ಗಝಲ್
ಸೋಗೆ ಮನೆ ಸೋರಿದರೂ ಸೋಲದೇ ಬಾಳು ಕಟ್ಟಿರುವೆಯಲ್ಲ ನೀನು
ಸೋಗಿನ ದಾರಿ ತುಳಿಯದೇ ಸುಭದ್ರ ಅಡಿಪಾಯ
ಒಟ್ಟಿರುವೆಯಲ್ಲ ನೀನು
ಹಳ್ಳಿಯ ಜೀವನ ಒಗ್ಗಟ್ಟಿನ ಒಲುಮೆಯ ಹಂಚುವ ಒರತೆಯಲ್ಲವೆ
ಹಳ್ಳದ ದಂಡೆಯಲಿ ಕುಳಿತು ಸವಿಜೇನ ಮುತ್ತು ಕೊಟ್ಟಿರುವೆಯಲ್ಲ ನೀನು
ಮಲೆನಾಡಿನ ಸುಂದರ ಹಸಿರಿನ ವನಸಿರಿಯು ಬಣ್ಣನೆಗೆ ನಿಲುಕದಲ್ಲಾ
ಅಲೆದಾಡುತ ಗದ್ದೆಯಲಿ ಬಣ್ಣದ ಉಡುಗೆಯ
ತೊಟ್ಟಿರುವೆಯಲ್ಲ ನೀನು
ಜಟ್ಟಿಯ ನೆರಳಲಿ ಸ್ವರ್ಗವೆ ಗುಡಿಸಲತುಂಬ ಹರಡಿ ಆನಂದ ನೆಲೆಗೊಂಡಿದೆ
ದಟ್ಟ ಇರುಳನು ಲೆಕ್ಕಿಸದೆ ಜೊತೆಯಲಿ ದಿಟ್ಟ ಹೆಜ್ಜೆಯ ಇಟ್ಟಿರುವೆಯಲ್ಲ ನೀನು
ತೂತಿನ ಮಾಳಿಗೆಯಲಿ ಜಯಾ ತಾರೆಗಳ ಹೊಳಪನು ಕಣ್ತುಂಬಿಕೊಳುವಳು
ತೊತ್ತಿನ ಚೀಲ ಹೊರೆಯಲು ಹೊಂಗನಸು ಹೊಸೆಯುದ ಬಿಟ್ಟಿರುವೆಯಲ್ಲ ನೀನು.
–ಜಯಶ್ರೀ ಭ ಭಂಡಾರಿ.
ಬಾದಾಮಿ