ಅಂತರ್ಗತನಾದ ಆತ್ಮ ಸಂಗಾತಿ

ಅಕ್ಕನ ನಡೆಗೆ -ವಚನ -36

ಅಂತರ್ಗತನಾದ ಆತ್ಮ ಸಂಗಾತಿ

ಹಾಲು ತುಪ್ಪವ ನುಂಗಿ ಬೇರಾಗಬಲ್ಲುದೆ?
ಸೂರ್ಯಕಾಂತದ ಅಗ್ನಿಯನಾರು ಭೇದಿಸಬಲ್ಲರು?
ಅಪಾರಮಹಿಮ ಚೆನ್ನಮಲ್ಲಿಕಾರ್ಜುನಾ
ನೀನೆನ್ನೊಳಡಗಿಪ್ಪ ಪರಿಯ
ಬೇರಿಲ್ಲದೆ ಕಂಡು ಕಣ್ತೆರೆದೆನು.

ಅಕ್ಕಮಹಾದೇವಿಯ ಬದುಕಿನ ಬಹು ದೊಡ್ಡ ಹುಡುಕಾಟವೆಂದರೆ ಚೆನ್ನಮಲ್ಲಿಕಾರ್ಜುನನನ್ನು ಅರಸುವುದು. ಅದು ಅವಳ ಅಧ್ಯಾತ್ಮ ಲೋಕದ ಪ್ರಮುಖ ಗುರಿ. ಇಡೀ ಜಗತ್ತನ್ನೇ ಮರೆತು, ತನ್ನನ್ನು ತಾನು ಮರೆತು, ತಾನು ಸಾಧಿಸ ಬಯಸಿದ ಸಾಧನೆಯ ತುತ್ತ ತುದಿಯನ್ನು ತಲುಪಿದ ವೀರಾಗಿಣಿ.

ಅಕ್ಕನಿಗಿದ್ದ ಚೆನ್ನಮಲ್ಲಿಕಾರ್ಜುನನ ಹುಡುಕಾಟದಲ್ಲಿ, ಅವನು ಹೇಗೆ ತನ್ನೊಳಗೆ ಅಡಗಿರುವನೆಂದು, ಈ ವಚನದಲ್ಲಿ ಸುಂದರ, ಅರ್ಥಪೂರ್ಣ ಉಪಮೆಗಳ ಮೂಲಕ, ಮನಗಾಣಿಸುವ ಪ್ರಯತ್ನ ಮಾಡಿರುವುದು, ಅದೂ ಸೊಗಸಾದ ಕಾವ್ಯಾತ್ಮಕ ನಿರೂಪಣೆಯಲ್ಲಿ ಕಂಡು ಬರುತ್ತದೆ.

ಹಾಲು ತುಪ್ಪವ ನುಂಗಿ ಬೇರಾಗಬಲ್ಲುದೆ?

ಈ ಮೊದಲ ಸಾಲಿನಲ್ಲಿ ಹಾಲು ಮತ್ತು ತುಪ್ಪ ಎರಡು ಭಿನ್ನ ಭಿನ್ನ ದ್ರವ್ಯಗಳಾಗಿ ಮೇಲ್ನೋಟಕ್ಕೆ ಕಂಡು ಬಂದರೂ, ಅವೆರಡರ ಮೂಲ ಒಂದೇ ಆಗಿರುತ್ತದೆ. ಒಂದು ದೃಷ್ಟಾಂತವನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ.

ಒಬ್ಬ ಒಕ್ಕಲಿಗ ಸಾಕಿದ ಆಕಳ ಮೈ ಮೇಲೆ ಗಾಯವಾಗಿರುತ್ತದೆ. ದೇಸಿ ಔಷಧ ನೀಡುವ ವೈದ್ಯರ ಬಳಿ ಕರೆದುಕೊಂಡು ಹೋಗಿ, ಸಮಸ್ಯೆ ವಿವರಿಸುತ್ತಾನೆ. ಈ ಗಾಯವಾಗಿ ಇಂತಿಷ್ಟು ದಿನಗಳಾದವು, ಇನ್ನೂ ಕಡಿಮೆ ಆಗಲಿಲ್ಲ, ಹಾಗೆ, ಹೀಗೆ, ಎಲ್ಲಾ ವಿವರಣೆ ಕೊಟ್ಟು, ಗುಣ ಪಡಿಸುವಂತೆ ಕೇಳಿಕೊಳ್ಳುತ್ತಾನೆ.

