ಶರಣರ ಕುರಿತು ಲೇಖನ
ರಾಯಸದ ಮಂಚಣ್ಣ
ಅನೇಕ ಜನರು ಹುಸಿ ಪ್ರತಿಷ್ಠೆ , ಆಸೆಪೂರ್ಣ ಆಕಾಂಕ್ಷೆಗಳಿಂದ ನಿರಾಯಾಸದ ಜೀವನವನ್ನು ಬಹಳ ಆಯಾಸ ಜನಕ ಮಾಡಿಕೊಳ್ಳುತ್ತಾರೆ, ಸುಖದಾಯಕವಾಗಿರುವುದನ್ನು ದುಃಖಮಯವನ್ನಾಗಿ ಮಾಡಿಕೊಳ್ಳುತ್ತಾರೆ.
ಶ್ರೀಗಂಧದ ಸಂಪರ್ಕದಲ್ಲಿ ಬೊಬ್ಬಿಲಿಯೂ ಸುಗಂಧ ಯುಕ್ತವಾದಂತೆ ಸದಾ ಬಸವಣ್ಣನವರ ಸಾಮೀಪ್ಯದಲ್ಲಿಯೇ ಇರುತ್ತಿದ್ದ ರಾಯಸದ ಮಂಚಣ್ಣನವರು ತಮ್ಮ ಬದುಕನ್ನು ಬಹಳ ಉದಾತ್ತೀಕರಿಸಿಕೊಂಡರು
ಜೀವನವನ್ನು ನಿರ್ಲಿಪ್ತತೆಯಿಂದ ಸ್ವೀಕರಿಸಿ ತಮ್ಮ
ಮನಸ್ಸನ್ನು ಕಿಂಚಿತ್ತೂ ಮಲಿನಗೊಳಿಸಿಕೊಳ್ಳದಿರುವುದು
ಮಂಚಣ್ಣನವರ ಜೀವನ ವೈಶಿಷ್ಟ್ಯವಾಗಿದೆ.
ರಾಯಸದ ಮಂಚಣ್ಣನವರ ಮುಖ್ಯ ಕಾಯಕವೆಂದರೆ ಮಹಾಮಂತ್ರಿ ಬಸವಣ್ಣನವರಿಗೆ ಹೊರಗಿನಿಂದ ಬಂದ ಪತ್ರಗಳ ಸಾರಾಂಶವನ್ನು ಓದಿ ಹೇಳುವುದು ಮತ್ತು ಆ
ಪತ್ರದ ಸಂದೇಶಗಳಿಗೆ ಬಸವಣ್ಣನವರ ಮನೋಅಲೆಗಳನ್ನು ಗುರುತಿಸಿ ಅವರ ಪ್ರತಿಕ್ರಿಯೆಯನ್ನು ಪತ್ರಗಳ
ಮುಖಾಂತರ ಸಂಭಂದಿಸಿದವರಿಗೆ ತಲುಪಿಸುವುದು. ಈ ಕಾರ್ಯವನ್ನು ಮಂಚಣ್ಣನವರುಬಹಳ ಪ್ರಾಮಾಣಿಕ
ತೆಯಿಂದ ಶ್ರದ್ಧೆ ವಿಶ್ವಾಸದಿಂದ ಪೂರೈಸುತ್ತಿದ್ದರು. ಬಸವಣ್ಣನವರ ಇಂಗಿತ ಹೆಜ್ಜೆ ಹೆಜ್ಜೆಗೂ ಗೊತ್ತಾಗುತ್ತಿದ್ದರೂ ಅದನ್ನು ಯಾರ ಮುಂದೆಯೂ ಬಿಟ್ಟು ಕೊಡುತ್ತಿರಲಿಲ್ಲ. ಇದೇ ರಾಯಸದವರ ಮೂಲ ತತ್ವ.
