*ಶರಣರು ಕಂಡ ಲಿಂಗೈಕ್ಯ*
ಐಕ್ಯ ,ಯೋಗ, ಲಿಂಗಾಂಗ ಸಾಮರಸ್ಯ, ವ್ಯಷ್ಟಿ ಸಮಷ್ಟಿಯ ಸಮಾಗಮ , ಹೀಗೆ ಹಲವು ಪಾರಿಭಾಷಿಕ ಪದಗಳಲ್ಲಿ ಲಿಂಗೈಕ್ಯ ತತ್ವಗಳನ್ನು ಶೋಧಿಸುವ ಮನಸುಗಳಿಗೆ
ಒಂದು ರೀತಿಯ ಕಠಿಣ ಸವಾಲೆನಿಸುವ ಸಂದರ್ಭದಲ್ಲಿ ಅದನ್ನು ಅಷ್ಟೇ ಸರಳ ಸಹಜವಾಗಿ ಬಸವಣ್ಣ ಚೆನ್ನ ಬಸವಣ್ಣ ಮುಕ್ತಾಯಕ್ಕ ಅಜಗಣ್ಣ ಮುಂತಾದ ಶರಣರು ವ್ಯಾಖ್ಯಾನಿಸಿದ್ದಾರೆ.
ಶರಣರ ಷಟಸ್ಥಲಗಳಲ್ಲಿ ಕಂಡು ಬರುವ ಐಕ್ಯ ಸ್ಥಳವನ್ನು ಅತ್ಯಂತ ಸರಳ ಹಾಗು ಸಹಜದತ್ತವಾದ ಕಾಯಗುಣ ಭಕ್ತನ ಮಾನಸಿಕ ದೈಹಿಕ ಸ್ಥಿತಿಗಳಿಗೆ ಅನುಗುಣವಾಗಿ ಚಿಂತಿಸುವ ಅಗತ್ಯವಿದೆ .
ಷಟಸ್ಥಲ ಶರಣರು ಜಗತ್ತಿಗೆ ಕೊಡಮಾಡಿದ ಅಪರೂಪದ ಅವಿರಳ ಜ್ಞಾನ ದೀವಿಗೆ . ನಿಚ್ಚ ನಿಚ್ಚ ಲಿಂಗೈಕ್ಯ , ನಿಚ್ಚ ನಿಚ್ಚ ಜನನ ಎಂದೆನ್ನುವ ಶರಣರು ಮಧ್ಯದ ಒಂದು ಸಮಯದಲ್ಲಿ ಲಿಂಗೈಕ್ಯವನ್ನು ಅರ್ಥಿಸಿಕೊಳ್ಳೋಣ .
ನಿಮ್ಮ ನೆನಹು ಆದಾಗಲೇ ಉದಯ ,ನಿಮ್ಮ ಮರೆತಾಗಲೇ ಅಸ್ಥಮ, ಎಂದೆನ್ನುವ ಬಸವಣ್ಣ ನೆನಹು ಮರೆವಿನ ಮಧ್ಯ ಕಾರ್ಯಸಾಧನೆಯೇ ಭಕ್ತಿ ಎನ್ನುತ್ತಾರೆ. ನೆನಹುವಿನಲ್ಲಿ ನಿಲ್ಲದೆ ಮರಹುವಿನಲ್ಲಿ ಮರಗದೆ ಸಮಯಾಚಾರಕ್ಕೆ ಅನುಗುಣವಾಗಿ ಅರಿವಿನ ಅಸ್ತ್ರದಿಂದ ಲಿಂಗಕ್ಕೆ ದುಡಿವ ಶ್ರೇಷ್ಠ ಸಾಧಕನೇ ಶರಣ .
ಐಕ್ಯ ಸ್ಥಲವು ಪರಮ ನಿಶ್ಚಲ ಅಂಗ ಲಿಂಗದ ಅವ್ಯಾಹತವಾದ ಅವಿನಾಭಾವ ಸಂಬಂಧವಾಗಿದೆ. ಮನಸ್ಸು ಶರೀರ ಹಾಗು ಪ್ರಾಣಗಳ ಸಂಗಮವೇ ನಿತ್ಯ ಐಕ್ಯ ಸ್ಥಳ ಅವುಗಳನ್ನು ಸಾಧಿಸಲು ತನ್ನನ್ನು ತಾನು ಅರಿಯುವ ಸರಳ ಸಾಧನವೇ ಇಷ್ಟಲಿಂಗ ಯೋಗ .
