ಶ್ರೀ ಸತ್ಯನಾರಾಯಣ ವೃತ..
ಚಂದಾವರ(ಕಾಲ್ಪನಿಕ) ಎಂಬ ಅಗ್ರಹಾರದಲ್ಲಿ ಕೇಶವಾಚಾರ್ಯ ಎಂಬ ಒಬ್ಬ ಕರ್ಮಠ ಬ್ರಾಹ್ಮಣರಿದ್ದರು. ಪರಮ ನಿಷ್ಠಾವಂತ. ಧ್ಯಾನ, ತಪ, ಪಾರಾಯಣ, ಪುರಾಣ, ಪ್ರವಚನ, ಪೂಜೆ ಪುನಸ್ಕಾರಗಳಲ್ಲಿ ನಿರತರಾಗಿರುತ್ತಿದ್ದರು. ವೈದಿಕ ವೃತ್ತಿಯು ಅವರ ಕಾರ್ಯವೂ ಆಗಿತ್ತು. ತಮ್ಮಲ್ಲಿದ್ದ ಜ್ಞಾನ ಭಂಡಾರದಿಂದ ಎಲ್ಲ ಜನಕ್ಕೆ ಸಹಾಯ ಮಾಡುತ್ತ ಹೆಸರುವಾಸಿಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳು. ಒಂದು ಗಂಡು, ಒಂದು ಹೆಣ್ಣು. ಶಾಲೆಗೆ ಹೋಗುವ ವಯಸ್ಸು. ಆಚಾರ್ಯರ ಹೆಂಡತಿ ರಮಾ ಪರಮ ಸಾಧ್ವಿ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಉಕ್ತಿಯನ್ನು ಮೀರುತ್ತಿರಲಿಲ್ಲ.
ಈ ಕರ್ಮಠ ಬ್ರಾಹ್ಮಣರು ಮೇಲೆ ಹೇಳಿದ ಎಲ್ಲ ಕಾರ್ಯಗಳ ಜತೆಗೆ ಶ್ರೀಸತ್ಯನಾರಾಯಣ ಪೂಜೆ ವಿಧಿ ವಿಧಾನಗಳನ್ನು ಬಲ್ಲವರಾಗಿದ್ದು , ಶ್ರೀಸತ್ಯನಾರಾಯಣ ದೇವರಲ್ಲಿ ತುಂಬಾ ಭಕ್ತಿಯುಳ್ಳವರಾಗಿದ್ದರು. ಅಲ್ಲಲ್ಲಿ ಈ ದೇವರ ಪೂಜೆ ಭಕ್ತಿಯಿಂದ ಮಾಡಿಸಿ ಶ್ರೀಸತ್ಯನಾರಾಯಣ ದೇವರ ಅನುಗ್ರಹಕ್ಕೆ ಪಾತ್ರರಾಗಿದ್ದರು. ಮನ:ಪೂರ್ವಕ ಶ್ರೀಸತ್ಯನಾರಾಯಣನ ಪೂಜೆ ಮತ್ತು ಕಥೆ ಹೇಳುತ್ತಿದ್ದದ್ದು ವಿಶೇಷವಾಗಿತ್ತು. ಶ್ರೀಸತ್ಯನಾರಾಯಣನು ಆಪತ್ತಿನಲ್ಲಿ ತುಂಬಾ ಸಹಾಯ ಮಾಡುವ ದೇವರೆಂದು ತಿಳಿದು ಎಲ್ಲರಿಗೂ ತಿಳಿಸುತ್ತಿದ್ದರು.
ಒಬ್ಬ ಸಾಹುಕಾರ ತಾನು ಬೇಡಿಕೊಂಡ ಶ್ರೀಸತ್ಯನಾರಾಯಣ ಪೂಜೆ ಮತ್ತು ಕಥೆ ಈ ಆಚಾರ್ಯರ ಕಥೆಯಿಂದ ಮಾಡಿಸಲು ತೀರ್ಮಾನಿಸಿ, ಅವರಿಗೆ ಆಮಂತ್ರಣವಿತ್ತು ಇದನ್ನು ಕೇಶವ ಆಚಾರ್ಯರು ಮಾಡಿಸುವದಾಗಿ ಹೇಳಿ ಒಪ್ಪಿಕೊಂಡರು. ಪ್ರಶಸ್ತ ದಿನವನ್ನು ಆತನಿಗೆ ತಿಳಿಸಿ ಪೂಜೆಗೆ ಬೇಕಾಗುವ ಎಲ್ಲ ಸಾಮಗ್ರಿಗಳನ್ನು ಸಿದ್ಧಪಡಿಸಲು ಹೇಳಿ ಆದಿನ ಬರುವದಾಗಿ ತಿಳಿಸಿದರು.