ರಾಯಸದ ಮಂಚಣ್ಣ ತನ್ನ ಕಾಯಕದಲ್ಲಿ ಪರಿಶುಭ್ರವಾಗಿದ್ದಂತೆ ತನ್ನ ಬದುಕಿನಲ್ಲಿಯೂ ತನ್ನ ಜೀವನ ಧ್ಯೇಯದಲ್ಲಿಯೂ ಅಷ್ಟೇ ಗಂಭೀರವಾಗಿದ್ದ. ಅರಮನೆಯಲ್ಲಿ ರಾಯಸದ ಕೆಲಸವನ್ನು ಮುಗಿಸಿ, ಸ್ವಗೃಹದಲ್ಲಿ ಗುರು -ಲಿಂಗ – ಜಂಗಮ ದಾಸೋಹ ಪೂರೈಸಿ ಸಾಯಂಕಾಲ ನಡೆಯುವ ಅನುಭವ ಮಂಟಪದಲ್ಲಿ ಭಾಗವಹಿಸಿ ವಚನಗಳ ರಚನೆಯಲ್ಲಿ
ತೊಡಗಿರುತ್ತಿದ್ದ. ಅನುಭವ ಮಂಟಪದ ಕಾರ್ಯ ಕಲಾಪಗಳು ಆತನನ್ನು ಚಿಂತನೆಗೆ ತೊಡಗಿಸುತ್ತಿದ್ದವು. ಜೀವನದ ಸಮಸ್ಯಾ ಪರಿಹಾರದ ಆಲೋಚನೆಗೆ
ಹಚ್ಚುತ್ತಿದ್ದವು. ಆತನೊಬ್ಬ ಒಳ್ಳೆಯ ವಿಚಾರವಾದಿಯೆ0ಬುದನ್ನು ಈ ಕೆಳಗಿನ ವಚನ ಸ್ಥಿರಪಡಿಸುತ್ತದೆ.
ಕೈದು ಮೊನೆದೋರುವುದಕ್ಕೆ ಮೊದಲೇ ಕಟ್ಟಬಲ್ಲಡೆ
ಕೈದು ಏನು ಮಾಡುವುದು ?
ಹಾವು ಬಾಯ ಬಿಡುವುದಕೆ ಮುನ್ನವೇ ಹಿಡಿದರೆ ಅದರ ವಿಷವೇನು ಮಾಡುವುದು ?
ಮನ ವಿಕಾರಿಸುವುದಕೆ ಮುನ್ನವೇ ಮಹದಲ್ಲಿ ನಿಂದರೆ ಇಂದ್ರಿಯಗಳೇನ ಮಾಡಲಾಪವು.
ರಾಯಸದ ಮಂಚಣ್ಣನ ಕಾಲದ ಬಗ್ಗೆ ಹೇಳಬೇಕಾದ ಪ್ರಮೇಯವೇ ಇಲ್ಲ. ಆತ ಬಸವಣ್ಣನವರ ಆಪ್ತ ಸಹಾಯಕ. ಊರು ಯಾವುದು ಎಲ್ಲಿಂದ ಬಂದ ? ಗೊತ್ತಾಗಿಲ್ಲ. ಹೊರಗಿನಿಂದ ಬಂದಿರದಿದ್ದರೆ ಕಲ್ಯಾಣ
ದವರೇ ಎಂದು ಭಾವಿಸಿಕೊಳ್ಳಬೇಕಾಗುತ್ತದೆ. ಈತನ ಹೆಂಡತಿ ರಾಯಮ್ಮನು ವಚನಕಾರ್ತಿ ಇದ್ದು ಒಂದೇ ಒಂದು ವಚನ ದೊರಕಿದೆ. ರಾಯಸದ ಮಂಚಣ್ಣ ಮತ್ತು ರಾಯಸದ ರಾಯಮ್ಮ ಇವರಿಬ್ಬರ ನಡುವೆ
ಮಧುರ ದಾಂಪತ್ಯ ಮತ್ತು ವೈಚಾರಿಕ ಸ್ವಾತಂತ್ರ್ಯ ಇದ್ದುದು ಆದರ್ಶ ಪ್ರಾಯವಾಗಿದೆ. ರಾಯಸದ ಮಂಚಣ್ಣನ ಹೆಸರಿನಲ್ಲಿ ವಚನಗಳು ಸಿಕ್ಕಿದ್ದು ಅಂಕಿತ ” ಜಾ0ಬೇಶ್ವರಾ ! “
ವಚನ ವಿಶ್ಲೇಷಣೆ
ಮರಾಳಂಗೆ ಹಾಲು ನೀರನೆರೆದಲ್ಲಿ ನೀರನುಗುಳಿ
ಹಾಲನು ಕೊಂಬ ಭೇದವ ನೋಡಾ !
