ಹರ ಮುನಿದರೆ ಗುರು ಕಾಯುವ
ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರ ಗುರುಸಾಕ್ಷಾತ ಪರಬ್ರಹ್ಮ, ತಸ್ಮೈಗುರುವೇ ನಮಃ ಎಂದು ವೇದಗಳಲ್ಲಿ ಗುರುವಿನ ಹಿರಿಮೆಯನ್ನು ಸಾರಲಾಗಿದೆ. ಅಷಾಢ ಶುದ್ಧ ಪೂರ್ಣಿಮೆಯ ದಿನವಾದ ಇಂದು 3 ಜುಲೈ ಸೋಮವಾರ ಸಮಸ್ತ ಪ್ರಪಂಚಕ್ಕೆ ಪರಮೋಚ್ಛ ಸಂದೇಶ ನೀಡಿದ ವ್ಯಾಸ ಮಹರ್ಷಿಗಳನ್ನು ಸ್ಮರಿಸುವ ದಿನ. ನಮ್ಮ ಭಾರತೀಯ ಸಂಸ್ಕತಿಯಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ.
ಗುರುಗಳು ಜನರಲ್ಲಿ ಆವರಿಸಿರುವ ಅಜ್ಞಾನ ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುತ್ತಾರೆ. ನವಗ್ರಹಗಳ ಪೈಕಿ ಗುರು ಬೃಹಸ್ಪತಿಯೇ ದೊಡ್ಡ ಗ್ರಹವಾಗಿದೆ. ಗುರುವಿನಷ್ಟು ಹಿರಿಯದಾದುದು ಯಾವುದೂ ಇಲ್ಲ. ‘ಮಾತೃದೇವೋಭವ, ಪಿತೃದೇವೋಭವ ಆಚಾರ್ಯದೇವೋಭವ” ಎನ್ನುವಂತೆ ಆಚಾರ್ಯರನ್ನು ದೇವರಿಗೆ ಸಮಾನವೆಂದೇ ಪರಿಗಣಿಸಲಾಗಿದೆ.ಹರ ಮುನಿದರೆ ಗುರು ಕಾಯುವ.
ಪುರಂದರದಾಸರು ಹೇಳಿದ ಹಾಗೆ “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ” ಯಾವುದೇ ವಿದ್ಯೆ ಫಲಪ್ರದವಾಗಬೇಕಾದರೆ ಗುರುಕೃಪೆ ಆಶೀರ್ವಾದ ಬೇಕೆ ಬೇಕು. ಯಾಕೆಂದರೆ ಗುರುಕೊಟ್ಟ ವಿದ್ಯೆಯೇ ಸಂಪತ್ತು. ಗುರು ನೀಡಿದ ಸಂಪತ್ತು ಕಳೆದುಹೋಗದು. ಆಚಾರ್ಯರು ಜನರಿಗೆ ಮಾತ್ರವಲ್ಲದೆ ದೇವತೆಗಳಿಗೂ ಇದ್ದರು ಎನ್ನುವುದನ್ನು ಪುರಾಣಗಳಿಂದ ತಿಳಿಯಬಹುದು.
ಪುರುಷೋತ್ತಮ ಶ್ರೀರಾಮಚಂದ್ರನಿಗೆ ವಸಿಷ್ಠಮಹರ್ಷಿಗಳಿದ್ದಂತೆ ಎಲ್ಲ ರಾಜಮಹಾರಾಜರಿಗೂ ರಾಜಗುರುಗಳಿದ್ದರು.
ಗುರುಪೂರ್ಣಿಮೆಯ ಮಹತ್ವ
ನಮ್ಮ ಜೀವನದಲ್ಲಿ ತಂದೆ-ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ನಮ್ಮ ಭವಿಷ್ಯವನ್ನು ರೂಪಿಸಿ ನಮ್ಮನ್ನು ವಿದ್ಯಾ-ಬುದ್ಧಿವಂತರನ್ನಾಗಿ ಮಾಡುವ ಕಲೆ ಗುರುವಿಗೆ ಸಿದ್ಧಿಸಿದೆ. ಹಸಿಮಣ್ಣಿಗೆ ಆಕಾರ ಕೊಡುವ ಗುರು ಎಂಬ ಎರಡಕ್ಷರ ನಮ್ಮ ಜೀವನದ ದಿಕ್ಕನ್ನು ಬದಲಿಸಬಲ್ಲದು. ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು. ಅಂದಾಗ ಮಾತ್ರ ನಾವು ಜೀವನದಲ್ಲಿ ಯಶಸ್ಸನ್ನು ಸಾಧಿಸಬಲ್ಲೇವು.
