ಬರದ ಮಳೆ
ತಿಂಗಳೊಪ್ಪತ್ತಿನಿಂದ ಅಂಗಳದಲ್ಲಿ
ಕಣ್ಣಿಗೆ ಕೈಯೊಡ್ಡಿ ನಿಂತು
ಹುಸಿ ಮೋಡಗಳ ನೋಡುತ
ಬರದ ಮಳೆಗೆ ಕಾಯುತ್ತಿದೆ ಜೀವ
ಮೃಗಶಿರ ಮಳೆ ಕಳೆದು
ಆರಿದ್ರಾ ಮಳೆ ಹೂಡಿದರೂ
ಹನಿ ಮಳೆಯ ಸುಳಿವಿಲ್ಲ
ಜೀವ ಸಂಕುಲಕೆ ಉಳಿವಿಲ್ಲ..
ಆಶಾಢದ ಕುಳಿರ್ಗಾಳಿ ಬೀಸಲಿಲ್ಲ
ಇಳೆಯಲ್ಲಿ ಬದುಕು ಮಾಡಿ
ಮಳೆಗೆ ತೋಯ್ದ ಜೀವ
ಬೆಂಕಿಯ ಮುಂದೆ ಮೈ ಕಾಯಿಸಲಿಲ್ಲ…
ಕಳೆದೆರಡು ವರ್ಷ ಅತಿವೃಷ್ಟಿ
ಬಿತ್ತಿದ ಬೀಜ ಕೊಚ್ಚಿ ಹೋಗಿ
ರೈತರ ಹೊಟ್ಟೆ ಮೇಲೆ
ತಣ್ಣೀರ ಬಟ್ಟೆಯೇ ಗತಿಯಾಯ್ತು
ಈ ವರ್ಷ ಅನಾವೃಷ್ಟಿ
ಹೊಲ ಊಳಲು ಮಳೆ ಇಲ್ಲ
ಬೀಜ ಗೊಬ್ಬರ ತರಲು ಹಣವಿಲ್ಲ
ರೈತನಿಗೆ ನೇಣಿನ ಕುಣಿಕೆ ತಪ್ಪಲಿಲ್ಲ..
ಹೊತ್ತಿಗೆ ಸರಿಯಾಗಿ ಬೀಳದೆ ಮಳೆ
ಮುಂದೆ ಬಂದರೆಷ್ಟು ಬಿಟ್ಟರೆಷ್ಟು
ಇಂದು ಬಿತ್ತಿ ನಾಳೆ ಬೆಳೆಯಲಾದೀತೆ
ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ ಎಂದು
ಹೇಳಲಾದೀತೆ…
ಗೀತಾ.ಜಿ.ಎಸ್
ಹರಮಘಟ್ಟ.ಶಿವಮೊಗ್ಗ