ಆದಿನ ಬೆಳಿಗ್ಗೆ ಹತ್ತು ಗಂಟೆಗೆ ಆಚಾರ್ಯರು ಸಾಹುಕಾರನ ಮನೆಗೆ ಬಂದು ಪೂಜೆಯ ಎಲ್ಲ ವಸ್ತಗಳನ್ನು ಹೊಂದಿಸಿಕೊಂಡು ಪೂಜೆಯ ವಿಧಾನ ಮುಗಿಸಲು ಹನ್ನೊಂದುವರೆ ವೇಳೆಯಾಯಿತು. ಇನ್ನು ಕಥೆ ಪ್ರಾರಂಭ ಮಾಡುವೆನೆಂದು ಹೇಳಬೇಕು ಎಂದರೆ ಆ ಸಾಹುಕಾರ ದಂಪತಿಗಳ ಸುಳಿವೇ ಇಲ್ಲ. ಅರ್ಧ ಗಂಟೆ ಕಾಯ್ದರು. ಕೊನೆಗೆ ತಾನೇ ಎದ್ದು ಬಂದು ದಂಪತಿಗಳಿಗೆ ಬರಲು ಹೇಳಿದರು. ಆದರೆ ಆ ಸಾಹುಕಾರ ದಂಪತಿಗಳ ಮುಖ ತೀವ್ರ ಬಾಡಿತ್ತು. ಬಳಲಿದಂತೆ ಕಾಣುತ್ತಿದ್ದರು. ಯಾಕೆ ಗಾಬರಿ , ಏನಾಗಿದೆ ಎಂದು ಕೇಳಿದರು. ಆಚಾರ್ಯರೇ ನಮ್ಮ ಮಗ ರೈಲಿನಲ್ಲಿ ಇಲ್ಲಿಗೆ ಬೆಳಿಗ್ಗೆ ಬರುವವನಿದ್ದ . ರೈಲು ಅಪಘಾತವಾಗಿ ಆತನ ಸುಳಿವು ಸಿಕ್ಕಿಲ್ಲವೆಂದು ಸುದ್ದಿ ಬಂದಿದೆ. ಆತನ ವಸ್ತುಗಳು ಇವೆ. ಆದರೆ ಅವನ ಸುಳಿವೇ ಇಲ್ಲ ಮತ್ತು ಜೀವಂತ ಇರುವಿಕೆಯ ಕುರಿತು ಇಲಾಖೆಯವರು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ ಎಂಬ ವಿಷಯ ಆಚಾರ್ಯರಿಗೆ ತಿಳಿಸಿದರು. ಬಹಳ ದು:ಖದಲ್ಲಿದ್ದರು.
ಸಾಹುಕಾರರೇ ಇಂದು ನಿಮ್ಮ ಮನೆಗೆ ಶ್ರೀಸತ್ಯನಾರಾಯಣ ದೇವರು ಬಂದಿದ್ದಾರೆ. ಯಾವುದೇ ಕೆಟ್ಟ ಕಲ್ಪನೆಗಳು ಬೇಡ. ಎಲ್ಲವೂ ಸರಿ ಹೋಗುವದು . ಭಕ್ತಿಯಿಂದ ಕಥೆ ಆಲಿಸಲು ಕರೆದರು ಮತ್ತು ಅವರಿಬ್ಬರನ್ನು ದೇವರ ಸನ್ನಿಧಾನಕ್ಕೆ ಕರೆದೊಯ್ದರು. ಶ್ರೀಸತ್ಯನಾರಾಯಣ ದೇವರ ಮೇಲೆ ಪೂರ್ಣ ವಿಶ್ವಾಸವಿಟ್ಟು ಯಾವುದೇ ಆತಂಕವಿಲ್ಲದೇ ಕಥೆ ಕೇಳಿ ಎಂದು ಹೇಳಿ ಕಥೆ ಪ್ರಾರಂಭ ಮಾಡಿದರು. ಕಥೆ ಹೇಳುತ್ತ ಹೇಳುತ್ತ ಆಚಾರ್ಯರಿಗೆ ಉದ್ವೇಗ ಉಂಟಾಗಿ ಆನಂದ ಭಾಷ್ಪಗಳು ಉದುರಿ ಕಥೆ ಮುಂದುವರಿಸದೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಯಾಕೆ ಆಚಾರ್ಯರೇ ಏನಾಯಿತು? ಎಂದು ಸಾಹುಕಾರನ ಹೆಂಡತಿ ಕೇಳಿದಾಗ ಆಚಾರ್ಯರ ಬಾಯಿಯಿಂದ ಮಾತುಗಳು ಬರದೇ ಕಣ್ಣೀರು ಬರಲಾರಂಭಿಸಿದವು. ಸ್ವಲ್ವ ಸಮಯ ಭಕ್ತಿಯ ಮೆರುಗು ಕಡಿಮೆ ಆದಂತೆ ಅನಿಸಿತು.
