ಸ್ವಯಲಿಂಗವಾಯಿತ್ತು.
ಅಂಗ , ಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು,
ಮನ, ಲಿಂಗವ ವೇಧಿಸಿ, ಮನ ಲಿಂಗದೊಳಗಾಯಿತ್ತು
ಭಾವ, ಲಿಂಗವ ವೇಧಿಸಿ, ಭಾವ ಲಿಂಗದೊಳಗಾಯಿತ್ತು,
ಚನ್ನಮಲ್ಲಿಕಾರ್ಜುನಾ,
ನಿಮ್ಮ ಒಲುಮೆಯ ಸಂಗದಲ್ಲಿರ್ದು ಸ್ವಯಲಿಂಗವಾಯಿತ್ತು.
-ಅಕ್ಕ ಮಹಾದೇವಿ
ಹನ್ನೆರಡನೆಯ ಶತಮಾನದ ದಿಟ್ಟ ಶರಣೆ ವೀರ ವಿರಾಗಣಿ ಅಕ್ಕ ಮಹಾದೇವಿ ತನ್ನ ಅತ್ಯಂತ ಸಣ್ಣ ವಯಸ್ಸಿನಲ್ಲಿ ಪಾರಮಾರ್ಥಿಕ ಆಧ್ಯಾತ್ಮಿಕ ಸಾಧನೆ ಮಾಡಿದವಳು.
ತನ್ನ 434 ವಚನಗಳಲ್ಲಿ ಬಾಹ್ಯ ಜಗತ್ತಿನ ಆಡಂಬರಕ್ಕೆ ರೋಸಿ ಹೋಗಿ
ಆಂತರಿಕ ಅನುಸಂಧಾನದ ಹೊಸ ಮಾರ್ಗ ಕಂಡವಳು.
ಅಂಗ , ಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು,
ಬಸವಣ್ಣನವರು ಹುಟ್ಟು ಹಾಕಿದ ಲಿಂಗಾಯತ ಧರ್ಮ. ಭಕ್ತ ತನ್ನಲ್ಲಿಯೇ ದೈವತ್ವವನ್ನು
ಕಾಣುವ ಅತ್ಯಂತ ಬಿನ್ನವಾದ ಭಕ್ತಿ ಸಿದ್ಧಾಂತ.
ಲಿಂಗ ಇದು ಕೇವಲ ಕುರುಹು ಅಲ್ಲ
ಅರಿವಿನ ಚಿಜ್ಯೋತಿ. ಲಿಂಗ ಸಮಷ್ಟಿ ಪರಿಸರ
ಪಂಚ ಮಹಾಭೂತಗಳ ಪ್ರತೀಕ .
ಲಿಂಗ ಅಂಗ ಸಾಮರಸ್ಯ ಇದು ಭಕ್ತನ ಸ್ಪಷ್ಟವಾದ ನಿಲುವು. ಅಂಗವು ಲಿಂಗ ಜ್ಞಾನ ಲಿಂಗಾನುಭಾವವ ಶೋಧಿಸುತ್ತಾ ಕೊನೆಗೆ ಅಂಗವೇ ಲಿಂಗವಾಯಿತ್ತು
ಇದು ಶರಣರ ಆಶಯವೂ ಕೂಡ. ಅಂಗವು ಸಂಪೂರ್ಣ ಲಿಂಗದೊಳಗೆ ಕೂಡಿ ಕೊಂಡಿತು.
ಮನ, ಲಿಂಗವ ವೇಧಿಸಿ, ಮನ ಲಿಂಗದೊಳಗಾಯಿತ್ತು
ಲಿಂಗ ಜ್ಞಾನ ಲಿಂಗ ತತ್ವ ಸಿದ್ಧಾಂತಗಳನ್ನು ಚಿಂತಿಸುವ ಮನಸ್ಸು ಮುಂದೆ ಸಂಪೂರ್ಣವಾಗಿ ಈ ಲಿಂಗ ತತ್ವದಲ್ಲಿ ಬೆರೆತು ಬಿಟ್ಟಿತು ಎನ್ನುವ ಅಕ್ಕನ ವಿಚಾರ ಪ್ರಾಪಂಚಿಕ ವಿಷಯಗಳ ಬದಿಗೆ ಸರಿಸಿ ಪಾರಮಾರ್ಥಿಕ ಆಧ್ಯಾತ್ಮಿಕ ಸಾಧನೆಗೆ ಸಿದ್ಧವಾಗುವ ಮನಸ್ಸು ಲಿಂಗದಲ್ಲಿ ಒಂದಾಗಿ ಬಿಟ್ಟಿತು ಎನ್ನುವ ಅಕ್ಕನ ಅರಿವಿನ ಆಂದೋಲನ ಶ್ಲಾಘನೀಯ.
