆ ಎಂಬುದು ಯಾರನ್ನು ಬಿಟ್ಟಿಲ್ಲ. “ಅಲ್ಲೆಂದಡೆ ಉಂಡೆಬುದೀ ಮಾಯೆ: ಒಲ್ಲೆನೆಂದಡೆ ಬಿಡದೀ ಮಾಯೆ, ಎನಗಿದು ವಿಧಿಯೇ” ಎನ್ನುವ ಅಕ್ಕ “ಎನ್ನ ಮಾಯದ ಮದವ ಮುರಿಯಯ್ಯ, ಎನ್ನ ಕಾಯದ ಕತ್ತಲೆಯ ಕಳೆಯಯ್ಯ, ಎನ್ನ ಸುತ್ತಿದ ಪ್ರಪಂಚವ ಬಿಡಿಸಯ್ಯ” ಎನ್ನುವಲ್ಲಿ ಸದಾ ‘ಮಾಯೆ’ಯನ್ನು ದಾಟುವ ಮೆಟ್ಟಿನಿಲ್ಲುವ ನಿರಂತರ ಪ್ರಕ್ರಿಯೆಯಲ್ಲಿ ತೊಡಗಿದ್ದಾಳೆ. “ತನ್ನ ತಾ ಮರೆದೊಡೆ ನುಡಿಯೆಲ್ಲ ಮಾಯ ನೋಡಾ”, “ಜ್ಞಾನ ಬಾ, ಮಾಯೆ ಹೋಗೆಂದು ಕಳುಹುತ್ತಿದ್ದೇನೆ” ಎಂದು ಸಾರುವ ಶರಣರು ದೇಹ-ಮನಸ್ಸುಗಳು ಮಾಯೆಯಿಂದ ನಿಯಂತ್ರಿತವಾಗಿಲ್ಲ. ಮನದ ಭ್ರಮೆಯನ್ನು ಕಳೆದುಕೊಂಡು ಅವಗಡಗಳ ಅಜ್ಞಾನದ ಭ್ರಾಂತಿ-ಭ್ರಮೆ-ಭಂಗಗಳಿಂದ ಬಿಡುಗಡೆಹೊಂದಿ ನಿಜಮುಕ್ತಿ ಸ್ಥಿತಿಯನ್ನು ಅನುಭವಿಸಲು ಸಾಧ್ಯವಾಗುವುದು. ತನು-ಮನಗಳು ಪೂರಕವಾಗಿಲ್ಲದಾಗ ಅವೇ ಒಂದಕ್ಕೊಂದು ಮಾಯೆ ಆಗುತ್ತವೆ. “ಮಾಯೆಗೆ ನಾನಂಜುವಳಲ್ಲ” ಎನ್ನುವ ಅಕ್ಕಮಹಾದೇವಿ, ಧ್ಯಾನ-ಪ್ರಾರ್ಥನೆ-ಅರಿವಿನ ನಿರಂತರ ಮನಸ್ಥಿತಿಗೆ ಒಳಗಾದ ಶರಣರಿಗೆ ಮಾವ ಮಾಯೆಯಿಲ್ಲ, ಅಭಿಮಾನವೂ ಇಲ್ಲ.
ಮಾಯೆ ಎನ್ನುವುದು ಸಾಮಾಜಿಕ ನಿರ್ಭಂದನೆಗಳಿಗೊಳಗಾಗಿ ಬಚ್ಚಿಟ್ಟುಕೊಳ್ಳುಚ ಅಸಹಜತೆಗಿಂತ, ಸಾಂಸ್ಕೃತಿಕ ಚೌಕಟ್ಟನ್ನು ಮೀರಿದ ಜೈವಿಕ ಒತ್ತಡವೆಂದು ಗ್ರಹಿಸುತ್ತಾಳೆ ಹಾಗಾಗು ಯಾವ ಯಾವ ನಿರ್ಭಂದಕ್ಕೆ ಒಳಪಡದೆ ನಿರ್ಭೆಡೆಯಿಂದ, ನಿರ್ಭಯದಿಂದ ನುಡಿಯುತ್ತಾಳೆ. “ಚೆನ್ನಮಲ್ಲಿಕಾರ್ಜುನ ದೇವರ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ ಉಡುಗೆ ತೊಡುಗೆಗಳ ಎಂದು ನುಡಿವ ಅಕ್ಕನಿಗೆ ‘ಬೆತ್ತಲೆ’ ಎಂದೂ ಅಡ್ಡಿಯಾಗಲಿಲ್ಲ. ನನಗಾಗಿ ಮುಚ್ಚಿಲ್ಲ ನಿಮಗಾಗಿ ಎಂದು