ಚೆನ್ನ ಬಸವಣ್ಣನವರು ಐಕ್ಯ ಮತ್ತು ಲಿಂಗ ಸ್ಥಳದ ವಿವರಣೆಯನ್ನು ಅತ್ಯಂತ ಸಮಂಜಸವಾಗಿ ಸುಂದರವಾಗಿ ಕೊಟ್ಟಿದ್ದಾರೆ.
ಲಿಂಗವಿಲ್ಲದೆ ನಡೆವನ,ಲಿಂಗವಿಲ್ಲದೆ ನುಡಿವನ
ಲಿಂಗವಿಲ್ಲದೆ ಸಂಗವ ಮಾಡುವನ ಅಂಗ ಸೂತಕ ಮುಟ್ಟಲಾಗದು .
ಲಿಂಗವಿಲ್ಲದೆ ನುಡಿವ ಶಬ್ದ ಕೇಳಲಾಗದು.
ಲಿಂಗವಿಲ್ಲದೆ ಗಮನಿಸಿದಡೆ ಆ ನಡೆನುಡಿಗೊಮ್ಮೆ ವೃತಗೇಡಿ
ಶಿವಾ ಶಿವಾ ಲಿಂಗವಿಲ್ಲದೆ ಉಗುಳ ನುಂಗಿದಡೆ
ಅಂದಂದಿಗೆ ಕಿಲ್ಬಿಷ ಕೂಡಲ ಚನ್ನಸಂಗಮದೇವಾ
ಲಿಂಗಕ್ಕಲ್ಲದೆ ಮಾಡುವ ಕ್ರಿಯೆ ಅನಾಚಾರ ಲಿಂಗ ತತ್ವ ಮರೆತು ನುಡಿವನ ನಡೆವನ ಸಂಗವ ಮಾಡುವವ ಅಂಗ ಸೂತಕ ಹೊಂದಿದಂತೆ , ನಡೆ ನುಡಿಯಲ್ಲಿ ಬಿನ್ನವಿದ್ದಡೆ ಆತನು ವೃತಗೇಡಿಯಾಗುವನು. ತನ್ನ ಕ್ರಿಯೆ ಕಾಯಕ ಆಲೋಚನೆಗಳು ಮನಸ್ಸು ಎಲ್ಲವೂ ಲಿಂಗಮಯವಾಗಬೇಕು . ನಿರಂತರವಾಗಿ ಸಮಷ್ಟಿಯ ಪ್ರಜ್ಞೆಯನ್ನು ಹೊಂದಬೇಕು.ಇಲ್ಲದಿದ್ದರೆ ಲಿಂಗವಿಲ್ಲದೆ ಉಗಳು ನುಂಗಿದರೂ ಅದು ಕಿಲ್ಬಿಷ ವಿಷವಾಗುವುದು.
ಸಮಷ್ಟಿ ಭಾವವನ್ನು ಉಸಿರುಸಿರಿಗೂ ನೆನಪಿಸಿಕೊಳ್ಳುವನೇ ಶರಣ ,ಅಂತಹ ನಿರಂತರ ಪುಣ್ಯ ಕಾರ್ಯಗಳಲ್ಲಿ ತಲ್ಲೀನನಾಗುವುದೇ ಐಕ್ಯ.
ಬಸವಣ್ಣನವರು ಇದನ್ನು ಇನ್ನೊಂದು ರೀತಿಯಲ್ಲಿ ಅರ್ಥೈಸಿದ್ದಾರೆ.