ಎಣ್ಣೆ ನೀರು ಕೂಡಿದಲ್ಲಿ , ಎಣ್ಣೆ ತನ್ನಿಂದಲೇ ಬೆಳಗಿ
ತಾನು ತೀರಿದ ಬಳಿಕ ಉರಿಯದ ಭೇದವ ನೋಡಾ !
ಹೊನ್ನು ಮಣ್ಣಿನಲಿ ಬೆರೆದು ತನ್ನನಳಿಯದೆ
ತೊಳಗುವ ಬಿನ್ನಾಣವ ನೋಡಾ !
ಚೆನ್ನಾಗಿ ನುಡಿವ ಅಣ್ಣಯ್ಯ0ಗಳೆಲ್ಲ
ಹೆಣ್ಣು , ಮಣ್ಣು , ಹೊನ್ನೆ0ಬ ಬಲೆಗೆ ಸಿಲುಕಿ
ಲೋಗರ ಬಾಗಿಲಲಿ ನಿಂದು ಬಣ್ಣಗೆಟ್ಟುದ ಕಂಡು
ಚುನ್ನನಾಗಿ ನಗುತಿರ್ದ ನಮ್ಮ ಜಾಂಬೇಶ್ವರ.
ಹೆಣ್ಣು , ಮಣ್ಣು , ಹೊನ್ನು…. ಮಾನವ ಜೀವನಕ್ಕಂಟಿ ಬಂದ ಸಂಗತಿಗಳು. ಜಗತ್ತು ಹುಟ್ಟಿದಾಗಿನಿಂದ ಇವು
ಗಳಿಗೆ ಅತ್ಯಂತ ಮಹತ್ವ ಸಂದಿದೆ. ಅದಕ್ಕಾಗಿಯೇ ವ್ಯೋಮ ಮೂರ್ತಿ ಅಲ್ಲಮ ಪ್ರಭುಗಳು ” ಹೆಣ್ಣಿಗಾಗಿ ಸತ್ತುದು ಕೋಟಿ , ಮಣ್ಣಿಗಾಗಿ ಸತ್ತುದು ಕೋಟಿ, ಹೊನ್ನಿಗಾಗಿ ಸತ್ತುದು ಕೋಟಿ , ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆ ” ಎಂದು ಉದ್ಗರಿಸಿದ್ದಾರೆ.
