ಕುಟುಂಬ ಮಿಲನದಲ್ಲಿ‌ ಮಿಂದೆದ್ದ ಪುಸ್ತಕ ಬಿಡುಗಡೆ ಸಮಾರಂಭ

ಕುಟುಂಬ ಮಿಲನದಲ್ಲಿ‌ ಮಿಂದೆದ್ದ ಪುಸ್ತಕ ಬಿಡುಗಡೆ ಸಮಾರಂಭ

e-ಸುದ್ದಿ ಸಿಂಧನೂರು
ಭಾನುವಾರ ಬೆಳಿಗ್ಗೆ ೧೦ ಗಂಟೆಯ ಸಮಯ ಸಿಂಧನೂರಿನ ವಿನಯ ರೆಸಿಡೇನ್ಸಿಯಲ್ಲಿ ಬೇಂದ್ರೆ ಅಜ್ಜ, ಕುವೆಂಪು ಮತ್ತು ಜಿ.ಎಸ್ . ಶಿವರುದ್ರಪ್ಪ ಅವರ ಭಾವಗೀತೆಗಳು ರಾಯಚೂರಿನ ಮಹಾಲಕ್ಷ್ಮಿ ಅವರ ಧ್ವನಿಯಲ್ಲಿ ರಾಗಬದ್ಧವಾಗಿ ಹಾಡುತ್ತಿದ್ದರೆ ನೆರೆದವರೆಲ್ಲ ಮಂತ್ರ ಮುಗ್ದರಾಗಿ ಆಲಿಸುತ್ತಿದ್ದರು.
ಶ್ರೀಮತಿ ವೇದಾ ಮನೋಹರ್ ಮಸ್ಕಿ ಅವರ ಪಂಚಮವೇದ ಮತ್ತು ವೇದ ಎಂಬ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭ ಅದು.
ಗಾಯನ ಮುಗಿಯುತ್ತಿದ್ದಂತೆ
ಪುಸ್ತಕ ಲೋಕಾರ್ಪಣೆ ಮಾಡಲಿರುವ ಸಾಹಿತಿ, ಪ್ರಾಚಾರ್ಯ ಪ್ರೋ.ಸಿದ್ದು ಯಾಪಲಪರ್ವಿ, ಶ್ರೀಮತಿ ಮಧುಮತಿ ದೇಶಪಾಂಡೆ, ಶ್ರೀಮತಿ ಸುಧಾ ಶರ್ಮ ಚವತ್ತಿ, ಲೇಖಕಿ ಶ್ರೀಮತಿ ಭಾರತಿ ಹೆಗಡೆ, ಪುಸ್ತಕದ ಕೇಂದ್ರ ಬಿಂದು ಶ್ರೀಮತಿ ವೇದಾ ಮನೋಹರ್ ಮಸ್ಕಿ ಹಾಗೂ ರಾಯಚೂರಿನ ನ್ಯಾಯವಾದಿ ಮಸ್ಕಿ ನಾಗರಾಜ ವೇದಿಕೆಯಲ್ಲಿ ಆಸೀನರಾಗುತ್ತಿದ್ದಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಮನೋಹರ ಮಸ್ಕಿ ಪುಸ್ತಕ ಹುಟ್ಟಿದ ರೀತಿಯನ್ನು ವಿವರಿಸುತ್ತ ಆಪ್ತತೆಯಿಂದ ಎಲ್ಲರನ್ನೂ ಸ್ವಾಗತಿಸಿದರು.


