*ಅಕ್ಕನೆಡೆಗೆ*
ಅಕ್ಕನೆಡೆಗೆ ವಚನ – 42
ಅಂತರಂಗ ಶುದ್ಧಿಯ ಪರಿ
ಮರಮರ ಮಥಿನಿಸಿ ಕಿಚ್ಚು ಹುಟ್ಟಿ
ಸುತ್ತಣ ತರುಮರಾದಿಗಳ ಸುಡಲಾಯಿತ್ತು
ಆತ್ಮ ಆತ್ಮ ಮಥಿಸಿ ಅನುಭಾವ ಹುಟ್ಟಿ
ಹೊದ್ದಿರ್ದ ತನುಗುಣಾದಿಗಳ ಸುಡಲಾಯಿತ್ತು
ಇಂತಪ್ಪ ಅನುಭಾವರ ಅನುಭಾವವ ತೋರಿ
ಎನ್ನ ಒಡಲನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನಾ
ಅಕ್ಕಮಹಾದೇವಿಯ ವಚನಗಳಲ್ಲಿ ಅದ್ಭತ ಪ್ರತಿಮೆಗಳು ಹೆಚ್ಚು ಹೆಚ್ಚು ಕಾಣುತ್ತವೆ. ಅಂತಹದೇ ಎರಡು ಪ್ರತಿಮೆಗಳು ಈ ವಚನದಲ್ಲೂ ಅಡಗಿದೆ. ಮರ ಹಾಗೂ ಕಾದ್ಗಿಚ್ಚು, ಆತ್ಮ ಹಾಗೂ ಅನುಭಾವ, ಇವೆರಡೆ ಹೋಲಿಕೆ ಆಶ್ಚರ್ಯ ಪಡುವಂತೆ ನಿರೂಪಿಸಿರುವ ಕಾಣ್ಕೆ ರೋಮಾಂಚನ.
ನಾವು ‘ಕಾಡ್ಗಿಚ್ಚು’ ಎನ್ನುವ ಶಬ್ದ ಕೇಳಿದ್ದೇವೆ. ಅರಣ್ಯ ಪ್ರದೇಶದಲ್ಲಿ ಆಗಾಗ ಬೆಂಕಿ ತಾನಾಗಿಯೇ ಹೊತ್ತಿ ಉರಿಯುವ ನಿಸರ್ಗ ಕ್ರಿಯೆ. ಅದನ್ನು ಕಾಡ್ಗಿಚ್ಚು ಎಂದು ಕರೆಯುತ್ತೇವೆ. ಅಲ್ಲಿ ಭೌತಿಕವಾಗಿ ಯಾರೂ ಹೋಗಿ ಬೆಂಕಿಯನ್ನು ಸ್ಪರ್ಷಿಸುವುದಿಲ್ಲ. ಆದರೂ ಇಡೀ ಕಾಡು ಸುಟ್ಟು ಭಸ್ಮವಾಗುತ್ತದೆ. ಕಟ್ಟಿಗೆ ಅಥವಾ ಮರ ಒಂದಕ್ಕೊಂದು ಘರ್ಷಿಸುವ ಕ್ರಿಯೆ ನಡೆದಾಗ, ಅಲ್ಲಿ ಬಿಸಿಬಿಸಿ ತಾಪದಿಂದಾಗಿ ಅಗ್ನಿ ಹುಟ್ಟುತ್ತದೆ. ಆಗ ತನ್ನಿಂದ ತಾನೇ ಉರಿಯಲು ಆರಂಭಿಸುತ್ತದೆ. ಅದಕ್ಕೆ ಬಸವಣ್ಣ ಹೇಳುವುದು, ‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು’. ಅದಕ್ಕೆ ಅಕ್ಕ ಈ ವಚನದ ಆರಂಭದಲ್ಲಿ ಹೀಗೆ ಹೇಳಿದ್ದಾಳೆ, ಮರಕ್ಕೆ ಮರ ತಾಕಿ ಬೆಂಕಿ ಹುಟ್ಟಿ, ಗಿಡ, ಮರ ಬಳ್ಳಿಗಳೆಲ್ಲವೂ ಸುಟ್ಟು ಹೋಗುತ್ತವೆ.