ಈ ಮೂರನ್ನು ಅನುಭಾವಿಗಳು ನಾನಾ ವಿಧವಾಗಿ ಬಣ್ಣಿಸಿದ್ದಾರೆ. ಇವು ಜಗಕ್ಕಿಕ್ಕಿದ ಒಗಟುಗಳು ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ಬೇಟೆಗಾರನು ಹಕ್ಕಿ
ಗಳನ್ನು ಹಿಡಿಯಲು ಧಾನ್ಯಗಳನ್ನು ಚೆಲ್ಲಿದಂತೆ , ಶಿವನೆಂಬ ಬೇಟೆಗಾರನು ಹೆಣ್ಣು, ಮಣ್ಣು, ಹೊನ್ನುಗಳೆ0ಬ ಧಾನ್ಯಗಳನ್ನು ಹರಡಿ ಜೀವ ಜಾಲಗಳನ್ನು ಸಂಸಾರ ಜಾಲದಲ್ಲಿ ಕೆಡಹುವನು ಎಂದು ಬಣ್ಣಿಸಿದ್ದಾರೆ. ಕೆಲವರು ಈ ಮೂರನ್ನು ಎಂದೆಂದಿಗೂ ನಂಬಬಾರದು
ನಚ್ಚಬಾರದು ಎಂದು ಹೇಳಿದರೆ ಮತ್ತೆ ಹಲವರು
ಕೆಸರಿನಲ್ಲಿದ್ದೂ ಕುಂಬಾರ ಹುಳು ತನ್ನ ಮೈಗೆ ಕೆಸರನ್ನು
ಅಂಟಿಸಿಕೊಳ್ಳದಂತೆ ಈ ಮೂರರ ನಡುವಿದ್ದೂ ಅವುಗಳನ್ನು ಅಂಟಿಸಿಕೊಳ್ಳದೆ ಬಾಳಬೇಕೆಂದು ಬೋಧಿಸಿದ್ದಾರೆ.
ಪ್ರಸ್ತುತ ವಚನದಲ್ಲಿ ನಮ್ಮ ಶಿವಶರಣ ರಾಯಸದ ಮಂಚಣ್ಣನು ಹೆಣ್ಣು , ಹೊನ್ನು , ಮಣ್ಣುಗಳು ಕೇವಲ ಕೆಡುಕಿನ ಆಗರವಲ್ಲ. ಅವುಗಳ ಆಧೀನ ನಾವಾಗದಿದ್ದರೆ ಅವು ಒಳ್ಳೆಯ ಕಾರ್ಯಗಳಿಗೂ ಕಾರಣವಾಗು
ವುವೆಂದು ಹಲವು ದೃಷ್ಟಾಂತಗಳ ಮೂಲಕ ವಿವರಿಸಿರುವನು.
ಮೊದಲನೆಯ ದೃಷ್ಟಾ0ತವೆಂದರೆ ಹಂಸಪಕ್ಷಿ
ಈ ಪಕ್ಷಿಯ ಆಹಾರ ಹಾಲು. ಅದು ಹಾಲಿನಲ್ಲಿ ನೀರು ಬೆರೆತಿದೆಯೆಂದು ಹಾಲನ್ನು ಧಿಕ್ಕರಿಸಲು ಹೋಗುವುದಿಲ್ಲ ಅದು ಎಷ್ಟೇ ನೀರು ಬೆರೆಸಿದ್ದರೂ ಹಾಲನ್ನು ಮಾತ್ರ
ಸ್ವೀಕರಿಸಿ ನೀರನ್ನು ಅಲ್ಲಿಯೇ ಬಿಡುವುದು. ಹಾಗೆಯೇ ಮಾನವರು ಸಂಸಾರದಲ್ಲಿ ಹೆಣ್ಣು, ಹೊನ್ನು, ಮಣ್ಣುಗಳಿವೆಯೆಂದು ಸಂಸಾರವನ್ನು ತ್ಯಜಿಸಬೇಕಾದುದಿಲ್ಲ.
