e-ಸುದ್ದಿ, ಮಸ್ಕಿ
ತಾಲೂಕಿನ ಪಾಮನಕಲ್ಲೂರಿನಲ್ಲಿ ನಡೆಯುತ್ತಿರುವ 5ಎ ನಾಲೆ ಯೋಜನೆ ಜಾರಿಗೊಳಿಸಲು ಒತ್ತಾಯಿಸಿ ಕರ್ನಾಟಕ ನೀರಾವರಿ ಸಮಿತಿ ನಡೆಸುತ್ತಿರುವ ಅನಿರ್ಧೀಷ್ಠಾವದಿ ಧರಣಿ 16ನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ರೈತ ಹೋರಾಟಗಾರ ಶಿವುಕುಮಾರ ವಟಗಲ್ ಅವರು ರಕ್ತದ ಮೂಲಕ ಮುಖ್ಯಮಂತ್ರಿಗೆ ಪತ್ರ ಬರೆದು ನೀರಾವರಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಮಸ್ಕಿ ತಾಲೂಕು ವ್ಯಾಪ್ತಿಗೆ ಒಳಪಡುವ ಹಳ್ಳಿಗಳಿಗೆ 5ಎ ನಾಲೆ ಯೋಜನೆ ಜಾರಿಗಾಗಿ ರೈತರು ನಡೆಸುತ್ತಿರುವ ಧರಣಿಗೆ ಇರಕಲ್ ಶಿವಶಕ್ತಿ ಪೀಠದ ಬಸವಪ್ರಸಾದ ಸ್ವಾಮೀಜಿ, ಸಂತೆಕೆಲ್ಲೂರು ಗುರುಬಸವ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಬೆಂಬಲ ಸೂಚಿಸಿದ್ದಾರೆ.
ಧರಣಿ ಸ್ಥಳಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬೇಟಿ ನೀಡಿ ಭರವಸೆ ನೀಡಿ ರೈತರ ಹೊರಾಟಕ್ಕೆ ಬೆಂಬಲಿಸುತ್ತಿದ್ದಾರೆ.
ತಾಲೂಕು ಆಡಳಿತ ತಹಸೀಲ್ದಾರ್ ಸೇರಿದಂತೆ ನೀರಾವರಿ ಇಲಾಖೆ ಅಧಿಕಾರಿಗಳು, ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆದಿಯಾಗಿ ರೈತರ ಮನವೊಲಿಸಲು ಮುಂದಾದರೂ ಸಹ ರೈತ ಹೋರಾಟಗಾರರು ಮಾತ್ರ ಅಧಿಕಾರಿ ಹಾಗೂ ರಾಜಕಾರಣಿಗಳ ಸುಳ್ಳು ಭರವಸೆಗಳಿಗೆ ಕ್ಯಾರೆ ಎನ್ನದೇ ಸರ್ಕಾರದಿಂದ 5ಎ ನಾಲೆ ಜಾರಿಗೆ ಮಾಡುವ ಲಿಖಿತ ಆದೇಶ ಸಿಗುವವರೆಗೆ ಹೋರಾಟ ಹಿಂಪಡೆಯುವುದಿಲ್ಲವೆಂದು ಬೀಗಿಪಟ್ಟು ಹಿಡಿದಿದ್ದಾರೆ.
12 ವರ್ಷಗಳಿಂದ ಎಲ್ಲಾ ಸರ್ಕಾರಗಳು ಬರಿ ಹುಸಿ ಭರವಸೆಗಳನ್ನೇ ನೀಡಿ ನಮಗೆ ಮೋಸ ಮಾಡುತ್ತಿವೆ ಆದ್ದರಿಂದ ಸರ್ಕಾರದಿಂದ ಲಿಖಿತ ಭರವಸೆ ನೀಡುವವರೆಗೆ ಹೋರಾಟವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿವೆಂದು ಹೊರಾಟ ಸಮಿತಿಯ ಅಧ್ಯಕ್ಷ ಬಸವರಜಪ್ಪಗೌಡ ಹರ್ವಾಪೂರ ಮತ್ತು ಸಂಚಾಲಕ ನಾಗರೆಡ್ಡಪ್ಪ ಬುದ್ದಿನ್ನಿ ಸ್ಪಷ್ಟ ಪಡಿಸಿದ್ದಾರೆ.
ರೈತರ ಪಟ್ಟು: ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಹುಸಿ ಭರವಸೆಗೆ ಬೇಸತ್ತ ರೈತರು ಈ ಬಾರಿ ಹೊರಾಟವನ್ನು ತೀವ್ರಗೊಳಿಸಿದ್ದು ಪಟ್ಟು ಸಡಿಲಿಸುತ್ತಿಲ್ಲ. ಒಂದು ಹೆಜ್ಜೆ ಮುಂದೆ ಹೋಗಿ ಗ್ರಾಮ ಪಂಚಾಯತ ಚುನಾವಣೆ ಮತ್ತು ಮಸ್ಕಿ ಉಪ ಚುನಾವಣೆ ಬಹಿಷ್ಕಾರದ ಬಗ್ಗೆ ಹೊರಾಟಗಾರರು ಚಿಂತನೆ ನಡೆಸಿದ್ದಾರೆ.