ಭಾವ, ಲಿಂಗವ ವೇಧಿಸಿ, ಭಾವ ಲಿಂಗದೊಳಗಾಯಿತ್ತು
ಭಾವವು ಲಿಂಗದ ಶೋಧನೆಗೆ ನಿಲ್ಲುತ್ತಾ ಭಾವ ಶುದ್ಧವಾಗಿ ಲಿಂಗದೊಳಗೆ ಕೂಡಿ ಕೊಂಡಿತು.
ಇಲ್ಲಿ ಸೂಕ್ಷ್ಮವಾಗಿ ಅಕ್ಕ ಮಹಾದೇವಿ
ಇಷ್ಟ ಲಿಂಗ ಪ್ರಾಣ ಲಿಂಗ ಮತ್ತು ಭಾವ ಲಿಂಗ
ಆಯತ ಸ್ವಾಯತ ಮತ್ತು ಸನ್ನಿಹಿತ ಎನ್ನುವ ಅಪ್ರತಿಮ ಸುಂದರ ಚಿಂತನೆಗೆ ಒಳ ಪಡಿಸುತ್ತಾಳೆ.
ಮನದ ತನುವಿನ ಭಾವದ ಮುಹೂರ್ತ ಸ್ವರೂಪವಾದ ಲಿಂಗವು ಬಸವಣ್ಣನ ದಿವ್ಯ ಕೊಡುಗೆ.
ಬಸವಣ್ಣನವರು ಕಟ್ಟಿದ ಸಮ ಸಮಾಜದ ಪರಿಕಲ್ಪನೆ ಸಾರ್ವಕಾಲಿಕ.
ಚನ್ನಮಲ್ಲಿಕಾರ್ಜುನಾ,
ನಿಮ್ಮ ಒಲುಮೆಯ ಸಂಗದಲ್ಲಿರ್ದು ಸ್ವಯಲಿಂಗವಾಯಿತ್ತು.
ಇಷ್ಟ ಪ್ರಾಣ ಭಾವ ಲಿಂಗಗಳ ಮೂಲಕ ತನ್ನ ಚೈತನ್ಯವನ್ನು ಶೋಧಿಸುವ ಅನುಭವಿಸುವ
ಲಿಂಗದ ಮೇಲಿನ ಪ್ರೀತಿ ಒಲುಮೆ ಇವೆಲ್ಲವನ್ನೂ ಒಳಗೊಂಡ ಸಮಷ್ಟಿ ಪ್ರಜ್ಞೆ ಕಾಳಜಿ ಅತ್ಯಂತ ಸುಂದರ. ಬಸವಾದಿ ಶರಣರ ವಚನಗಳು ಮತ್ತು ಅವರ ಅನುಭವದಲ್ಲಿ ಇರುವುದು ಸ್ವಯಂ ಲಿಂಗವಾಗುವ ಪರಿ ನೋಡಾ ಚೆನ್ನ ಮಲ್ಲಕಾರ್ಜುನ ಎಂದಿದ್ದಾಳೆ ಅಕ್ಕ.
ಅಷ್ಟೇ ಅಲ್ಲದೆ ದೇವಲೋಕಕ್ಕೆ ಬಸವಣ್ಣನೇ ದೇವರು ಮರ್ತ್ಯ ಲೋಕಕ್ಕೂ ಬಸವಣ್ಣನೇ ದೇವರು ಎನ್ನುತ್ತಾ ನಿನಗೂ ನನಗೂ. ನಮ್ಮ ಶರಣರಿಗೆ ಬಸವಣ್ಣನೇ ದೇವರು ಎನ್ನುತ್ತಾ ಬಸವಣ್ಣ ಮಾನವೀಯ ಮೌಲ್ಯಗಳ ಮಹಾ ಸಂಪುಟವೆಂದು ಕೊಂಡಾಡಿದ್ದಾರೆ ಅಕ್ಕ. ಶರಣರ ಸಂಗದಲ್ಲಿದ್ದರೆ ಲಿಂಗವೇ ತಾನಗುವ ಪರಿಯೆಂದು
ಹೇಳಿದ್ದಾಳೆ ಅಕ್ಕ ಮಹಾದೇವಿ.
–ಡಾ ಶಶಿಕಾಂತ ಪಟ್ಟಣ ರಾಮದುರ್ಗ 9552002338