ಘಮ್ಮೆವನ್ನುವ ಪುಷ್ಪಗಳ ಪಕಳೆಗಳ ಮದ್ಯೆ ಅಡಗಿ ಕುಳಿತ್ತಿದ್ದ ಪುಸ್ತಕಗಳನ್ನು ಪ್ರೋ. ಸಿದ್ದು ಯಾಪಲಪರ್ವಿ ಹುಡುಕಿ ಹುಡುಕಿ ಹೆಕ್ಕಿ ತೆಗೆದು ಪ್ರದರ್ಶಿಸುವ ಮೂಲಕ ಬಿಡುಗಡೆ ಮಾಡಿದರು.
ಪ್ರೋ.ಸಿದ್ದು ಯಾಪಲಪರ್ವಿ ಮಾತನಾಡುತ್ತ ಪಂಚಮವೇದ ದಲ್ಲಿ ವೇದಾ ಹೇಳುತ್ತಿರುವ ಆತ್ಮ‌ಕಥನದಲ್ಲಿ ಮನೋಹರ್ ಮಸ್ಕಿ ಹಿಂದೆ ನಿಂತು ಮುನ್ನಡೆಸಿದ ಪರಿ ಕಾಣುತ್ತದೆ. ವೇದಾಳಲ್ಲಿ‌ ಮನೋಹರ್, ಮನೋಹರನಲ್ಲಿ ವೇದಾ ಬೆರೆತು ಹಾಲು ಸಕ್ಕರೆಯಂತೆ ಇದ್ದಾರೆ ಎಂದರು.


ಬದುಕಿನಲ್ಲಿ ಕಷ್ಟ ಸುಖ ಸರ್ವೆಸಾಮಾನ್ಯ. ಆದರೆ ಮನಸ್ಸಿಗೆ ಖುಷಿಯಂತೆ ಬದುಕುವ ಇತರರಿಗೆ‌ ಮಾದರಿಯಾಗುವ ಬದಕು ಸಾರ್ಥಕ. ಅಂತಹ ಸಾರ್ಥಕ ಬದಕು ಪಂಚಮವೇದದಲ್ಲಿ ಆತ್ಮಕಥನ ಕಾದಂಬರಿ ರೂಪದಲ್ಲಿ ಲೇಖಕಿ ಭಾರತಿ ಹೆಗಡೆ ಚನ್ನಾಗಿ ಕಟ್ಟಿ ಕೊಟ್ಟಿದ್ದಾರೆ. ಜಾತ್ಯಾತೀತವಾಗಿ ಬದಕು ಸುಂದರ ಗೊಳಿಸುವ ಅವಕಾಶಗಳಿದ್ದಾಗ ಧರ್ಮ, ಜಾತಿ, ಅಡ್ಡಗೋಡೆಗಳನ್ನು ಕಿತ್ತು ಹಾಕಿ ಪ್ರೀತಿಯಿಂದ ಬದುಕುವ ಪರಿ ಅನನ್ಯವಾದುದು ಎಂದು ತಿಳಿಸಿದ ಪ್ರೊ.ಸಿದ್ದು ಯಾಪಲಪರ್ವಿ  ಸಭಿಕರನ್ನೆಲ್ಲ ಆಗಾಗ ಕೆಲವು ದೃಷ್ಟಾಂತಗಳನ್ನು ಹೇಳುವ ಮೂಲಕ ನಗೆಗಡಲಲ್ಲಿ ತೇಲಿಸಿದರು.