ಈ ಜಗತ್ತಿನಲ್ಲಿ ನಿಸ್ವಾರ್ಥ ಸೇವೆಗೆಯುವ ಎರಡು ಜೀವಗಳೆಂದರೆ ಒಂದು ತಾಯಿ ಹಾಗೂ ಇನ್ನೊಬ್ಬರು ಗುರು. ಇವರಿಬ್ಬರಿಂದ ಮನುಷ್ಯನ ಜೀವನ ಅಂಧಕಾರದಿಂದ ಬೆಳಕಿನೆಡೆಗೆ ಸಾಗುತ್ತದೆ.
ಹಿಂದೂ ಕ್ಯಾಲೆಂಡರನಲ್ಲಿ ಗುರುಪೂರ್ಣಿಮೆಯನ್ನು ನಮ್ಮ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಗುರುಗಳಿಗೆ ಅರ್ಪಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಗುರು ಮೋಕ್ಷನೀಡಬಲ್ಲವನಾಗಿದ್ದಾನೆ. ನಿಜವಾದ ಗುರುವು ವ್ಯಕ್ತಿ ಮತ್ತು ಮಹಾನ ಶಕ್ತಿಗೆ ಒಂದು ಸಂಪರ್ಕ ಸೇತುವೆ ಇದ್ದಂತೆ.
ಶಿಕ್ಷಣದ ಮೂಲಕ ಉತ್ತಮ ಜೀವನಕ್ಕೆ ಕಾಲಿರಿಸುವಂತೆ ಮಾಡಿದ ಗುರುಗಳಿಗೆ ಈ ದಿನವನ್ನು ಆರ್ಪಿಸಲಾಗುತ್ತದೆ. ಹಿಂದೂ ತಿಂಗಳ ಆಷಾಡ ಮಾಸ (ಜುಲೈ, ಅಗಷ್ಟ) ದಂದು ಪೂರ್ಣ ಚಂದ್ರನ ದಿನದಂದು ಗುರುವಿಗೆ ವಿಶೇಷ ಗೌರವ ಸಲ್ಲಿಸುವ ದಿನವನ್ನಾಗಿ ಆಚರಿಸಲಾಗುತ್ತದೆ.
ಇದು ಋಷಿಗಳಿಗೆ ಮಾತ್ರವಲ್ಲದೆ ವೇದಾಧ್ಯಯನ ಮಾಡುವವರಿಗೂ ಪವಿತ್ರವಾಗಿದೆ. ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಗುರುಗಳಿಗೆ ವಿಶೇಷ ಸ್ಥಾನಮಾನ ಹಿರಿಮೆ ಇರುವುದರಿಂದ ಪ್ರತಿಯೊಬ್ಬರೂ ಗುರುಗಳನ್ನು ಪೂಜಿಸುವದು ಕರ್ತವ್ಯವಾಗಿದೆ. ರೈತರಿಗೆ ಈ ದಿನ ಅತ್ಯಂತ ಮಹತ್ವದ್ದಾಗಿದೆ. ಮಳೆಗಾಲದ ಪ್ರಾರಂಭವನ್ನು ಸೂಚಿಸುವ ಗುರುಪೂರ್ಣಿಮಾ ದವಸಧಾನ್ಯಗಳ ಬೆಳೆಯುವವರಿಗೆ ಅತೀ ಮುಖ್ಯವಾದ ಸಮಯವಾಗಿದೆ ಈ ಗುರು ಪೂರ್ಣಿಮಾ ದಿವಸದಂದು ಚಾತುರ್ಮಾಸ್ಯ ವ್ರತವನ್ನು ಮಹಾಗುರು ವ್ಯಾಸರ ಪೂಜೆಯಿಂದ ಪ್ರಾರಂಭಿಸುತ್ತಾರೆ. ನಾಲ್ಕು ತಿಂಗಳು ನಡೆದು ಕಾರ್ತಿಕ ಪೂರ್ಣಿಮೆಯಂದು ವ್ರತ ಮುಕ್ತಾಯವಾಗುತ್ತದೆ. ಈ ಚಾತುರ್ಮಾಸ್ಯ ವ್ರತವನ್ನು ಶ್ರದ್ಧಾ-ಭಕ್ತಿಗಳಿಂದ ಆಚರಿಸುವವರಿಗೆ ಸಮೃದ್ಧ ಆಹಾರ, ಸೌಂದರ್ಯ, ಸದ್ಭುದ್ಧಿ, ಸತ್‍ಸಂತಾನ ದೊರೆಯುವುದೆಂಬ ನಂಬಿಕೆಯಿದೆ. ಈ ದಿವಸವೇ ವೇದದ್ಯಾಸರು ಬ್ರಹ್ಮಸೂತ್ರ ಬರೆಯಲು ಪ್ರಾರಂಭಿಸಿದ್ದು, ಏಕಲವ್ಯನು ಗುರು ದ್ರೋಣಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿಕೊಟ್ಟಿದ್ದು ಗುರು ಪೂರ್ಣಿಮಾ ದಿವಸ.