ಆಗ ವೈದ್ಯರು, ‘ಇದಕ್ಕೆ ಬಹಳ ಸುಲಭವಾದ ಮದ್ದಿದೆ. ಈ ಆಕಳ ಗಾಯಕ್ಕೆ ಆಕಳ ಹಾಲಿನಿಂದ ತಯಾರಾದ ತುಪ್ಪವನ್ನು ಹಚ್ಚಬೇಕು. ದಿನಕ್ಕೆ ಎರಡು ಬಾರಿ, ಒಂದು ವಾರದವರೆಗೆ ಹಚ್ಚಿದರೆ, ಗಾಯ ಮಾಯ್ದು, ಯಾವ ಸಮಸ್ಯೆಯೂ ಇಲ್ಲದೆ ಚೆನ್ನಾಗಿ ಹಾಲು ಕೊಡುತ್ತದೆ. ಹೋಗು… ಮನೆಗೆ ಹೋದ ಕೂಡಲೆ ಇಂದಿನಿಂದಲೇ ಶುರು ಮಾಡು’ ಎಂದು ಹೇಳಿ ಕಳುಹಿಸುತ್ತಾರೆ.

ಮನೆಗೆ ಬಂದ ಒಕ್ಕಲಿಗನಿಗೆ ಒಂದು ಆಲೋಚನೆ ಹೊಳೆಯುತ್ತದೆ. ಆಕಳ ಹೊಟ್ಟೆಯಲ್ಲಿ ಹಾಲಿದೆ. ಆ ಹಾಲಿನಿಂದಲೇ ತುಪ್ಪ ತಯಾರಾಗುವುದು. ಇನ್ನು ತನ್ನೊಳಗೇ ತುಪ್ಪವಿದ್ದ ಮೇಲೆ ಮೇಲಿಂದ ಹಚ್ಚುವುದೇನಿದೆ? ಎಂದೆನಿಸಿ ಅದನ್ನು ಅಲ್ಲಿಗೇ ಕೈಬಿಟ್ಟು ಸುಮ್ಮನಾಗುತ್ತಾನೆ. ಒಂದು ವಾರದ ನಂತರ ಮತ್ತೆ ವೈದ್ಯರ ಬಳಿ ಹೋಗುವಾಗ ಗಾಯ ಗುಣವಾಗದೆ ಉಲ್ಬಣಗೊಂಡಿತ್ತು.

ವೈದ್ಯರು ವಿಚಾರಿಸಿದಾಗ ತುಪ್ಪ ಹಚ್ಚದ ವಿಷಯ ಹೊರ ಬರುತ್ತದೆ. ಅವರು ಅವನ ಅವಿವೇಕತನಕ್ಕೆ ಬೇಸರಗೊಂಡು ಮತ್ತೆ ತಿಳಿಸಿ ಹೇಳುತ್ತಾರೆ. ‘ಅದರ ಹೊಟ್ಟೆಯಲ್ಲಿ ಹಾಲಿರಬಹುದು ನಿಜ. ಆದರೆ ಅದನ್ನು ಸಂಸ್ಕರಿಸಿ ತುಪ್ಪ ಮಾಡಿ ಹಚ್ಚಿದರೆ ಮಾತ್ರ ಅದರ ತೈಲಾಂಶದಿಂದ ಗುಣವಾಗಲು ಸಾಧ್ಯ. ಆಗ ಒಕ್ಕಲಿಗನಿಗೆ ತಿಳುವಳಿಕೆ ಬಂದು ಹಾಗೇ ಮಾಡುತ್ತಾನೆ.

