ಅಕ್ಕನ ಅರಿವು

ಅಕ್ಕನ ಅರಿವು

ಅಕ್ಕನ ಅರಿವಿನ ಅತಿಸೂಕ್ಷ್ಮ ಬೆಳಗು ಚಿತ್ತಿನ ಅಖಂಡ ಪರಿಪೂರ್ಣವಾದ ಪರಂಜ್ಯೋತಿ ಪ್ರಕಾಶ.ಅಕ್ಕನ ಅರಿವು ನಿತ್ಯ-ಸತ್ಯದ ಮಹಾ ಬೆಳಗು.ವಿಶ್ವಬ್ರಹ್ಮಾಂಡವನ್ನು ಹೆತ್ತು ಹೊತ್ತು ಹೊರೆದು ಹೊಟ್ಟೆಯೊಳಗೆ ಇಟ್ಟುಕೊಂಡು ಅನುಭವಿಸಿದ ವಿಪರೀತ ಬೆಳಗು.

ಅಕ್ಕನ ವಚನವೊಂದು ಮೇಲೆ ನೋಟಕ್ಕೆ ಒಂದೇ ತೆರನಾಗಿ ಕಾಣುವಂತೆ ಇದ್ದರೂ ಭಾವಾರ್ಥ ಬೇರೆ ಬೇರೆಯಾಗಿವೆ.ಅವುಗಳ ವಿಶ್ಲೇಷಣೆ ಮಾಡುವ ಉದ್ದೇಶ ನನ್ನದಾಗಿದೆ.
ಅಕ್ಕ ಕೇಳವ್ವ, ಅಕ್ಕಯ್ಯ ನಾನೊಂದು ಕನಸು ಕಂಡೆ. ಅಕ್ಕಿಯಡಕೆ ತೆಂಗಿನ ಕಾಯಿ ಕಂಡೆ. ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು ಭಿಕ್ಷಕ್ಕೆ ಬಂದುದ ಕಂಡೆನವ್ವ. ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು.ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆನು.

ಅಕ್ಕ ಕೇಳಕ್ಕಾ ಆ ನೊಂದ ಕನಸ ಕಂಡೆ.ಚಿಕ್ಕ ಚಿಕ್ಕ ಜಡೆ ಸುಲಿಪಲ್ಲ ಗೊರವನು ಬಂದೆನ್ನ ನೆರೆವನು ನೋಡವ್ವಾ! ಆತನಪ್ಪಿ ಕೊಂಡು ತಳವೆಳಗಾದೆನೆಲಗೆ! ಚೆನ್ನಮಲ್ಲಿಕಾರ್ಜುನನ ಕೂಡಿ, ಕಣ್ಮುಚ್ಚಿ ತೆರೆದು ತಳವೆಳಗಾದೆನೆಲಗೆ!

ಇಲ್ಲಿ ಅಕ್ಕಮಹಾದೇವಿ ಅಸಾಧ್ಯವಾದುದನ್ನು ಅಸಾಧ್ಯವೆಂದೇ ಹೇಳಿದ್ದಾಳೆ.ಅಸಾಧ್ಯವಾದುದನ್ನು ಸಾಧ್ಯ ಎಂದು ಹೇಳಲಿಲ್ಲ.
ಅಕ್ಕ ಕೇಳವ್ವ, ಅಕ್ಕಯ್ಯ ನಾನೊಂದು ಕನಸು ಕಂಡೆ
ಇಲ್ಲಿ ಅಕ್ಕಮಹಾದೇವಿ ತನ್ನ ತಾಯಿಯ ಸಮಾನರಾದ ಹಿರಿಯರಿಗೆ ಅಕ್ಕಯ್ಯ ಎಂದು ಹೇಳುವಲ್ಲಿ ತನ್ನ ಓರಿಗೆಯವರಿಗೆ ತನ್ನ ಕನಸನ್ನು ಹೇಳುತ್ತಿದ್ದಾಳೆ.
ಅಕ್ಕಿಯಡಕಿ ತೆಂಗಿನ ಕಾಯಿ ಕಂಡೆ
ಮದುವೆಯ ಸಂದರ್ಭದಲ್ಲಿ ಬಳಸುವ ಸಾಮಾಗ್ರಿಗಳು.ಇವೂ ಕೂಡಾ ಅನಾವಶ್ಯಕ.ಇವುಗಳಿಂದಲೇ ಮದುವೆ ಸಾಧ್ಯವೆನ್ನುವುದು ಇಲ್ಲ.ಮದುವೆಯಾಗಲು ಎರಡು ಹೃದಯಗಳ ಸಮ್ಮತ ಮುಖ್ಯ ಎಂದು ತಾಯಿ ಹೇಳಿದ್ದಾಳೆ.

ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು ಭಿಕ್ಷಕ್ಕೆ ಬಂದುದ ಕಂಡೆನವ್ವ
ಇಲ್ಲಿ ಸೃಷ್ಟಿಕರ್ತನಾದ ದೇವನು ಸಕಲ ಜೀವ ರಾಶಿಗೆ ಅನ್ನ, ನೀರು, ವಸತಿ, ಆಶ್ರಯ ನೀಡುವಂತವನು.ಅವನು ದಾನಿಯೇ ಹೊರತು ಭಿಕ್ಷುಕನಲ್ಲ.ಅವನಂತೆ ವೇಷ ಹಾಕಿಕೊಂಡು ತಿರುಗುವವರನ್ನು ವ್ಯಂಗ್ಯವಾಗಿ ಖಂಡಿಸಿದ್ದಾಳೆ.
ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು
ಎಲ್ಲವನ್ನೂ ಮೀರಿ ಅಂದರೆ ವಾಸ್ತವದಲ್ಲಿ ಕೈಗೆ ಸಿಗದಂತೆ ಹೋಗುವವನ್ನು ಬೆನ್ನು ಹತ್ತಿ ಕೈ ಹಿಡಿದೆ ಆದರೆ ಕಣ್ತೆರೆದು ನೋಡಿದಾಗ ಅದೆಲ್ಲವೂ ಭ್ರಮೆ ಎನಿಸಿತು.ಅಂದರೆ ತಾಯಿಯೇ ಹೇಳಿದಂತೆ ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ ಚೆಲುವಂಗಾನೊಲಿದೆನವ್ವಾ.
ಎಡೆ ಇಲ್ಲದ ಕಡೆ ಇಲ್ಲದ ತೆರಹಿಲ್ಲದ ಕುರುಹಿಲ್ಲದ ಚೆಲುವಂಗಾನೊಲಿದೆ

ಶಿವನೆಂದರೆ ಜನ ಒಂದು ರೂಪವನ್ನು ಕಲ್ಪಿಸಿಕೊಂಡಿದ್ದಾರೆ ಆ ಮೇರೆಯನ್ನು ಮೀರಿದವನೇ ತನ್ನ ಒಡೆಯ ಚೆನ್ನಮಲ್ಲಿಕಾರ್ಜುನನೆಂದು ಹೇಳಿಕೊಂಡಿದ್ದಾಳೆ. ಇಲ್ಲಿ ವಿಕಾಸ ಮತ್ತು ಅಂತ್ಯ ಎರಡನ್ನೂ ಒಂದರಲ್ಲಿ ನಿರೂಪಿಸಿದ್ದಾಳೆ.
ಇನ್ನು ಎರಡನೆಯ ವಚನದಲ್ಲಿರುವ

ಅಕ್ಕ ಕೇಳಕ್ಕಾ ಆ ನೊಂದ ಕನಸ ಕಂಡೆ
ಮೊದಲಿನ ವಚನದಲ್ಲಿ ನಾನೊಂದು ಅಂದರೆ ನಾನು ಒಂದು ಕನಸು ಕಂಡೆ ಎಂದಿದ್ದರೆ ಈ ವಚನದಲ್ಲಿ ನೊಂದ ಕನಸಿನ ಬಗೆಗೆ ಹೇಳಿದ್ದಾಳೆ.ತನ್ನ ಆರಾಧ್ಯ ದೈವ ಚೆನ್ನಮಲ್ಲಿಕಾರ್ಜುನನಿಗಾಗಿ ಪರಿತಪಿಸಿ ಕಾಣಲು,ಕೂಡಲು ಬಯಸಿ ಪ್ರತ್ಯಕ್ಷವಾಗಿ ಸಿಗದೇ ಇದ್ದಾಗ ಜನರು ಊಹಿಸಿ ಹೇಳುತ್ತಿರುವ ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನಾದ ಶಿವನನ್ನು ಕನಸಲ್ಲಿ ಕಂಡು ತೃಪ್ತಳಾಗಿ ಮತ್ತೆ ಅತೃಪ್ತಿಯನ್ನು ಹೊರಹಾಕಿದ್ದಾಳೆ.
ಆತನಪ್ಪಿ ಕೊಂಡು ತಳವೆಳಗಾದೆನೆಲಗೆ
ಜನ ಸಾಮಾನ್ಯರ ಶಿವನನ್ನೇ ದೇವರೆಂದು ಒಪ್ಪಿ ಅಪ್ಪಿ ಕೊಂಡಾಗ ಕೂಡಿದ ಜನ (ನೆಲಗೆ) ನನ್ನ ಅಪಹಾಸ್ಯಕ್ಕೀಡು ಮಾಡಿದಾಗ ತಳವೆಳಗಾದೆ ಅಂದರೆ ದಿಗಿಲುಗೊಂಡೆ ಎಂದಿದ್ದಾಳೆ.
ಚೆನ್ನಮಲ್ಲಿಕಾರ್ಜುನನ ಕೂಡಿ ಕಣ್ಮುಚ್ಚಿ ತೆರೆದು ತಳವೆಳಗಾದೆನೆಲಗೆ
ಜನರ ನಿಂದನೆ, ಟೀಕೆಗಳಿಗೆ ಕಿವಿಗೊಡದೆ ಕಣ್ಮುಚ್ಚಿ ಅಂತರ್ಮುಖಿ ಆದರೂ ಕೂಡಿದ ಜನರಾಡುವ ಮಾತುಗಳಿಂದ ಬೆರಗಾಗಿರುವುದನ್ನು ಅತ್ಯಂತ ನೊಂದು ಈ ವಚನವನ್ನು ಹೇಳಿದ್ದಾಳೆ.

ರವೀಂದ್ರ. ಆರ್. ಪಟ್ಟಣ.
ಮುಳಗುಂದ-ರಾಮದುರ್ಗ

Don`t copy text!