ಆಚಾರ್ಯರ ಉದ್ವೇಗ ಕಡಿಮೆಯಾಗುತ್ತ ಬಂದು ಸಾಹುಕಾರನಿಗೆ ಹೇಳಿದರು. ನಿಮ್ಮ ಮಗ ಸಿಗುವನು ಮತ್ತು ಬೇಗ ಮನೆಗೆ ಬರುವ . ಅಲ್ಲಿಯವರೆಗೆ ನಾನು ಇಲ್ಲಿಯೇ ಇರುವೆ . ಶ್ರೀಸತ್ಯನಾರಾಯಣ ದೇವರ ಮೇಲೆ ನಂಬಿಕೆ ಇಟ್ಟು ಜಪಿಸುತ್ತ ಕುಳಿತರು. ಸಾಹುಕಾರರೇ ನೀವು ಸಂಬಂಧಪಟ್ಟ ರೇಲ್ವೆ ಅಧಿಕಾರಿಗಳಿಗೆ ಭೇಟಿಯಾಗಲು ಹೋಗಿರಿ ಎಂದು ಹೇಳಿ ಸಾಹುಕಾರನನ್ನು ಕಳಿಸಿ ಕೊಟ್ಟರು. ಈ ದೇವರು ನನಗೆ ಮತ್ತು ನಿಮಗೆ ಮೋಸ ಮಾಡಲಾರ ನಂಬಿಕೆ ಇಡಿರಿ ಎಂದು ಧ್ಯಾನದಲ್ಲಿ ಮಗ್ನರಾದರು . ಸಾಹುಕಾರನ ಹೆಂಡತಿ ಭಕ್ತಿಯಿಂದ ದೇವರಿಗೆ ನಮಸ್ಕರಿಸುತ್ತ ಅಲ್ಲಿಯೇ ಕುಳಿತಳು.ಒಂದು ಗಂಟೆ ಕಳೆದರೂ ಎನೂ ಸುದ್ದಿ ಬರಲಿಲ್ಲ. ಸಾಹುಕಾರನ ಹೆಂಡತಿಗೆ ದು:ಖ ತಡೆಯಲಾರದೇ ಚಡಪಡಿಸತೊಡಗಿದಳು. ಭಯಪಡಬೇಡಿರಿ ಅಮ್ಮಾ ಅವರೇ ನನ್ನ ಮೇಲೆ ವಿಶ್ವಾಸವಿಡಿ . ನಾನು ಈ ದೇವ ಸತ್ಯನಾರಾಯಣನ ಮೇಲೆ ಪೂರ್ಣ ವಿಶ್ವಾಸವಿಟ್ಟಿರುವೆ. ಯಾವುದೇ ಅನಾಹುತ ಆಗಲಾರದ ಹಾಗೆ ನೋಡುವದು ಈ ದೇವರ ಜವಾಬ್ದಾರಿ . ನೋಡಿ ಆತ ತಪ್ಪು ಮಾಡುವದಿಲ್ಲ ನನ್ನನ್ನು ನೋಡಿ ಎಂದಾಗ ಆ ಗೃಹಿಣಿ ಬೆಚ್ಚಿ ಬಿದ್ದಳು. ಆಚಾರ್ಯರ ಮುಖ ಪ್ರಸನ್ನತೆಯಿಂದ ಕೂಡಿದ್ದು ಏನೋ ಬೆಳಕು ಅವರ ಮುಖದ ಮೇಲೆ ಹರಡಿದಂತಾಗಿತ್ತು. ಆಕೆ ಭಕ್ತಿ ಭಾವದಿಂದ ಆಚಾರ್ಯರಿಗೆ ನೀವೇ ದೇವರು , ನೀವೇ ದೇವರು ಎಂದು ಸಾಷ್ಟಾಂಗ ನಮಸ್ಕಾರ ಮಾಡುತ್ತಲಿದ್ದಳು. ಅವಳಲ್ಲಿ ಭಕ್ತಿಯು ಉಕ್ಕಿ ಬರುತ್ತಿತ್ತು.