ಮಾಡುವಂತಿರಬೇಕು ಮಾಡದಂತಿರಬೇಕು
ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು,
“ಕೂಡಲ ಸಂಗಮದೇವನ ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು. “
ಇಂತಹ ಐಕ್ಯಸ್ಥಲವೂ ಕೂಡಾ ಸದ್ದು ಗದ್ದಲವಿಲ್ಲದೆ ಮೌನದಲ್ಲಿ ಮೆಲ್ಲಗೆ ಸಾಧಿಸುವ ಶ್ರೇಷ್ಠ ಪರಿಕ್ರಮವಾಗಿದೆ.ಶರಣರ ಆಶಯಗಳು ವ್ಯಕ್ತಿ ಶುದ್ಧನಾಗಿ ತನ್ನ ಆತ್ಮ ಉದ್ಧಾರದ ಜೊತೆಗೆ ಲೋಕಕಲ್ಯಾಣಕ್ಕೆ ಬದ್ಧವಾಗುವ ಸಮನ್ವಯ ಸಾಧನೆಯನ್ನು ಕಂಡುಕೊಳ್ಳುವುದು.
ಲಿಂಗೈಕ್ಯದ ಬಗ್ಗೆ ಚನ್ನಬಸವಣ್ಣನವರು ಅತ್ಯಂತ ಸಮರ್ಥವಾಗಿ ವಿವರಣೆಯನ್ನು ನೀಡಿದ್ದಾರೆ.
ಅಂಜಿಕೆಯುಳ್ಳನ್ನಕ್ಕ ಪ್ರಾಣಲಿಂಗಿಯಲ್ಲ
ಸೂತಕವುಳ್ಳನ್ನಕ್ಕ ಶರಣನಲ್ಲ
ಎಂಜಲುವುಳ್ಳನ್ನಕ್ಕ ಪ್ರಸಾದಿಯಲ್ಲ
ಈ ತ್ರಿವಿಧವುಳ್ಳನ್ನಕ್ಕ ಲಿಂಗೈಕ್ಯನಲ್ಲ
ಕೂಡಲ ಚನ್ನ ಸಂಗಮದೇವಾ.
ಪ್ರಾಣಲಿಂಗಿ ಶರಣ ಪ್ರಸಾದಿ ಹಾಗೂ ಐಕ್ಯ ಸ್ಥಲವನು ಎಳೆ ಎಳೆಯಾಗಿ ಹೇಳಿದ್ದಾರೆ. ಅಂಜಿಕೆ ಹೊಂದಿದ ಮನಸ್ಸು ಪ್ರಾಣಲಿಂಗ ಸ್ಥಲವನ್ನರಿಯದು ಸೂತಕ ಮೈಲಿಗೆ ಅಂಗ ಅವಗುಣ ಅರಸುವ ಶರಣನಲ್ಲ ,ಎಂಜಲು ಮಡಿವಂತಿಕೆ ಮಾಡುವುದು ಪ್ರಸಾದಿಯಲ್ಲ ಹಾಗೂ ಪ್ರಸಾದಿ ಇದ್ದಡೆ ಎಂಜಲುವಿಲ್ಲ .
ಇಂತಹ ತ್ರಿವಿಧ ಗುಣವುಳ್ಳೊಡೆ ಆತನು ಲಿಂಗೈಕ್ಯ ಸಾಧನೆ ಮಾಡಲು ಅರ್ಹನಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಐಕ್ಯವೆಂದೆನ್ನುವುದು ನಮ್ಮ ಮನಸ್ಸಿನ
ಪರಮೋಚ್ಚ ಗುರಿ . ಅದು ಅತ್ಯಂತ ಸುಂದರವಾದು ಅನುಭವ .
ಶರಣರು ಷಟಸ್ಥಲವನ್ನು ಬದುಕಿನ ವಿಕಾಸದ ಹಾದಿಗೆ ಮಾರ್ಗಕ್ಕೆ ಕಂಡುಕೊಂಡ ಅನ್ವೇಷಿತ ಶೋಧಿತ ಮಹಾಕೊಡುಗೆ .ಆತ್ಮದಲ್ಲಿ ಪರಮಾತ್ಮನನ್ನು ಕಾಣುವ ಹೊಸ ದರ್ಶನವೇ ಲಿಂಗೈಕ್ಯವು.
ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ
ಷಟಸ್ಥಲ ಹಾಗೂ ಲಿಂಗೈಕ್ಯದ ಕುರಿತಾದ ವಿವರಣೆ ಅತ್ಯಂತ ಉಪಯುಕ್ತವಾಗಿದೆ ಧನ್ಯವಾದಗಳು ಸರ್