ಆ ಮೂರರಲ್ಲಿನ ಒಳ್ಳೆಯ ಅಂಶಗಳನ್ನು ಹಂಸ-ಕ್ಷೀರನ್ಯಾಯದಂತೆ ಸ್ವೀಕರಿಸಿ ಅವುಗಳನ್ನೇ ತಮ್ಮ ಜೀವನ ಸಿದ್ಧಿಯ ಸೋಪಾನಗಳನ್ನಾಗಿ ಮಾಡಿಕೊಳ್ಳಬಹುದು
” ಸತಿ -ಪತಿ – ರತಿ ಸುಖವ ಬಿಟ್ಟರೇ ಸಿರಿಯಾಳ ಚೆಂಗಳೆಯರು, ರತಿ ಸುಖ ಭೋಗೋಪಭೋಗವ
ಬಿಟ್ಟನೇ ಸಿಂಧುಬಲ್ಲಾಳನು ? ” ಎಂದು ಬಸವಣ್ಣನವರು
ಪ್ರಶ್ನೆ ಹಾಕಿಕೊಂಡು ಇಬ್ಬರು ಹೆಂಡಿರೊಡನೆ ಬಾಳುತ್ತ ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿ ಎಂದು ಕರೆಸಿಕೊಳ್ಳಲಿಲ್ಲವೆ ? ಪರಸತಿ , ಪರಧನಕ್ಕೆ ಎಳಸದಿದ್ದರಾಯಿತೆಂದು ಅವರು ಸಂಸಾರದ ಗುಟ್ಟನ್ನು ರಟ್ಟು ಮಾಡಿರುವರು.
ಇದೇ ರೀತಿಯಲ್ಲಿ ಎರಡನೆಯ ದೃಷ್ಟಾಂತವಾಗಿ ಎಣ್ಣೆ ಇದೆ. ಎಣ್ಣೆಯಲ್ಲಿ ನೀರು ಹಾಕಿದ ಮಾತ್ರಕ್ಕೆ ಅದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದಿಲ್ಲ. ನೀರನ್ನು ಅಂಟಿಸಿ ಕೊಳ್ಳದೆ ಆಲಿಪ್ತವಾಗಿಯೇ ಇರುತ್ತದೆ. ತನ್ನ ಅಸ್ತಿತ್ವ
ಇರುವವರೆಗೆ ಅದು ದೀಪವನ್ನು ಬೆಳಗಿಸುತ್ತದೆ. ನೀರು ಬೆರೆತಿದೆಯೆಂದು ತೈಲದ ದಂದಹ್ಯಮಾನ ಅರ್ಥಾತ್ ಉರಿಯುವ ಗುಣವೇನೂ ನಾಶವಾಗುವುದಿಲ್ಲ. ಹಾಗೆ ಮನುಷ್ಯನು ಹೆಣ್ಣು , ಮಣ್ಣು , ಹೊನ್ನುಗಳ ಜೊತೆಗಿದ್ದೂ ತನ್ನ ಮೂಲ ಸ್ವರೂಪವೇನು ? ತನ್ನ ಜೀವನ ಧ್ಯೇಯವೇನು, ಎಂದು ಅರಿತುಕೊಂಡು ಸ್ವಸಾಮರ್ಥ್ಯದ ಬಲದ ಮೇಲೆ ಎಣ್ಣೆಯಂತೆ ತನ್ನಅಸ್ತಿತ್ವವನ್ನು ಸ್ಥಾಪಿಸಲು ಪ್ರಯತ್ನಿಸಬೇಕು.
ಮೂರನೆಯದಾಗಿ ಶರಣ ರಾಯಸದ ಮಂಚಣ್ಣನು ಹೊನ್ನು ಮತ್ತು ಮಣ್ಣುಗಳ ಸಹಬಾಳ್ವೆಯನ್ನೇ ದೃಷ್ಟಾ0ತವಾಗಿ ನೀಡುತ್ತಿರುವನು. ಹೊನ್ನು ಮತ್ತು ಮಣ್ಣುಗಳು ಕೆಟ್ಟವುಗಳೆಂದು ಹೆದರಿಕೊಳ್ಳುವವರಿಗೆ
ಆತನು ಕೇಳುವ ಪ್ರಶ್ನೆಯೆಂದರೆ ಸ್ವತಹ ಹೊನ್ನುಮಣ್ಣಿಗೆ ಅಂಜುವುದಿಲ್ಲ. ಮಣ್ಣು ಹೊನ್ನಿಗೆ ಅಂಜುವುದಿಲ್ಲ ಎಂದ ಬಳಿಕ ನೀವೇಕೆ ಇವೆರಡಕ್ಕೆ ಅಂಜಬೇಕು ? ಹೊನ್ನು ಸಿಗುವುದೇ ಮಣ್ಣಿನಲ್ಲಿ. ಮಣ್ಣಿನ ಪ್ರಮಾಣ
ಜಾಸ್ತಿಯಿದೆಯೆಂದುಹೊನ್ನು ತನ್ನ ಗುಣಧರ್ಮವನ್ನೇನೂ ಕಳೆದುಕೊಳ್ಳುವುದಿಲ್ಲ.