ಇನ್ನೊಂದು ಪ್ರತಿಮೆ ಏನೆಂದರೆ ಮನುಷ್ಯನ ಒಳಗಿರುವ ಕಾಡ್ಗಿಚ್ಚು. ಉದಾಹರಣೆಗೆ ಕೋಪ-ತಾಪ, ಸಿಟ್ಟು-ಸೆಡವು, ಹೊಟ್ಟೆಕಿಚ್ಚು, ಈರ್ಷೆ, ಅಹಂ, ವಿಕೃತ ಕಾಮ ಇತ್ಯಾದಿ ಪ್ರತಿಯೊಬ್ಬ ಮನುಷ್ಯನೊಳಗೆ ಇದ್ದೇ ಇರುತ್ತದೆ. ಅದನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಆದರೆ ಇಲ್ಲದಂತಹ ಭಾವ ಬರುವಂತೆ ನಿಗ್ರಹ ಖಂಡಿತ ಸಾಧ್ಯ.
ಇಲ್ಲಿ ‘ಅನುಭಾವ’ ಪದ ಬಂದಿದೆ. ನಾವು ಸಾಮಾನ್ಯರಿಗೆ ಆಗುವುದೆಲ್ಲಾ ಅನುಭವ. ಪಂಚೇಂದ್ರಿಯಗಳ ಮೂಲಕ ಎಲ್ಲವನ್ನೂ ಅನುಭವಿಸುವ ಕ್ರಿಯೆ ಸಾಮಾನ್ಯರಿಗೆ ಮುದ ನೀಡುವ ಅಸಾಮಾನ್ಯ ಸಂಗತಿ. ಕಣ್ಣಿನಿಂದ ನೋಡುವುದು, ಕಿವಿಯಿಂದ ಕೇಳುವುದು, ಮೂಗಿನಿಂದ ಆಘ್ರಾಣಿಸುವುದು, ನಾಲಿಗೆಯಿಂದ ರುಚಿ ಸವಿಯುವುದು, ಚರ್ಮದ ಸುಖ ಅನುಭವಿಸುವುದು, ಹೀಗೆ ದೇಹದ ಮಿತಿಯಲ್ಲೇ ಎಲ್ಲವನ್ನೂ ಗಾಢವಾಗಿ ಅನುಭವಿಸಿದಾಗ ಅದು ‘ಅನುಭವ’. ಈ ಅನುಭವವನ್ನು ಮೀರಿ, ಮೆಟ್ಟಿ, ಅದರಾಚಿಗಿನ ಸುಖವನ್ನು ಹುಡುಕುವುದು ಇನ್ನೊಂದು ಮಾರ್ಗ. ಹಾಗೆ ಹುಡುಕಲು ಹೊರಟಾಗ, ಈ ಪಂಚೇಂದ್ರಿಯಗಳು ಹೊರ ತತ್ವಗಳನ್ನು ಅರಸುತ್ತ ಹೋಗುತ್ತವೆ. ಒಳತತ್ವ ಮತ್ತು ಹೊರತತ್ವ ಮುಖಾಮುಖಿಯಾಗುವ ಸಮಯ. ಅಲ್ಲಿ ಪ್ರಕೃತಿಯ ವಿಶಾಲ ಕೊಡುಗೆಗಳು ಎದುರಾಗುತ್ತವೆ. ಭೂಮಿ, ನೀರು, ಗಾಳಿ, ಬೆಂಕಿ, ಆಕಾಶಗಳು. ಅದು ಬೇರೆಯಲ್ಲ ಈ ದೇಹ ಬೇರೆ ಅಲ್ಲ ಎನ್ನುವ ಭಾವ ಮೂಡಲು ಮನಸು ವಿದ್ಯುಕ್ತವಾಗುತ್ತದೆ. ಅದನ್ನೇ ಅದನ್ನೇ ಅರಸುತ್ತ, ಅದರಲ್ಲೇ ಕಳೆದು ಹೋಗುತ್ತದೆ. ಇದನ್ನೇ ಶರಣರು ಲಿಂಗಪೂಜೆಯಲ್ಲಿ ಕಂಡುಕೊಂಡ ಬ್ರಹ್ಮಾಂಡ, ಪಿಂಡಾಡದ ಪರಿಕಲ್ಪನೆಯ ಸಾಕ್ಷಿಪ್ರಜ್ಞೆ. ಇಡೀ ಜಗತ್ತಿನಲ್ಲಿ ‘ನಾನು’ ಎನ್ನುವ ಅಹಂಭಾವ ಕಳೆದುಕೊಂಡ ಒಂದು ಆತ್ಮ ಸಂಚರಿಸುವ ಅಂತರಂಗ ಪಯಣದ ಬಗೆಯಿದು. ಈ ಪಯಣಕ್ಕೆ ಅಂದರೆ ಶರಣರ ಲಿಂಗಪೂಜೆಯ ಮೂಲಕ ಅನುಭಾವಿಸಿದ ಲಿಂಗಾಂಗ ಸಾಮರಸ್ಯ. ಹೀಗೆ ಒಳಹೊರಗನ್ನು ಒಂದಾಗಿಸಿದವರ ಆತ್ಮ ಮತ್ತು ಪರಮಾತ್ಮ ಘರ್ಷಿಸಿದರೆ, ಈ ದೇಹದ ಅರಿಷಡ್ವರ್ಗಗಳು, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸಗಳು ಸುಟ್ಟು ಬೂದಿಯಾಗುತ್ತವೆ. ಅದಕ್ಕೆ ಅಕ್ಕ ತನ್ನ ಇನ್ನೊಂದು ವಚನದಲ್ಲಿ ಕಾಮವನ್ನು ಲಿಂಗಮುಖದಿಂದ ಗೆದ್ದೆನೆಂದು ಅಭಿವ್ಯಕ್ತಿಸಿದ್ದಾಳೆ.