ಪುಸ್ತಕಗಳ ಕುರಿತು ಪ್ರಾಫಿಟ್ ಪ್ಲಸ್ ಮಾಸ ಪತ್ರಿಕೆಯ ಸಂಪಾದಕಿ ಶ್ರೀ ಮತಿ ಸುಧಾ ಶರ್ಮ ಚವತ್ತಿ ಮಾತನಾಡುತ್ತ ವೇದ ಮತ್ತು ಪಂಚಮವೇದಗಳ ಬಗ್ಗೆ ಎಳೆ ಎಳೆಯಾಗಿ ವಿವರಿಸುತ್ತ ಪುಸ್ತಕ ಯಾಕೆ ಓದಬೇಕು. ಈ ಪುಸ್ತಕ ಏಕೆ ವಿಭಿನ್ನ ಎಂಬುದರ ಕುರಿತು ವಿವರಿಸಿದರು.
ಲೇಖಕಿ ಭಾರತಿ ಹೆಗಡೆ ಪಂಚಮವೇದ ಪುಸ್ತಕ ರಚನೆ ಅದರ ಅನುಭವ ಮಹಿಳೆಯರ ಧಾರಣ ಶಕ್ತಿ, ಮಹಿಳೆಯರ ಆತ್ಮ ಕಥನ ಕುರಿತು ಬಂದಿರುವ ಕೃತಿಗಳ ಬಗ್ಗೆ ಮಾತನಾಡಿ ಪಂಚಮವೇದ ಕೂಡ ಮಹಿಳಾ ಸಾಧಕಿಯ ಬಗ್ಗೆ ವಿವರಿಸಿದರು.
ಪಂಚಮವೇದದ ಕೇಂದ್ರಬಿಂದು ವೇದಾ ಮನೋಹರ್ ಮಸ್ಕಿ ಮಾತನಾಡುತ್ತ ಮಡಿಕೆರಿಯ ಬಾಲ್ಯ, ರಾಯಚೂರಿನ ಬಿಸಲು ನಾಡಿನ ಆಪ್ತತತೆ ದುಡಿಯುವ ಛಲ, ಬದಕು ಕಟ್ಟಿಕೊಳ್ಳುವ ಸಾಹಸ ಆದರ್ಶ ಬದುಕಿನ ರೀತಿ ರಿವಾಜುಗಳ ಕುರಿತು ಸ್ಮರಿಸಿಕೊಂಡರು. ನ್ಯಾಯವಾದಿ ಮಸ್ಕಿ ಕುಟುಂಬದ ಎರಡನೇ ತಲೆಮಾರಿನ ಹಿರಿಯ ವ್ಯಕ್ತಿ ನಾಗರಾಜ ಮಸ್ಕಿ ಮಾತನಾಡಿ ಕೂಡು ಕುಟುಂಬದ ಒಗ್ಗಟ್ಟು, ಜಾತ್ಯಾತೀತವಾಗಿ ಬೆಳೆಯುವಲ್ಲಿನ ಸವಾಲುಗಳನ್ನು ವಿವರಿಸಿ ಒಳಿತು ಕೆಡುಕಿನ ಬಗ್ಗೆ ಚಿಂತನೆ ಮಾಡಿ ಅಡಿ ಇಡುವ ಮೂಲಕ ಸ್ವಾಸ್ಥ್ಯ ಕುಟುಂಬ ನಿರ್ವಹಣೆ ಮಾಡುವ ಕುರಿತು ತಿಳಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪನ್ಯಾಸಕಿ ಮಧುಮತಿ ದೇಶಪಾಂಡೆ ಒಟ್ಟು ಕಾರ್ಯಕ್ರಮದ ಔನ್ನತ್ಯೆದ ಬಗ್ಗೆ ಚಂದಾಗಿ ಮೆಲಕು ಹಾಕಿ ಇಡಿ ಸಮಾರಂಭ ಸುಂದರಗೊಳಿಸಿದರು. ಶಿವಕುಮಾರ ಎನ್ ಅವರ ನಿರೂಪಣೆ, ಅತಿಥಿಗಳ ಸತ್ಕಾರ , ರುಚಿಕಟ್ಟಾದ ಊಟ ಎಲ್ಲವೂ ಚಂದ ಚಂದವಾಗಿ ನಡೆದು ಅತ್ಯೂತ್ತಮ ಕಾರ್ಯಕ್ರಮವಾಗಿತ್ತು.
ರಾಯಚೂರಿನ ಸುದ್ದಿಮೂಲ ಪತ್ರಿಕೆಯ ಸಂಪಾದಕ ಬಸವರಾಜ ಸ್ವಾಮಿ, ಮಸ್ಕಿಯ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಶರಣಗೌಡ ಸಣ್ಣಜಿನ್ನ, ಅಮರೇಗೌಡ ವಿರುಪಾಪುರ, ಸತ್ಯಂ, ಹಾಗೂ ಇತರರು ಆಗಮಿಸಿದ್ದರು. .

 

Don`t copy text!