ಹಿನ್ನಲೆ:
ವೇದವ್ಯಾಸರ ಮೂಲ ಹೆಸರು ಕೃಷ್ಣ ದ್ವೈಪಾಯನ ತಂದೆ ಪರಾಶರಮುನಿ ತಾಯಿ ಸತ್ಯವತಿ ಒಮ್ಮೆ ಮಹರ್ಷಿ ಪರಾಶರರು ಯಾತ್ರೆಯ ಸಲುವಾಗಿ ಗಂಗಾ ನದಿಯನ್ನು ದಾಟುತ್ತಿರುವಾಗ ದೂರದ ದ್ವೀಪದಿಂದ ಕೆಟ್ಟವಾಸನೆ ಬರುತ್ತಿತ್ತು. ಆ ದ್ವೀಪಕ್ಕೆ ಹೋಗಿ ನೋಡಿದಾಗ ಒಬ್ಬ ಕುರೂಪಿಯಾದ ಸ್ತ್ರೀ ಕುಳಿತಿದ್ದಳು. ಆಕೆಯ ದೇಹದಿಂದಲೇ ಈ ಕೆಟ್ಟ ವಾಸನೆ ಬರುತ್ತಿತ್ತು. ಆಕೆ ಪರಾಶರ ಮುನಿಗಳನ್ನು ನೋಡಿ ಬಳಿಗೆ ಬಂದು ಪಾದಕ್ಕೆರಗಿದಳು. ಆಕೆಯ ಹೆಸರು ಸತ್ಯವತಿ ಬೇಸ್ತರ ಮಗಳು. ವಸುದೇವರಿಂದ ಶಾಪಗ್ರಸ್ಥಳಾಗಿ ದೇಹದಿಂದ ಕೆಟ್ಟವಾಸನೆ ಬರುತ್ತಿತ್ತು. ವಿಷ್ಣುವಿನ ಅಂಗವಿರುವ ತಾವು ಈ ಸ್ಥಳಕ್ಕೆ ಬಂದಿದ್ದರಿಂದ ಈ ದ್ವೀಪ ಪಾವನವಾಯಿತು. ತನ್ನ ಶಾಪ ವಿಮೋಚನೆ ಮಾಡಬೇಕೆಂದು ಪ್ರಾರ್ಥಿಸಿದಾಗ ಮಹರ್ಷಿಗಳು ಆಕೆಯನ್ನು ಸ್ಪರ್ಶಿಸಿ ಅವಳ ಶಾಪ ವಿಮೋಚನೆ ಮಾಡಿದರು. ಅವಳು ಸುರೂಪಿಯಾಗಿ ಸುಗಂಧವನ್ನು ಹೊರಹೊಮ್ಮಿಸುವಂತಾದಳು. ನಂತರ ಪರಾಶರರು ಅಲ್ಲಿಯೇ ಅಗ್ನಿಯನ್ನು ಸ್ಥಾಪಿಸಿ ಗಾಂಧರ್ವ ರೀತಿಯಲ್ಲಿ ಆಕೆಯ ವಿವಾಹವಾದರು. ಇವರಿಂದ ಜನಿಸಿದ ಮಗುವೇ ಕೃಷ್ಣ ದ್ವೈಪಾಯನ. ಕೃಷ್ಣ ಎಂದರೆ ಕಪ್ಪು, ಕತ್ತಲೆ; ದ್ವೈಪ ಎಂದರೆ ದ್ವೀಪ, ಅಯನ ಎಂದರೆ ಸುತ್ತಲೂ ನೀರಿನಿಂದ ಆವೃತವಾದ ಪ್ರವೇಶವಾಗಿರುವುದರಿಂದ ಕೃಷ್ಣ ದ್ವೈಪಾಯನ ಹೆಸರು ಬಂದಿತು.