ಉತ್ತರಿಸಿದವಳು. ಅಕ್ಕನ ವ್ಯಕ್ತಿತ್ವ ನ ಭೂತೋ ನ ಭವಿಷ್ಯತಿ. ಅಕ್ಕ ಮೂಢ ಸಂಪ್ರದಾಯವನ್ನು ಪ್ರತಿಭಟಿಸುವ ರೀತಿಯೇ ಅತ್ಯಂತ ವಿಶಿಷ್ಟವಾದುದು. ಅವಳದ್ದು ಅಂತರಮುಖಿ ಪ್ರತಿಭಟನೆ ಅಲ್ಲ ನಿರಂತರ ಹೋರಾಟ ಕಾಣುತ್ತೇವೆ. ಇಲ್ಲಿ ಹೆಣ್ಣು ಗಂಡಾಗಬಹುದು. “ಭಾವಿಸಲು ಗಂಡುರೂಪು ನೋಡಾ” ಎನ್ನುವ ಅಕ್ಕ ಗಂಡಾಗುವುದೇ ಶ್ರೇಷ್ಟತೆಯಲ್ಲ; ಗಂಡು ಹೆಣ್ಣಿಗೆ ಮಾದರಿಯೂ ಅಲ್ಲ. ಈ ಸ್ತಿçà ಶಕ್ತಿಯ ವಚನ ಚೈತನ್ಯದ ಪೂರ್ಣತೆಯನ್ನು ಅರಿಯುವ ಸಂದರ್ಭವಿದು. ಇದು ಲಿಂಗಸಮಾನತೆಯ ಘೋಷಣೆಯಲ್ಲಿ ಸ್ತ್ರೀತನದಿಂದ ಶ್ರೇಷ್ಟತೆಯ ಮಾದರಿಯಿದು. ಸ್ತ್ರೀ ವಾದವು ವೇದಿಕೆ-ಮೈಕುಗಳಾಗಿ ಆರ್ಭಟಿಸುವ ನಾವಿನ್ನು ಪರಂಪರೆಯ ಬಂಧಿಗಳೇ ಆಗಿದ್ದೇವೆ. ಇವುಗಳ ಮಧ್ಯೆ ಅಕ್ಕಮಹಾದೇವಿ ಎಲ್ಲ ಬಂಧನ-ಬಿಡುಗಡೆಗಳ ಮೂಲಕ ವೈರಾಗ್ಯದ ತವನಿಧಿಯಾಗಿ ಹೊರಹೊಮ್ಮಿದ್ದಾಳೆ…! ಕಾಮಿಯಾಗಿ ನಿಕಾಮಿಯಾದವಳು ಸೀಮೆಯಲ್ಲಿದ್ದು ನಿಸ್ಸೀಮೆಯಾದವಳು. “ಅವಳು ಹಿರಿಮೆಗೆ ಶ್ರೀ ಪಾದಕ್ಕೆ ನಮೋ ನಮೋ ಎಂದು ತಲೆಬಾಗಿದರು ಅಲ್ಲಮಪ್ರಭು ದೇವರು. ಅಜಕೋಟಿವರುಷದವರಲ್ಲಿ ಹಿರಿಯರೊ ಒಂದನಾಡ ಹೋಗಿ ಒಂಭತ್ತನಾಡುವ ಅಜ್ಞಾನಿಗಳು ಹಿರಿಯರೇ? ಹಿರಿತನ ನಮ್ಮ ಮಹಾದೇವಿ ಅಕ್ಕನದಾಯ್ತು ಎಂದ ಚೆನ್ನಬಸವಣ್ಣ. “ಅರಿವಿಗೆ ಹಿರಿದುಂಟೆ ಅಕ್ಕನ ನಿಲುವಿಗೆ ಶರಣೆಂದು ಶುದ್ಧನಾದೆ ಎಂದರು ಸಿದ್ಧರಾಮ ಶಿವಯೋಗಿಗಳು. ಈ ವಚನ ವೈಚಾರಿಕತೆಗೆ ನೀಡಬಹುದಾದ ಜೀವಮೂಲ ಸಿದ್ಧಾಂತದ ಒಂದು ಮಾದಿರಿಯಾಗಿದೆ ಎನ್ನಬಹುದು.
–ಡಾ. ವೀಣಾ ಹೂಗಾರ,
ಮುಖ್ಯಸ್ಥರು, ಕನ್ನಡ ವಿಭಾಗ,
ಕೆ.ಎಲ್.ಇ. ಸಂಸ್ಥೆಯ,
ಶ್ರೀ ಮೃತ್ಯುಂಜಯ ಕಲಾ ಹಾಗೂ
ವಾಣಿಜ್ಯ ಮಹಾವಿದ್ಯಾಲಯ,
ಧಾರವಾಡ-೫೮೦೦೦೮