ಅನುಭಾವ ಕರ್ಪುರದ ಉರಿಯಕೊಂಬಂತೆ.

ಅನುಭಾವ ಕರ್ಪುರದ ಉರಿಯಕೊಂಬಂತೆ.

ಅರಿಯದವರೊಡನೆ ಸಂಗವ ಮಾಡಿದೊಡೆ
ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ
ಬಲ್ಲವರೊಡನೆ ಸಂಗವ ಮಾಡಿದೊಡೆ
ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ
– ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗವ ಮಾಡಿದಡೆ
ಕರ್ಪುರದ ಗಿರಿಯನುರಿಕೊಂಬಂತೆ

*ಅಕ್ಕ ಮಹಾದೇವಿ*. ಸ ವ ಸ 0.5 ವಚನ ಸಂಖ್ಯೆ 43 ಪುಟ .17.

ಅಕ್ಕ ಮಹಾದೇವಿ.ಶರಣ ಕುಲದ ಶ್ರೇಷ್ಠ ವಚನಕಾರಳು ಅನುಭವಿ .

ಅರಿಯದವರೊಡನೆ ಸಂಗವ ಮಾಡಿದೊಡೆ.
ಅರಿಯದವರ ಜೊತೆ ಭವಿಗಳ ಕೂಡ ಸಂಗವ ಮಾಡಿದೊಡೆ ಆಗುವ ಅನಾಹುತಗಳ ಬಗ್ಗೆ ಅಕ್ಕ ವಿವರಿಸುತ್ತಾಳೆ.ಅರಿಯದವರು ಬದುಕಿನ ಮೌಲ್ಯಗಳನ್ನು ತಿಳಿಯದೆ ವೃಥಾ ಜೀವನ ನಡೆಸುವವರು .ಅಂತವರ ಜೊತೆ ಗೆಳೆತನ ಮಾಡಿದರೆ ಏನಾಗುವುದು ? ಮುಂದಿನ ಸಾಲಿನಲ್ಲಿ ವಿವರಿಸಿದ್ದಾಳೆ ಅಕ್ಕ.

ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ
ಎರಡು ಕಲ್ಲುಗಳ ಚಕಮಕಿ ಘರ್ಷಣೆಯಿಂದ ಬೆಂಕಿಯ ಕಿಡಿ ಹಾರುವುದು. ಇಂತಹ ಚರ್ಚೆ ಸಂಘರ್ಷದಿಂದ ಹತ್ತಿದ ಬೆಂಕಿಯನ್ನು ಪಡೆಯಬೇಕಾಗುತ್ತದೆ . ಸಮಯ ಹಣ ಗುಣ ಎಲ್ಲವೂ ಹಾಳಾಗಿ ಕೊನೆಗೆ ಬೆಂಕಿಯ ಕಿಡಿಯನ್ನು ದ್ವೇಷದ ಜ್ವಾಲೆಯನ್ನು ಕಟ್ಟಿ ಕೊಳ್ಳಬೇಕಾಗುತ್ತದೆ.ಇಲ್ಲಿ ಎಂದರೆ ಅರಿಯದವ ಭವಿ ಎಂದರ್ಥ .

ಬಲ್ಲವರೊಡನೆ ಸಂಗವ ಮಾಡಿದೊಡೆ
ಬದುಕಿನ ಮರ್ಮವ ಪಡೆದವರಾಗಿದ್ದಾರೆ .ಅಂತವರ ಜೊತೆಗಿನ ಚರ್ಚೆ ಆರೋಗ್ಯಕರ ಫಲಕಾರಿಯಾಗಿರುತ್ತದೆ .ಅನುಭವಿಗಳ ಮಾರ್ಗದರ್ಶನ ಚಿಂತನ
ಲಿಂಗ ಪ್ರೇಮಿಗೆ ಜಂಗಮ ಜೀವಿಗೆ ಪ್ರೋತ್ಸಾಹಕರ .ಇದನ್ನು ಮುಂದಿನ ಸಾಲಿನಲ್ಲಿ ನೋಡ ಬಹುದು. ಇಲ್ಲಿ ಬಲ್ಲವ ಭಕ್ತನಾಗುತ್ತಾನೆ.

ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ
ಉತ್ತಮರ ಸಂಗದಲ್ಲಿ ಭಕ್ತ ನು ಹೇಗೆ ಮೊಸರನ್ನು ಕಡಿದಾಗ ಬೆಣ್ಣೆ ಬರುತ್ತದೆಯೋ ಹಾಗೆ ಉತ್ತಮರ ಸಂಗದಲ್ಲಿ ಹುಟ್ಟಿದ ಚಿಂತನ ಮಂಥನದಿಂದ ಅನುಭಾವದ ಅಮೃತ ದೊರೆಯುವುದು. ಸಜ್ಜನರ ಸಂಗಾ ಹೆಜ್ಜೇನು ಸವಿದಂತೆ ಎಂದು ಸರ್ವಜ್ಞನ ಮಾತು ಇಲ್ಲಿ ನೆನಪಿಗೆ ಬರುತ್ತದೆ,

ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗವ ಮಾಡಿದಡೆ
ಜಂಗಮ ಸ್ವರೂಪಿ ಚೆನ್ನ ಮಲ್ಲಿಕಾರ್ಜುನಯ್ಯಾ ನಿಮ್ಮ ಶರಣರ ಜೊತೆ ಸಂಗವ ಮಾಡಿದೊಡೆ ನಿರಾಳ ನಿರ್ಗುಣ ನಿರಾಕಾರ ತತ್ವದ ಮಹತ್ವ ಅರಿವಿಗೆ ಬರುವುದು. ಆ ಅರಿವು ಎಷ್ಟೊಂದು ಸುಂದರವೆಂದರೆ ಆ ಅರಿವಿನ ಜ್ಞಾನ ನಿಶಬ್ದ .

ಕರ್ಪುರದ ಗಿರಿಯನುರಿಕೊಂಬಂತೆ
ಕರ್ಪುರದ ವಸ್ತು ಘನ ಮತ್ತು ಅನಿಲಾವಸ್ಥೆಗೆ ಮಾತ್ರ ಕಾಣುತ್ತದೆ.(SUBLIMATION ) ಇದು ರಾಸಾಯನಿಕ ಕ್ರಿಯಾ ಪದವಾದರೆ ತತ್ವಶಾಸ್ತ್ರದಲ್ಲಿ ನಿರ್ಲಿಪ್ತತೆ ಅಥವಾ ಉದಾತ್ತೀಕರಣದ ಪರಿಕಲ್ಪನೆಯನು ಶರಣರು ಅತ್ಯಂತ ಪ್ರಾಯೋಗಿಕವಾಗಿ ತಿಳಿಸಿ ಕೊಟ್ಟಿದ್ದಾರೆ. ಕರ್ಪುರದ ಗಿರಿ ಭಕ್ತನ ಆವಸ್ಥೆ . ಜ್ಞಾನದ ಉರಿ ಕೊಂಡರೆ
ಅಲ್ಲಿ ಉಳಿಯುವದು ನಿಶೇಷ . ಘನದ ಆಮಿಷಗಳು ಮಾಯವಾಗಿ ಪ್ರಕೃತಿಯ ಮಡಿಲಿನ ಅನಿಲದಂತೆ ಮನುಷ್ಯನ ಮನಸು ಹಗುರವಾಗಿ ಪರಿಮಳ ಸೂಸುವದರ ಜೊತೆಗೆ ಉದಾತ್ತ ಭಾವದಿಂದ ಮುಕ್ತಿ ಹೊಂದುವುದು. ಕರ್ಪುರದ ಗಿರಿಯಿದ್ದರೂ ಅದಕ್ಕೆ ಜ್ಞಾನದ ಜ್ಯೋತಿ ಮುಟ್ಟಿಸಲು ಅಲ್ಲಿ ಭಾವವೆಂಬ ಇದ್ದಿಲು ಕಾಣುವದಿಲ್ಲ. ಭಕ್ತನ ಸಾಧನೆಯು ಹಾಗೆ ಇರಬೇಕು. ಯಾವುದನ್ನೂ ತೋರಿಕೆ ಮಾಡದೆ ಸಜ್ಜನರ ಸಂಗದಲ್ಲಿ ಅನುಭಾವಿಗಳ ಸಂಗದಲ್ಲಿ ಮುಕ್ತಿ ಪಡೆಯಬೇಕು.

ಡಾ .ಶಶಿಕಾಂತ.ಪಟ್ಟಣ ಪೂನಾ

Don`t copy text!