ಗುರುಪೂರ್ಣಿಮಾ ಗುರುವಿನ ಕೃಪೆ, ಕರುಣೆ ನಮ್ಮ ಮೇಲೆ ಯಾವಾಗಲೂ ಇರುತ್ತದೆ ಎಂಬುದನ್ನು ತೋರಿಸುವ ದ್ಯೋತಕವಾಗಿದೆ.
ಬೌದ್ಧಭಿಕ್ಷುಗಳು ಈ ದಿನದಂದು ಯೋಗವನ್ನು ಮಾಡುತ್ತಾರೆ. ಇದರಿಂದಾಗಿಯೇ ಅರಿಷಡ್ವರ್ಗಗಳ ವಿರುದ್ಧ ಅವರಿಗೆ ಹೋರಾಡಲು ಸಾದ್ಯವಾಗಿರುವದು. ಶೃದ್ಧಾ-ಭಕ್ತಿಯಿಂದ ಗುರುಗಳನ್ನು ಗೌರವಿಸುವ ದಿನವಾದ ಇಂದು ಶಿಷ್ಯರೆಲ್ಲಾ ತಮ್ಮ ಗುರುಗಳನ್ನು ಪೂಜಿಸಿ, ಗೌರವಿಸಿ ಭಕ್ತಿ ಸಮರ್ಪಿಸುವುದು ಭಾರತೀಯ ಪರಂಪರೆಯ ಅವಿಭಾಜ್ಯ ಅಂಗವಾಗಿದೆ.
ನಮ್ಮ ಜೀವನದ ಅಜ್ಞಾನ ತೊಲಗಿಸಿ, ಸುಜ್ಞಾನ ನೀಡುವ ದಿವ್ಯಮತಿಯ ಸ್ಮ್ರತಿಯ ದಿನದಲ್ಲಿ ನಾವೆಲ್ಲ ಗುರುವ ನೆನೆದು ಪಾವನರಾಗುವ ಸುದಿನ.
ಹಿಂದೂ ಆಧ್ಯಾತ್ಮಿಕ ಗುರುಗಳ ಜೀವನ ಚರಿತ್ರೆ ಹಾಗೂ ಅವರ ಬೋಧನೆಗಳನ್ನು ನೆನೆಸಿಕೊಂಡು ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ಹಲವಾರು ದೇವಸ್ಥಾನಗಳಲ್ಲಿ ವ್ಯಾಸ ಪೂಜೆ ಏರ್ಪಡಿಸಿ, ಹೂವಿನ ಅಲಂಕಾರ ಹಾಗೂ ಹಲವು ಸಾಂಕೇತಿಕ ಕಾಣಿಕೆಗಳ ಅರ್ಪಣೆಯಿಂದ ವೇದವ್ಯಾಸರಿಗೆ ಹಾಗೂ ಬ್ರಹ್ಮಾಂಡದ ಸದ್ಗುರುವಿಗೆ ಗೌರವ ಸಲ್ಲಿಸಲಾಗುತ್ತದೆ. ಪೂಜೆ ಪುನಸ್ಕಾರಗಳ ನಂತರ, ಗುರುಗಳ ಕೃಪೆಯ ರೂಪಿಯಾದ ಗುರುಗಳ ಪಾದಪೂಜೆಯಿಂದ ದೊರೆತ ಚರಣಾಮೃತವನ್ನು ಪ್ರಸಾದದ ಜೊತೆ ಶಿಶ್ಯರಿಗೆ ಹಂಚಲಾಗುತ್ತದೆ. ಯಾವ ಗುರುವಿನ ಮೂಲಕ ಭಗವಂತನು ಎಲ್ಲ ಶಿಶ್ಯರಿಗೆ ಜ್ಞಾನವನ್ನು ಧಾರೆಯೆರೆಯುತ್ತಾನೋ, ಅಂತಹ ಗುರುವಿನ ಸ್ಮರಣಾರ್ಥಕವಾಗಿ ಈ ದಿನ ವಿಶೇಷ ಮಂತ್ರಗಳಾದಂತಹ ವೇದವ್ಯಾಸರಿಂದಲೇ ರಚಿತವಾದ ೨೧೬ ಶ್ಲೋಕಗಳುಳ್ಳ ಗುರು ಗೀತಾ ಮಂತ್ರದ ಪಠಣ ಇಡೀ ದಿನ ಮಾಡಲಾಗುತ್ತದೆ. ಇದರ ಜೊತೆ ಅನೇಕ ಆಶ್ರಮ, ಮಠ ಅಥವಾ ಗುರು ಪೀಠ ಇರುವಂತಹ ಸ್ಥಳಗಳಲ್ಲಿ ಹಲವಾರು ಭಕ್ತಾದಿಗಳು ಸೇರಿ ವಿಶೇಷ ಭಜನೆ, ಕೀರ್ತನೆ ಮತ್ತು ಹೋಮಗಳನ್ನು ಆಯೋಜಿಸುತ್ತಾರೆ.
