ಗುರುವಂದನೆ

ಗುರುವಂದನೆ

ಪರಮಾರ್ಥದ ದಾರಿಯಲಿ
ಪರಮಾನುಭವ ಪಡೆವ
ಪರಮಾತ್ಮನ ಹಂಬಲದಲಿ
ಪವಿತ್ರಾತ್ಮ ಪಾವನವಾಗುವದು

ಭಕ್ತನ ಭಕ್ತಿಯ ಪರಾಕಾಷ್ಠೆಯಲಿ
ಭಗವಂತ ವ್ಯಕ್ತವಾಗುವ
ಭೋಲಾ ಭಕ್ತ ಭೋಲಾನಾಥ
ಭೇದವಳಿದು ಒಂದಾಗುವರು

ಆ ಹರನ ತೋರುವ ಗುರು
ಅರಿವಿನ ಅರಮನೆಯಲಿ
ಅಭಯದಿ ಕುರು ತೋರಿಸಲು
ಕರೆದೊಯ್ವ ಗುರುವಿಗೆ ವಂದನೆ

ಗುರು ಇರದಿರೆ ಗುರುತು ಇಲ್ಲ
ಗುರು ಇಲ್ಲದೆ ಗುರಿಯು ಇಲ್ಲ
ಹರ ಮುನಿದರೂ ಗುರು ಕಾಯುವನು
ಅದನರುಹುವ ಸದ್ಗುರುವಿಗೆ ವಂದನೆ

ಅಜ್ಞಾನದ ಪರದೆ ಸರಿಸಿ
ಕತ್ತಲೆಯನು ಓಡಿಸಿ
ಜ್ಞಾನದೀವಿಗೆ ಹೊತ್ತಿಸಿ
ಬೆಳಕನೀವ ಗುರುವಿಗೆ ವಂದನೆ

ಜೀವಿಯ ಸುಪ್ತ ಪ್ರಜ್ಞೆಯಲಿ
ಈಶನ ಗುಪ್ತ ರೂಪ ತೋರಿಸುವ
ಅವ್ಯಕ್ತಾನಂದದಲಿ ತೇಲಿಸುವ
ಗುರುದೇವನಿಗೆ ವಂದನೆ

ಇಟ್ಟಿಗೆ ಸುಟ್ಟು ಗಟ್ಟಿಯಾಗುವಂತೆ ಮಾಡಿ
ಅಹಂಕಾರ ಮಮಕಾರಗಳ
ಬುಡಕೆ ಕೊಡಲಿಪೆಟ್ಟು ಕೊಟ್ಟು
ಆಕಾರ ಕೊಡುವ ನಿರಾಕಾರನಿಗೆ ವಂದನೆ

ಕರ್ಮಮಾರ್ಗದಿ ಬೆರಳು ತೋರಿಸಿದಿ
ಭಕ್ತಿ ಮಾರ್ಗದಿ ತಲೆ ಬಾಗಿಸಿದಿ
ಧ್ಯಾನ ಮಾರ್ಗದಿ ಸೂರ್ಯನಂತೆ ಬೆಳಗಿದಿ
ಜ್ಞಾನಮಾರ್ಗದಿ ನನ್ನೊಳಗೊಂದಾದಿ.


ಅನ್ನಪೂರ್ಣ ಸು ಸಕ್ರೋಜಿ🙏🏻🙏🏻💐

Don`t copy text!