ಈ ಕಾಯ ಎನ್ನುವ ಅರಣ್ಯದಲ್ಲಿ ‘ಅನುಭಾವರ ಅನುಭಾವವ ತೋರಿ’ ಎನ್ನುವಲ್ಲಿ ನಾವು ಹನ್ನೆರಡನೇ ಶತಮಾನದಲ್ಲಿ ನೆಲೆಸಿದ್ದ ಕಲ್ಯಾಣದ ಶರಣರನ್ನು ಜ್ಞಾಪಿಸಿಕೊಳ್ಳಬೇಕು. ಅವರೆಲ್ಲರೂ ಅನುಭಾವದ ತುತ್ತ ತುದಿಗೇರಿದವರು. ಅವರೆಲ್ಲನ್ನೂ ತನಗೆ ತೋರಿಸಿ ತನ್ನೊಳಗಿನ ಅಂತರಂಗವನ್ನು ಶುದ್ಧವಾಗಿರಿಸಲಿ ಎಂದು ಹಂಬಲಿಸುವ ಅಕ್ಕನ ಆಂತರಿಕ ನಿರೀಕ್ಷೆ ಈ ವಚನದಲ್ಲಿ ಕಂಡು ಬರುತ್ತದೆ. ಅದಕ್ಕೆ ಶರಣ ಸಂಗ ಬಯಸಿ ಬರುವ ಅಕ್ಕನ ಮಹತ್ವಾಕಾಂಕ್ಷೆಯೂ ಏನೆಂದು ಗ್ರಹಿಸಿಬಹುದು. ಅದನ್ನೇ ಅವಳು ಚೆನ್ನಮಲ್ಲಿಕಾರ್ಜುನನಲ್ಲಿ ನಿವೇದಿಸಿಕೊಳ್ಳುತ್ತಾಳೆ.
ಅಕ್ಕ ಎಂದರೆ ಪರಿಶುದ್ಧ ಆತ್ಮ ಎಂದು ಭಾವಿಸುವ, ತಿಳಿಯುವ ನಾವು ಅಕ್ಕನ ಈ ಹಂಬಲವನ್ನು ಗ್ರಹಿಸಿದಾಗ, ಅವಳು ತನ್ನ ಆತ್ಮದ ಅಂತರಂಗ ಶುದ್ಧಿಗಾಗಿ ಪಡುವ ಶ್ರಮವನ್ನು ಮನಗಾಣುತ್ತೇವೆ. ಆಧುನಿಕತೆಯ ಸೋಗಿನಲ್ಲಿ ಬದುಕುತ್ತಿರುವ ನಮ್ಮ ಆತ್ಮಗಳ ಬಟ್ಟೆಯನ್ನು ಕಳಚುವುದು ಅಷ್ಟು ಸುಲಭವಲ್ಲ. ಆಗದು ಎನ್ನಲಾಗದು, ಅದರೆ ಅದು ಕಷ್ಟಸಾಧ್ಯವಾದುದು ಎನ್ನುವುದು ಮಾತ್ರ ಸತ್ಯ. ಅಂತಹ ಅನುಭಾವದ ಬಟ್ಟೆಯಲ್ಲಿ ನಡೆಯುವ ತುರ್ತು ಇಂದಿನದಾಗಿದೆ. ಆ ಬಟ್ಟೆಯ ಮಾರ್ಗ ಕಂಡುಕೊಳ್ಳುವ ಪ್ರಯತ್ನದ ಹಾದಿ ಹಿಡಿಯೋತ್ತ ಸಾಗೋಣ ಬನ್ನಿ.
ಸಿಕಾ