ಈ ದಿನ ಗುರುಗಳ ಪಾದಪೂಜೆ ಮಾಡುವ ಮೂಲಕ ಶಿಶ್ಯರು ಮತ್ತೊಮ್ಮೆ ತಮ್ಮನ್ನು ತಾವೇ ಗುರುವಿಗೆ ಸಮರ್ಪಿಸಿಕೊಳ್ಳುತ್ತಾರೆ. ಎಂದಿನಂತೆ ಬರುವ ವರ್ಷವೂ ಗುರುವಿನ ಮಾರ್ಗದರ್ಶನ ಹಾಗೂ ಬೋಧನೆಗಳಿಗೆ ಬದ್ಧರಾಗಿರುತ್ತೇವೆ ಎಂದು ಶಿಶ್ಯರು ಸಂಕಲ್ಪ ಮಾಡುತ್ತಾರೆ. ಈ ದಿನದಂದು ವಿಶೇಷವಾಗಿ ಪಠಿಸುವ ಮಂತ್ರ ಇದು ಗುರುರ್ಬ್ರಹ್ಮ, ಗುರುರ್ವಿಷ್ಣು, ಗುರುರ್ದೇವೋ ಮಹೇಶ್ವರಾ । ಗುರು ಸಾಕ್ಷಾತ್ ಪರಬ್ರಹ್ಮ । ತಸ್ಮೈ ಶ್ರೀ ಗುರವೇ ನಮಃ. ಭಾರತದಲ್ಲಿ, ಎಲ್ಲಾ ಋತುಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಗುರು ಪೂರ್ಣಿಮಾ ಮಳೆಯ ಋತುವಿನಲ್ಲಿ ಆಚರಿಸುವ ಹಿಂದೆ ಒಂದು ಕಾರಣವಿದೆ. ಏಕೆಂದರೆ ಈ ನಾಲ್ಕು ತಿಂಗಳಲ್ಲಿ ಹೆಚ್ಚು ಶಾಖ ಅಥವಾ ಚಳಿಯಿರುವುದಿಲ್ಲ. ಈ ಸಮಯವು ಸ್ನೇಹ ಮತ್ತು ಅಧ್ಯಯನ ಮತ್ತು ಬೋಧನೆಗೆ ಉತ್ತಮವಾಗಿದೆ. ಆದ್ದರಿಂದ, ಗುರುಗಳು ಶಿಷ್ಯರಿಗೆ ಜ್ಞಾನ, ಶಾಂತಿ, ಭಕ್ತಿ ಮತ್ತು ಯೋಗ ಶಕ್ತಿಯನ್ನು ಸಾಧಿಸಲು ಈ ಸಮಯವನ್ನು ಆಯ್ಕೆ ಮಾಡುತ್ತಾರೆ. ಆದ್ದರಿಂದ ಈ ಸಮಯದಲ್ಲಿ ಗುರುವನ್ನು ಪೂಜಿಸಬೇಕು. ಹಾಗೂ ನಮ್ಮ ಜೀವನವನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕು.
ಗುರುವಿನ ಕರುಣೆಯ ಜಲದಲಿ ನಿಂದು ಪುನೀತರಾಗಿ ಬಾಳೋಣ.
–ಜಯಶ್ರೀ ಭ. ಭಂಡಾರಿ.
ಬಾದಾಮಿ.