ನಾವು ಹಾಲನ್ನು ನೋಡಿದಾಗ ಅದರಲ್ಲಿ ತುಪ್ಪ ಅಡಗಿದೆ ಎಂದು ಹೇಳಬಹುದು. ಹಾಲನ್ನು ಬಿಸಿ ಮಾಡಿ, ಉಗುರು ಬೆಚ್ಚಗಾದ ಮೇಲೆ, ಸ್ವಲ್ಪ ಹೆಪ್ಪು ಮುಟ್ಟಿಸಿ ಹತ್ತಾರು ಗಂಟೆಗಳ ಕಾಲ ಬಿಟ್ಟ ಮೇಲೆ ಮೊಸರಾಗುತ್ತದೆ. ಮೊಸರನ್ನು ಕಟೆದು ಮಜ್ಜಿಗೆ ಮಾಡಿದಾಗ ಬೆಣ್ಣೆ ಮೇಲೆ ತೇಲುತ್ತದೆ. ಆ ಬೆಣ್ಣೆಯನ್ನು ಹದವಾಗಿ ಕಾಯಿಸಿದಾಗ ತುಪ್ಪ ದೊರೆಯುತ್ತದೆ. ಹಾಗೆ ದೊರೆತ ತುಪ್ಪ ಹಾಲಿನಿಂದ ಬೇರ್ಪಟ್ಟು ಬಹಳ ದೂರ ಬಂದಿರುತ್ತದೆ.

ಹಾಗೆಯೇ ಹಾಲಿನಲ್ಲಿ ತುಪ್ಪವಿರುವಂತೆ ಅಕ್ಕನಲ್ಲಿ ಚೆನ್ನಮಲ್ಲಿಕಾರ್ಜುನನು ಇರುವನು ಹಾಲಿನಿಂದ ತುಪ್ಪವನ್ನು ಬೇರ್ಪಡಿಸಿ, ಇದು ಹಾಲು ಇದು ತುಪ್ಪವೆಂದು ತೆಗೆದಿಡಲು ಸಾಧ್ಯವಿಲ್ಲ. ಅದು ಅಂತರ್ಗತ.

ಸೂರ್ಯಕಾಂತದ ಅಗ್ನಿಯನಾರು ಭೇದಿಸಬಲ್ಲರು?

ಇಲ್ಲಿ ಸೂರ್ಯಕಾಂತ ಎಂದರೆ ಅದೊಂದು ವಿಶೇಷ ಬಗೆಯ ಕಲ್ಲು. ಈ ವಿಧದ ಕಲ್ಲಿಗೆ ಬಿಸಿಲಿನ ತಾಪ ಹೆಚ್ಚಾದಾಗ ಕಲ್ಲು ಕಿಡಿ ಕಾರುವುದೆಂಬ ನಂಬಿಕೆ. ಅಂತಹ ಸೂರ್ಯಕಾಂತದೊಳಗೆ ಅಡಗಿರುವ ಕಿಡಿಯ ರೂಪದ ಅಗ್ನಿಯನ್ನು ಭೇದಿಸಿ, ಸೀಳಿಕೊಂಡು ಹೋಗಲು ಯಾರಿಗೂ ಸಾಧ್ಯವಿಲ್ಲ.

ಅಪಾರಮಹಿಮ ಚೆನ್ನಮಲ್ಲಿಕಾರ್ಜುನಾ

ಅಪಾರಮಹಿಮನೆಂದರೆ ಆದಿ ಅಂತ್ಯವಿಲ್ಲದ ಶಿವನ ಸ್ವರೂಪಿಯಾದ ಚೆನ್ನಮಲ್ಲಿಕಾರ್ಜುನ. ಅವನು ಕೊನೆಯಿಲ್ಲದ ಎಡೆಯಿಲ್ಲದ ಅಯೋನಿಜ.

ನೀನೆನ್ನೊಳಡಗಿಪ್ಪ ಪರಿಯ ಬೇರಿಲ್ಲದೆ ಕಂಡು ಕಣ್ತೆರೆದೆನು

ಅಕ್ಕಮಹಾದೇವಿಯು ತನ್ನ ಮತ್ತು ಚೆನ್ನಮಲ್ಲಿಕಾರ್ಜುನನ ಅವಿನಾಭಾವ ಸಂಬಂಧವನ್ನು ವಿವರಿಸುವ ಪರಿ ಈ ಸಾಲಿನಲ್ಲಿ ಅಡಗಿದೆ. ಈ ಮಾತಿನ ಮೇಲೆ ಮೊದಲೆರಡು ಉಪಮೆಗಳು ಗಾಢ ಪ್ರಭಾವ ಬೀರುತ್ತವೆ. ಹಾಲಿನಲ್ಲಿ ತುಪ್ಪ ಅಡಗಿರುವಂತೆ, ಯಾರಿಗೂ ಭೇದಿಸಲಾಗದಂತಹ ಬೆಂಕಿಯ ಕಿಡಿ ಅಡಗಿರುವ ಸೂರ್ಯಕಾಂತದ ಕಲ್ಲಿನಂತೆ, ತನ್ನ ಆತ್ಮ ಸಂಗಾತಿ ತನ್ನಲ್ಲಿ ಅಡಗಿರುವನು, ನೆಲೆಸಿರುವನೆಂದು ಹೇಳುತ್ತಾಳೆ.