ಎಷ್ಟು ಶತಮಾನಗಳುಗತಿಸಿದರೂ
ಹೊನ್ನು ಮಣ್ಣಿನ ಜತೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಾಳುತ್ತಿರುತ್ತದೆ. ಕೇವಲ ಹೊನ್ನನ್ನು ಬಯಸುವವರು ಸುತ್ತಲಿನ ಮಣ್ಣನ್ನೆಲ್ಲ ಕರಗಿಸಿ ಕಳೆದು ಅಚ್ಚಬಂಗಾರವನ್ನು ಪಡೆದುಕೊಳ್ಳಬೇಕಾಗುತ್ತದೆ
ಹೊನ್ನು ಮಣ್ಣಿನಲ್ಲಿ ಹುಟ್ಟಿಯೂ ಮಣ್ಣಿನಿಂದ ಎಷ್ಟು ಆಲಿಪ್ತವಾಗಿರುತ್ತದೆಯೆಂದರೆ ಅದರಲ್ಲಿನ ಕಸಕಲ್ಮಶಗಳನ್ನು ಕಳೆಯಬೇಕಾದರೆ ಮಣ್ಣಿನ ಕುಡಿಕೆಯೇ ಬೇಕು ಹೊನ್ನು ಮತ್ತು ಮಣ್ಣಿನ ಈ ಬಿನ್ನಾಣದ ಸಂಬಂಧ ಸಂಸಾರದ ಗಂಡು ಮತ್ತು ಹೆಣ್ಣುಗಳಿಗೆ ಆದರ್ಶಪ್ರಾಯ ವಾಗಬಾರದೇ ?
ಈ ಸಾಮಾನ್ಯ ಅರ್ಥವಲ್ಲದೆ ಶರಣರಾಯಸದ ಮಂಚಣ್ಣನವರು ಈ ವಚನದಲ್ಲಿ ಅನೇಕ ಸೂಚ್ಯಾರ್ಥಗಳನ್ನೂ ಅಡಗಿಸಿರುವರು. ಇಲ್ಲಿ ಮರಾಳ ಅಥವಾ ಹಂಸವೆಂದರೆ ಸಂಸಾರಿಗರು. ಎಣ್ಣೆಯೆಂದರೆ ಮಠಗಳ ಸನ್ಯಾಸಿಗಳು ಮತ್ತು ಹೊನ್ನು ಎಂದರೆ ಮಹಾತ್ಮರು ಮತ್ತು ಕಾರಣಿಕ ಪುರುಷರು. ಬಸವಣ್ಣ, ಮೋಳಿಗೆಯ ಮಾರಯ್ಯ , ಆಯ್ದಕ್ಕಿ ಮಾರಯ್ಯ , ಹಡಪದ ಅಪ್ಪಣ್ಣ ಮೊದಲಾದ ಶರಣರು ಹಂಸಪಕ್ಷಿ
ಯಂತೆ ಬಾಳಿ ಹೋದರು.