ಮುಂದೆ ಅರ್ಧ ಗಂಟೆಯಲ್ಲಿ ಸಾಹುಕಾರ ತನ್ನ ಮಗನೊಂದಿಗೆ ಬಂದ . ಆಚಾರ್ಯರು ಹಸನ್ಮುಖರಾಗಿ ನೋಡಿ ನಿಮ್ಮ ಮನೆಯಲ್ಲಿ ಶ್ರೀ ಸತ್ಯನಾರಾಯಣ ದೇವರು ಬಂದಾಗ ಯಾವುದೇ ಅನಾಹುತಕ್ಕೆ ಆಸ್ಪದವೇ ಇರುವದಿಲ್ಲ. ನನಗೆ ಪೂರ್ಣ ನಂಬಿಕೆಯಿತ್ತು . ಕಥೆ ಹೇಳುವಾಗ ಚಿಂತೆ ಬೇಡ ಎಲ್ಲವೂ ಸರಳವಾಗುವದು ಎಂದು ನನಗೆ ಹೇಳಿದಂತಾಗಿ ನನ್ನ ಕಣ್ಣಲ್ಲಿ ಆನಂದ ಭಾಷ್ಪಗಳು ಬಂದವು. ಅದರ ಪರಿಣಾಮವೇ ನಿಮ್ಮ ಮಗ ತಿರುಗಿ ನಿಮಗೆ ಸಿಕ್ಕ.
ಸಾಹುಕಾರನ ಮಗ ರೈಲಿನಿಂದ ಏತಕ್ಕೋ ಕೆಳಗಿಳಿದವ , ರೈಲು ಬಿಟ್ಟಾಗ ಗಡಿಬಿಡಿಯಿಂದ ಏರಲು ಪ್ರಯತ್ನಿಸಿ ವಿಫಲನಾಗಿದ್ದ. ಮುಂದಿನ ನಿಲ್ದಾಣ ತಲುಪುವದರೊಳಗಾಗಿ ರೈಲು ಅಪಘಾತಕ್ಕೆ ಈಡಾಗಿತ್ತು. ಇದರಿಂದ ಅವನ ಮಗನ ಪ್ರಾಣ ರಕ್ಷಣೆಯಾಗಿತ್ತು. ಶ್ರೀಸತ್ಯನಾರಾಯಣ ದೇವರು ಇವರ ಮನೆಗೆ ಬಂದು ಇವರ ಮಗನನ್ನು ಉಳಿಸಿದ . ಭಕ್ತಿ ಬೇಕು ಮತ್ತು ದೇವರಲ್ಲಿ ವಿಶ್ವಾಸ ಇಡಬೇಕು ಎಂದು, ಆಚಾರ್ಯರು ಮತ್ತೊಮ್ಮೆ ಆ ದಂಪತಿಗೆ ಹೇಳಿ ಶ್ರೀಸತ್ಯನಾರಾಯಣನ ಮಹಿಮೆ ಇದು ಅವನ ಮೇಲೆ ವಿಶ್ವಾಸವಿಡಿ ನಿಮಗೆ ಕಲ್ಯಾಣವಾಗುವದು ಎಂದು ಹೇಳಿ ತಮ್ಮ ಮನೆಗೆ ತೆರಳಿದರು.
ಇವರ ಮನೆಯಲ್ಲಿ ಶ್ರೀಸತ್ಯನಾರಾಯಣ ಪೂಜೆ ಪ್ರಾರಂಭವಾದದ್ದು ಹತ್ತು ಗಂಟೆಗೆ ರೈಲು ಅಪಘಾತವಾದದ್ದು ಅದೇ ಹತ್ತು ಗಂಟೆಗೆ. ಇವರಿಗೆ ತಿಳಿದದ್ದು ಹನ್ನೊಂದು ಗಂಟೆಗೆ. ಈ ಎರಡೇ ಗಂಟೆಗಳು ಪೂರ್ಣ ಶ್ರೀಸತ್ಯನಾರಾಯಣ ದೇವರ ಆಧೀನದಲ್ಲಿದ್ದ ಕಾರಣ ಇವರ ಮಗನ ಪ್ರಾಣ ರಕ್ಷಣೆ ಆಗಿತ್ತು.
-ಕೃಷ್ಣ ಬೀಡಕರ.
ವಿಜಯಪುರ
ಮೋ. 9972087473