ಇಲ್ಲಿ ಬರುವ ‘ಬೇರಿಲ್ಲದೆ’ ಶಬ್ದವು ‘ಬೇರೆ ಅಲ್ಲದ’ ಅಥವಾ ‘ಬೇರು ಇಲ್ಲದ’ ಎಂದೂ ಅರ್ಥೈಸಿಕೊಳ್ಳಬಹುದು. ಅಕ್ಕನಿಗೆ ತಾನು ಬೇರೆ ಅವನು ಬೇರೆ ಎನಿಸುವುದೇ ಇಲ್ಲ. ಎಲ್ಲೋ ಒಂದು ಕಡೆ ಬೀಜ ಬಿದ್ದು, ಮೊಳಕೆಯೊಡೆದು, ಗಿಡವಾಗಿ, ಹೂಬಿಟ್ಟು, ಕಾಯಾಗಿ, ಹಣ್ಣಾದುದೂ ಅಲ್ಲ. ಇಡೀ ಶರೀರದೊಳಗೆ ಒಂದು ಇನ್ನೊಂದಾಗದಂತೆ ಬೆರೆತಿರುವೆವು ಎಂದು ಅಕ್ಕ ಭಕ್ತಿಯಿಂದ, ಪ್ರೀತಿಯಿಂದ, ವಿಶ್ವಾಸದಿಂದ, ಸಂಭ್ರಮಿಸುವಳು. ಅಕ್ಕ ಕಣ್ತೆರೆದೆನು ಎನ್ನುವಲ್ಲಿ (Enlightenment) ಜ್ಞಾನೋದಯದ ಬೆಳಕು ಕಂಡು ಬರುತ್ತದೆ.

ಅಕ್ಕನ ಇಂತಹ ವಚನಗಳನ್ನು ಅರಿಯ ಬೇಕಾದರೆ, ನಾವು ಸಾಮಾನ್ಯರು ಮನಸನ್ನು ಒಂದಿಷ್ಟು ಹದಗೊಳಿಸಿಕೊಳ್ಳ ಬೇಕಾಗುತ್ತದೆ. ಅಧ್ಯಾತ್ಮ ಅಂದರೇನು? ಆತ್ಮ ಸಾಧನೆ ಎಂದರೇನು? ಭಕ್ತಿಮಾರ್ಗ ಯಾವುದು? ಎಲ್ಲಕ್ಕಿಂತ ಮುಖ್ಯವಾಗಿ ತನ್ನನ್ನು ತಾನು ಅರಿಯುವ ಮಾರ್ಗವನ್ನು ಅಕ್ಕ ಕಂಡುಕೊಂಡು ಜಗತ್ತಿಗೆ ತೋರಿಸಿದ್ದಾಳೆ. ಇಂತಹ ಮಹತ್ವದ ವಿಷಯವನ್ನು ಪ್ರತಿಪಾದಿಸಲು ಅಕ್ಕ ಬಳಸಿರುವ ಪ್ರತಿಮೆ,ರೂಪಕಗಳು ಅನನ್ಯ. ಪ್ರಕೃತಿಯಲ್ಲಿ ಇರುವ ಅಪರೂಪದ,ಅನರ್ಘ್ಯ ವಸ್ತುಗಳನ್ನು ಆಯ್ದುಕೊಂಡ ಬಗೆಯಂತೂ ಅದ್ಭುತ.

ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸತ್ಯ ಶುದ್ಧ ಮನಸನ್ನು ಇಟ್ಟುಕೊಂಡು, ಬದುಕಿನಲ್ಲಿ ಮುಂದುವರಿದಾಗ ಸಾಧನೆಯ ಹಾದಿ ತನ್ನಿಂದ ತಾನೇ ನಿಚ್ಚಳವಾಗುತ್ತ ಹೋಗುವುದರಲ್ಲಿ ಸಂಶಯವಿಲ್ಲ.

ಸಿಕಾ

Don`t copy text!