🪔 ವಚನ ಬೆಳಕು…

🪔 ವಚನ ಬೆಳಕು…

ಮೂರುವ ಮುಟ್ಟದೆ, ನಾಲ್ಕುವನಂಟದೆ
ಐದುವ ನೆಚ್ಚಲು ಬೇಡ ಕಂಡಾ.
ಆರುವ ಜಾರದೆ, ಏಳುವ ಹಿಡಿಯದೆ
ಎಂಟುವ ಗಂಟಿಕ್ಕಬೇಡ ಕಂಡಾ
ಒಂಭತ್ತು ಬಾಗಿಲು ಹಿಂದಿಕ್ಕಿ ಹೋದಡೆ
ಅಂಬಿಗ ಚೌಡಯ್ಯನ ಉಪದೇಶವಯ್ಯಾ!

                     -ಶರಣ ಅಂಬಿಗರ ಚೌಡಯ್ಯ

ಇದೊಂದು ಅಂಬಿಗರ ಚೌಡಯ್ಯನವರ ಬಹು ಸುಂದರವಾದ ಬೆಡಗಿನ ವಚನ. ಈ ವಚನದ ಮೂಲಕ ಅವರು ಮಾನವ ಜನಾಂಗಕ್ಕೆ ಸಂಸ್ಕಾರದ ಉಪದೇಶ ಕೊಡುತ್ತಿದ್ದಾರೆ. ಮೂರುವ ಮುಟ್ಟದೆ ಎಂದರೆ, ಆಣವ, ಮಾಯಾ, ಕಾರ್ಮಿಕ ಎಂಬ ಮಲತ್ರಯಗಳು ಮಾನವನ ಸ್ಥೂಲ, ಸೂಕ್ಷ್ಮ, ಕಾರಣ ತನುಗಳಿಗೆ ಆವೃತವಾಗಿವೆ. ಇವುಗಳನ್ನು ಮುಟ್ಟದೆ; ನಾಲ್ಕುವನಂಟದೆ ಎಂದರೆ ಸಾಲೋಕ್ಯ , ಸಾಮಿಪ್ಯ , ಸಾರೂಪ್ಯ , ಸಾಯುಜ್ಯ ಗಳೆಂಬ ಚತುರ್ವಿಧ ಫಲ- ಪದವಿಗಳಿಗಂಟಿರದೆ ; ಐದುವ ನೆಚ್ಚಲು ಬೇಡ ಕಂಡಾ ಎಂದರೆ, ಪಂಚೇಂದ್ರಿಯಗಳಾದ ಕಣ್ಣು, ಕಿವಿ,ಮೂಗು, ನಾಲಿಗೆ, ಚರ್ಮ ಗಳನ್ನು ನೆಚ್ಚದೆ ; ಆರುವ ಜಾರದೆ ಎಂದರೆ, ಅರಿಶಡ್ವೆರಿಗಳಾದ ಕಾಮ, ಕ್ರೋಧ, ಮದ, ಮತ್ಸರ, ಮೋಹ,ಲೋಭ ಈ ಆಸೆಗಳಿಗೆ ಜಾರದೆ; ಏಳುವ ಹಿಡಿಯದೆ ಎಂದರೆ, ತನು, ಮನ, ಧನ , ವಾಹನ, ಉತ್ಸಾಹ, ವಿಶ್ವ, ಸೇವಕ ಎಂಬ ವ್ಯಸನಗಳನ್ನು ಹಿಡಿಯದೆ; ಎಂಟುವ ಗಂಟಿಕ್ಕಬೇಡ ಕಂಡಾ ಎಂದರೆ, ಕುಲ, ಛಲ, ಧನ, ರೂಪ, ಯೌವ್ವನ, ವಿದ್ಯೆ, ರಾಜ್ಯ, ತಪ ಎಂಬ ಅಷ್ಟ ಮದಗಳನ್ನು ಕಟ್ಟಿಕೊಳ್ಳಬೇಡ; ಒಂಭತ್ತು ಬಾಗಿಲು ಹಿಂದಿಕ್ಕಿ ಹೋದಡೆ ಎಂದರೆ, ಎರಡು ಕಣ್ಣುಗಳು, ಎರಡು ಕಿವಿಗಳು, ಮೂಗಿನ ದ್ವಾರ ಎರಡು, ಬಾಯಿ, ಗುದದ್ವಾರ, ಗುಹ್ಯದ್ವಾರ ಹೀಗೆ ದೇಹದ ನವರಂಧ್ರಗಳನ್ನು ಹಿಂದಿಕ್ಕಿದರೆ ಅದುವೇ ಸಂಸ್ಕಾರ ಎನ್ನುವರು ಚೌಡಯ್ಯನವರು ! ಆಧ್ಯಾತ್ಮದ ಸಾಧನೆಯ ಸುಂದರ ಜೀವನ ಮಾರ್ಗವನ್ನು ಈ ವಚನದ ಮೂಲಕ ಸೂಚಿಸುತ್ತಾರೆ .

ಹಮೀದಾ ಬೇಗಂ ದೇಸಾಯಿ ಸಂಕೇಶ್ವರ

Don`t copy text!