ಹೊನ್ನು, ಹೆಣ್ಣು, ಮಣ್ಣುಗಳಿಗೆ ಅವರು ಹೆದರಲೇ ಇಲ್ಲ. ಇದೇ ರೀತಿ ಚೆನ್ನಬಸವಣ್ಣ , ಸೊನ್ನಲಿಗೆಯ ಸಿದ್ಧರಾಮ, ಎಡೆಯೂರು ಸಿದ್ಧಲಿಂಗೇಶ್ವರ ಮೊದಲಾದ ಸನ್ಯಾಸಿಗಳು ಎಣ್ಣೆ
ಯಂತೆ ಸ್ವಸಾಮರ್ಥ್ಯವನ್ನು ಬೀರಿದರು. ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ಮಹಾತ್ಮರು ಈ ಸಂಸಾರದಲ್ಲಿದ್ದರೂ . ಮಣ್ಣಿನ ನಡುವಿನ ಹೊನ್ನಿನಂತೆ ತೊಳಗಿ ಬೆಳಗಿ ಹೋದರು. ಇವರೆಲ್ಲರ ನಡೆ -ನುಡಿಗಳು ಇಂದು ನಮಗೆ ಆದರ್ಶ ವಾಗಬೇಕು.
ಈ ಲೋಕದ ಮಾನವರ ಮುಖ್ಯ ತಪ್ಪು ಎಲ್ಲಿದೆ ಎಂಬುದನ್ನು ರಾಯಸದ ಮಂಚಣ್ಣನವರು ವಚನದ ಕೊನೆಯ ಭಾಗದಲ್ಲಿ ವಿವರಿಸುತ್ತಿರುವರು. ಚೆನ್ನಾಗಿ
ನುಡಿವ ಅಣ್ಣಯ್ಯಗಳೆಂದರೆ ವೇದಾಗಮ ಶಾಸ್ತ್ರ ಪುರಾಣ ಪ್ರವಚನ ಮಾಡಿ ಹೇಳುವವರು ಹೆಣ್ಣು, ಹೊನ್ನು , ಮಣ್ಣುಗಳ ಬಲೆಗೆ ಸಿಲುಕಿ ಅತಿವ್ಯಾಮೋಹದಿಂದ ಲೋಭ -ಲಾಭ ಕೆಟ್ಟ ದೃಷ್ಠಿಯಿಂದ ಅನ್ಯ ಮಾನವರ ಮನೆಯ ಬಾಗಿಲು ತುಳಿದರೆ ಯಾರ ತಪ್ಪು ? ಹೇಳುವುದು ಉಚ್ಚತತ್ವ , ಬಾಳುವುದು ಕೀಳು
ಮಟ್ಟದ್ದಾದರೆ ಅವರು ಹೆಣ್ಣು -ಹೊನ್ನು – ಮಣ್ಣುಗಳ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆಂಬುದೇ ಅರ್ಥ.
ಸಾಮಾನ್ಯ ಒಂದು ಹಂಸ , ಪರಾವಲಂಬಿಯಾದ ದೀಪ, ಸಂಸ್ಕಾರವಿಲ್ಲದೆ ಬೆಳಕು ಕಾಣದ ಬಂಗಾರ ಮೊದಲಾದವು ತಮ್ಮ ಅಸ್ತಿತ್ವವನ್ನು ತಾವು ಉಳಿಸಿಕೊಂಡು ಹೋಗುತ್ತವೆಯೆಂದರೆ ಸಕಲ ಬುದ್ಧಿಶಕ್ತಿಯನ್ನು, ಸಕಲ ದೈಹಿಕ ಶಕ್ತಿಯನ್ನು , ಸಕಲ ಜ್ಞಾನಶಕ್ತಿಯನ್ನು ಪಡೆದಂಥ ಮಾನವರಿಗೆ ಏನು ಧಾಡಿಯಾಗಿದೆ ? ಇದು ರಾಯಸದ ಮಂಚಣ್ಣನವರ ಮುಖ್ಯ ಪ್ರಶ್ನೆ .
–ಸುಧಾ ಪಾಟೀಲ್
ಬೆಳಗಾವಿ